Site icon Vistara News

Satish Jarakiholi | ಸತೀಶ್‌ ಜಾರಕಿಹೊಳಿ ಪರ ಬೃಹತ್‌ ಮೆರವಣಿಗೆ, ಪ್ರತಿಭಟನೆ; ಬಿಜೆಪಿ ವಿರುದ್ಧ ಆಕ್ರೋಶ

ಬೆಳಗಾವಿ/ಕೊಪ್ಪಳ: ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ (Satish Jarakiholi) ಅವರು “ಹಿಂದು” ಅಶ್ಲೀಲ ಪದ ಎಂದು ನೀಡಿದ್ದಕ್ಕೆ ರಾಜ್ಯಾದ್ಯಂತ ಪ್ರತಿಭಟನೆಗಳು, ಆಕ್ರೋಶಗಳು ವ್ಯಕ್ತವಾದ ಬೆನ್ನಲ್ಲೇ ಈಗ ಬೆಳಗಾವಿಯಲ್ಲಿ ಸತೀಶ್‌ ಬೆಂಬಲಿಗರಿಂದ ಶಕ್ತಿ ಪ್ರದರ್ಶನ ನಡೆದಿದೆ. ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆದಿದೆ.

ಚಿಕ್ಕೋಡಿಯಲ್ಲಿ ಪ್ರತಿಭಟನೆ

ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಇಲ್ಲಿನ ಸಿಪಿಎಡ್ ಮೈದಾನದಿಂದ ಮೆರವಣಿಗೆ ಆರಂಭಗೊಂಡಿದೆ. ಇದರಲ್ಲಿ ಕನ್ನಡಪರ, ದಲಿತಪರ ಸೇರಿದಂತೆ ವಿವಿಧ ಸಂಘಟನೆಗಳವರು ಭಾಗಿಯಾಗಿದ್ದರು. ಕೇಸರಿ, ಹಳದಿ, ನೀಲಿ ಬಾವುಟಗಳನ್ನು ಹಿಡಿದು ಮೆರವಣಿಗೆಯಲ್ಲಿ ಸಾಗಿದ್ದು, ಸತೀಶ್‌ ಜಾರಕಿಹೊಳಿ ಪರ ಘೋಷಣೆ ಕೂಗಿದ್ದಾರೆ.

ರಾಯಬಾಗದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿರುವ ಪ್ರತಿಭಟನಾಕಾರರು.

ಸಚಿವೆ ಶಶಿಕಲಾ ಜೊಲ್ಲೆ, ಶಾಸಕ ಅಭಯ್ ಪಾಟೀಲ್ ಸೇರಿದಂತೆ ವಿವಿಧ ಬಿಜೆಪಿ ನಾಯಕರ ಪ್ರತಿಕೃತಿಗಳನ್ನು ಹಿಡಿದು ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಾಕಾರರು, ಸತೀಶ್ ಜಾರಕಿಹೊಳಿ ಭಾವಚಿತ್ರ ಹಿಡಿದು ಸತೀಶ್ ಪರ ಘೋಷಣೆ ಕೂಗಿದರು.

ಇದನ್ನೂ ಓದಿ | Swabhimani hindu| ಸತೀಶ್‌ ಜಾರಕಿಹೊಳಿ ತವರಲ್ಲೇ ನಡೆಯಲಿದೆ ಸೂಲಿಬೆಲೆ ನೇತೃತ್ವದ ನಾನೂ ಹಿಂದು ಸಮಾವೇಶ!

ಮನುವಾದಿಗಳಿಗೆ ಧಿಕ್ಕಾರ
ಬಿಜೆಪಿ ನಾಯಕರು ಸತೀಶ್ ಜಾರಕಿಹೊಳಿ ಅವರ ತೇಜೋವಧೆ ಮಾಡುತ್ತಿದ್ದು, ಇಂತಹ ಕೃತ್ಯಗಳಲ್ಲಿ ಭಾಗಿಯಾಗಿರುವ ಮನುವಾದಿಗಳಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದರು. ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗಿಯಾಗಿದ್ದು, ಈ ಮೂಲಕ ಶಕ್ತಿ ಪ್ರದರ್ಶನವನ್ನು ಮಾಡಲಾಯಿತು.

ಬಿಗಿ ಭದ್ರತೆ
ಈ ಪ್ರತಿಭಟನಾ ರ‍್ಯಾಲಿಯಲ್ಲಿ ಸುಮಾರು ೨೫ ಸಾವಿರ ಮಂದಿ ಸೇರುವ ಹಿನ್ನೆಲೆಯಲ್ಲಿ ಡಿಸಿಪಿ ರವೀಂದ್ರ ಗಡಾಡಿ ನೇತೃತ್ವದಲ್ಲಿ 500ಕ್ಕೂ ಅಧಿಕ ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಪ್ರತಿಭಟನೆಗೆ ಆಗಮಿಸುತ್ತಿರುವ ಜನರಿಗಾಗಿ ಊಟದ ವ್ಯವಸ್ಥೆಯನ್ನೂ ಮಾಡಲಾಗಿದೆ. ಈಗಾಗಲೇ ಹಲವು ಭಾಗಗಳಿಂದ ಪ್ರತಿಭಟನಾಕಾರರು ಬಂದಿದ್ದು, ಮತ್ತಷ್ಟು ಜನ ಬಂದು ಸೇರುತ್ತಿದ್ದಾರೆ.

ರಾಯಬಾಗದಲ್ಲಿ ರಸ್ತೆ ತಡೆ
ಶಾಸಕ ಸತೀಶ್ ಜಾರಕಿಹೊಳಿ ಪರ ಪ್ರತಿಭಟನೆ ಕಾವು ಪಡೆದುಕೊಂಡಿದ್ದು, ಸತೀಶ್‌ ಅವರನ್ನು ಬೆಂಬಲಿಸಿ ರಾಯಬಾಗ ಪಟ್ಟಣದಲ್ಲಿ ಭಾರಿ ಪ್ರತಿಭಟನೆ ನಡೆದಿದೆ. ರಾಯಬಾಗ-ಅಂಕಲಿ ರಸ್ತೆ ತಡೆಹಿಡಿದು ಸತೀಶ್‌ ಬೆಂಬಲಿಗರು, ಅಭಿಮಾನಿಗಳು ಸೇರಿದಂತೆ ವಿವಿಧ ದಲಿತ ಸಂಘಟನೆಗಳವರು ಬಿಜೆಪಿ ನಾಯಕರ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದಾರೆ.

ಇದನ್ನೂ ಓದಿ | Fadnavis | ಸಂಭಾಜಿ ಮಹಾರಾಜ್‌ಗೆ ಸತೀಶ್‌ ಜಾರಕಿಹೊಳಿ ಅವಮಾನ: ಮಹಾರಾಷ್ಟ್ರ ಡಿಸಿಎಂ ಫಡ್ನವಿಸ್‌ ಆರೋಪ

ಸಚಿವೆ ಶಶಿಕಲಾ ಜೊಲ್ಲೆ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ಭಾವಚಿತ್ರಕ್ಕೆ ಬೆಂಕಿ ಹಾಕಿ ಆಕ್ರೋಶ ಹೊರಹಾಕಿರುವ ಪ್ರತಿಭಟನಾಕಾರರು, ಅವರ ಭಾವಚಿತ್ರಕ್ಕೆ ಕಾಲಿನಿಂದ ಒದ್ದು ಅಸಮಾಧಾನವನ್ನು ಹೊರಹಾಕಿದ್ದಾರೆ. ಅಲ್ಲದೆ, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿರುದ್ಧವೂ ಕೂಗಿದರು.

ನಿಮ್ಮ ಜತೆ ನಾವಿರುತ್ತೇವೆ
ಸತೀಶ್ ಜಾರಕಿಹೊಳಿ ಅವರೇ, ನಿಮ್ಮ ಜತೆ ಇರುತ್ತೇವೆ ಎಂದು ಇದೇ ವೇಳೆ ಪ್ರತಿಭಟನಾಕಾರರು ಘೋಷಣೆ ಕೂಗಿದರು. ರಾಯಬಾಗದ ಅಂಬೇಡ್ಕರ್ ವೃತ್ತದಿಂದ ತಹಸೀಲ್ದಾರ್ ಕಚೇರಿವರೆಗೆ ಪಾದಯಾತ್ರೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಸತೀಶ್ ಭಾವಚಿತ್ರಕ್ಕೆ ಹಾಲಿನಿಂದ ಅಭಿಷೇಕವನ್ನೂ ಮಾಡಲಾಗಿದೆ.

ಕೊಪ್ಪಳದಲ್ಲೂ ಪ್ರತಿಭಟನೆ
ಮಾಜಿ ಸಚಿವ ಸತೀಶ ಜಾರಕಿಹೊಳಿ ಪರ ಮಾನವ ಬಂಧುತ್ವ ವೇದಿಕೆಯಿಂದ ಕೊಪ್ಪಳದಲ್ಲಿಯೂ ಪ್ರತಿಭಟನೆ ನಡೆದಿದೆ. ಕೊಪ್ಪಳದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆದಿದ್ದು, ಹಿಂದು ಪದದ ಹೇಳಿಕೆಯ ಕುರಿತು ಸತೀಶ್‌ ಜಾರಕಿಹೊಳಿ ಅವರು ವಿಷಾದ ವ್ಯಕ್ತಪಡಿಸಿದ ನಂತರವೂ ಅವರ ವಿರುದ್ಧ ತೇಜೋವಧೆ ಮಾಡಲಾಗುತ್ತಿದೆ ಎಂದು ಆಕ್ರೋಶವನ್ನು ಹೊರಹಾಕಿದರು. ಸಾವಿರಾರು ಜನರು ಜಮಾವಣೆಗೊಂಡಿದ್ದರು.

ಇದನ್ನೂ ಓದಿ | Sathish Jarakiholi | ಹೇಳಿಕೆ ಹಿಂಪಡೆದುದು ಯಾಕೆ? ಕಾಂಗ್ರೆಸ್‌ ವರಿಷ್ಠರ ಒತ್ತಡಕ್ಕೆ ಮಣಿದ್ರಾ ಸತೀಶ್‌ ಜಾರಕಿಹೊಳಿ?

Exit mobile version