Site icon Vistara News

Bhagavad Gita | 2,200 ಜನರಿಂದ ಸಾಮೂಹಿಕ ಭಗವದ್ಗೀತೆ ಪಾರಾಯಣ; ಡಲ್ಲಾಸ್‌ನಲ್ಲಿ ಗಿನ್ನೆಸ್‌ ದಾಖಲೆ

ಭಗವದ್ಗೀತೆ

ಡಲ್ಲಾಸ್: ಶ್ರೀಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಅಮೆರಿಕದ ಟೆಕ್ಸಾಸ್‌ ರಾಜ್ಯದ ಡಲ್ಲಾಸ್‌ನಲ್ಲಿ ಹಮ್ಮಿಕೊಂಡಿದ್ದ 2,200 ಜನರಿಂದ ಏಕಕಾಲದಲ್ಲಿ ಸಾಮೂಹಿಕ ಭಗವದ್ಗೀತೆ (Bhagavad Gita) ಕಂಠಪಾಠ ಪಾರಾಯಣ ಕಾರ್ಯಕ್ರಮ ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಗಿದೆ. ಮೈಸೂರಿನ ಶ್ರೀ ಅವಧೂತ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ನೇತೃತ್ವದಲ್ಲಿ ಈ ದಾಖಲೆ ಮಾಡಲಾಗಿದೆ.

ಸನಾತನ ಧರ್ಮದ ಅತ್ಯಂತ ಶ್ರೇಷ್ಠ ಧರ್ಮಗ್ರಂಥವಾಗಿರುವ ಶ್ರೀಮದ್ ಭಗವದ್ಗೀತೆಯ ಎಲ್ಲ 700 ಶ್ಲೋಕಗಳನ್ನು ಕಂಠಪಾಠ ಮಾಡಿ, ಅದನ್ನು 2,200ಕ್ಕೂ ಅಧಿಕ ಮಂದಿ ಒಕ್ಕೊರಲಿನಲ್ಲಿ ಹೇಳುವ ಅಭೂತಪೂರ್ವ ಕಾರ್ಯಕ್ರಮವನ್ನು ಆಗಸ್ಟ್ 13ರಂದು ಡಲ್ಲಾಸ್‌ನ ಅಲೆನ್ ಈವೆಂಟ್‌ ಸೆಂಟರ್‌ನಲ್ಲಿ ಮೈಸೂರಿನ ಶ್ರೀ ಅವಧೂತ ದತ್ತ ಪೀಠದ ಪೀಠಾಧಿಪತಿ ಪರಮಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಜಗತ್ತಿನ 30ಕ್ಕೂ ಅಧಿಕ ದೇಶಗಳ ಜನರು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಸನಾತನ ಧರ್ಮದ ವಿಶಿಷ್ಟ ಸಂದೇಶವನ್ನು ಜಗದಗಲಕ್ಕೆ ಪಸರಿಸುವ ಹಾಗೂ ಶ್ರೇಷ್ಠ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತಹ ನಿಟ್ಟಿನಲ್ಲಿ ನಡೆದಿರುವ ಪ್ರಯತ್ನದ ಭಾಗವಾಗಿ ಈ ಸಾಮೂಹಿಕ ಕಂಠಪಾಠ ಪಠಣ ಹೊಸ ದಾಖಲೆ ನಿರ್ಮಿಸಿದೆ.

ಇದನ್ನೂ ಓದಿ | Krishna janmastami Styling | ಮುದ್ದು ಮಕ್ಕಳಿಗೆ ಬೆಣ್ಣೆ ಕೃಷ್ಣನ ಸಿಂಗಾರ

ಪವಿತ್ರ ಧರ್ಮಗ್ರಂಥ ಭಗವದ್ಗೀತೆ, ಶ್ರೀಕೃಷ್ಣ ಪರಮಾತ್ಮ ಅರ್ಜುನನಿಗೆ ಕರ್ಮ, ಜ್ಞಾನದ ಕುರಿತಂತೆ ನೀಡಿದ ತಿಳಿವಳಿಕೆಯ ಭಾಗವಾಗಿರುವ ಈ ಶ್ಲೋಕಗಳನ್ನು ಕಂಠಪಾಠ ಮಾಡುವುದು ಜೀವನದಲ್ಲಿ ಅಳವಡಿಸಿಕೊಳ್ಳುವ ಒಂದು ಭಾಗ. ಭಗವದ್ಗೀತೆ ಬೋಧನೆಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನಿಜಕ್ಕೂ ಜೀವನ ಸಾರ್ಥಕವಾಗಿಬಿಡುತ್ತದೆ. ಮನೆಯಲ್ಲಿ, ಮನದಲ್ಲಿ ಹಾಗೂ ದಿನನಿತ್ಯದ ಬದುಕಿನಲ್ಲಿ ಗೀತೆಯ ಸಾರವನ್ನು ಕಾಯಾ, ವಾಚಾ, ಮನಸಾ ಅನುಸರಿಸುವಂತಾಗಬೇಕು ಎಂಬ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ಆಶಯದ ಫಲವಾಗಿ ಇಂತಹದ್ದೊಂದು ಪ್ರಯತ್ನ ಅಮೆರಿಕದಲ್ಲಿ ನಡೆದಿದೆ.

ಅಮೆರಿಕದಲ್ಲೇ ಏಕೆ ಈ ಕಾರ್ಯಕ್ರಮ?
‘ಉಪನಿಷತ್‌ಗಳು ಮಾನವನ ಜೀವನದ ಗುರಿ ಮತ್ತು ಉದ್ದೇಶವನ್ನು ತಿಳಿಸಿದರೆ, ಭಗವದ್ಗೀತೆಯು ಅದನ್ನು ಸಾಧಿಸುವುದು ಮತ್ತು ಸಂತೃಪ್ತಿಯ ಜೀವನ ಸಾಗಿಸುವ ಮಾರ್ಗವನ್ನು ತಿಳಿಸಿಕೊಡುತ್ತದೆ. ಭಗವದ್ಗೀತೆ ತೋರಿಸಿಕೊಟ್ಟ ದಾರಿಯಲ್ಲೇ ಮನುಷ್ಯ ಶ್ರದ್ಧೆಯಿಂದ ನಡೆದಿದ್ದೇ ಆದರೆ ಮನುಷ್ಯನ ಜೀವನ ಸಾರ್ಥಕವಾಗುತ್ತದೆ’ ಎಂಬುದು ಶ್ರೀ ಗಣಪತಿ ಸಚಿದಾನಂದ ಸ್ವಾಮೀಜಿ ಆಶಯವಾಗಿದೆ. ಇದಕ್ಕಾಗಿ ಮೈಸೂರಿನಲ್ಲಷ್ಟೇ ಅಲ್ಲದೆ ಭಾರತದ ಹಲವೆಡೆ ಹಾಗೂ ಜಗತ್ತಿನ ಹಲವೆಡೆಗಳಲ್ಲಿ ಧಾರ್ಮಿಕ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ.

ಸ್ವಾಮೀಜಿ ಅವರು ಡಲ್ಲಾಸ್‌ ಇಸ್ಕೊದಲ್ಲಿ 2015ರಲ್ಲಿ ಭವ್ಯವಾದ ಕಾರ್ಯಸಿದ್ಧಿ ಹನುಮಾನ್ ದೇವಸ್ಥಾನವನ್ನು ನಿರ್ಮಿಸಿದ್ದರು. ಮುಂದಿನ ವರ್ಷ ಮತ್ತೆ ಅಮೆರಿಕಕ್ಕೆ ಬಂದಾಗ ಈ ದೇವಸ್ಥಾನದಲ್ಲಿ ಕನಿಷ್ಠ 18 ಮಂದಿ ವಿದ್ಯಾರ್ಥಿಗಳು ಭಗವದ್ಗೀತೆಯ ಎಲ್ಲ 18 ಶ್ಲೋಕಗಳನ್ನು ಕಂಠಪಾಠ ಮಾಡಿ ಅದನ್ನು ಪಾರಾಯಣ ಮಾಡುವಂತಾಗಬೇಕು ಎಂಬುದು ಸ್ವಾಮೀಜಿ ಅವರ ಆಶಯವಾಗಿತ್ತು. ಕೇವಲ 10 ತಿಂಗಳಲ್ಲಿ ಒಟ್ಟು 43 ಮಂದಿ ವಿದ್ಯಾರ್ಥಿಗಳು ಶ್ರೀಗಳ ಕೋರಿಕೆಯನ್ನು ಸಾಕಾರಗೊಳಿಸಿದ್ದರು. ಈಗ ಡಲ್ಲಾಸ್‌ನ ಅಲೆನ್ ಈವೆಂಟ್‌ ಸೆಂಟರ್‌ನಲ್ಲಿ ಆಗಸ್ಟ್ 13ರಂದು 2,200 ಜನರಿಂದ ಸಾಮೂಹಿಕ ಭಗವದ್ಗೀತೆ ಕಂಠಪಾಠ ಪಾರಾಯಣದ ಮೂಲಕ ಗಿನ್ನೆಸ್ ದಾಖಲೆ ನಿರ್ಮಿಸಲಾಗಿದೆ.

ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ 5 ವರ್ಷದಿಂದ 80 ವರ್ಷದೊಳಗಿನ ೨೨೦೦ ಮಂದಿ ಭಗವದ್ಗೀತೆಯ ಎಲ್ಲ 18 ಅಧ್ಯಾಯಗಳ 700 ಶ್ಲೋಕಗಳನ್ನು ಕಂಠಪಾಠ ಮಾಡಿ ಪಠಿಸಿದ್ದಾರೆ. ಜತೆಗೆ ಕುಟುಂಬಸ್ಥರು, ಸ್ನೇಹಿತರು ಸೇರಿ 7 ಸಾವಿರಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಗೀತಾ ಪಾರಾಯಣದಲ್ಲಿ 14 ಮಂದಿ ವಿದೇಶಿಗರು ಪಾಲ್ಗೊಂಡಿದ್ದು ವಿಶೇಷವಾಗಿದೆ.

ಕಾರ್ಯಸಿದ್ಧಿ ಅಂಜನೇಯ ದೇವಸ್ಥಾನದ ವಿಶೇಷತೆ
ಅಮೆರಿಕದ ಅತ್ಯಂತ ದೊಡ್ಡ ಹಿಂದು ದೇವಸ್ಥಾನಗಳಲ್ಲಿ ಒಂದು ಎಂಬ ಖ್ಯಾತಿ ಡಲ್ಲಾಸಸ್‌ನ ಪಿಸ್ಕೊದಲ್ಲಿ ಸ್ಥಾಪನೆಯಾಗಿರುವ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನವಿದೆ. 22 ಎಕರೆ ಪ್ರದೇಶದಲ್ಲಿ ಸ್ಥಾಪನೆಯಾಗಿರುವ ಈ ದೇವಸ್ಥಾನದ ಸಭಾಂಗಣದ ವಿಸ್ತಾರವೇ 10 ಸಾವಿರ ಚದರ ಅಡಿಯಷ್ಟಿದೆ. ಮೂರು ಸಾವಿರ ಜನರು ಕುಳಿತು ಸಾಮೂಹಿಕ ಧ್ಯಾನ, ಪಠಣ ಅಥವಾ ಧಾರ್ಮಿಕ ಆಚರಣೆಗಳನ್ನು ನಡೆಸುವಂತಹ ವ್ಯವಸ್ಥೆ ಇಲ್ಲಿದೆ. ಹೀಗಾಗಿ ಸನಾತನ ಧರ್ಮ ಪ್ರಸಾರ, ಅನುಷ್ಠಾನದಲ್ಲಿ ಈ ದೇವಸ್ಥಾನ ತನ್ನದೇ ಆದ ಕೊಡುಗೆ ನೀಡುತ್ತಿದೆ.

ಇದನ್ನೂ ಓದಿ | ರಾಜ ಮಾರ್ಗ | ಕೃಷ್ಣ ಮತ್ತು ಕೃಷ್ಣಾ ಅವರ ಮಧುರ ಸಂಬಂಧದಲ್ಲಿ ಮಿಂದೆದ್ದ ಮಹಾಭಾರತ!

Exit mobile version