ಬೆಳಗಾವಿ: ಘಟಪ್ರಭಾ, ಮಲಪ್ರಭಾ, ಆಲಮಟ್ಟಿ ಜಲಾಶಯಗಳಲ್ಲಿ ಇನ್ನೂ ಅರ್ಧದಷ್ಟು ನೀರೂ ಸಂಗ್ರಹವಾಗಿಲ್ಲ. ಮಹಾರಾಷ್ಟ್ರದ ಡ್ಯಾಂಗಳು ಕೂಡ ಭರ್ತಿಯಾಗಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಯಾವುದೇ ರೀತಿಯ ಪ್ರವಾಹದ ಆತಂಕ ಇಲ್ಲ, ಮಳೆ ಹಾನಿ ಪರಿಹಾರ ಕಾರ್ಯ ಕೈಗೊಳ್ಳಲು ಸರ್ಕಾರದಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು.
ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿ ಜನರಲ್ಲಿ ಪ್ರವಾಹ ಭೀತಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮಾತನಾಡಿರುವ ಅವರು, ಈ ವರ್ಷ ಮುಂಗಾರು ಹಂಗಾಮಿನಲ್ಲಿ ಪ್ರವಾಹ ಮುನ್ನೆಚ್ಚರಿಕೆ ಕುರಿತು ಮೇ 5, ಜೂನ್ 22ರಂದು ಎರಡು ಸಭೆಗಳನ್ನು ನಡೆಸಲಾಗಿದೆ. ಪ್ರವಾಹದಿಂದ ತೊಂದರೆ ಆಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಬೆಳಗಾವಿ ಜಿಲ್ಲಾಧಿಕಾರಿ, ಬಾಗಲಕೋಟೆ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ | ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ವರುಣಾರ್ಭಟ, ಜುಲೈ 15ರವರೆಗೆ ಭಾರಿ ಮಳೆ ಸಾಧ್ಯತೆ
ಪ್ರವಾಹ ಪರಿಸ್ಥಿತಿ ಎದುರಿಸಲು ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ 386 ಪರಿಹಾರ ಕೇಂದ್ರ, 262 ಜಾನುವಾರು ಶಿಬಿರ ಆರಂಭಿಸಲು ಗುರುತಿಸಲಾಗಿದೆ. 39 ಬೋಟ್, 22 ಎಸ್‌ಡಿಆರ್‌ಎಫ್ ತಂಡಗಳು ಜಿಲ್ಲೆಯಲ್ಲಿ ಇದ್ದು, 200 ಸ್ವಯಂ ಸೇವಕರನ್ನು ಗುರುತಿಸಲಾಗಿದೆ. ವಿಪತ್ತು ನಿರ್ವಹಣೆಗೆ 73 ಕೋಟಿ ರೂ. ಜಿಲ್ಲಾಧಿಕಾರಿ ಖಾತೆಯಲ್ಲಿದ್ದು, ಎಲ್ಲ ವ್ಯವಸ್ಥೆಗಳನ್ನು ಕಾಲ ಕಾಲಕ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಮಹಾರಾಷ್ಟ್ರದ ಕೊಯ್ನಾ ಅಣೆಕಟ್ಟು ಇನ್ನೂ ಭರ್ತಿಯಾಗಿಲ್ಲ, 105 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ 30 ಟಿಎಂಸಿಯಷ್ಟು ನೀರೂ ಸಂಗ್ರಹವಾಗಿಲ್ಲ. ಜಲಾಶಯ ಭರ್ತಿ ಆಗುವವರೆಗೆ ನೀರು ಬಿಡುವುದಿಲ್ಲ. ವಾರಣಾ ಜಲಾಶಯ 34 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಇನ್ನೂ 20 ಟಿಎಂಸಿ ಕೂಡ ದಾಟಿಲ್ಲ. ದೂಧ್‌ಗಂಗಾ ಜಲಾಶಯ ಸಾಮರ್ಥ್ಯ 25 ಟಿಎಂಸಿ ಇದ್ದು, ಇನ್ನೂ 10 ಟಿಎಂಸಿ ಕೂಡ ಭರ್ತಿ ಆಗಿಲ್ಲ. ಹೀಗಾಗಿ ಪ್ರವಾಹ ಸೃಷ್ಟಿಯಾಗುವ ಆತಂಕ ಬೇಡ ಎಂದು ಹೇಳಿದರು.
ಖಾನಾಪುರ, ಕಿತ್ತೂರು, ನಿಪ್ಪಾಣಿಯಲ್ಲಿ ಮಳೆಯಿಂದ ಜನ ಸಂಕಷ್ಟ ಎದುರಿಸುತ್ತಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಸಿಎಂ ನೇತೃತ್ವದಲ್ಲಿ ನಡದ ಸಭೆಯಲ್ಲಿ ಎಲ್ಲ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ. 24 ಗಂಟೆ ಅಲರ್ಟ್ ಆಗಿ ಕೆಲಸ ಮಾಡುವಂತೆ ಸೂಚಿಸಲಾಗಿದೆ. ಸದ್ಯದ ಮಟ್ಟಿಗೆ ಯಾವುದೇ ತೊಂದರೆ ಇಲ್ಲ, ಮನೆಗೆ ನೀರು ನುಗ್ಗಿದರೆ 10 ಸಾವಿರ ರೂ. ತುರ್ತು ಪರಿಹಾರ ನೀಡಲು ಸೂಚಿಸಲಾಗಿದೆ ಎಂದರು.
ಇದನ್ನೂ ಓದಿ | Dam Water Level | ತುಂಬೋ ಹಂತಕ್ಕೆ ಬಂದಿವೆ ರಾಜ್ಯದ ಪ್ರಮುಖ ಜಲಾಶಯಗಳು