ಬೆಂಗಳೂರು: ಮಹಾರಾಷ್ಟ್ರ ಗಡಿ ಭಾಗದಲ್ಲಿ ಮರಾಠಿ ಭಾಷಿಕರು ಭಾಷಾ ವಿಷಯಕ್ಕೆ ನಡೆಸುವ ಹೋರಾಟಕ್ಕೂ, ಮರಾಠ ಸಮುದಾಯಕ್ಕೂ ಸಂಬಂಧ ಇಲ್ಲ ಎಂದು ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಾರುತಿರಾವ್ ಮುಳೆ ಹೇಳಿದ್ದಾರೆ
ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ಉದ್ಘಾಟನೆ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮರಾಠ ಸಮುದಾಯವೇ ಬೇರೆ ಮರಾಠಿ ಭಾಷಿಕರೇ ಬೇರೆ. ಮರಾಠಿ ಭಾಷೆಯನ್ನು ಮರಾಠರು, ಬ್ರಾಹ್ಮಣರು, ಲಿಂಗಾಯತರು ಮಾತನಾಡುತ್ತಾರೆ. ರಾಜ್ಯದಲ್ಲಿ ಮರಾಠ ಸಮುದಾಯಕ್ಕೆ ಅದರದ್ದೇ ಆದ ಇತಿಹಾಸ ಇದೆ ಎಂದು ತಿಳಿಸಿದರು.
ನಾವು ಇಲ್ಲಿನ ಮೂಲ ನಿವಾಸಿಗಳು, ಛತ್ರಿಪತಿ ಶಿವಾಜಿಯ ಬಾಲ್ಯದ ಜೀವನವನ್ನು ಕರ್ನಾಟಕದಲ್ಲೇ ಕಳೆದಿದ್ದಾರೆ. ಶಿವಾಜಿಯ ತಂದೆ ಷಹಾಜಿ ಬೆಂಗಳೂರಿನಲ್ಲಿ 20 ವರ್ಷ ಆಳ್ವಿಕೆ ಮಾಡಿದ್ದಾರೆ. ಇಲ್ಲಿನ ದೇವಸ್ಥಾನಗಳನ್ನು ರಕ್ಷಣೆ ಮಾಡಿದ್ದಾರೆ. ಕಾಡು ಮಲ್ಲೇಶ್ವರ ದೇವಸ್ಥಾನವನ್ನು ಷಹಾಜಿ ನಿರ್ಮಾಣ ಮಾಡಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಷಹಾಜಿ ಸಮಾಧಿ ಇದ್ದು, ಷಹಾಜಿ ಅಣ್ಣ ಸಂಭಾಜಿ ಸಮಾಧಿ ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿದೆ. ಮುಖ್ಯಮಂತ್ರಿಗಳು ಅವುಗಳ ಅಭಿವೃದ್ಧಿ ಮಾಡುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ | ಬೆಳಗಾವಿ ಕಚೇರಿಯಲ್ಲಿ ಮರಾಠಿ ನಾಮಫಲಕಕ್ಕೆ ಎಂಇಎಸ್ ಆಗ್ರಹ: ಕನ್ನಡ ಪರ ಸಂಘಟನೆಗಳ ವಿರೋಧ
ಜುಲೈ 19ಕ್ಕೆ ಮರಾಠ ನಿಗಮ ಉದ್ಘಾಟನೆ
ಜುಲೈ 19ರಂದು ನಡೆಯಲಿರುವ ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ಉದ್ಘಾಟನೆ ಹಾಗೂ ಫಲಾನುಭವಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಲಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಮರಾಠ ಅಭಿವೃದ್ದಿ ನಿಗಮದ ಅಧ್ಯಕ್ಷ ಮಾರುತಿ ರಾವ್ ಮುಳೆ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ಅಂತರ್‌ಜಾಲ ತಾಣವನ್ನು ನಿಕಟ ಪೂರ್ವ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಬಿಡುಗಡೆ ಮಾಡಲಿದ್ದಾರೆ. ನಿಗಮದ ಯೋಜನೆಗಳ ಪರಿಚಯ ಪುಸ್ತಕವನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಬಿಡುಗಡೆಗೊಳಿಸಲಿದ್ದಾರೆ. ಕಾರ್ಯಕ್ರಮಕ್ಕೆ ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ಮರಾಠ ಸಮುದಾಯದ ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ಆಗಮಿಸಲಿದ್ದಾರೆ ಎಂದರು.
ಕರ್ನಾಟಕದಲ್ಲಿ ಮರಾಠ ಸಮುದಾಯದ ಸುಮಾರು 35ರಿಂದ 40 ಲಕ್ಷ ಮಂದಿ ಇದ್ದಾರೆ. ಸಾಮಾಜಿಕವಾಗಿ ಮೇಲ್ಸ್ತರದಲ್ಲಿದ್ದರೂ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಸಾಕಷ್ಟು ಹಿಂದುಳಿದಿದ್ದಾರೆ. ಈ ಸಮುದಾಯಕ್ಕೆ ಉತ್ತಮ ಶಿಕ್ಷಣ ಕೊಡಿಸಿ ಆರ್ಥಿಕ ಶಕ್ತಿ ತುಂಬುವ ನಿಟ್ಟಿನಲ್ಲಿ ಬಿ.ಎಸ್.ಯಡಿಯೂರಪ್ಪರು ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ ಸ್ಥಾಪಿಸುವುದಾಗಿ ಘೋಷಣೆ ಮಾಡಿದ್ದರು. ಸಿಎಂ ಬಸವರಾಜ ಬೊಮ್ಮಾಯಿ ನಿಗಮ ಸ್ಥಾಪನೆಯ ಆದೇಶ ಹೊರಡಿಸಿ, ನಿಗಮಕ್ಕೆ ಈ ವರ್ಷ ಸುಮಾರು 100 ಕೋಟಿ ರೂ.ಗಳನ್ನು ನೀಡಿದ್ದಾರೆ.
ಮರಾಠ ಮಿಲಿಟರಿ ಕ್ಯಾಂಟೀನ್ ಸ್ಥಾಪನೆ
ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ಪ್ರಕಾಶ್ ಪಾಗೋಜಿ ಮಾತನಾಡಿ, ಮರಾಠ ಅಭಿವೃದ್ಧಿ ನಿಗಮದಿಂದ ಮಿಲಿಟರಿ ಕ್ಯಾಂಟೀನ್ ಸ್ಥಾಪನೆ ಮಾಡಲು ತೀರ್ಮಾನಿಸಲಾಗಿದ್ದು, ರಾಜ್ಯದಲ್ಲಿ ಈ ವರ್ಷ 40 ಕ್ಯಾಂಟೀನ್ ತೆರೆಯಲು ತೀರ್ಮಾನಿಸಲಾಗಿದೆ. ಪ್ರತಿ ಘಟಕಕ್ಕೆ 5 ಲಕ್ಷ ರೂ. ನೀಡಲು ತೀರ್ಮಾನಿಸಲಾಗಿದ್ದು 2.5 ಲಕ್ಷ ರೂ. ಸಬ್ಸಿಡಿ ನೀಡಲಾಗುವುದು. ವೃತ್ತಿಪರ ಕೋರ್ಸ್‌ಗಳಿಗೆ ಸೇರ್ಪಡೆಯಾಗುವ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ 1 ಲಕ್ಷದಂತೆ 5 ಲಕ್ಷ ಪ್ರೋತ್ಸಾಹ ಧನ ನೀಡಲಾಗುವುದು. ವಿದೇಶಕ್ಕೆ ಉನ್ನತ ವ್ಯಾಸಂಗಕ್ಕೆ ತೆರಳುವ ಮರಾಠ ಸಮುದಾಯದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲಾಗುವುದು. ರೈತರಿಗೆ ಗಂಗಾ ಕಲ್ಯಾಣ ಯೋಜನೆ ಜಾರಿಗೆ ತರಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ | ಬೆಳಗಾವಿಯಲ್ಲಿ ಬಾಲ ಬಿಚ್ಚುತ್ತಿರುವ ಎಂಇಎಸ್, ಮರಾಠಿಯಲ್ಲಿ ದಾಖಲೆ ಪತ್ರಗಳಿಗೆ ಒತ್ತಾಯ