ಹುಬ್ಬಳ್ಳಿ: ಈ ಬಾರಿ ಹೇಗಾದರೂ ಮಾಡಿ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯನ್ನು (Hubli Dharwad City Corporation) ಬಿಜೆಪಿ ತೆಕ್ಕೆಯಿಂದ ಸೆಳೆದು ಕಾಂಗ್ರೆಸ್ ಕೈಗೆ ನೀಡಬೇಕು ಎಂದು ಕೈ ಪಡೆ ನಡೆಸಿದ ಶತಪ್ರಯತ್ನಗಳು ವಿಫಲವಾಗಿವೆ. ಮೇಯರ್ ಮತ್ತು ಉಪಮೇಯರ್ (Mayor Election) ಎರಡೂ ಸ್ಥಾನಗಳನ್ನು ಗೆದ್ದುಕೊಂಡು ಬಿಜೆಪಿ ಬೀಗಿದೆ. ಕಾಂಗ್ರೆಸ್‌ನ ಪ್ರಯತ್ನಗಳ ಹಿಂದೆ ನಿಂತಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಅವರಿಗೆ ಇದು ಮುಖಭಂಗವಾದಂತಾಗಿದೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 22ನೇ ಅವಧಿಯ ಮೇಯರ್ ಆಗಿ 49ನೇ ವಾರ್ಡ್ ಬಿಜೆಪಿ ಸದಸ್ಯೆ ವೀಣಾ ಚೇತನ ಬರದ್ವಾಡ ಆಯ್ಕೆಯಾದರೆ, ಉಪಮೇಯರ್ ಆಗಿ ಸತೀಶ್ ಹಾನಗಲ್ ಆಯ್ಕೆಯಾಗಿದ್ದಾರೆ. ಮೇಯರ್ ಸ್ಥಾನದ ಬಿಜೆಪಿ ಅಭ್ಯರ್ಥಿ ವೀಣಾ ಚೇತನ್ ಬರದ್ವಾಡ ಅವರು 46 ಮತಗಳನ್ನು ಪಡೆದರೆ ಕಾಂಗ್ರೆಸ್‌ನ ಮೇಯರ್ ಅಭ್ಯರ್ಥಿ ಸುವರ್ಣ ಕಲ್ಲಕುಂಟ್ಲ 37 ಮತ ಪಡೆದು ಸೋಲುಕಂಡರು.
ಇದರೊಂದಿಗೆ 22ನೇ ಅವಧಿಗೂ ಪಾಲಿಕೆಯ ಮೇಲೆ ಬಿಜೆಪಿ ಧ್ವಜ ಹಾರಿದೆ. ಕಮಲ ಪಡೆ ಅಧಿಕಾರದ ಗದ್ದುಗೆ ಏರಿದೆ. ಕಾಂಗ್ರೆಸ್ ನಡೆಸಿದ ಭಾರಿ ರಣತಂತ್ರ ವರ್ಕ್‌ಔಟ್ ಆಗದೆ ಸೋಲಾಗಿದೆ.
ಚುನಾವಣೆಯ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪಾಲಿಕೆ ಕಚೇರಿ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಧಾರವಾಡ ಎಸಿಪಿ ವಿಜಯ ಕುಮಾರ್ ನೇತೃತ್ವದಲ್ಲಿ 07 ಜನ ಸಿಪಿಐ, 11 ಪಿಎಸ್, 17 ಜನ ಎಸ್ಐ, ತಲಾ ಎರಡು ಕೆಎಸ್ಆರ್ಪಿ ಹಾಗೂ ಸಿಆರ್ ತುಕಡಿ ಸೇರಿ 196 ಸಿಬ್ಬಂದಿಗಳ ನಿಯೋಜನೆ ಮಾಡಲಾಗಿತ್ತು.
ಹೇಗಿತ್ತು ರಣತಂತ್ರ ಮತ್ತು ಬಲಾಬಲ?
ಹುಬ್ಬಳ್ಳಿ-ಧಾರವಾಡ ಪಾಲಿಕೆ ಮೇಯರ್ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಹಾಗೂ ಉಪಮೇಯರ್ ಸ್ಥಾನಕ್ಕೆ ಸಾಮಾನ್ಯ ಮೀಸಲು ಮೀಸಲಾತಿ ನಿಗದಿಯಾಗಿತ್ತು. 82 ಜನ ಸದಸ್ಯ ಬಲಾಬಲ ಹೊಂದಿರುವ ಮಹಾನಗರ ಪಾಲಿಕೆಯಲ್ಲಿ 39 ಜನ ಬಿಜೆಪಿ ಸದಸ್ಯರಿದ್ದಾರೆ. 33 ಜನ ಕಾಂಗ್ರೆಸ್, ಎಐಎಂಐಎಂ 3, ಜೆಡಿಎಸ್ 1 ಹಾಗೂ 6 ಜನ ಪಕ್ಷೇತರ ಸದಸ್ಯರಿದ್ದಾರೆ. ಸಂಸದ, ಶಾಸಕರು, ಪರಿಷತ್ ಸದಸ್ಯರು ಸೇರಿ ಒಟ್ಟು 89 ಸಂಖ್ಯಾ ಬಲ ಆಗಿದೆ.
ಕಮಲ ಪಾಳೆಯದಲ್ಲಿರುವ ಪಾಲಿಕೆ ಅಧಿಕಾರವನ್ನು ತನ್ನ ಕೈ ವಶ ಮಾಡಿಕೊಳ್ಳಲು ಕಾಂಗ್ರೆಸ್ ಭಾರಿ ಸರ್ಕಸ್ ನಡೆಸಿತ್ತು. ಅಸೆಂಬ್ಲಿ ಚುನಾವಣೆ ವೇಳೆ ಕಾಂಗ್ರೆಸ್ ಸೇರಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಪಾಲಿಕೆ ಗೆಲ್ಲುವ ಟಾಸ್ಕನ್ನು ನೀಡಲಾಗಿತ್ತು. ಮಾಜಿ ಸಿಎಮ್ ಜಗದೀಶ್ ಶೆಟ್ಟರ್, ಸಚಿವ ಸಂತೋಷ್ ಲಾಡ್, ಶಾಸಕ ಪ್ರಸಾದ್ ಅಬ್ಬಯ್ಯ ಮತ್ತು ವಿನಯ ಕುಲಕರ್ಣಿ ಸಭೆ ನಡೆಸಿದ್ದರು.
ಕಾಂಗ್ರೆಸ್ ನಾಯಕರ ರಣತಂತ್ರ ಜೋರಾಗಿತ್ತು. ಹಲವಾರು ಕಾರ್ಪೊರೇಟರ್‌ಗಳು ಕಾಂಗ್ರೆಸ್‌ನ್ನು ಬೆಂಬಲಿಸಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಇದರಿಂದ ಹೆದರಿದ ಬಿಜೆಪಿ ತನ್ನ ಸದಸ್ಯರನ್ನು ರೆಸಾರ್ಟ್‌ಗೆ ಕರೆದುಕೊಂಡು ಹೋಗಬೇಕಾದ ಪರಿಸ್ಥಿತಿ ಬಂದಿತ್ತು. ಅಂತಿಮವಾಗಿ ಈಗ ಬಿಜೆಪಿಯೇ ಗೆದ್ದು ಕಮಲ ಪಾಳಯದ ನೇತೃತ್ವ ವಹಿಸಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಗೆಲುವಿನ ನಗೆ ಬೀರಿದ್ದಾರೆ.