Site icon Vistara News

ಯಡಿಯೂರಪ್ಪ ಚುನಾವಣಾ ರಾಜಕೀಯ ನಿವೃತ್ತಿ ಬಗ್ಗೆ ಯಾರ‍್ಯಾರು ಏನೇನು ಹೇಳಿದರು?

B S yediyurappa

ಬೆಂಗಳೂರು: ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ. ಈ ಕುರಿತು ಬಿಜೆಪಿ ಹಾಗೂ ಇತರೆ ಪಕ್ಷಗಳ ನಾಯಕರೂ ಪ್ರತಿಕ್ರಿಯೆ ನೀಡಿದ್ದಾರೆ.

ತಾವು ಕ್ಷೇತ್ರ ತೊರೆಯುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಬಿ. ವೈ. ವಿಜಯೇಂದ್ರ ಶಿಕಾರಿಪುರದಿಂದ ಸ್ಪರ್ಧಿಸುತ್ತಾರೆ ಎಂದು ಘೋಷಿಸಿದ್ದಾರೆ. ತವರು ಕ್ಷೇತ್ರದಲ್ಲಿರುವ ಮಾಜಿ ಸಿಎಂ ಯಡಿಯೂರಪ್ಪ ಅಂಜನಾಪುರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ನಂತರ ಈ ಹೇಳಿಕೆ ನೀಡಿದ್ದಾರೆ. ತಮ್ಮಿಂದ ತೆರವಾಗುವ ಸ್ಥಾನಕ್ಕೆ ಬಿ. ವೈ. ವಿಜಯೇಂದ್ರ ಸ್ಪರ್ಧಿಸುವುದಾಗಿ ಹೇಳುವ ಮೂಲಕ ಚುನಾವಣಾ ರಾಜಕಾರಣಕ್ಕೆ ವಿದಾಯದ ಮಾತನಾಡಿದ್ದಾರೆ. ಮೈಸೂರು ಭಾಗದಲ್ಲಿ ವಿಜಯೇಂದ್ರ ಸ್ಪರ್ಧೆಗೆ ಒತ್ತಡವಿದೆ. ಆದರೆ, ಶಿಕಾರಿಪುರದಲ್ಲಿ ಸ್ಥಾನ ತೆರವಾಗುವುದರಿಂದ ಅವರು ಸ್ಪರ್ಧಿಸುತ್ತಾರೆ ಎಂದು ಯಡಿಯೂರಪ್ಪ ಘೋಷಿಸಿದ್ದಾರೆ. ಶಿಕಾರಿಪುರದಲ್ಲಿ ನಡೆದ ಈ ಕಾರ್ಯಕ್ರಮದಲ್ಲೇ ಇದ್ದ ಬಿ.ವೈ. ವಿಜಯೇಂದ್ರ ಎದ್ದು ನಿಂತು ಜನರಿಗೆ ನಮಸ್ಕರಿಸಿದ್ದಾರೆ.

ಈ ಕುರಿತು ಹಾಸನದಲ್ಲಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಹಾಗೂ ಜೆಡಿಎಸ್‌ ಶಾಸಕ ಎಚ್‌.ಡಿ. ರೇವಣ್ಣ, ಯಡಿಯೂರಪ್ಪ ಹಿರಿಯರಿದ್ದಾರೆ, ರಾಜ್ಯಕ್ಕೆ ಅವರದೇ ಆದ ಕೊಡುಗೆ ನೀಡಿದ್ದಾರೆ. ಅವರು ಈಗಲೇ ನಿವೃತ್ತಿ ಆಗಬಾರದು, ಸಕ್ರಿಯವಾಗಿದ್ದು ಮಾರ್ಗದರ್ಶನ ಮಾಡಬೇಕು. ಅವರಿಗೆ ನಿವೃತ್ತಿ ಆಗುವಂತಹ ವಯಸ್ಸೇನೂ ಆಗಿಲ್ಲ. ಅವರು ಯಾವ ಕಾರಣಕ್ಕೆ ನಿವೃತ್ತಿ ಮಾತನಾಡಿದ್ದಾರೊ ಗೊತ್ತಿಲ್ಲ. ಆದರೆ ಅವರು ಶಾಸಕರಾಗಿ ಸಚಿವರಾಗಿ, ಡಿಸಿಎಂ, ಸಿಎಂ ಆಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಹಾಗಾಗಿ ಯಡಿಯೂರಪ್ಪ ಅವರು ರಾಜಕೀಯದಲ್ಲಿ ಮುಂದುವರೆಯಬೇಕು ಎನ್ನುವುದು ನನ್ನ ಅಭಿಪ್ರಾಯ ಎಂದಿದ್ದಾರೆ.

ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಪ್ರತಿಕ್ರಿಯಿಸಿ, ಯಡಿಯೂರಪ್ಪ ನಮ್ಮ ನಾಯಕರು. ಪಕ್ಷದ ಸಲುವಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ ಎಂದು ಹೇಳಿದ್ದಾರೆ. ಕನಸು ಕಾಣಬೇಡಿ ಎಂದು ಡಿ.ಕೆ. ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಅವರಿಗೆ ಹೇಳಿದ್ದಾರೆ. ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದಾರೆ.

ಸಚಿವ ಗೋವಿಂದ ಕಾರಜೋಳ ಮಾತನಾಡಿ, ಬಿಜೆಪಿ 150 ಸ್ಥಾನ ಗೆಲ್ಲುತ್ತದೆ ಎಂದು ಗುರುವಾರವಷ್ಟೆ ಯಡಿಯೂರಪ್ಪ ಹೇಳಿದ್ದಾರೆ. ಅವರು ಎಂದೆಂದಿಗೂ ಬಿಜೆಪಿಯ ಆಸ್ತಿ. ಅವರಿಗೆ ನಿವೃತ್ತಿ ಎನ್ನುವ ಪ್ರಶ್ನೆಯೇ ಇಲ್ಲ. ಬಿಜೆಪಿ ಕಟ್ಟಿ ಬೆಳೆಸಿದ ಸರ್ವೋಚ್ಚ ನಾಯಕ ಅವರು. ಅವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಅವರ ಉತ್ಸಾಹ ಇನ್ನೂ ಕಡಿಮೆ ಆಗಿಲ್ಲ ಎಂದಿದ್ದಾರೆ.

ಇದನ್ನೂ ಓದಿ | ವಿಧಾನಸಭೆಯಲ್ಲಿ ಬಿ.ವೈ. ವಿಜಯೇಂದ್ರ ಸ್ಪರ್ಧೆ ಖಚಿತ; ತಂದೆಯ ಕ್ಷೇತ್ರದಿಂದಲೇ ʼಶಿಕಾರಿʼ?

ಸಚಿವ ಮುರುಗೇಶ್‌ ನಿರಾಣಿ ಪ್ರತಿಕ್ರಿಯಿಸಿ, ಐದು ದಶಕಗಳಿಂದ ಪಕ್ಷವನ್ನು ಕಟ್ಟಿ ಬೆಳೆಸಿದವರು ಯಡಿಯೂರಪ್ಪ. ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು ಎಂಬ ಮಾತು ಈ ಹಿಂದೆ ಚಾಲ್ತಿಯಲ್ಲಿತ್ತು.

ಅವರು ಶ್ರಮವಹಿಸಿ ಪಕ್ಷವನ್ನು ಈ ಮಟ್ಟಕ್ಕೆ ತಂದಿದ್ದಾರೆ. ಶಿಕಾರಿಪುರ ಕ್ಷೇತ್ರವನ್ನು ವಿಜಯೇಂದ್ರ ಅವರಿಗೆ ಇದೀಗ ಬಿಟ್ಟುಕೊಟ್ಟಿದ್ದಾರೆ. ಈ ಹಿಂದೆ ಆಡ್ವಾಣಿ, ಮುರಳೀಮನೋಹರ ಜೋಶಿ ಸ್ಪರ್ಧೆಯಿಂದ ಹಿಂದೆ ಸರಿದು ಪಕ್ಷಕ್ಕೆ ಮಾರ್ಗದರ್ಶಕರಾಗಿದ್ದಾರೆ. ಅದೇ ರೀತಿ ಇದೀಗ ಯಡಿಯೂರಪ್ಪ ಬಿಟ್ಟುಕೊಟ್ಟಿದ್ದಾರೆ. ಪಕ್ಷಕ್ಕೆ ಅವರ ಮಾರ್ಗದರ್ಶನವಿರಲಿದೆ ಎಂದಿದ್ದಾರೆ.

ಗೃಹಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿ, ಯಡಿಯೂರಪ್ಪ ಅವರ ಹೇಳಿಕೆಯ‌ ಬಗ್ಗೆ ಮಾಧ್ಯಮಗಳಲ್ಲಷ್ಟೇ ಗಮನಿಸಿದ್ದೇನೆ. ಇವತ್ತು ಅಥವಾ ನಾಳೆ ಅವರನ್ನು ಭೇಟಿ ಮಾಡುತ್ತೇನೆ. ವಯಸ್ಸಿನ ಕಾರಣ ಅಥವಾ ಬೇರೆ ಕಾರಣಕ್ಕಾಗಿ ಹೀಗೆ ಹೇಳಿರಬಹುದು. ಸಂಘಟನೆಯವರು ಅವರ ಜತೆ ಮಾತನಾಡುತ್ತಾರೆ. ಚುನಾವಣಾ ರಂಗದಿಂದ ಹಿಂದೆ ಸರಿದಿದ್ದಾರೆ ಎಂದ ಕೂಡಲೇ ರಾಜಕೀಯ ರಂಗದಿಂದ ಹಿಂದೆ ಸರಿದಿದ್ದಾರೆ ಎಂದಲ್ಲ. ಈ ನಿರ್ಧಾರದಿಂದ‌ ರಾಜ್ಯದ ಪ್ರವಾಸ ಮಾಡಲು ಅವರಿಗೆ ಹೆಚ್ಚು ಸಮಯ ಸಿಗುತ್ತದೆ. ಪಕ್ಷ 150 ಸ್ಥಾನ ಗೆಲ್ಲಲು ಅವರ ಪಾತ್ರ ಮಹತ್ವದ್ದಾಗಿದೆ ಎಂದರು.

ಪಕ್ಷದಲ್ಲಿ ಅವರನ್ನು ಕಡೆಗಣಿಸಲಾಗಿದೆ ಎಂಬ ಕುರಿತು ಪ್ರತಿಕ್ರಿಯಿಸಿದ ಆರಗ ಜ್ಞಾನೇಂದ್ರ, ಯಡಿಯೂರಪ್ಪ ಅವರು ಸಕ್ರಿಯವಾಗಿ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಎಲ್ಲವೂ ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿಯೇ ನಡೆಯುತ್ತದೆ ಎಂದಿದ್ದಾರೆ. ವಿಜಯೇಂದ್ರ ಅವರಿಗೆ ಪಕ್ಷದಲ್ಲಿ ಸ್ಥಾನಮಾನ ನೀಡಲು ಇದು ಸೂಕ್ತ ಸಮಯವೇ ಎಂಬ ಪ್ರಶ್ನೆಗೆ, ಈ ಕುರಿತು ಪಕ್ಷ ತೀರ್ಮಾನ ಮಾಡುತ್ತದೆ ಎಂದು ಹೇಳಿದ್ದಾರೆ.

ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿ, ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರು ತಮ್ಮ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂದು ಅನೇಕ ಕ್ಷೇತ್ರಗಳಲ್ಲಿ ಕಾರ್ಯಕರ್ತರು ಒತ್ತಡ ಹೇರಿದ್ದರು ಎನ್ನುವುದನ್ನು ಗಮನಿಸಿದ್ದೇನೆ. ಆದರೆ ಯಡಿಯೂರಪ್ಪ ಅವರು ತಮ್ಮ ಕ್ಷೇತ್ರವನ್ನೇ ಬಿಟ್ಟುಕೊಡುವುದಾಗಿ ಹೇಳಿದ್ದಾರೆ. ಬೇರೆ ಕ್ಷೇತ್ರದಲ್ಲಿ ಕಾರ್ಯಕರ್ತರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಹೀಗೆ ಹೇಳಿರಬಹುದು ಎಂದಿದ್ದಾರೆ.

ಇದನ್ನೂ ಓದಿ | ಬಿ.ಎಸ್‌. ಯಡಿಯೂರಪ್ಪ ಚುನಾವಣಾ ರಾಜಕೀಯ ನಿವೃತ್ತಿ: ವಿಜಯೇಂದ್ರ ಉತ್ತರಾಧಿಕಾರಿ

Exit mobile version