ನವ ದೆಹಲಿ: ಬೆಂಗಳೂರು ನಗರಕ್ಕೆ ನೀರು ಒದಗಿಸುವ ಉದ್ದೇಶದಿಂದ ಮೇಕೆದಾಟು ಬಳಿ ಕಾವೇರಿ ನದಿಗೆ ಅಣೆಕಟ್ಟು ಕಟ್ಟಲು ಅವಕಾಶ ನೀಡಬಾರದು, ವಿಸ್ತೃತ ಯೋಜನಾ ವರದಿಗೆ ಅನುಮತಿ ನೀಡಬಾರದು ಎಂದು ಕೋರಿ ತಮಿಳುನಾಡು ಸರಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಆಗಸ್ಟ್ ೧೦ಕ್ಕೆ ಮುಂದೂಡಿದೆ.
ಮೇಕೆದಾಟು ಬಳಿ ಅಣೆಕಟ್ಟು ನಿರ್ಮಿಸುವ ಯೋಜನೆಯ ಕುರಿತು ಸುಪ್ರೀಂ ಕೋರ್ಟಿನಲ್ಲಿ ಇರುವ ಮೂಲ ಅರ್ಜಿ ಇತ್ಯರ್ಥ ಆಗುವವರೆಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯು ಮೇಕೆದಾಟು ವಿಸ್ತ್ರತ ಯೋಜನಾ ವರದಿಗೆ ಒಪ್ಪಿಗೆ ನೀಡಬಾರದು ಎನ್ನುವುದು ತಮಿಳುನಾಡಿನ ವಾದವಾಗಿದೆ. ಈ ವಿಚಾರ ಮಂಗಳವಾರ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬಂದಿದೆ. ಆದರೆ, ಸಾಲಿಸಿಟರ್ ಜನರಲ್ ಅವರು ಗೈರುಹಾಜರಾಗಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ವಿಚಾರಣೆಯನ್ನು ಆಗಸ್ಟ್ ೧೦ಕ್ಕೆ ಮುಂದೂಡಿದೆ.
ತಮಿಳುನಾಡಿನ ಅರ್ಜಿ ಬಗ್ಗೆ ಸಾಲಿಸಿಟರ್ ಜನರಲ್ ಅವರು ತಮ್ಮ ಅಭಿಪ್ರಾಯ ಹೇಳಬೇಕು. ಅದರ ಬಗ್ಗೆ ಚರ್ಚೆಯಾಗಬೇಕು. ಅದಕ್ಕೆ ಉತ್ತರ ನೀಡಲು ಸಮಯಾವಕಾಶ ಬೇಕು ಎಂದು ರಾಜ್ಯದ ಪರ ವಕೀಲ ಶ್ಯಾಂ ಸುಂದರ್ ದಿವಾನ್ ಅವರು ಮನವಿ ಮಾಡಿದರು.
ಜುಲೈ ೨೨ರಂದು ನಿಗದಿಯಾಗಿದ್ದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮೇಕೆದಾಟು ಅಣೆಕಟ್ಟು ಬಗ್ಗೆ ಚರ್ಚೆ ನಡೆಸಿ ಡಿಪಿಆರ್‌ಗೆ ಅನುಮತಿ ನೀಡಬೇಕು ಎಂದು ಕರ್ನಾಟಕ ಮನವಿ ಮಾಡಿತ್ತು. ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಕೇಂದ್ರ ಜಲ ಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ ಮುಂದಿನ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮೇಕೆದಾಟು ಯೋಜನೆಯ ಡಿಪಿಆರ್ ವಿಷಯದ ಬಗ್ಗೆ ಚರ್ಚೆ ಮಾಡಿ ಒಪ್ಪಿಗೆ ನೀಡಿ ಎಂದು ಕೇಳಿಕೊಂಡಿದ್ದರು. ಕೇಂದ್ರ ಜಲಸಂಪನ್ಮೂಲ ಇಲಾಖೆ ಮುಂದಿನ ಸಭೆಯಲ್ಲಿ ಮೇಕೆದಾಟು ಡಿಪಿಆರ್ ವಿಚಾರವನ್ನು ಸಭೆಯ ಅಜೆಂಡಾಗೆ ಸೇರಿಸುವ ಭರವಸೆ ನೀಡಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಸುಪ್ರೀಂ ಕೋರ್ಟಿನಲ್ಲಿ ಜುಲೈ 11ರಂದು ವಿಷಯ ಪ್ರಸ್ತಾಪಿಸಿದ ತಮಿಳುನಾಡು ಪರ ವಕೀಲರು ಈ ಹಿಂದೆಯೇ ಮೇಕೆದಾಟು ಯೋಜನೆಗೆ ತಡೆ ನೀಡುವಂತೆ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಸುಪ್ರೀಂ ಕೋರ್ಟಿನಲ್ಲಿ ಪ್ರಕರಣ ಇತ್ಯರ್ಥ ಆಗದೇ ಇದ್ದರೂ ಕರ್ನಾಟಕ ಮೇಕೆದಾಟು ಯೋಜನೆ ಆರಂಭಿಸಲು ಅವಸರ ಮಾಡುತ್ತಿದೆ. ಯೋಜನೆಯ ಡಿಪಿಆರ್ ಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಒಪ್ಪಿಗೆ ಪಡೆಯಲು ಪ್ರಯತ್ನಿಸುತ್ತಿದೆ. ಇದಕ್ಕೆ ಅವಕಾಶ ನೀಡಬಾರದು ಎಂದು ಕೋರಿತ್ತು.
ಪ್ರಾಧಿಕಾರದ ಸಭೆಯಲ್ಲಿ ಮೇಕೆದಾಟು ಡಿಪಿಆರ್ ಡಿಪಿಆರ್ ಬಗ್ಗೆ ಚರ್ಚಿಸಲು ಅವಕಾಶ ನೀಡಬಾರದು ಎಂಬ ತಮಿಳುನಾಡು ಮನವಿಗೆ ಸ್ಪಂದಿಸಿದ ಸುಪ್ರೀಂಕೋರ್ಟ್ ಜುಲೈ 19ರ ವಿಚಾರಣೆ ವೇಳೆ ಜುಲೈ 22ರ ಪ್ರಾಧಿಕಾರದ ಸಭೆಯಲ್ಲಿ ಮೇಕೆದಾಟು ಡಿಪಿಆರ್ ಬಗ್ಗೆ ಚರ್ಚಿಸದಂತೆ ಸೂಚಿಸಿತ್ತು. ಜತೆಗೆ ಈ ಬಗ್ಗೆ ವಿವರಣೆ ನೀಡುವಂತೆ ಪ್ರಾಧಿಕಾರಕ್ಕೆ ಸೂಚನೆ ನೀಡಿತ್ತು.
ಇದಕ್ಕೆ ಪ್ರತಿಕ್ರಿಯಿಸಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಜುಲೈ ೨೨ರಂದು ನಡೆಯುವ ಸಭೆಯಲ್ಲಿ ಮೇಕೆದಾಟು ಡಿಪಿಆರ್ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದು ಸ್ಪಷ್ಟಪಡಿಸಿತ್ತು.