ಮಂಡ್ಯ: ವಿರೋಧಿಗಳ ಯಾವುದೇ ಕಡತಕ್ಕೆ, ಪತ್ರಗಳಿಗೆ ನಾನು ಸಹಿ ಹಾಕುವುದಿಲ್ಲ ಎಂದು ಹೇಳಿಕೆ ನೀಡಿದ್ದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ (Chaluvarayaswamy) ಅವರಿಗೆ ಈಗ ಸಂಕಷ್ಟ ಎದುರಾಗಿದೆ. ಅವರ ವಿರುದ್ಧ ಬಿಜೆಪಿ ರಾಜ್ಯಪಾಲರಿಗೆ ದೂರು ನೀಡಿದೆ.
ಬಿಜೆಪಿ ವಕ್ತಾರ ಸಿ.ಟಿ. ಮಂಜುನಾಥ್ ಎಂಬುವವರು ಮಂಡ್ಯ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ದೂರು ನೀಡಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಚುನಾಯಿತ ಜನಪ್ರತಿನಿಧಿಯಾದವರು ಯಾವುದೇ ದ್ವೇಷ, ತಾರತಮ್ಯ ಇಲ್ಲದೆ ಕೆಲಸ ಮಾಡಬೇಕು. ಈ ಮೂಲಕ ಸಂವಿಧಾನದ ಆಶಯವನ್ನು ಎತ್ತಿ ಹಿಡಿಯಬೇಕು. ಚಲುವರಾಯಸ್ವಾಮಿ ಅವರು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವುದಾಗಿ ಪ್ರಮಾಣ ವಚನವನ್ನು ಸ್ವೀಕಾರ ಮಾಡಿದ್ದರೂ ಸಂವಿಧಾನಕ್ಕೆ ವಿರುದ್ಧವಾಗಿ ಮಾತನಾಡಿದ್ದಾರೆ. ಹೀಗಾಗಿ ಅವರ ಮೇಲೆ ಸೂಕ್ತ ಕ್ರಮ ವಹಿಸಬೇಕು ಎಂದು ಮನವಿಯಲ್ಲಿ ಕೋರಿದ್ದಾರೆ.
ಚಲುವರಾಯಸ್ವಾಮಿ ಅವರು ಈಗ ಮತ ಹಾಕಿರುವವರಿಗೆ ಮಾತ್ರ ಕೆಲಸ ಮಾಡುವುದಾಗಿ ಹೇಳುತ್ತಿದ್ದಾರೆ. ಇವರು ಕಾಂಗ್ರೆಸ್ ಪಕ್ಷದ ಸಚಿವರೋ, ಕರ್ನಾಟಕ ಸರ್ಕಾರದ ಸಚಿವರೋ ಎಂದು ಬಿಜೆಪಿ ವಕ್ತಾರ ಸಿ.ಟಿ. ಮಂಜುನಾಥ್ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: Deputy Speaker: ವರ್ಷದ ಬಳಿಕ ಸಚಿವನಾಗುವೆ; ಈಗ ಡೆಪ್ಯುಟಿ ಸ್ಪೀಕರ್ ಸ್ಥಾನ ಒಪ್ಪಿರುವೆನೆಂದ ಪುಟ್ಟರಂಗಶೆಟ್ಟಿ
ವೈರಲ್ ಆಗಿತ್ತು ಚಲುವರಾಯಸ್ವಾಮಿ ಹೇಳಿಕೆ ವಿಡಿಯೊ
ನಾಗಮಂಗಲ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ್ದ ಎನ್. ಚಲುವರಾಯಸ್ವಾಮಿ, ನನ್ನ ಬಳಿ ಕಾಮಗಾರಿಗಳ ಪಟ್ಟಿ ಹಿಡಿದು ಬರುವವರನ್ನು ನಗುತ್ತಾ ಮಾತನಾಡಿಸಿ ಕಳಿಸುತ್ತೇನೆ. ನಿಮ್ಮ ನಿಮ್ಮ ಊರಿನಲ್ಲಿ ಮುಂದಿನ ಯೋಜನೆಗಳ ಕುರಿತು ಯಾವುದು ಉತ್ತಮ ಎಂದು ನೀವೇ ನಿರ್ಧಾರ ಮಾಡಿ ಹೇಳಿ. ನಿಮ್ಮ ಗ್ರಾಮ ಪಂಚಾಯಿತಿಗೆ ಏನು ಬೇಕು ಎಂಬುದನ್ನು ನೀವೇ ನಿರ್ಧಾರ ಮಾಡಿ. ನಾನು ಯಾವುದಕ್ಕೂ ತಲೆ ಹಾಕುವುದಿಲ್ಲ. ನಿಮ್ಮ ಅಭಿಪ್ರಾಯದ ಹೊರತು ಪೆನ್ನು ಹಿಡಿದು ಒಂದು ಪತ್ರಕ್ಕೂ ಸಹಿ ಹಾಕಲ್ಲ. ಈ ಬಗ್ಗೆ ನಿಮಗೆ ಆತಂಕವೂ ಬೇಡ, ಬೇಸರವೂ ಬೇಡ ಎಂದು ಹೇಳಿದ್ದರು. ಈ ಮೂಲಕ ದ್ವೇಷದ ರಾಜಕಾರಣಕ್ಕೆ ನಾಂದಿ ಹಾಡಿದ್ದಾರೆಯೇ ಎಂಬ ಪ್ರಶ್ನೆ ಎದುರಾಗಿತ್ತು. ಇದು ಭಾರಿ ಚರ್ಚೆಗೂ ಗ್ರಾಸವಾಗಿತ್ತು. ಈಗ ಈ ಬಗ್ಗೆ ಬಿಜೆಪಿ ರಾಜ್ಯಪಾಲರಿಗೆ ದೂರು ನೀಡಿದೆ.
ವೈರಲ್ ಆಗಿದ್ದ ಚೀಪ್ ಗಿಮಿಕ್ ವಿಡಿಯೊ!
ಈ ಬಾರಿಯ ಚುನಾವಣೆಯಲ್ಲಿ ಘೋಷಣೆ ಮಾಡಲಾಗಿರುವ ಗ್ಯಾರಂಟಿ (Congress Guarantee) ಯೋಜನೆಗಳು ಚುನಾವಣೆ ಗಿಮಿಕ್ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ (N Chaluvarayaswamy) ಅವರು ಹೇಳಿರುವ ವಿಡಿಯೊವೊಂದು ವೈರಲ್ (Video Viral) ಆಗಿದೆ. ಚುನಾವಣೆ ವೇಳೆ ಅಧಿಕಾರವನ್ನು ಹಿಡಿಯುವುದೇ ಬಹುಮುಖ್ಯ ಆಗಿದ್ದರಿಂದ ನಮಗೆ ಇಷ್ಟ ಇದೆಯೋ ಇಲ್ಲವೋ, ಸಿದ್ದರಾಮಯ್ಯ (CM Siddaramaiah) ಅವರಿಗೆ ಇಷ್ಟ ಆಗುತ್ತದೆಯೋ ಇಲ್ಲವೋ? ಇಂಥ ಚೀಪ್ ಗಿಮಿಕ್‌ಗಳನ್ನು ಮಾಡಬೇಕಾಗುತ್ತದೆ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ. ಈ ಹೇಳಿಕೆ ವಿಡಿಯೊ ಸೋಷಿಯಲ್ ಮೀಡಿಯಾದಲ್ಲೀಗ ಹರಿದಾಡುತ್ತಿದೆ.
ವಿಡಿಯೊದಲ್ಲಿ ಏನಿದೆ?
“ಈ ಹಿಂದೆಯೂ ಸಹ ಹಲವಾರು ಉಚಿತ ಯೋಜನೆಗಳನ್ನು ನಾವೇ ವಿರೋಧ ಮಾಡಿಕೊಂಡು ಬಂದಿದ್ದೇವೆ. ಇದು ದೇಶದಲ್ಲಿಯೇ ಚರ್ಚೆ ಆಗಿರುವ ವಿಚಾರವಾಗಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ, ಮುಂದೆ ಫ್ರೀ.. ಫ್ರೀ.. ಎಂದು ಹೋದರೆ ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂದು ನಾವೂ ಚರ್ಚೆ ಮಾಡಿದ್ದೇವೆ. ಈಗ ನಾವುಗಳೂ ಅದೇ ಲೈನ್‌ನಲ್ಲಿ ಹೊರಟಿದ್ದೇವೆ. ಎಲ್ಲೋ ಒಂದು ಕಡೆ ಚುನಾವಣೆ, ರಿಸಲ್ಟ್ ಎಲ್ಲವೂ ಮುಖ್ಯವಾಗುತ್ತದೆ. ಸರ್ಕಾರ ಬಂದರೆ ತಾನೇ ನಾವೂ ಏನಾದರೂ ಮಾಡುವುದಕ್ಕೆ ಸಾಧ್ಯವಾಗುವುದು? ಅಧಿಕಾರ ಸಿಕ್ಕಿದರೆ ತಾನೇ ಕೆಲಸ ಮಾಡುವುದಕ್ಕೆ ಆಗುವುದು ಎನ್ನುವ ದೃಷ್ಟಿ ಬಂದಾಗ ಅಂದು ಫಲಿತಾಂಶವೇ ಅನಿವಾರ್ಯ ಆಗುತ್ತದೆ. ಹಾಗಾಗಿ ರಿಸಲ್ಟ್ ಬರಬೇಕು ಎಂದಾಗ ಈ ರೀತಿಯ (ಗ್ಯಾರಂಟಿ) ಚೀಪ್ ಪಾಪ್ಯುಲಾರಿಟಿ, ಇಲ್ಲದ್ದು ಪಲ್ಲದ್ದು ಎಲ್ಲವನ್ನೂ ಮಾಡುತ್ತೇವೆ. ಆದರೆ, ನಮ್ಮ ಮನಸ್ಸು ಒಪ್ಪುತ್ತದೆಯೋ ಇಲ್ಲವೋ? ನಮಗೆ, ಸಿದ್ದರಾಮಯ್ಯ ಅವರಿಗೆ ಇಷ್ಟವಾಗುತ್ತದೆಯೋ ಇಲ್ಲವೋ? ಕೆಲವನ್ನು ಮಾಡಿಕೊಂಡು ಹೋಗಬೇಕಾಗುತ್ತದೆ, ಕೆಲವನ್ನು ಒಪ್ಪಿಕೊಳ್ಳಬೇಕಾಗುತ್ತದೆ” ಎಂದು ಹೇಳಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ಈಗ ಚರ್ಚೆಗೆ ಗ್ರಾಸವಾಗಿದೆ.