ಮಂಗಳೂರು: ಆಕೆ ಸಣ್ಣ ವಯಸ್ಸಿನಲ್ಲೇ ಏರ್ ಫೋರ್ಸ್ ಸೇರಿ, ಯುದ್ಧ ವಿಮಾನದ ಪೈಲಟ್ ಆಗಬೇಕು ಎಂದು ಕನಸು ಕಂಡವಳು. ಇದೀಗ ಆಕೆ ಏರ್ ಫೋರ್ಸ್‌ನ ಫ್ಲೈಯಿಂಗ್ ಬ್ರ್ಯಾಂಚ್‌ಗೆ ಆಯ್ಕೆಯಾದ ರಾಜ್ಯದ ಏಕೈಕ ಯುವತಿ ಎಂಬ ಹೆಗ್ಗಳಿಕೆಗೂ ಪಾತ್ರಳಾಗಿದ್ದಾಳೆ. ಆಕೆಯ ಹೆಸರು ಮನಿಷಾ.
ಇದನ್ನೂ ಓದಿ | ಮಂಗಳೂರು ಬಜ್ಪೆ ಏರ್‌ಪೋರ್ಟ್‌ಗೆ ಬಿಎಂಟಿಸಿ ಮಾದರಿ ಬಸ್ ಸೌಕರ್ಯ
ಮಂಗಳೂರಿನ ಅಶೋಕ ನಗರದಲ್ಲಿ ವಾಸವಾಗಿರುವ ಮನೋಹರ ಶೆಟ್ಟಿ ಹಾಗೂ ಮಾಲತಿ ಶೆಟ್ಟಿಯವರ ಮಗಳು ಮನಿಷಾ ಈಗ ಭಾರತೀಯ ವಾಯುಸೇನೆಯ ಫ್ಲೈಯಿಂಗ್ ಬ್ರ್ಯಾಂಚ್‌ಗೆ ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದಾರೆ. ತಂದೆ ಮನೋಹರ ಶೆಟ್ಟಿ ಬ್ಯಾಂಕ್ ಉದ್ಯೋಗಿಯಾಗಿ ನಿವೃತ್ತಿ ಹೊಂದಿದ್ದಾರೆ. ಮನೋಹರ್ ಹಿಂದೊಮ್ಮೆ ಏರ್ ಫೋರ್ಸ್‌ಗೆ ಆಯ್ಕೆಯಾಗಿದ್ದರಾದರೂ ಅದಾಗಲೇ ಇವರ ಸಹೋದರ ಏರ್‌ಫೋರ್ಸ್‌ನಲ್ಲಿ ಇದ್ದ ಕಾರಣ ಇವರ ತಂದೆ ಅನುಮತಿ ನೀಡಿರಲಿಲ್ಲವಂತೆ.
ಹೀಗಾಗಿ ಮನೋಹರ್ ತಮ್ಮ ಮಗಳನ್ನ ಏರ್ ಫೋರ್ಸ್ ಸೇರಿಸಬೇಕು ಎಂಬ ಕಾರಣಕ್ಕೆ ಚಿಕ್ಕಂದಿನಿಂದಲೇ ಈ ಬಗ್ಗೆ ಸ್ಫೂರ್ತಿ ತುಂಬಿದ್ದರು. ಮನಿಷಾ ಎನ್‌ಸಿಸಿ ಸೇರ್ಪಡೆಗೊಂಡು ಪರೆಡ್‌ಗಳಲ್ಲೂ ಭಾಗವಹಿಸುತ್ತಿದ್ದರು. ಬಾಸ್ಕೆಟ್ ಬಾಲ್ ಆಟದೊಂದಿಗೆ ಹಲವು ಕ್ರೀಡೆಗಳಲ್ಲೂ ಮುಂದಿದ್ದ ಮನಿಷಾ ಕಲಿಕೆಯಲ್ಲೂ ಮುಂದಿದ್ದಾರೆ.
ಮಂಗಳೂರಿನ ಲೂರ್ಡ್ಸ್ ಸೆಮಟ್ರ್ ಸ್ಕೂಲ್ ಮತ್ತು ಸೈಂಟ್ ಅಲೋಶೀಯಸ್‌ನಲ್ಲಿ ತಮ್ಮ ಪ್ರಾಥಮಿಕ ಮತ್ತು ಪ್ರೌಢ ಹಾಗೂ ಪಿಯುಸಿ ವಿದ್ಯಾಭ್ಯಾಸ ಮುಗಿಸಿ ಬೆಂಗಳೂರಿನ ರಾಮಯ್ಯ ಕಾಲೇಜಿನಲ್ಲಿ ಬಿಇ ಪದವಿ ಪಡೆದಿದ್ದಾರೆ. ಇದಾದ ಬಳಿಕ ಮರ್ಸಿಡಿಸ್ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದ್ದ ಮನಿಷಾ ಭಾರತೀಯ ಸೇನೆಗೆ ಸೇರುವ ಎಲ್ಲಾ ಪ್ರಯತ್ನಗಳನ್ನು ಮುಂದುವರಿಸಿದರು.
ಆರ್ಮಿ ಹಾಗೂ ನೇವಿಯಲ್ಲಿ ಮನಿಷಾ ಆಯ್ಕೆ ಆಗಿದ್ದರೂ ಏರ್ ಫೋರ್ಸ್‌ಗೆ ಸೇರಬೇಕು ಎಂಬ ಕಾರಣಕ್ಕೆ ತಮ್ಮ ಪ್ರಯತ್ನ ಮುಂದುವರಿಸಿದರು. ಇದೀಗ ಮನಿಷಾ ತಮ್ಮ ಗುರಿ ಸಾಧಿಸಿದ್ದು, ತಂದೆ ತಾಯಿಯ ಆಸೆಯನ್ನೂ ಪೂರೈಸಿದ್ದಾರೆ. ಭಾರತೀಯ ವಾಯುಪಡೆಯ ಫ್ಲೈಯಿಂಗ್ ಬ್ರ್ಯಾಂಚ್‌ಗೆ ಆಯ್ಕೆಯಾಗಿರುವ ಮನಿಷಾ ಜುಲೈ 9ರಂದು ತರಬೇತಿಗೆ ಹೈದರಾಬಾದ್‌ಗೆ ತೆರಳಲಿದ್ದಾರೆ.
ಇದನ್ನೂ ಓದಿ | ಮಂಗಳೂರಿಗೆ ಅಕ್ರಮ ವಲಸೆ; 518ಕ್ಕೂ ಹೆಚ್ಚು ಕಾರ್ಮಿಕರ ವಿಚಾರಣೆ ನಡೆಸಿದ ಪೊಲೀಸರು