Site icon Vistara News

ಮಂಗಳೂರು ಸ್ಫೋಟ | ಕುಕ್ಕರ್‌ ಬ್ಲಾಸ್ಟ್‌ ರೂವಾರಿ ಶಾರಿಖ್: ಸೊಪ್ಪಿನಗುಡ್ಡೆಯಿಂದ ಐಸಿಎಸ್‌ವರೆಗೂ ಚಾಚಿತ್ತಾ ಟೆರರ್‌ ಲಿಂಕ್‌

Shariq story: soppina gudda to ISIS

ಶಿವಮೊಗ್ಗ: ಮಂಗಳೂರಿನಲ್ಲಿ ಸಂಭವಿಸಿದ ಕುಕ್ಕರ್‌ ಬಾಂಬ್‌ ಸ್ಫೋಟವನ್ನು ನಡೆಸಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಸೊಪ್ಪಿನಗುಡ್ಡೆಯ ಮೊಹಮ್ಮದ್‌ ಶಾರಿಖ್‌ ಎನ್ನುವುದನ್ನು ಪೊಲೀಸ್‌ ಇಲಾಖೆ ಸ್ಪಷ್ಟಪಡಿಸಿದೆ. ಈ ಹಿಂದೆ ಹಲವು ಉಗ್ರ ಕೃತ್ಯಗಳಲ್ಲಿ ಭಾಗವಹಿಸಿದ್ದ ಈತನಿಗಾಗಿ ಪೊಲೀಸರು ಕಳೆದ ಎರಡು ತಿಂಗಳಿನಿಂದ ಹುಡುಕಾಡುತ್ತಿದ್ದರು. ಆದರೆ, ಆತ ಮಾತ್ರ ಯಾರ ಕೈಗೂ ಸಿಗದೆ ತಪ್ಪಿಸಿಕೊಂಡಿದ್ದ. ಮತ್ತೊಂದು ದೊಡ್ಡ ಮಟ್ಟದ ದುಷ್ಕೃತ್ಯಕ್ಕೆ ಕೈ ಹಾಕಿದ್ದ ಆತ ಈಗ ಅನಾಯಾಸವಾಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಬಿಕಾಂ ವಿದ್ಯಾಭ್ಯಾಸ ಮುಗಿಸಿ ತಂದೆಯ ಬಟ್ಟೆ ಅಂಗಡಿಯಲ್ಲಿ ಸಾಮಾನ್ಯ ಹುಡುಗನಂತೆ ಕೆಲಸ ಮಾಡಿಕೊಂಡಿದ್ದ ಶಾರಿಖ್‌ನ ಹಿಂದೆ ದೊಡ್ಡದೊಂದು ದಂಡೇ ಇದೆ ಎನ್ನುವ ಬಗ್ಗೆ ಹಿಂದಿನಿಂದಲೇ ಅನುಮಾನವಿತ್ತು. ಈಗ ಆತನ ಬಂಧನದೊಂದಿಗೆ ಅದು ಇನ್ನಷ್ಟು ನಿಚ್ಛಳಗೊಂಡಿದೆ. ಹಲವಾರು ಹುಡುಗರನ್ನು ತಲೆಕೆಡಿಸಿ ಉಗ್ರ ಕೃತ್ಯಕ್ಕೆ ಎಳಸಿದ ಈತನಿಗೆ ಐಸಿಸ್‌ನೊಂದಿಗೆ ಸಂಪರ್ಕ ಹೊಂದಿರುವ ಅವನದೇ ಊರಿನ ಮತೀನ್‌ ಖಾನ್‌ನ ಬೆಂಗಾವಲು ಇರುವುದು ಬೆಳಕಿಗೆ ಬಂದಿದೆ. ಮಾತ್ರವಲ್ಲ ಅಕ್ಟೋಬರ್‌ ೨೩ರಂದು ನಡೆದ ಕೊಯಮತ್ತೂರು ಕಾರ್‌ ಬಾಂಬ್‌ ಸ್ಫೋಟದಲ್ಲೂ ಈತನ ಕೈವಾಡ ಶಂಕಿಸಲಾಗಿದೆ. ಅಂದರೆ ಈತ ಹಲವಾರು ಉಗ್ರ ಸಂಘಟನೆಗಳ ಜತೆ, ವ್ಯಕ್ತಿಗಳ ಜತೆ ಸಂಪರ್ಕ ಹೊಂದಿರುವುದು ಸ್ಪಷ್ಟವಾಗಿದೆ.

೨೦೨೦ರಿಂದಲೇ ಸಕ್ರಿಯನಾಗಿದ್ದ
ತೀರ್ಥಹಳ್ಳಿಯ ಎಕೆ ಕಾಲೊನಿಯ ಸೊಪ್ಪುಗುಡ್ಡೆ ನಿವಾಸಿ ಹಸೀಂ ಅಬ್ದುಲ್‌ ಮಜೀದ್‌ ಅವರ ಪುತ್ರನಾಗಿರುವ ಮೊಹಮ್ಮದ್‌ ಶಾರಿಖ್‌ಗೆ ಈಗ ೨೩ ವರ್ಷ. ೨೦೨೦ರಲ್ಲಿ ಬಿಕಾಂ ವಿದ್ಯಾಭ್ಯಾಸ ಮಾಡುತ್ತಿದ್ದ ಕಾಲದಿಂದಲೇ ಉಗ್ರ ಲೋಕವನ್ನು ಪ್ರವೇಶಿಸಿದ್ದ. ಆಗಲೇ ಸೌದಿ ಅರೇಬಿಯಾ ಮೂಲದ ವ್ಯಕ್ತಿಗಳ ಜತೆ ಸಂಪರ್ಕ ಸಾಧಿಸಿದ್ದ ಆತ, ಪುಣೆ ಮೂಲದ ವಾಟ್ಸಾಪ್‌ ಗ್ರೂಪ್‌ ಒಂದರಲ್ಲೂ ಸಕ್ರಿಯನಾಗಿದ್ದ. ಈ ಗ್ರೂಪ್‌ನ ಅಡ್ಮಿನ್‌ ನೀಡಿದ ಸೂಚನೆಯಂತೆ ಆತ ಮಂಗಳೂರಿನಲ್ಲಿ ಎರಡು ದುಷ್ಕೃತ್ಯಗಳನ್ನು ನಡೆಸಿದ್ದ.

೨೦೨೦ರ ನವೆಂಬರ್‌ ೨೭ರಂದು ಅಪಾರ್ಟ್‌ಮೆಂಟ್‌ನ ಗೋಡೆಯೊಂದರ ಮೇಲೆ ಹಿಂದುಗಳಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಬರಹ ಬರೆದಿದ್ದ. ಅದು ಹೆಚ್ಚಿನ ಗಮನ ಸೆಳೆಯದೆ ಇದ್ದ ಕಾರಣಕ್ಕೆ ಆತ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿರುವ ಗೋಡೆ ಮೇಲೆ ಮತ್ತೊಂದು ಬೆದರಿಕೆ ಹಾಕಿದ್ದ. ʻʻಏನು ನಿಮಗೆ ಪಾಠ ಕಲಿಸಲು ಲಷ್ಕರೆ ತಯ್ಬಾ ಸಂಘಟನೆಯನ್ನು ಕರೆಸಬೇಕಾʼʼ ಎನ್ನುವ ಧಾಟಿಯಲ್ಲಿ ಆ ಬರಹ ಇತ್ತು. ಈ ಪ್ರಕರಣದಲ್ಲಿ ೨೦೨೦ರ ಡಿಸೆಂಬರ್‌ ೬ರಂದು ಆತನ ಬಂಧನವಾಗಿತ್ತು. ಆದರೆ, ಸೂಕ್ತ ಸಾಕ್ಷ್ಯಾಧಾರಗಳು ಸಿಗದ ಕಾರಣದಿಂದ ೨೦೨೧ರ ಸೆಪ್ಟೆಂಬರ್‌ನಲ್ಲಿ ಆತನ ಬಿಡುಗಡೆಯಾಗಿತ್ತು.

ಹೀಗೆ ಬಿಡುಗಡೆಯಾದವನು ಸುಮ್ಮನೆ ಹೋಗಿ ಮನೆಯಲ್ಲಿ ಕುಳಿತುಕೊಳ್ಳಲಿಲ್ಲ. ಮಂಗಳೂರಿನ ಮಹಮ್ಮದ್‌ ಮಾಝ್‌ ಮತ್ತು ಶಿವಮೊಗ್ಗದ ಸಿದ್ದೇಶ್ವರ ನಗರದ ಸೈಯದ್‌ ಯಾಸಿನ್‌ ಎಂಬವರನ್ನು ಸೇರಿಸಿಕೊಂಡು ಬಾಂಬ್‌ ತಯಾರಿಕೆಯ ಕೃತ್ಯಕ್ಕೆ ಮುಂದಾಗಿದ್ದ. ಶಿವಮೊಗ್ಗ ತುಂಗಾ ತೀರ ಮತ್ತು ಮಂಗಳೂರಿನ ಬಂಟ್ವಾಳದ ನೇತ್ರಾವತಿ ತೀರದಲ್ಲಿ ಬಾಂಬ್‌ಗಳ ಟ್ರಯಲ್‌ ಬ್ಲಾಸ್ಟ್‌ ಮಾಡಿಸಿದ್ದ!

ಇದೆಲ್ಲ ಬಯಲಿಗೆ ಬಂದಿದ್ದು ೨೦೨೨ರ ಆಗಸ್ಟ್‌ ೧೫ರಂದು ನಡೆದ ಸಾವರ್ಕರ್‌ ಗಲಾಟೆಯ ಬಳಿಕ. ಶಿವಮೊಗ್ಗದ ಟಿಪ್ಪು ನಗರದ ವೃತ್ತದಲ್ಲಿ ಪ್ರತಿ ವರ್ಷ ಟಿಪ್ಪು ಸುಲ್ತಾನ್‌ ಫ್ಲೆಕ್ಸ್‌ ಹಾಕುವ ಜಾಗದಲ್ಲಿ ಸಾವರ್ಕರ್‌ ಫ್ಲೆಕ್ಸ್‌ ಹಾಕಿದ್ದರಿಂದ ಗಲಾಟೆ ಶುರುವಾಗಿತ್ತು. ಆವತ್ತೇ ಸಂಜೆ ಪ್ರೇಮ್‌ ಸಿಂಗ್‌ ಎಂಬ ವ್ಯಾಪಾರಿ ಅಂಗಡಿ ಬಂದ್‌ ಮಾಡಿ ಮನೆಗೆ ಹೋಗುತ್ತಿದ್ದಾಗ ಚೂರಿ ಇರಿತಕ್ಕೆ ಒಳಗಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಮರು ದಿನ ಜಬಿಯುಲ್ಲಾ ಎಂಬಾತನನ್ನು ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಯಿತು. ಆತನ ವಿಚಾರಣೆಯ ವೇಳೆ ಶಿವಮೊಗ್ಗ ಉಗ್ರ ಚಟುವಟಿಕೆಗಳ ಬಗ್ಗೆ ಮಹತ್ವದ ಮಾಹಿತಿಗಳು ಪೊಲೀಸರಿಗೆ ಸಿಗುತ್ತಾ ಹೋದವು.

ಜಬಿಯುಲ್ಲಾ ಪೊಲೀಸರ ಕೈಗೆ ಸಿಕ್ಕಿದ ಕೆಲವೇ ದಿನಗಳಲ್ಲಿ ಅಂದರೆ ಆಗಸ್ಟ್‌ ೨೩ರಂದು ಶಾರಿಖ್‌ ಕಣ್ಮರೆಯಾಗಿದ್ದ. ಯಾಕೆಂದರೆ, ಜಬಿಯುಲ್ಲಾ ತನ್ನ ಬಗ್ಗೆ ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾನೆ ಎಂಬ ಸುಳಿವು ಆತನಿಗೆ ಸಿಕ್ಕಿತ್ತು. ಈ ನಡುವೆ, ಪೊಲೀಸರು ಜಬಿಯುಲ್ಲಾನ ಮಾಹಿತಿ ಆಧರಿಸಿ, ದಾಖಲೆಗಳನ್ನು ಸಂಗ್ರಹಿಸಿಕೊಂಡು ಬಂದು ಪ್ರಕರಣ ದಾಖಲಿಸುವ ಹೊತ್ತಿಗೆ ಒಂದು ತಿಂಗಳು ಕಳೆದಿತ್ತು. ಅಂದರೆ, ಸೆಪ್ಟೆಂಬರ್‌ ೧೯ರಂದು ಪ್ರಕರಣ ದಾಖಲಾಯಿತು. ಶಾರಿಖ್‌, ಮಂಗಳೂರಿನ ಮಾಝ್‌ ಮುನೀರ್‌ ಮತ್ತು ಶಿವಮೊಗ್ಗದ ಸಿದ್ದೇಶ್ವರ ನಗರದ ಸೈಯ್‌ ಯಾಸಿನ್‌ ಮೇಲೆ ಗ್ರಾಮಾಂತರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಯಿತು. ಮಹಮ್ಮದ್‌ ಜಾಝ್‌ ಮತ್ತು ಯಾಸಿನ್‌ ಸೆರೆ ಸಿಕ್ಕರೆ ಶಾರಿಖ್‌ ಕಣ್ಮರೆಯಾಗಿ ಆಗಲೇ ಹತ್ತಿರ ಹತ್ತಿರ ಒಂದು ತಿಂಗಳು ಕಳೆದಿತ್ತು.

ಅಪ್ಪನ ಅಂಗಡಿ ನೋಡಿಕೊಳ್ಳುತ್ತಿದ್ದ
ಮಂಗಳೂರು ಪ್ರಕರಣದಲ್ಲಿ ಸಿಕ್ಕಿಬಿದ್ದು ಜಾಮೀನು ಪಡೆದು ಹೊರಬಂದಿದ್ದ ಶಾರಿಖ್‌ ಬಳಿಕ ತೀರ್ಥಹಳ್ಳಿಯಲ್ಲಿ ಅಪ್ಪ ನಡೆಸುತ್ತಿದ್ದ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಈ ನಡುವೆ ಆತನ ತಂದೆ ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿದ್ದರು. ಹೀಗಾಗಿ ಅಂಗಡಿ ವ್ಯವಹಾರವೆಲ್ಲ ಅವನ ತಲೆಗೇ ಬಿದ್ದಿತ್ತು. ಚೆನ್ನಾಗಿ ನೋಡಿಕೊಂಡಿದ್ದರೆ ಒಳ್ಳೆಯ ವ್ಯಾಪಾರಿ ಆಗುತ್ತಿದ್ದ. ಆದರೆ, ಆತನ ತಲೆಯಲ್ಲಿ ಸಾವಿನ ವ್ಯಾಪಾರ ಗಿರಕಿ ಹೊಡೆಯುತ್ತಿತ್ತು. ಆಗಸ್ಟ್‌ ೨೩ರಂದು ಮಲ ತಾಯಿ ಮತ್ತು ಅಜ್ಜಿಯ ಬಳಿ ಬಟ್ಟೆ ತರಲು ದಿಲ್ಲಿಗೆ ಹೋಗುವುದಾಗಿ ಹೇಳಿ ಹೋಗಿದ್ದ. ಆದರೆ, ಮರಳಿ ಬರಲೇ ಇಲ್ಲ. ಪೊಲೀಸರ ಕೈಗೂ ಸಿಗಲಿಲ್ಲ.

ಹೋಗಿದ್ದೆಲ್ಲಿಗೆ?
ಶಾರಿಖ್‌ ಉಗ್ರ ಕೃತ್ಯಕ್ಕೆ ಇಳಿಯುವುದಕ್ಕೆ ಗುರುವಾಗಿದ್ದವನು ಅವನದೇ ಊರಿನ ಮತೀನ್‌ ಖಾನ್‌ ಎಂಬಾತ ಎಂದು ಹೇಳಲಾಗಿದೆ. ಇಲ್ಲಿ ಯೋಧ ಮನ್ಸೂನ್‌ ಖಾನ್‌ ಅವರ ಪುತ್ರನಾಗಿರುವ ಮತೀನ್‌ ಖಾನ್‌ ಕೆಲವು ವರ್ಷಗಳ ಹಿಂದೆ ಮೆಕ್ಯಾನಿಕಲ್‌ ಎಂಜಿನಿಯರ್‌ ಆಗಲೆಂದು ಬೆಂಗಳೂರಿಗೆ ಹೋಗಿ ಅಲ್ಲಿ ಉಗ್ರರ ಜಾಲದೊಳಗೆ ಪ್ರವೇಶಿಸಿ ಐಸಿಸ್‌ ವರೆಗೂ ಸಂಪರ್ಕ ಹೊಂದಿದ್ದ. ಶಾರಿಖ್‌ಗೆ ಬಾಂಬ್‌ ತಯಾರಿಸುವುದನ್ನು ಕಲಿಸಿ ಕೊಟ್ಟವನೇ ಈತ ಎಂದು ಹೇಳಲಾಗಿದೆ. ಬಾಂಬ್‌ ತಯಾರಿಗಾಗಿ ಆತ ಆನ್‌ಲೈನ್‌ ಮೂಲಕ ಸಾಮಗ್ರಿಗಳನ್ನು ತರಿಸಿಕೊಂಡಿದ್ದಾನೆ ಎನ್ನಲಾಗಿದೆ.

ಶಿವಮೊಗ್ಗದಿಂದ ಕಣ್ಮರೆಯಾದ ಶಾರಿಖ್‌ ಹುಬ್ಬಳ್ಳಿಗೆ ಹೋಗಿ, ಅಲ್ಲಿಂದ ಕೇರಳ ಮತ್ತು ತಮಿಳುನಾಡಿನಲ್ಲಿ ತಿರುಗಾಡಿಕೊಂಡು ಮೈಸೂರಿಗೆ ತಲುಪಿದ್ದ. ಕೊಯಮತ್ತೂರಿನಲ್ಲಿ ಅಕ್ಟೋಬರ್‌ ೨೩ರಂದು ಕಾರ್‌ ಬಾಂಬ್‌ ಸ್ಫೋಟ ಸಂಭವಿಸುವ ಕೆಲವೇ ದಿನದ ಮೊದಲು ಆತ ಕೊಯಮತ್ತೂರಿನಲ್ಲಿದ್ದ ಎಂಬ ಮಾಹಿತಿ ಇದೆ. ಅಲ್ಲಿ ಕಾರಿನಲ್ಲಿ ಸ್ಫೋಟದೊಂದಿಗೆ ಮೃತಪಟ್ಟ ಜಮೀಶಾ ಮುಬೀನ್‌ ಎಂಬಾತನ ಜತೆಗೂ ಶಾರಿಖ್‌ಗೆ ಸಂಬಂಧವಿತ್ತು. ಆತನೂ ಬಾಂಬ್‌ ತಯಾರಿಯ ತರಬೇತಿ ನೀಡಿದ್ದ ಎನ್ನಲಾಗಿದೆ.

ಇತ್ತ ಮೈಸೂರಿಗೆ ಬಂದು ಬಾಂಬ್‌ ತಯಾರಿಯ ಕೆಲಸ ಮುಂದುವರಿಸಿದ ಶಾರಿಖ್‌ ಒಂದು ಬಾಂಬನ್ನು ಹಿಡಿದುಕೊಂಡು ಮಂಗಳೂರಿಗೆ ಬಂದಿದ್ದಾನೆ. ಬರುವಾಗ ಹುಬ್ಬಳ್ಳಿಯ ತಾನು ಕದ್ದಿದ್ದ ಆಧಾರ್‌ ಕಾರ್ಡನ್ನು ತನ್ನದೇ ಎಂಬಂತೆ ಇಟ್ಟುಕೊಂಡಿದ್ದ ಎನ್ನಲಾಗಿದೆ. ಮಂಗಳೂರಿನಲ್ಲಿ ಸಣ್ಣ ಪ್ರಮಾಣದ ಸ್ಫೋಟವೊಂದನ್ನು ನಡೆಸಿ ಭಯ ಹುಟ್ಟಿಸುವ ಉದ್ದೇಶ ಆತನಿಗೆ ಇದ್ದಂತಿದೆ. ಅದೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಂಗಳೂರು ಭೇಟಿಯ ಸಂದರ್ಭದಲ್ಲೇ ಈ ಕೃತ್ಯ ನಡೆಸಲು ಆತ ಮುಂದಾಗಿದ್ದ ಎಂಬ ಮಾಹಿತಿ ಇದೆ. ಆದರೆ, ಹಾಗೆ ಸ್ಫೋಟ ನಡೆಸುವುದಕ್ಕೆ ಮೊದಲೇ ರಿಕ್ಷಾದಲ್ಲೇ ಸ್ಫೋಟ ಸಂಭವಿಸಿದೆ.

ಈಗ ಬಹುಕಾಲದಿಂದ ಪೊಲೀಸರಿಗೆ ಬೇಕಾಗಿದ್ದ ಶಾರಿಖ್‌ ಪೊಲೀಸರ ಕೈಗೆ ಸಿಕ್ಕಿದ್ದಾನೆ. ಆತನನ್ನು ಬಳಸಿಕೊಂಡು ಉಗ್ರಜಾಲವನ್ನು ಹೇಗೆ ಬೇಧಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

ಇದನ್ನೂ ಓದಿ | ಮಂಗಳೂರು ಸ್ಫೋಟ | ಕುಕ್ಕರ್‌ ಬ್ಲಾಸ್ಟ್‌ಗೆ ಮಲೆನಾಡಿನ ನಂಟು, ಆತಂಕಕ್ಕೆ ಸಿಲುಕಿದ ತೀರ್ಥಹಳ್ಳಿಯ ಜನರು

Exit mobile version