Site icon Vistara News

Mangalore News: ಫಲಿಸದ ಸತತ 6-7 ಗಂಟೆ ಕಾರ್ಯಾಚರಣೆ; ಮಣ್ಣಿನಡಿ ಸಿಲುಕಿದ್ದ ಕಾರ್ಮಿಕ ಸಾವು

Mangalore News

ಮಂಗಳೂರು: ನಗರದಲ್ಲಿ ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿತ ಪ್ರಕರಣದಲ್ಲಿ (Mangalore News) ಮಣ್ಣಿನಡಿ ಸಿಲುಕಿದ್ದ ಒಬ್ಬ ಕಾರ್ಮಿಕ ಮೃತಪಟ್ಟಿದ್ದಾನೆ. ಮಣ್ಣಿನಡಿ ಸಿಲುಕಿದ್ದ ಇಬ್ಬರ ಪೈಕಿ ಒಬ್ಬ ಕಾರ್ಮಿಕನನ್ನು ಬುಧವಾರ ಸಂಜೆ ರಕ್ಷಣೆ ಮಾಡಲಾಗಿತ್ತು. ಆದರೆ, ಮತ್ತೊಬ್ಬ ಕಾರ್ಮಿಕನ ರಕ್ಷಣೆಗಾಗಿ ಸತತ 6-7 ಗಂಟೆ ನಡೆದ ಕಾರ್ಯಾಚರಣೆ ಫಲ ನೀಡಲಿಲ್ಲ.

ಬಿಹಾರ ಮೂಲದ 30 ವರ್ಷದ ಚಂದನ್ ಮೃತ ಪಟ್ಟಿದ್ದಾನೆ. ಸತತ 6-7 ಗಂಟೆ ಕಾರ್ಯಾಚರಣೆ ನಡೆಸಿ ಕಾರ್ಮಿಕನನ್ನು ರಕ್ಷಿಸಲು ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಅಗ್ನಿ ಶಾಮಕ ದಳ ಸಿಬ್ಬಂದಿ ತೀವ್ರ ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ.

ಮಂಗಳೂರಿನ ಬಲ್ಮಠ ರೋಡ್ ಸಮೀಪದ ರೋಹನ್ ಕಾರ್ಪೋರೇಶನ್‌ಗೆ ಸೇರಿದ ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿದು ಬಿಹಾರ ಮೂಲದ ಚಂದನ್ ಮತ್ತು ರಾಜಕುಮಾರ್ ಸಿಲುಕಿದ್ದರು. ಕಾರ್ಯಾಚರಣೆಯಲ್ಲಿ ಮೊದಲಿಗೆ ರಾಜಕುಮಾರ್‌ನ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಚಂದನ್‌ ರಕ್ಷಣೆಗಾಗಿ ಕಾರ್ಯಾಚರಣೆ ಮುಂದುವರಿದಿತ್ತು. ಸತತ ಕಾರ್ಯಾಚರಣೆ ಬಳಿಕ ಮಣ್ಣಿನಡಿ ಸಿಲುಕಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಚಂದನ್‌ನನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಿಸದೆ ಕಾರ್ಮಿಕ ಕೊನೆಯುಸಿರೆಳೆದಿದ್ದಾನೆ.

ಎಲ್ಲ ಕಟ್ಟಡ ಕಾಮಗಾರಿಗಳ ಸ್ಥಗಿತಕ್ಕೆ ಪಾಲಿಕೆ ಆದೇಶ

ಮಣ್ಣು ಕುಸಿತ ಪ್ರಕರಣದ ಬೆನ್ನಲ್ಲೇ ಎಚ್ಚೆತ್ತ ಮಂಗಳೂರು ಮಹಾನಗರ ಪಾಲಿಕೆ ನಗರದಾದ್ಯಂತ ಕಟ್ಟಡ ಕಾಮಗಾರಿ ಸ್ಥಗಿತಕ್ಕೆ ಆದೇಶ ಹೊರಡಿಸಿದೆ. ಮಳೆಗಾಲ ಮುಕ್ತಾಯವಾಗುವವರೆಗೆ ಎಲ್ಲಾ ಕಟ್ಟಡದ ಕಾಮಗಾರಿ ಸ್ಥಗಿತ ಮಾಡಲು ಸೂಚಿಸಲಾಗಿದೆ.

ಯಾವುದೇ ಕಟ್ಟಡದ ಕಾಮಗಾರಿಯನ್ನು ನಡೆಸದಂತೆ ಹಾಗೂ ಈಗಾಗಲೇ ಪ್ರಾರಂಭಿಸಿರುವ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ನಿಲ್ಲಿಸುವಂತೆ ಸೂಚಿಸಲಾಗಿದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮವನ್ನು ಅಳವಡಿಸಿಕೊಂಡು ಕಾಮಗಾರಿಯನ್ನು ಸ್ಥಗಿತಗೊಳಿಸಲು ಸೂಚನೆ ನೀಡಲಾಗಿದೆ.

ಇದನ್ನೂ ಓದಿ | Mangalore News: ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿತ; ಮಣ್ಣಿನಡಿ ಸಿಲುಕಿದ ಇಬ್ಬರು ಕಾರ್ಮಿಕರು

ಅವೈಜ್ಞಾನಿಕ ಭೂ ಅಗೆತ ಹಾಗೂ ಕಟ್ಟಡ ನಿರ್ಮಾಣ ಕಾಮಗಾರಿ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಪಾಲಿಕೆ ಕಮಿಷನರ್ ಆದೇಶ ಹೊರಡಿಸಿದ್ದಾರೆ. ನಿಯಮ ಉಲ್ಲಂಘನೆ ಕಂಡುಬಂದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮದ ಎಚ್ಚರಿಕೆಯನ್ನು ಕಮಿಷನರ್‌ ನೀಡಿದ್ದಾರೆ.

Exit mobile version