ಶಿವಮೊಗ್ಗ: ಮಂಗಳೂರು ಸ್ಫೋಟ ವಿಚಾರ ಖಂಡನೀಯ. ಉಗ್ರ ಚಟುವಟಿಕೆ ಮಾಡುವವರನ್ನು ಗುಂಡು ಹೊಡೆದು ಸಾಯಿಸಬೇಕು ಇಲ್ಲವೇ ನೇಣಿಗೇರಿಸಬೇಕು ಎಂದು ಮಾಜಿ ಸಚಿವ, ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.
ಮಂಗಳೂರಿನ ನಾಗುರಿಯಲ್ಲಿ ಶನಿವಾರ (ನ.೧೯) ಆಟೋದಲ್ಲಿ ಸಂಭವಿಸಿದ್ದ ಕುಕ್ಕರ್ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿದ ಅವರು, ಉಗ್ರ ಚಟುವಟಿಕೆಯಲ್ಲಿ ತೊಡಗಿರುವವರ ಮೇಲೆ ಕಠಿಣವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವರಿಗೆ ಯಾರು ಬೆಂಬಲ ಕೊಡುತ್ತಿದ್ದಾರೆ? ಯಾವ ಸಂಘಟನೆ, ರಾಜಕೀಯ ಪಕ್ಷಗಳವರು ಬೆಂಬಲ ಕೊಡುತ್ತಿದ್ದಾರೆಂಬುದು ಗೊತ್ತಾಗಬೇಕಿದೆ. ಸಮಾಜ ಈ ಬಗ್ಗೆ ಗಮನಿಸಿದರೆ, ಸರಿ ಮಾಡಬಹುದು. ರಾಷ್ಟ್ರದ್ರೋಹಿಗಳ ಬಗ್ಗೆ ಬಿಗಿ ಕ್ರಮ ತೆಗೆದುಕೊಳ್ಳುತ್ತೇವೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮುಖ್ಯಸ್ಥರು ಹೇಳುತ್ತಿರುತ್ತಾರೆ. ಏನು ಬಿಗಿ ಕ್ರಮ ತೆಗೆದುಕೊಂಡಿದ್ದೀರಾ ಎಂದು ನೊಂದವರು ಪ್ರಶ್ನೆ ಮಾಡುತ್ತಾರೆ. ಹೀಗಾಗಿ ಸೈನಿಕರ ಮೇಲೆ ದಾಳಿ ಮಾಡಿದಾಗ ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತಾರೋ ಹಾಗೆಯೇ ಇವರ ಮೇಲೆಯೂ ಬಿಗಿ ಕ್ರಮ ತೆಗೆದುಕೊಳ್ಳಬೇಕು ಎಂದು ನಾನು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಅವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ | ಮಂಗಳೂರು ಸ್ಫೋಟ | ಶಾರಿಕ್‌ನ ಹಿಂದಿದ್ದಾನೆ ಮತ್ತೊಬ್ಬ ಮೇನ್ ಹ್ಯಾಂಡ್ಲರ್ ತೀರ್ಥಹಳ್ಳಿಯ ಅಬ್ದುಲ್ ಮತೀನ್ ತಾಹಾ
ಶಿವಮೊಗ್ಗ ಶಾಂತಿಪ್ರಿಯ ಜಿಲ್ಲೆಯಾಗಿದೆ. ಇಲ್ಲಿ ಉಗ್ರ ಚಟುವಟಿಕೆ ನಡೆಸಿದರೆ ಅನುಮಾನ ಬರುವುದಿಲ್ಲ ಎಂದು ಇಲ್ಲಿಗೆ ಬರುತ್ತಿದ್ದಾರೆ. ಇವರಿಗೆ ಗುಂಡಿಟ್ಟು ಹೊಡೆಯುತ್ತಾರೆ. ನೇಣಿಗೆ ಹಾಕುತ್ತಾರೆ ಎಂದು ಭಯ ಹುಟ್ಟಿದರೆ, ಈ ರೀತಿಯಾಗುವುದಿಲ್ಲ. ಸರ್ಕಾರಗಳು ಈ ಬಗ್ಗೆ ಗಮನ ಹರಿಸಬೇಕು. ಸರ್ಕಾರಗಳ ಜತೆಗೆ ಸಮಾಜ ಕೂಡ ಜಾಗೃತವಾಗಬೇಕು ಎಂದು ಈಶ್ವರಪ್ಪ ಗುಡುಗಿದರು.
ಈ ಹಿಂದೆ ಬಾಂಬ್ ಬ್ಲಾಸ್ಟ್ ಎಂಬುದು ಮಾಮೂಲಿಯಾಗಿ ಹೋಗಿತ್ತು. ಇವರಿಗೆ ಎಲ್ಲೂ ಏನೂ ಭಯವಿಲ್ಲದಂತಾಗಿದೆ. ಮಗ, ಮಗಳು, ದೇಶದ್ರೋಹಿ ಸಂಘಟನೆಗಳ ಜತೆಗೆ ಸಂಪರ್ಕ ಹೊಂದಿರುವುದು ಕೂಡ ಮಾಮೂಲಿಯಾಗಿದೆ. ಅವರವರ ತಂದೆ, ತಾಯಿಗಳು ಇವರನ್ನು ಹದ್ದುಬಸ್ತಿನಲ್ಲಿ ಇಡಬೇಕು. ಸಮಾಜ ಕೂಡ ಇಂತಹ ಕೃತ್ಯಗಳ ಬಗ್ಗೆ ಗಮನಿಸುತ್ತಾ ಇರಬೇಕು ಎಂದು ತಿಳಿಸಿದರು.
ಈ ಹಿಂದೆ ತೆಗೆದುಕೊಳ್ಳುತ್ತಿದ್ದ ಕ್ರಮಕ್ಕಿಂತ ಈಗ ಬಿಗಿ ಕ್ರಮವನ್ನು ತೆಗೆದುಕೊಳ್ಳಲಾಗುತ್ತಿದೆ. ಆದರೂ ಇನ್ನೂ ಹೆಚ್ಚಿನ ಬಿಗಿ ಕ್ರಮವಾಗಬೇಕು. ದಾಳಿಯಿಂದ ಸತ್ತವರ ಪಟ್ಟಿ ಓದುವುದಕ್ಕೆ ನಾವು ಇರುವುದಲ್ಲ ಎಂಬುದನ್ನು ತೋರಿಸಿ ಕೊಡಬೇಕು. ಸರ್ಕಾರವು ಈ ಉಗ್ರರಿಗೆ ಉಗ್ರ ಶಿಕ್ಷೆ ಕೊಡಲೇಬೇಕು. ಈ ನಿಟ್ಟಿನಲ್ಲಿ ಕಾನೂನು ಜಾರಿಯಾಗಬೇಕು. ಬ್ಲಾಸ್ಟ್ ಆಯ್ತು ಎಂದ ಕೂಡಲೇ ಏನು ಉತ್ತರ ಕೊಡಬೇಕು? ನನಗೆ ಬಹಳ ನೋವಾಗುತ್ತಿದೆ. ದಯಮಾಡಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈ ಬಗ್ಗೆ ಬಿಗಿ ಕ್ರಮ ತೆಗೆದುಕೊಳ್ಳಲಿ ಎಂದು ಈಶ್ವರಪ್ಪ ಹೇಳಿದರು.
ಇದನ್ನೂ ಓದಿ | ಮಂಗಳೂರು ಸ್ಫೋಟ | ಶಿವಮೊಗ್ಗದ ಟ್ರಯಲ್ ಬ್ಲಾಸ್ಟ್- ಮಂಗಳೂರು ಬ್ಲಾಸ್ಟ್‌ಗೆ ಸಂಬಂಧ ಇದೆ: ಆರಗ ಜ್ಞಾನೇಂದ್ರ