Site icon Vistara News

Karnataka Election: ಮೇ 10 ನಿರ್ಣಾಯಕ ದಿನ; ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಭವಿಷ್ಯ ನಿರ್ಧರಿಸಲು ಮತದಾರರು ಸಿದ್ಧ

May 10 Voting Day and Voters are ready to decide the fate of BJP, Congress, JDS

ಬೆಂಗಳೂರು, ಕರ್ನಾಟಕ: ಭಾರೀ ಅಬ್ಬರದ ಪ್ರಚಾರ ಕಂಡ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮೇ 10 ನಿರ್ಣಾಯಕ ದಿನ. ಮತದಾರರು ತಮ್ಮ ಹಕ್ಕನ್ನು ಚಲಾಯಿಸಿ, ಮುಂದಿನ ಐದು ವರ್ಷಗಳ ಕಾಲ ರಾಜ್ಯಭಾರ ಮಾಡುವವರು ಯಾರಾಗುತ್ತಾರೆಂಬುದನ್ನು ನಿರ್ಧರಿಸಲಿದ್ದಾರೆ. 224 ಕ್ಷೇತ್ರಗಳಿಗೆ ಒಟ್ಟು 2615 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇಷ್ಟು ಅಭ್ಯರ್ಥಿಗಳಲ್ಲಿ ಮತದಾರರ ತಮ್ಮ ಕ್ಷೇತ್ರದ ಒಬ್ಬ ಪ್ರತಿನಿಧಿ ಆಯ್ಕೆ ಮಾಡಲಿದ್ದಾರೆ(Karnataka Election 2023).

ಕರ್ನಾಟಕ ವಿಧಾನಸಭೆ ಚುನಾವಣೆ ನಡೆದು ಸರಿಯಾಗಿ ಒಂದು ವರ್ಷದ ಬಳಿಕ ಲೋಕಸಭೆ ಚುನಾವಣೆ ಕೂಡ ನಡೆಯಲಿದೆ. ಹಾಗಾಗಿ, ದೇಶದ ಜನರ ಮನದಾಳ ಇಂಗಿತ ಅರಿಯುವ ಮಾಪಕದಂತೆ ಈ ಚುನಾವಣೆಯು ಭಾಸವಾಗುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿಗಳೆರಡೂ ಈ ಚುನಾವಣೆಯನ್ನು ಗೆಲ್ಲಲು ತಮ್ಮೆಲ್ಲ ಪ್ರಯತ್ನವನ್ನು ಮಾಡುತ್ತಿವೆ. ಈಗಾಗಲೇ ಅಧಿಕಾರದಲ್ಲಿರುವ ಬಿಜೆಪಿ ಮತ್ತೆ ಗೆದ್ದು ಅಧಿಕಾರ ಹಿಡಿದರೆ, ಮೋದಿ ಮತ್ತು ಬಿಜೆಪಿ ವರ್ಚಸ್ಸಿಗೆ ಯಾವುದೇ ಭಂಗವಾಗಿಲ್ಲ ಎಂಬುದು ಸಾಬೀತಾಗುತ್ತದೆ. ಒಂದೊಮ್ಮೆ ಕಾಂಗ್ರೆಸ್ ಏನಾದರೂ ಗೆದ್ದರೆ, ಮೋದಿ ಮತ್ತು ಬಿಜೆಪಿಯ ವರ್ಚಸ್ಸು ಕುಸಿಯುತ್ತಿದೆ ಎಂಬುದು ಅಭಿಪ್ರಾಯ ಮೂಡಿಸಲು ಸಹಕಾರಿಯಾಗುತ್ತದೆ. ಹಾಗಾಗಿ, ಅದೇ ನರೇಟಿವ್ ಮುಂದಿನ ಲೋಕಸಭೆ ಚುನಾವಣೆಗೆ ಪ್ರತಿಪಕ್ಷಗಳು ಕ್ಯಾರಿ ಮಾಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಆ ಕಾರಣಕ್ಕಾಗಿಯೇ ಕಾಂಗ್ರೆಸ್ ಮತ್ತು ಬಿಜೆಪಿಗಳೆರಡೂ ಪಕ್ಷಗಳಿಗೆ ಕರ್ನಾಟಕವನ್ನು ಗೆಲ್ಲುವುದು ಮುಖ್ಯ ಮಾತ್ರವಲ್ಲೇ, ಅನಿವಾರ್ಯ ಕೂಡ.

ಬಿಜೆಪಿಗೆ ದಕ್ಷಿಣ ಭಾರತ ಹೆಬ್ಬಾಗಿಲು ತೆರೆಯುತ್ತಾ?

ಭಾರತದ ಬಹಳಷ್ಟು ರಾಜ್ಯಗಳಲ್ಲಿ ಆಡಳಿತದ ಸೂತ್ರ ಹಿಡಿದಿರುವ ಬಿಜೆಪಿಗೆ ಇದೂವರೆಗೂ ದಕ್ಷಿಣ ಭಾರತದ ಮೇಲೆ ದಂಡೆತ್ತಿ ಬರಲು ಸಾಧ್ಯವಾಗಿಲ್ಲ. ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದರೂ ಬಹುಮತದ ಗೆಲುವು ಕಂಡಿಲ್ಲ. ಹಾಗಾಗಿ, ಸಂಪೂರ್ಣವಾಗಿ ಸ್ವಂತ ಬಲದ ಮೇಲೆ ಗೆದ್ದು, ಸರ್ಕಾರ ರಚಿಸುವ ಉದ್ದೇಶದಿಂದ ಬಿಜೆಪಿ, ತನ್ನ ಟ್ರಂಪ್ ಕಾರ್ಡ್ ಮೋದಿಯನ್ನು ಹೆಚ್ಚಾಗಿ ಬಳಸಿಕೊಂಡಿದೆ. ಆ ಮೂಲಕ ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಪ್ರತಿಷ್ಠಾಪಿಸುವ ಕೆಲಸವನ್ನು ಮಾಡುತ್ತಿದೆ.

ಮೂರು ವರ್ಷಗಳ ಅಧಿಕಾರದಲ್ಲಿದ್ದ ಬಿಜೆಪಿಗೆ ಸಹಜವಾಗಿಯೇ ಆಡಳಿತ ವಿರೋಧಿ ಅಲೆ ಇದೆ. ಅದರಲ್ಲೂ ಕಾಂಗ್ರೆಸ್ ಚುನಾವಣೆಗೆ ಮುಂಚೆಯೇ, ಬಿಜೆಪಿಯ ಭ್ರಷ್ಟಾಚಾರದ ಆಡಳಿತವನ್ನು ಮತದಾರ ಮನದಾಳಕ್ಕೆ ಮುಟ್ಟಿಸುವುದರಲ್ಲಿ ಸಕ್ಸೆಸ್ ಆಗಿದೆ. 40 ಪರ್ಸೆಂಟ್ ಸರ್ಕಾರದ ಆರೋಪದಿಂದ ಹೊರಗೆ ಬರುವುದು ಅದಕ್ಕೆ ಕೊನೆಯವರೆಗೂ ಸಾಧ್ಯವಾಗಲಿಲ್ಲ. ಹಾಗಾಗಿಯೇ, ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಹೆಚ್ಚಾಗಿ ನೆಚ್ಚಿಕೊಂಡಿತು ಮತ್ತು ಇದರಲ್ಲಿ ಸಕ್ಸೆಸ್ ಕೂಡ ಆಗಿದೆ. ಕೊನೆ ಕೊನೆಗೆ ಮೋದಿ ಅವರ ಅಬ್ಬರ ಪ್ರಚಾರ ಒಂದಿಷ್ಟು ಮತಗಳನ್ನು ಬಿಜೆಪಿಗೆ ವಾಪಸ್ ತರುವಲ್ಲಿ ಯಶಸ್ವಿಯಾಗಿದೆ ಎಬ ವಿಶ್ಲೇಷಣೆಗಳು ನಡೆದಿವೆ. ಇದಕ್ಕೆ ಪೂರಕವಾಗಿ ಜೆ ಪಿ ನಡ್ಡಾ, ಯುಪಿ ಸಿಎಂ ಯೋಗಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅತಿರಥ ಮಹಾರಥರೆಲ್ಲ ಕರ್ನಾಟಕದಲ್ಲೇ ಠಿಕಾಣಿ ಹೂಡಿ, ಪ್ರಚಾರ ನಡೆಸಿದ್ದಾರೆ. ಬಿಜೆಪಿ ಲಿಂಗಾಯತ ವಿರೋಧಿ ಎಂಬ ಹಣೆಪಟ್ಟಿಯನ್ನು ಕಳಚುವ ಪ್ರಯತ್ನ ಮಾಡಿದ್ದಾರೆ.

Karnataka Election 2023: ಕಾಂಗ್ರೆಸ್‌ ಗೆಲ್ಲುವುದು ಅನಿವಾರ್ಯ

2014ರಿಂದ ಸತತ ಸೋಲುಗಳನ್ನು ಕಾಣುತ್ತಿರುವ ಕಾಂಗ್ರೆಸ್‌ಗೆ ಕರ್ನಾಟಕವನ್ನು ಗೆಲ್ಲುವುದು ಅನಿವಾರ್ಯ. ಹಾಗೆ ನೋಡಿದರೆ, ಇತರ ಎಲ್ಲ ರಾಜ್ಯಗಳಿಗಿಂತಲೂ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಆಶಾದಾಯಕ ಸ್ಥಿತಿ ಇದೆ. ಆ ಕಾರಣಕ್ಕಾಗಿಯೇ ಸ್ಥಳೀಯ ನಾಯಕರಾದ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆತ್ಮ ವಿಶ್ವಾಸದಿಂದಲೇ ಚುನಾವಣೆಯನ್ನು ಎದುರಿಸಿದ್ದಾರೆ. ಅಬ್ಬರದ ಪ್ರಚಾರ ಮಾಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ, ಕಾಂಗ್ರೆಸ್ ರೂಪಿಸಿದ ಆರೋಪಗಳ ನರೇಟಿವ್ ಅನ್ನು ಸುಳ್ಳು ಎಂದು ಸಾಬೀತು ಮಾಡುವುದೇ ಬಿಜೆಪಿ ಇಡೀ ಚುನಾವಣೆಯ ವಸ್ತುವಾಗಿತ್ತು. ಈ ವಿಷಯದಲ್ಲಿ ಕಾಂಗ್ರೆಸ್ ಗೆದ್ದಿದೆ. ಅದರ ಹಿಂದೆ ಈ ಇಬ್ಬರ ನಾಯಕರ ಪ್ರಯತ್ನವನ್ನು ಅಲ್ಲಗಳೆಯುವಂತಿಲ್ಲ.

ಇದೇ ವೇಳೆ, ಪ್ರಸಕ್ತ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕಾಂಗ್ರೆಸ್‌ಗೆ ತುಸು ಹೆಚ್ಚಿನ ಬಲ ತಂದಿದ್ದಾರೆ. ರಾಹುಲ್ ಗಾಂಧಿ ಜತೆಗೆ ಸರಿ ಸಮಾನವಾಗಿ ಕರ್ನಾಟಕದಾದ್ಯಂತ ಪ್ರಚಾರ ಮಾಡಿದ್ದಾರೆ. ರೋಡ್ ಶೋ ಆಗಲೀ, ಪ್ರಚಾರ ಸಭೆಗಳೇ ಆಗಲಿ, ಎಲ್ಲದಕ್ಕೂ ಜನರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹಾಗೆಯೇ, ರಾಷ್ಟ್ರೀಯ ಸಮಸ್ಯೆಗಳಿಗಿಂತಲೂ ಸ್ಥಳೀಯ ಸಮಸ್ಯೆಗಳನ್ನು ಪ್ರಚಾರದಲ್ಲಿ ಬಳಸಿಕೊಂಡರು. ವಿಶೇಷವಾಗಿ ಬೆಲೆ ಏರಿಕೆ ಮತ್ತು 40 ಪರ್ಸೆಂಟ್ ಸರ್ಕಾರದ ಕತೆಗಳನ್ನೇ ಜನರಿಗೆ ದಾಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಿಜೆಪಿಯ ಲಿಂಗಾಯತ ವಿರೋಧಿ ಎಂಬುದನ್ನು ಬಿಂಬಿಸುವಲ್ಲಿ ಕಾಂಗ್ರೆಸ್ ತಕ್ಕ ಮಟ್ಟಿಗೆ ಸಕ್ಸೆಸ್ ಕೂಡ ಆಗಿದೆ.

ಬಜರಂಗ ಬಲಿ ಮತ್ತು ವಿಷ ಸರ್ಪ

ಬಹಳ ಆತ್ಮವಿಶ್ವಾದಲ್ಲಿದ್ದ ಕಾಂಗ್ರೆಸ್‌ಗೆ ಕೆಲವು ಆತುರದ ನಿರ್ಧಾರಗಳು ಪ್ರಚಾರದ ವೇಳೆ ಹಿನ್ನಡೆಯನ್ನು ತಂದುಕೊಟ್ಟಿವೆ. ವಿಶೇಷವಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಮೋದಿಗೆ ವಿಷ ಸರ್ಪ ಎಂದು ಹೇಳಿದ್ದು ಮತ್ತು ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಭರವಸೆಯು ಕಾಂಗ್ರೆಸ್‌ನ ಒಟ್ಟು ಚುನಾವಣೆ ಪ್ರಚಾರದ ದಿಕ್ಕನ್ನು ಬದಲಿಸಿತು. ಕೊಂಚ ಮಟ್ಟಿಗೆ ಹಿನ್ನಡೆಯನ್ನು ಅನುಭವಿಸಿತು. ಅದೇ ವೇಳೆ, ಈ ವಿಷಯಗಳೇ ಬಿಜೆಪಿಗೆ ಟಾನಿಕ್‌ ನೀಡಿದವು. ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಎರಡು ವಿವಾದಗಳನ್ನು ತಮ್ಮ ಪ್ರಚಾರದ ವೇಳೆ ಬಹಳ ಪರಿಣಾಮಕಾರಿಯಾಗಿ ಬಳಸಿಕೊಂಡರು. ಬಜರಂಗದಳ ನಿಷೇಧ ಪ್ರಸ್ತಾಪವನ್ನು ಬಜರಂಗ ಬಲಿ ವಿರುದ್ಧ ಎಂಬಂತೆ ಬಿಂಬಿಸುವಲ್ಲಿ ಯಶಸ್ವಿಯಾದರು. ಇದಕ್ಕೆ ಸಂಘ ಪರಿವಾರದ ಅಷ್ಟೂ ಸಂಘಟನೆಗಳು ಟೊಂಕ ಕಟ್ಟಿ ನಿಂತವು. ಹಾಗಾಗಿ, ಭ್ರಷ್ಟಾಚಾರ ಆರೋಪದಿಂದ ಹಿನ್ನಡೆಯಲ್ಲಿದ್ದ ಬಿಜೆಪಿ ಭಾವನಾತ್ಮಕ ಮತದಾರರನ್ನು ಸೆಳೆಯಲು ಅಸ್ತ್ರವೇ ದೊರೆಯಿತು. ಆದರೆ, ಇದು ಎಷ್ಟರ ಮಟ್ಟಿಗೆ ಎಫೆಕ್ಟ್ ಆಗಲಿದೆ ಎಂಬುದು ಮೇ 13ಕ್ಕೆ ಗೊತ್ತಾಗಲಿದೆ. ಆದರೆ, ನಾಗಲೋಟದಲ್ಲಿ ಸಾಗುತ್ತಿದ್ದ ಕಾಂಗ್ರೆಸ್‌ಗೆ ಈ ವಿವಾದಗಳು ಬ್ರೇಕರ್‌ ಆಗಿದ್ದು ಸತ್ಯ.

ಪಂಚರತ್ನ ಯಾತ್ರೆಯ ಬೆನ್ನೇರಿದ ಜೆಡಿಎಸ್

ಎರಡೂ ರಾಷ್ಟ್ರೀಯ ಪಕ್ಷಗಳ ಅಬ್ಬರದ ಮಧ್ಯೆ ಪ್ರಾದೇಶಿಕ ಪಕ್ಷ ಜೆಡಿಎಸ್ ಕೂಡ ತನ್ನ ಪ್ರಭಾವನ್ನು ಕಾಯ್ದುಕೊಳ್ಳಲು ಯಶಸ್ವಿಯಾಗಿದೆ. ಅದರಲ್ಲೂ ದಳಪತಿ ಎಚ್ ಡಿ ಕುಮಾರಸ್ವಾಮಿ ಅವರಂತೂ ರಾಜ್ಯದ ಬಹುತೇಕ ವಿಧಾನಸಭಾ ಕ್ಷೇತ್ರಗಳನ್ನು ತಮ್ಮ ಪಂಚರತ್ನ ಯಾತ್ರೆಯ ಮೂಲಕ ತಲುಪಿದ್ದಾರೆ. ಪ್ರಾದೇಶಿಕ ಅಸ್ಮಿತೆಯೊಂದಿಗೆ ಭರಪೂರ ಭರವಸೆಯನ್ನು ಜನರಿಗೆ ನೀಡಿದ್ದಾರೆ. 90 ಆಸುಪಾಸಿನಲ್ಲಿರುವ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರೂ ಕ್ಷೇತ್ರ ಪ್ರಚಾರದಲ್ಲಿ ತೊಡಗಿದ್ದು, ಅವರಲ್ಲಿ ಇನ್ನೂ ರಾಜಕೀಯ ಉತ್ಸಾಹ ಬತ್ತಿಲ್ಲ ಎಂಬುದು ಸಾಬೀತಾಗಿದೆ. ಜೆಡಿಎಸ್ ಎಷ್ಟೇ ಪ್ರಯತ್ನ ಪಟ್ಟರೂ ಒಂಟಿಯಾಗಿ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗುವುದು ಇಲ್ಲ. ಈ ಸತ್ಯ ದಳಪತಿಗಳಿಗೂ ಗೊತ್ತು. ಇಡೀ ರಾಜ್ಯವೇ ಸುತ್ತಿದರೂ ತಮ್ಮ ಹಳೆ ಮೈಸೂರು ಭಾಗದ ಕ್ಷೇತ್ರಗಳ ಮೇಲೆ ಹೆಚ್ಚು ಗಮನಹರಿಸಿರುವುದು ಸುಳ್ಳಲ್ಲ. ಅತಂತ್ರ ವಿಧಾಸಭೆಯಾದರೆ ಕಾಂಗ್ರೆಸ್ ಮತ್ತು ಬಿಜೆಪಿಗಳೆರಡೂ ಜೆಡಿಎಸ್ ಮನೆ ಬಾಗಿಲಿಗೆ ಹೋಗಲೇಬೇಕು. ಹಾಗಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರಾರರೂ ಜೆಡಿಎಸ್ ವಿರುದ್ದ ಅಬ್ಬರಸಿ ಬೊಬ್ಬಿರಿಯಲು ಹೋಗಿಲ್ಲ.

ಪ್ರಜಾಪ್ರಭುತ್ವದ ಹಬ್ಬದ ಅಂತಿಮ ಚರಣಕ್ಕೆ ಗಣನೆ

ಚುನಾವಣೆಗಳು ಪ್ರಜಾಪ್ರಭುತ್ವದ ಹಬ್ಬಗಳೇ. ರಾಜಕೀಯವಾಗಿ ಸಕ್ರಿಯವಾಗಿರಲಿ, ಆಗದೇ ಇರಲಿ. ಎಲ್ಲರೂ ಇದರಲ್ಲಿ ಪಾಲ್ಗೊಳ್ಳುತ್ತಾರೆ. ಇದೇ ಸಂಗತಿ ಪ್ರಜಾಪ್ರಭುತ್ವದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿಯೇ, ಭಾರತೀಯ ಚುನಾವಣಾ ಆಯೋಗವು ನಿರ್ಭಿತ ಮತ್ತು ನ್ಯಾಯ ಸಮ್ಮತವಾದ ಚುನಾವಣೆಗಳನ್ನು ನಡೆಸುವಲ್ಲಿ ನಿರತವಾಗಿದೆ. ಈ ವಿಷಯದಲ್ಲಿ ಅದರ ಟ್ರ್ಯಾಕ್ ರೆಕಾರ್ಡ್ ಚೆನ್ನಾಗಿದೆ. ಹಾಗಾಗಿ, ಯಾರೂ ಬೊಟ್ಟು ಮಾಡಿ ತೋರಿಸುವಂತಿಲ್ಲ. ಕರ್ನಾಟಕದಲ್ಲಿ ಒಟ್ಟು 5,31,33,054 ಅರ್ಹ ಮತದಾರರು ಇದ್ದಾರೆ. ಈ ಪೈಕಿ 2,67,28,053 ಪುರುಷ ಮತದಾರರು ಮತ್ತು 2,64,00,074 ಮಹಿಳಾ ಮತದಾರರು ಇದ್ದಾರೆ. 4927 ಇತರ ಮತದಾರರಿದ್ದಾರೆ. ಈ ಮತದಾರರು 2615 ಅಭ್ಯರ್ಥಿಗಳ ಹಣೆಬರಹವನ್ನು ಮೇ 10ರಂದು ನಿರ್ಧರಿಸಲಿದ್ದಾರೆ.

Exit mobile version