Site icon Vistara News

ಸಿದ್ದರಾಮಯ್ಯ ಈಗ ಏನು ಹೇಳ್ತಾರೆ ಎನ್ನೋದು 2023ರ ಚುನಾವಣೆ ದೃಷ್ಟಿಯಿಂದ ಅತಿ ಮುಖ್ಯ !

siddaramaiah visits rambhapuri math 1

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಶುಕ್ರವಾರದ ನಡೆಯೊಂದು ರಾಜ್ಯ ರಾಜಕಾರಣದಲ್ಲಿ ಅಚ್ಚರಿ ಮೂಡಿಸಿರುವುದಷ್ಟೆ ಅಲ್ಲ, ಕುತೂಹಲವನ್ನೂ ಕೆರಳಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠದ ಭೇಟಿಯ ಕುರಿತು ಸಿದ್ದರಾಮಯ್ಯ ಏನು ಹೇಳುತ್ತಾರೆ ಎನ್ನುವುದು 2023ರ ಚುನಾವಣೆಯನ್ನು ಪ್ರಭಾವಿಸಬಹುದು, ಇಲ್ಲದಿದ್ದರೆ ಕಾಂಗ್ರೆಸ್‌ ಪಕ್ಷಕ್ಕಂತೂ ಪರಿಣಾಮ ಬೀರುವುದು ಖಚಿತ.

ಅತಿ ವೃಷ್ಟಿಯಿಂದ ಹಾನಿಗೀಡಾದ ಪ್ರದೇಶಗಳನ್ನು ವೀಕ್ಷಿಸಲು ಚಿಕ್ಕಮಗಳೂರು ಜಿಲ್ಲಾ ಪ್ರವಾಸದಲ್ಲಿರುವ ಸಿದ್ದರಾಮಯ್ಯ, ಇದೇ ಮೊದಲ ಬಾರಿಗೆ ರಂಭಾಪುರಿ ಪೀಠಕ್ಕೆ ಭೇಟಿ ನೀಡಿ ಸ್ವಾಮೀಜಿಯವರ ಆಶೀರ್ವಾದ ಪಡೆದರು.

ಪೀಠದಲ್ಲಿರುವ ಭದ್ರಕಾಳಿ ಅಮ್ಮನ ದೇವಾಲಯಕ್ಕೆ ಪ್ರದಕ್ಷಿಣೆ ನಮಸ್ಕಾರ ಮಾಡಿದರು. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರಿಗೆ ಶಾಲು ಹೊದಿಸಿದ ಸ್ವಾಮೀಜಿ, ರುದ್ರಾಕ್ಷಿ ಸರವನ್ನು ತೊಡಿಸಿದರು. ಚುನಾವಣೆವರೆಗೆ ನಿಮ್ಮ ಕುತ್ತಿಗೆಯಲ್ಲೇ ಇದು ಇದ್ದರೆ ಉತ್ತಮ ಎಂಬ ಸಲಹೆಯನ್ನು ನೀಡಿದರು.

ನಂತರ ಸುದ್ದಿಗಾರರ ಜತೆಗೆ ಮಾತನಾಡಿದ ಸ್ವಾಮೀಜಿಯವರು, ಕಳೆದ ಚುನಾವಣೆ ವೇಳೆ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದ ಕುರಿತು ಮಾತನಾಡಿದ ಸ್ವಾಮೀಜಿ, ಈ ಹಿಂದೆ ಈ ಹಿಂದೆ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ವೀರಶೈವದಿಂದ ಲಿಂಗಾಯತವನ್ನು ಒಡೆಯಲು ಕುಮ್ಮಕ್ಕು ಕೊಟ್ಟಿದ್ದಾರೆ ಎಂಬ ಆರೋಪ ಸಿದ್ದರಾಮಯ್ಯ ಅವರ ಮೇಲಿತ್ತು. ಅವರ ಮನಸ್ಸಿನ ಒಳಗಿನ ದುಗುಡವನ್ನು ಪ್ರಾಂಜಲ ಮನಸ್ಸಿನಿಂದ ಇಂದು ಮಾತನಾಡಿದರು. ನಾನು ಅಂತಹ ಪ್ರಯತ್ನ ಮಾಡಲಿಲ್ಲ, ಕೆಲವರು ನನ್ನ ದಾರಿ ತಪ್ಪಿಸಿದರು. ಖಂಡಿತವಾಗಿ ಇದಕ್ಕಾಗಿ ಪಶ್ಚಾತ್ತಾಪ ಆಗಿದೆ. ಧರ್ಮದ ವಿಚಾರದಲ್ಲಿ ಇನ್ನುಮುಂದೆ ಪ್ರವೇಶ ಮಾಡುವುದಿಲ್ಲ. ಜನರ ಕಲ್ಯಾಣ, ರಾಜ್ಯದ ಅಭಿವೃದ್ಧಿಯನ್ನು ಗುರಿಯಾಗಿಟ್ಟುಕೊಂಡು ಕೆಲಸ ಮಾಡುವುದು ನನ್ನ ಗುರಿ ಎಂದು ಹೇಳಿದರು ಎಂದು ಸ್ವಾಮೀಜಿ ತಿಳಿಸಿದರು.

ಸಿದ್ದರಾಮಯ್ಯ ಟೂರ್‌ ಪ್ಲಾನ್‌ನಲ್ಲಿ ಇರಲಿಲ್ಲ

ಸಿದ್ದರಾಮಯ್ಯ ಬಾಳೆಹೊನ್ನೂರು ಪೀಠಕ್ಕಷ್ಟೆ ಅಲ್ಲದೆ, ಶೃಂಗೇರಿಯ ಶಾರದಾ ಪೀಠಕ್ಕೂ ಭೇಟಿ ನೀಡಿ ಶಾರದಾಂಬೆಯ ದರ್ಶನ ಪಡೆದಿದ್ದಾರೆ. ಸಿದ್ದರಾಮಯ್ಯ ಅವರು ಕೊಡಗು ಹಾಗೂ ಚಿಕ್ಕಮಗಳೂರು ಪ್ರವಾಸ ಮಾಡಿರುವುದು ವೈಯಕ್ತಿಕ ಕಾರ್ಯಕ್ರಮವಲ್ಲ, ವಿರೋಧ ಪಕ್ಷದ ನಾಯಕರಾಗಿ ಅಧಿಕೃತ ಕಾರ್ಯಕ್ರಮ. ಪ್ರತಿಪಕ್ಷ ನಾಯಕರನ್ನು Shadow Chief Minister ಎಂದೇ ಕರೆಯಲಾಗುತ್ತದೆ. ವಿಧಾನಸೌಧದ ಮೂರನೇ ಮಹಡಿಯಲ್ಲಿ ಕುಳಿತು ಕಡತಗಳಿಗೆ ಸಹಿ ಹಾಕುವುದಿಲ್ಲ ಎನ್ನುವುದನ್ನು ಹೊರತುಪಡಿಸಿ, ರಾಜ್ಯದ ಆಡಳಿತದ ಮೇಲ್ವಿಚಾರಣೆ ನಡೆಸುವ ಅಧಿಕಾರ, ಹೊಣೆ ಪ್ರತಿಪಕ್ಷ ನಾಯಕರಿಗೆ ಇರುತ್ತದೆ.

ಅದರಂತೆ ಪ್ರತಿಪಕ್ಷ ನಾಯಕರ ಪ್ರವಾಸ ವೇಳಾಪಟ್ಟಿಯಲ್ಲಿ ಪ್ರತಿ ಅರ್ಧ ಗಂಟೆಗೊಮ್ಮೆ ಕೈಗೊಳ್ಳಲಿರುವ ಕಾರ್ಯಕ್ರಮವನ್ನು ನಮೂದಿಸಲಾಗಿತ್ತು. ನೆರಲೆ, ಕೂಡಿಕೆ, ಕಚಿಕೆ, ಮೇಗೂರು ಭೂ ಕುಸಿತ ಸ್ಥಳ ವೀಕ್ಷಣೆ… ಹೀಗೆ ಪ್ರವಾಸದ ಪ್ರತಿ ವಿವರವನ್ನೂ ನಮೂದಿಸಲಾಗಿತ್ತು. ಆದರೆ ಎಲ್ಲಿಯೂ ಶೃಂಗೇರಿ ದೇವಸ್ಥಾನ ಭೇಟಿ, ಬಾಳೆಹೊನ್ನೂರು ಪೀಠಕ್ಕೆ ಭೇಟಿಯನ್ನು ನಮೂದಿಸಿರಲಿಲ್ಲ. ಇವೆರಡರ ಜತೆಗೆ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯ ವಿವರವೂ ನಮೂದಾಗಿರಲಿಲ್ಲ.

ಕಾಂಗ್ರೆಸ್‌ ಕಾರ್ಯಕರ್ತರ ಸಭೆಗೆ ಸ್ಥಳೀಯ ಶಾಸಕರು ಮೂರ್ನಾಲ್ಕು ದಿನದಿಂದ ತಯಾರಿ ನಡೆಸುತ್ತಿದ್ದರಿಂದ ಅನೇಕರಿಗೆ ಅದರ ಮಾಹಿತಿ ಇತ್ತು. ಆದರೆ ದೇವಸ್ಥಾನದ ಮಾಹಿತಿ ಇರಲಿಲ್ಲ. ತಮ್ಮದೇ ಪಕ್ಷದಲ್ಲಿ ಏಳಬಹುದಾದ ಪ್ರಶ್ನೆಗಳ ಕಾರಣಕ್ಕೆ ದೇವಸ್ಥಾನ ಹಾಗೂ ಮಠದ ಪ್ರವಾಸದ ವಿವರವನ್ನು ನಮೂದಿಸದೆ ಇದ್ದದ್ದು ಹಾಗೂ ಗೌಪ್ಯವಾಗಿ ಇಟ್ಟಿದ್ದರೇ ಎಂಬುದು ಒಂದು ಪ್ರಶ್ನೆಯಾದರೆ, ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ಬೇಡಿಕೆ ಈಡೇರಿಕೆ ಹಾದಿಯಲ್ಲಿ ಅಡ್ಡಗೋಡೆಯಂತೆ ನಿಂತಿದ್ದ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರನ್ನು ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿಗೆ ನೇಮಿಸಿದ ನಂತರ ಕೈಗೊಂಡ ಡ್ಯಾಮೇಜ್‌ ಕಂಟ್ರೋಲ್‌ ನಡೆಯೇ ಎಂಬ ಪ್ರಶ್ನೆಯೂ ಇದೆ.

ಇದ್ದಕ್ಕಿದ್ದಂತೆ ಬಾಳೆಹೊನ್ನೂರು ಮಠಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ, ಪಶ್ಚಾತ್ತಾಪದ ಮಾತನಾಡಿರುವುದು ಅಚ್ಚರಿ ಮೂಡಿಸಿದೆ. ತಮ್ಮ ಸರ್ಕಾರದ ಅವಧಿಯಲ್ಲಿ, ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆಗೆ ಸಿದ್ದರಾಮಯ್ಯ ಎಲ್ಲ ಸಹಕಾರ ನೀಡಿದರು. ಆಗಿಂದಾಗ್ಗೆ ಹಾಗೂ ಈಗಲೂ, ನನಗೆ ಧರ್ಮದಲ್ಲಿ ಆಸಕ್ತಿ ಇಲ್ಲ ಎನ್ನುವ ಸಿದ್ದರಾಮಯ್ಯ ಅವರು, ತಮ್ಮ ಬೆಂಬಲಿಗರಾದ ಎಂ.ಬಿ. ಪಾಟೀಲ್‌, ಬಸವರಾಜ ರಾಯರಡ್ಡಿ, ವಿನಯ ಕುಲಕರ್ಣಿ ಹಾಗೂ ಡಾ. ಶರಣಪ್ರಕಾಶ್‌ ಪಾಟೀಲರನ್ನು ಮುಂದೆ ಬಿಟ್ಟಿದ್ದರು. ರಾಜ್ಯಾದ್ಯಂತ ವಿವಿಧ ಸಮಾವೇಶ ನಡೆಸುವಲ್ಲೂ ಇದೇ ನಾಯಕರು ಮುಂಚೂಣಿಯಲ್ಲಿದ್ದರು. ಈ ಕಾರ್ಯಕ್ಕೆ ತ್ವರಿತಗತಿಯಲ್ಲಿ ಸಮಿತಿ ರಚನೆ ಮಾಡುವುದು, ಸಮಿತಿ ಶೀಫಾರಸನ್ನು ಕ್ಷಣಮಾತ್ರದಲ್ಲಿ ಒಪ್ಪುವಂತಹ ಕೆಲಸವನ್ನು ಸಿಎಂ ಸಿದ್ದರಾಮಯ್ಯ ಅವರು ಮಾಡಿದ್ದರು.

ಆದರೆ ಇದೀಗ ಬಾಳೆಹೊನ್ನೂರಿನಲ್ಲಿ ಪಶ್ಚಾತ್ತಾಪದ ಮಾತನಾಡಿರುವುದು, ಪ್ರತ್ಯೇಕ ಧರ್ಮದ ವಿಚಾರವನ್ನು ಮುನ್ನಡೆಸಿದ್ದ, ಈಗಲೂ ಸಿದ್ದರಾಮಯ್ಯ ಆಪ್ತರಾಗಿಯೇ ಇರುವ ಎಂ.ಬಿ. ಪಾಟೀಲ್‌ ಹಾಗೂ ಬಸವರಾಜ ರಾಯರಡ್ಡಿ ಅವರ ಮೇಲೆ ಏನು ಪರಿಣಾಮ ಬೀರುತ್ತದೆ ಎಂಬ ಕುತೂಹಲವಿದೆ. ಏಕೆಂದರೆ ಲಿಂಗಾಯತ ವಿಚಾರದಲ್ಲಿ ಎಂ. ಬಿ. ಪಾಟೀಲರು ಸ್ವಲ್ಪ ಅಗ್ರೆಸಿವ್‌ ಹೋರಾಟಗಾರರು.

2019ರ ಏಪ್ರಿಲ್‌ನಲ್ಲಿ ಬಳ್ಳಾರಿ ಜಿಲ್ಲೆ ಹೂವಿನಹಡಗಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ್ದ ಅಂದಿನ ಸಮ್ಮಿಶ್ರ ಸರ್ಕಾರದಲ್ಲಿನ ಸಚಿವ ಹಾಗೂ ಈಗಿನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, “ಯಾರೋ ಏನೋ ಹೇಳಿದರು ಎಂದು, ನನ್ನನ್ನೂ ಸೇರಿದಂತೆ ನಮ್ಮ ಪಕ್ಷದ ಕೆಲವರು ವೀರಶೈವರ ವಿಚಾರಕ್ಕೆ ಕೈ ಹಾಕಿದೆವು. ಈ ಮೂಲಕ ಪ್ರತ್ಯೇಕ ಧರ್ಮ ಮಾಡಲು ತೀರ್ಮಾನ ಮಾಡಿದೆವು. ಅದಕ್ಕೆ ಜನ ನಮ್ಮ ಕಪಾಳಕ್ಕೆ ಹೊಡೆದರು. ಹೀಗಾಗಿ ನಿಮಲ್ಲಿ ಹಾಗೂ ರಾಜ್ಯದ ಜನರಲ್ಲಿ ಕ್ಷಮೆ ಕೇಳುತ್ತೇನೆ. ಇನ್ನೆಂದೂ ಜಾತಿ, ಧರ್ಮದ ವಿಚಾರಕ್ಕೆ ಕಾಂಗ್ರೆಸ್ ಕೈ ಹಾಕುವುದಿಲ್ಲ. ನಿಮ್ಮ ಕ್ಷಮೆ ಇರಲಿ” ಎಂದಿದ್ದರು.

ಈ ಮಾತಿಗೆ ಶಿವಕುಮಾರ್ ವಿರುದ್ಧ ಹರಿಹಾಯ್ದಿದ್ದ ಎಂ.ಬಿ. ಪಾಟೀಲ್, “ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದ ಬಗ್ಗೆ ಮಾತನಾಡಲು ಡಿ.ಕೆ.ಶಿವಕುಮಾರ್ ಅವರಿಗೆ ಏನು ಅಧಿಕಾರವಿದೆ? ಕ್ಷಮೆ ಕೇಳಲು ಅವರು ಯಾರು? ಅವರಿಗೂ ಲಿಂಗಾಯತ ಧರ್ಮಕ್ಕೂ ಏನು ಸಂಬಂಧ? ಅವರೇನು ಕೆಪಿಸಿಸಿ ಅಧ್ಯಕ್ಷರೇ? ಡಿ.ಕೆ.ಶಿವಕುಮಾರ್ ಮೊದಲು ತಮ್ಮ ಸಮುದಾಯದಲ್ಲಿರುವ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಲಿ” ಎಂದಿದ್ದರು. ಇದೀಗ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರೂ ಆಗಿರುವ ಎಂ.ಬಿ. ಪಾಟೀಲರ ನಾಯಕರಾದ ಸಿದ್ದರಾಮಯ್ಯ ಅವರೇ ಈ ಕುರಿತು ಪಶ್ಚಾತ್ತಾಪ ಪಟ್ಟ ಸಂದರ್ಭದಲ್ಲಿ ಅವರ ಪ್ರತಿಕ್ರಿಯೆ ಏನು ಎಂಬ ಕುತೂಹಲವಿದೆ.

ಸಿದ್ದರಾಮಯ್ಯ ಹೇಳಿಕೆ ಏನಿರಬಹುದು?

ಸಿದ್ದರಾಮಯ್ಯ ಹೀಗೆ ಹೇಳಿದ್ದಾರೆ ಎಂದು ಸ್ವಾಮೀಜಿ ತಿಳಿಸಿದ್ದಾರೆ. ಆದರೆ ಸ್ವಾಮೀಜಿಯವರನ್ನು ಭೇಟಿ ಮಾಡಿದ ನಂತರ ಸಿದ್ದರಾಮಯ್ಯ ಇನ್ನೂ ಬಹಿರಂಗವಾಗಿ ಮಾತನಾಡಿಲ್ಲ. ಶುಕ್ರವಾರ ರಾತ್ರಿ ಬೆಂಗಳೂರಿಗೆ ಆಗಮಿಸಿದ್ದಾರೆ. ಪಶ್ಚಾತ್ತಾಪದ ಕುರಿತು ಸಿದ್ದರಾಮಯ್ಯ ಶನಿವಾರ ಅಥವಾ ನಂತರದ ಯಾವುದೇ ದಿನ ಈ ಕುರಿತು ಏನು ಹೇಳುತ್ತಾರೆ ಎಂಬ ಕುತೂಹಲವಿದೆ. ಈ ಹಿಂದೆ 2017ರಲ್ಲಿ ಎಂ.ಬಿ. ಪಾಟೀಲರು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರನ್ನು ಭೇಟಿ ಮಾಡಿದ್ದರು. ಹೊರಬಂದವರೆ, “ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಶ್ರೀ ಶಿವಕುಮಾರ ಸ್ವಾಮೀಜಿಯವರು ಬೆಂಬಲ ಸೂಚಿಸಿದ್ದಾರೆ. ಲಿಂಗಾಯತ ಎಂಬುದು ಧರ್ಮ. ವೀರಶೈವ ಎಂಬುದು ಇತ್ತೀಚೆಗೆ ಬಂದು ಸೇರಿಕೊಂಡಿದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆʼ ಎಂದಿದ್ದರು. ಆದರೆ ಕೂಡಲೆ ಇದಕ್ಕೆ ಮಠದ ವತಿಯಿಂದ ಸ್ಪಷ್ಟನೆ ನೀಡಿ, ಆ ರೀತಿ ಸ್ವಾಮೀಜಿಯವರು ಹೇಳಿಲ್ಲ. ವೀರಶೈವರು ಎಂಬುದು ನಗರಗಳಲ್ಲಿ, ವಿದ್ಯಾವಂತರ ನಡುವೆ ಬಳಕೆಯಲ್ಲಿದೆ, ಲಿಂಗಾಯತರು ಎನ್ನುವುದು ಗ್ರಾಮೀಣ ಪ್ರದೇಶದಲ್ಲಿ ಬಳಕೆಯಲ್ಲಿದೆ. ಎಂ.ಬಿ. ಪಾಟೀಲರು ಹೇಳೀಕೆ ನೀಡಿ ಸಮಾಜವನ್ನು ಇಬ್ಭಾಗ ಮಾಡಲು ಯತ್ನಿಸುವುದು ಒಳ್ಳಯದಲ್ಲ ಎಂದು ಹೇಳಲಾಗಿತ್ತು.

ಇದೀಗ ಸಿದ್ದರಾಮಯ್ಯ ಅವರ ಪ್ರಕರಣದಲ್ಲಿ, ಸ್ವಾಮೀಜಿಯವರು ಹೇಳಿದಂತೆಯೇ ತಾವು ಪಶ್ಚಾತ್ತಾಪ ವ್ಯಕ್ತಪಡಿಸಿದ್ದು, ಜತೆಗಿದ್ದವರು ದಾರಿತಪ್ಪಿಸಿದರು ಎಂದಿದ್ದು ನಿಜ ಎಂದು ಒಪ್ಪಿಕೊಂಡರೆ, ಪ್ರತ್ಯೇಕ ಧರ್ಮ ವಿಚಾರಕ್ಕೆ ಪ್ರಯತ್ನದಲ್ಲಿರುವ ಎಂ.ಬಿ. ಪಾಟೀಲರು, ಎಸ್‌. ಎಂ. ಜಾಮದಾರ್‌ ಸೇರಿ ಅನೇಕರ ಪ್ರತಿಕ್ರಿಯೆಗಳು ಏನಿರಬಹುದು? ಅವರೇನಾದರೂ, ಸ್ವಾಮೀಜಿಯವರು ಹೇಳಿದ್ದಕ್ಕೆ ವಿಭಿನ್ನವಾಗಿ ನುಡಿದರೆ ವೀರಶೈವ ಲಿಂಗಾಯತ ಸಮುದಾಯದ ಪ್ರತಿಕ್ರಿಯೆ ಏನಿರಬಹುದು? ಈ ಎರಡರಲ್ಲಿ ಯಾವುದೇ ವಿಚಾರ ನಡೆದರೂ ರಾಜ್ಯ ರಾಜಕೀಯದಲ್ಲಿ ಒಂದಷ್ಟು ಸಂಚಲನ, ಪರಿಣಾಮಕ್ಕೆ ಕಾರಣವಾಗುವುದಂತೂ ಖಚಿತ. ಅದು 2023ರ ಚುನಾವಣೆ ಮೇಲೆ ಪರಿಣಾಮವನ್ನೂ ಬೀರುತ್ತದೆ ಎನ್ನಬಹುದು.

ಇದನ್ನೂ ಓದಿ | ಧರ್ಮ ಒಡೆಯುವ ಪ್ರಯತ್ನಕ್ಕೆ ಸಿದ್ದರಾಮಯ್ಯ ಪಶ್ಚಾತ್ತಾಪ: ಜತೆಗಿದ್ದವರು ದಾರಿ ತಪ್ಪಿಸಿದರು ಎಂದ ಮಾಜಿ ಸಿಎಂ?

Exit mobile version