ಬೆಂಗಳೂರು: ದೇಶದಲ್ಲಿ ಪಂಚಾಯತಿ ರಾಜ್ ಸಂಸ್ಥೆಗಳನ್ನು ಸ್ಥಾಪಿಸಿ ಆಡಳಿತ ವಿಕೇಂದ್ರೀಕರಣದಲ್ಲಿ ಕರ್ನಾಟಕ ಪ್ರಮುಖ ಪಾತ್ರ ವಹಿಸಿದೆ ಎಂದಿರುವ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಮಣಿಶಂಕರ್ ಅಯ್ಯರ್, ತಾವು ಹೇಳಿದಂತೆ ಕರ್ನಾಟಕದ ಪತ್ರಿಕೆಗಳು ಹೆಡ್‌ಲೈನ್ ನೀಡಿದರೆ ಅವರಿಗೆ ಶಹಬ್ಬಾಶ್ ಶಹಬ್ಬಾಶ್ ಎನ್ನುವೆ ಎಂದು ತಿಳಿಸಿದ್ದಾರೆ.
ಕೆಪಿಸಿಸಿಯ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಪಾಳ್ಗೊಳ್ಳಲು ಬಂದ ಸಂದರ್ಭದಲ್ಲಿ ಮಾತನಾಡಿದರು.
ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಆಡಳಿತ ವಿಕೇಂದ್ರೀಕರಣಕ್ಕೆ ಒತ್ತು ನೀಡಿದರು. ದೇಶದಲ್ಲೇ ಅನುಷ್ಠಾನಕ್ಕೆ ಮೊದಲನೆಯದಾಗಿ ಒತ್ತು ನೀಡಿದ ರಾಜ್ಯ ಕರ್ನಾಟಕ. ಅಬ್ದುಲ್ ನಜೀರ್ ಸಾಬ್ ಅವರು ರಾಜೀವ್‌ಗಾಂಧಿ ಅವರಿಂದ ಸಾಕಷ್ಟು ಮಾರ್ಗದರ್ಶನ ಪಡೆದರು. ಕರ್ನಾಟಕದಲ್ಲಿ ಇಂದಿಗೂ ಪಂಚಾಯತ್ ರಾಜ್ ಸಂಸ್ಥೆಗಳು ಕ್ರಿಯಾಶೀಲವಾಗಿವೆ. ತಳಮಟ್ಟದಲ್ಲಿ ಆಡಳಿತಕ್ಕೆ, ಸಬಲೀಕರಣಕ್ಕೆ ಒತ್ತು ನೀಡಿದೆ ಎಂದರು.
ಪಂಚಾಯತಿರಾಜ್ ಕಾನೂನು ಜಾರಿಯಿಂದ ಉಂಟಾಗಿರುವ ಅತಿ ದೊಡ್ಡ ಲಾಭವೆಂದರೆ ಮಹಿಳಾ ಸಬಲೀಕರಣ. ಇಂದು ದೇಶದಲ್ಲಿ 14 ಲಕ್ಷ ಮಹಿಳಾ ಜನಪ್ರತಿನಿಧಿಗಳಿದ್ದಾರೆ. ವಿಶ್ವದ ಎಲ್ಲ ದೇಶಗಳ ಮಹಿಳಾ ಜನಪ್ರತಿನಿಧಿಗಳ ಸಂಖ್ಯೆಗಿಂತಲೂ ಭಾರತದ ಮಹಿಳಾ ಪ್ರತಿನಿಧಿಗಳ ಸಂಖ್ಯೆ ಹೆಚ್ಚಾಗಿದೆ. ಇದು ಅತ್ಯಂತ ಮಹತ್ವದ ವಿಷ. ನಾನು ಹೇಳಿದ ಈ ವಿಚಾರವನ್ನು ಕರ್ನಾಟಕದ ಪತ್ರಿಕೆಗಳು ಶುಕ್ರವಾರದ ಹೆಡ್‌ಲೈನ್‌ನಲ್ಲಿ ಬಳಸಿದರೆ ಅವರಿಗೆ ಶಹಬ್ಬಾಶ್ ಶಹಬ್ಬಾಶ್ ಎನ್ನುತ್ತೇನೆ. ಅದನ್ನು ಬಿಟ್ಟು ನಾನು ವೀರ ಸಾವರ್ಕರ್ ಬಗ್ಗೆ ಹೇಳಿದ್ದನ್ನು ಶೀರ್ಷಿಕೆ ಮಾಡಿದರೆ ಅಚ್ಚರಿ ಆಗುತ್ತದೆ ಎಂದರು.
ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬೇಸರ
ಪಂಚಾಯತಿ ರಾಜ್ ಕಾನೂನು ಜಾರಿಯಲ್ಲಿ ಎದುರಾದ ಸಮಸ್ಯೆಗಳನ್ನು ಅಧ್ಯಯನ ನಡೆಸಲು ಹಿಂದಿನ ಕರ್ನಾಟಕ ಸರ್ಕಾರ ಪ್ರಯತ್ನ ಮಾಡಿದೆ ಎಂದು ಹೇಳಿದ ಮಣಿಶಂಕರ್ ಅಯ್ಯರ್, ಅದೇ ಸರ್ಕಾರ ಕಾನೂನು ಜಾರಿಗೆ ಮನಸ್ಸು ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹಿಂದಿನ ಕಾಂಗ್ರೆಸ್ ಸರ್ಕಾರ ರಚಿಸಿದ್ದ ರಮೇಶ್ ಕುಮಾರ್ ಸಮಿತಿಯು ಕಾನೂನನ್ನು ಅತ್ಯಂತ ಆಳವಾಗಿ ಅಧ್ಯಯನ ನಡೆಸಿ ವರದಿ ನೀಡಿತು. ಈ ವರದಿ ಆಧಾರದಲ್ಲಿ, ದೇಶದಲ್ಲೇ ಅತ್ಯುತ್ತಮ ಎನ್ನಬಹುದಾದ ಕಾನೂನನ್ನು ರೂಪಿಸಲಾಗಿದೆ. ಆದರೆ ಬೇಸರದ ಸಂಗತಿ ಎಂದರೆ, ಆಗಿನ ಕಾಂಗ್ರೆಸ್ ಸರ್ಕಾರ, ಈ ಕಾನೂನು ಜಾರಿಗೆ ಅಗತ್ಯ ವೇಗವನ್ನು ನೀಡಲಿಲ್ಲ. ಸಹಜವಾಗಿಯೇ, ಮುಂದೆ ಬಂದ ಕಾಂಗ್ರೆಸೇತರ ಸರ್ಕಾರವೂ ಇದೇ ಧೋರಣೆಯನ್ನು ಮುಂದುವರಿಸಿತು.
ಅತ್ಯುತ್ತಮ ಕಾನೂನನ್ನು ರೂಪಿಸಲಾಯಿತು, ಅದರ ಉಪಯೋಗಗಳೇನು ಎನ್ನುವುದೂ ನಿಮಗೆ ಗೊತ್ತಿತ್ತು. ಆದರೆ ಅದನ್ನು ಜಾರಿ ಮಾಡಲು ಅಗತ್ಯ ರಾಜಕೀಯ ಇಚ್ಛಾಶಕ್ತಿ ಇರಲಿಲ್ಲ. ಇದು ಕಾಂಗ್ರೆಸ್ ಸೇರಿ ಎಲ್ಲ ಪಕ್ಷಗಳ ಸರ್ಕಾರಕ್ಕೂ ಅನ್ವಯವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ | ಶಿಂಜೊ ಅಬೆಯಂತೆಯೇ ಹತ್ಯೆಯಾದ ಜಗತ್ತಿನ ಹತ್ತು ನಾಯಕರಿವರು