ಬೆಂಗಳೂರು: ಮಂಗಳೂರಿನ ನಾಗುರಿಯಲ್ಲಿ ಶನಿವಾರ (ನ. ೧೯) ಆಟೋ ರಿಕ್ಷಾದಲ್ಲಿ ಸಂಭವಿಸಿದ ಸ್ಫೋಟ (Mangalore Blast) ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ ಕೆ.ಜಿ. ಹಳ್ಳಿಯಲ್ಲಿ ನಾಲ್ಕು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಂಗಳೂರು ಬಾಂಬ್ ಸ್ಫೋಟ ಸಂಬಂಧ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿರುವ ಬೆಂಗಳೂರು ಪೊಲೀಸರು, ಇದಕ್ಕೆ ಸಂಬಂಧಪಟ್ಟಂತೆ ಎಲ್ಲೆಲ್ಲಿ ಲಿಂಕ್ ಇದೆ ಎಂಬುದರ ಜಾಡು ಹಿಡಿದು ಹೊರಟಿದ್ದಾರೆ. ಇದರ ಭಾಗವಾಗಿ ಭಾನುವಾರ ತಡರಾತ್ರಿ ಕೆ.ಜಿ. ಹಳ್ಳಿಯಲ್ಲಿ ನಾಲ್ಕು ಮಂದಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ.
ವಾಹೀದ್, ತಾಹೀರ್ ಸೇರಿ ಮತ್ತಿಬ್ಬರನ್ನು ವಶಕ್ಕೆ ಪಡೆಯಲಾಗಿದ್ದು, ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಈ ಆರೋಪಿಗಳನ್ನು ಬೆಂಗಳೂರು ಹಾಗೂ ಮಂಗಳೂರು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. ಬಂಧಿತ ಆರೋಪಿಗಳನ್ನು ಮಂಗಳೂರು ಪೊಲೀಸರ ವಶಕ್ಕೆ ನೀಡಲಾಗಿದೆ ಎಂದು ವಿಸ್ತಾರ ನ್ಯೂಸ್‌ಗೆ ಪೊಲೀಸ್ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ | ಮಂಗಳೂರು ಸ್ಫೋಟ | ಉಗ್ರರನ್ನು ಗುಂಡು ಹೊಡೆದು ಸಾಯಿಸಬೇಕು: ಗುಡುಗಿದ ಕೆ.ಎಸ್. ಈಶ್ವರಪ್ಪ
ಶಾರೀಕ್ ಜತೆ ನಿರಂತರ ಸಂಪರ್ಕದಲ್ಲಿದ್ದ ಆರೋಪಿ ವಶಕ್ಕೆ
ಮಂಗಳೂರು ಆಟೋದಲ್ಲಿ ಕುಕ್ಕರ್ ಬಾಂಬ್ ಇಟ್ಟು ಸ್ಫೋಟ ಮಾಡಿದ್ದ ಉಗ್ರ ಶಾರೀಕ್ ಜತೆಗೆ ನಿರಂತರ ಸಂಪರ್ಕದಲ್ಲಿರುವ ಆರೋಪದ ಮೇಲೆ ಕೆ.ಜಿ ಹಳ್ಳಿಯಲ್ಲಿ ಮಹಮ್ಮದ್ ರುಹುಲ್ಲಾ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಮೈಸೂರು ಪೊಲೀಸರು ಕಾರ್ಯಾಚರಣೆ ನಡೆಸಿ ಈತನನ್ನು ವಶಕ್ಕೆ ಪಡೆದಿದ್ದಾರೆ.
ಕೆ.ಜಿ.ಹಳ್ಳಿಯಲ್ಲಿ ಕಾರ್ಯಕ್ರಮವೊಂದಕ್ಕೆ ಈತ ಭೇಟಿ ನೀಡಿದ್ದ ಎನ್ನಲಾಗಿದೆ. ಈತನ ಬಂಧನಕ್ಕಾಗಿ ಭಾನುವಾರವೇ ಮೈಸೂರು ಪೊಲೀಸರು ಬೆಂಗಳೂರಿಗೆ ಬಂದಿದ್ದರು. ಶಾರೀಕ್ ಜತೆಗೆ ಈತ ನಿರಂತರ ಸಂಪರ್ಕದಲ್ಲಿದ್ದ ಎಂಬುದು ತನಿಖೆ ವೇಳೆ ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿ ಮಹಮ್ಮದ್‌ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿತ್ತು. ಒಂದು ಹಂತದ ಮಾಹಿತಿಯನ್ನು ಪಡೆದ ಬಳಿಕ ಮಹಮ್ಮದ್‌ನನ್ನು ಮಂಗಳೂರಿಗೆ ಕರೆದೊಯ್ಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ | ಮಂಗಳೂರು ಸ್ಫೋಟ | ಕೊಡಗಿನಲ್ಲಿ ಕಟ್ಟೆಚ್ಚರ, ಸರ್ಚ್: ಶಾರಿಕ್ ಮಡಿಕೇರಿ ಮೂಲಕ ಸಾಗಿದ್ದರಿಂದ ವಿಶೇಷ ನಿಗಾ