ಮಂಗಳೂರು: ಈ ಹಿಂದೆ ಉಳ್ಳಾಲ ಕ್ಷೇತ್ರವಾಗಿದ್ದ ಮಂಗಳೂರು ವಿಧಾನಸಭಾ ಕ್ಷೇತ್ರವು ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದೆ. 2006ರ ಉಪಚುನಾವಣೆಯಲ್ಲಿ ತಂದೆ ಯು.ಟಿ. ಫರೀದ್ ಅವರ ಸ್ಥಾನ ತುಂಬಿದವರು ಯು.ಟಿ. ಖಾದರ್ ಆಗಿದ್ದಾರೆ. ಈ ಬಾರಿ ನಡೆದ ಚುನಾವಣೆಯಲ್ಲಿ (Mangalore Ullal Election Results) ಕಾಂಗ್ರೆಸ್ ಪಕ್ಷದ ಯು.ಟಿ. ಖಾದರ್ ಅವರು ಜಯಗಳಿಸಿದ್ದಾರೆ.
ಕಾಂಗ್ರೆಸ್‌ಗೆ ಪ್ಲಸ್ ಏನು?
2008ರಲ್ಲಿ ಕ್ಷೇತ್ರ ಪುನರ್ವಿಂಗಡನೆಯಾಗಿ ವಿಟ್ಲ ವಿಧಾನಸಭಾ ಕ್ಷೇತ್ರದ ಹಲವು ಗ್ರಾಮಗಳು ಈ ಕ್ಷೇತ್ರದ ಪಾಲಾಗಿತ್ತು. ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶಗಳು ಉಳ್ಳಾಲ ವಿಧಾನಸಭಾ ಕ್ಷೇತ್ರದ ಜತೆ ಸೇರಿ ಮಂಗಳೂರು ವಿಧಾನಸಭಾ ಕ್ಷೇತ್ರ ರಚನೆ ಆಗಿತ್ತು. ಆರಂಭದಿಂದಲೂ ಮಂಗಳೂರು ಕ್ಷೇತ್ರದಲ್ಲಿ ಬಿಗಿ ಹಿಡಿತ ಸಾಧಿಸಿರುವ ಯು.ಟಿ. ಖಾದರ್ ಅವರನ್ನು ಕಟ್ಟಿ ಹಾಕಲು ಇಲ್ಲಿ ಬಿಜೆಪಿಗೆ ಸಮರ್ಥ ಅಭ್ಯರ್ಥಿ ಇಲ್ಲ ಎಂಬುದೇ ಕಾಂಗ್ರೆಸ್‌ಗೆ ಇಲ್ಲಿ ಪ್ಲಸ್ ಪಾಯಿಂಟ್ ಆಗುತ್ತಾ ಬಂದಿದೆ. ಹೀಗಾಗಿ ಅವರು ಗೆಲುವಿನ ನಾಗಾಲೋಟವನ್ನು ಮುಂದುವರಿಸಿದ್ದಾರೆ. ಇವರು 83219 ಮತಗಳನ್ನು ಪಡೆದಿದ್ದು, ಪ್ರತಿಸ್ಪರ್ಧಿ ಬಿಜೆಪಿ ಸತೀಶ್ ವಿರುದ್ಧ 22,790 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
ಪೈಪೋಟಿ ನೀಡಿದ ಸತೀಶ್
ಬಿಜೆಪಿಯಿಂದ ಈ ಬಾರಿ ಸ್ಪರ್ಧೆ ಮಾಡಿದ ಸತೀಶ್ ಕುಂಪಲ ಅವರು ಪೈಪೋಟಿ ನೀಡಿದರಾದರೂ ಗೆಲುವಿನ ದಡ ಸೇರುವಲ್ಲಿ ವಿಫಲರಾದರು. ಕಳೆದ ಚುನಾವಣೆಯಲ್ಲಿ ಗೆಲುವಿನ ಅಂತರ ಕಡಿಮೆ ಆಗಿತ್ತು. ಈ ಬಾರಿ ಗೆಲ್ಲುವ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರೂ ಸಾಧಿಸಲು ಆಗಲಿಲ್ಲ. ಅವರು 60429 ಮತಗಳನ್ನು ಪಡೆದುಕೊಂಡಿದ್ದಾರೆ.
ಈ ನಡುವೆ ಎಸ್‌ಡಿಎಫ್‌ಐ ಪ್ರಭಾವಿ ನಾಯಕ ರಿಯಾಜ್ ಫರಂಗಿಪೇಟೆ ಇಲ್ಲಿ ಸ್ಪರ್ಧೆಗಿಳಿದಿದ್ದರಿಂದ ಒಂದು ಪ್ರಮಾಣದ ಮುಸ್ಲಿಂ ಸಮುದಾಯದವರ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೂ ಖಾದರ್ ಗೆಲುವಿನ ಮೇಲೆ ಪರಿಣಾಮವನ್ನು ಬೀರಲಾಗಿಲ್ಲ.
ಇದನ್ನೂ ಓದಿ: Karnataka Election Results 2023 : ಕಾಂಗ್ರೆಸ್ ಅಧಿಕಾರಕ್ಕೆ; ಐದು ಉಚಿತ ಯೋಜನೆಗಳ ಜಾರಿಗೆ ಕೌಂಟ್‌ಡೌನ್
ಕಳೆದ ಬಾರಿಯ ಫಲಿತಾಂಶ
ಯು.ಟಿ. ಖಾದರ್ (ಕಾಂಗ್ರೆಸ್): 80813 | ಸಂತೋಷ್ ಕುಮಾರ್ ರೈ (ಬಿಜೆಪಿ): 61074 | ಗೆಲುವಿನ ಅಂತರ: 19739
ಈ ಬಾರಿಯ ಚುನಾವಣಾ ಫಲಿತಾಂಶ
ಯು.ಟಿ. ಖಾದರ್ (ಕಾಂಗ್ರೆಸ್): 83219 | ಸತೀಶ್ ಕುಂಪಲ (ಬಿಜೆಪಿ): 60429 | ಗೆಲುವಿನ ಅಂತರ: 22,790 | ನೋಟಾ: 720