ರಾಯಚೂರು: ʻʻ7೦-8೦ ಲಕ್ಷ ಕೊಟ್ಟು ಬಂದರೆ ಇನ್ಸ್‌ಪೆಕ್ಟರ್ ಹೃದಯಾಘಾತವಾಗದೇ ಇನ್ನೇನಾಗತ್ತೆʼʼ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ ಸಚಿವ ಎಂ.ಟಿ.ಬಿ ನಾಗರಾಜ್ ಅವರು ತಮ್ಮ ಮಾತಿಗೆ ಸಂಬಂಧಿಸಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಕೆ.ಆರ್. ಪುರಂನ ಇನ್ಸ್‌ಪೆಕ್ಟರ್ ನಂದೀಶ್ ಅವರು ಹೃದಯಾಘಾತದಿಂದ ಮೃತಪಟ್ಟ ಬಗ್ಗೆ ಮಾತನಾಡಿದ್ದ ಎಂ.ಟಿ.ಬಿ ಅವರು ಕಮಿಷನರ್ ಪ್ರತಾಪ್ ರೆಡ್ಡಿ ಅವರ ಮೇಲೆ ಹರಿಹಾಯ್ದಿದ್ದರು. ಅವಧಿ ಮೀರಿ ಪಾರ್ಟಿಗೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಅಮಾನತು ಮಾಡಬೇಕಾಗಿರಲಿಲ್ಲ. ನೋಟಿಸ್ ನೀಡಿದ್ದರೆ ಸಾಕಿತ್ತು ಎಂದು ಹೇಳಿದ್ದರು. ಅದರ ಜತೆಗೇ ʻ೬೦-೭೦ ಲಕ್ಷ ಕೊಟ್ಟು ಬಂದ್ರೆ ಹೃದಯಾಘಾತವಾಗದೆ ಏನಾಗುತ್ತದೆʼ ಎಂದು ಕೇಳಿದ್ದರು. ಪೊಲೀಸರು ಲಂಚ ಇಷ್ಟೊಂದು ದೊಡ್ಡ ಮೊತ್ತ ಕೊಟ್ಟು ಟ್ರಾನ್ಸ್‌ಫರ್ ಮಾಡಿಸಿಕೊಳ್ಳುತ್ತಾರೆ ಎಂಬರ್ಥದ ಈ ಮಾತು ಭಾರಿ ಚರ್ಚೆಯನ್ನು ಹುಟ್ಟುಹಾಕಿತ್ತು ಮತ್ತು ಸರಕಾರಕ್ಕೆ ಮುಜುಗರವನ್ನೂ ಉಂಟು ಮಾಡಿತ್ತು. ಈ ವಿಚಾರಕ್ಕೆ ಸಂಬಂಧಿಸಿ ಸಚಿವ ಎಂ.ಟಿ.ಬಿ. ಅವರು ಮೊದಲ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ರಾಯಚೂರಿನಲ್ಲಿ ಪಂಚಾಯಿತಿ ಚುನಾವಣೆ ಕಾರ್ಯದಲ್ಲಿ ಭಾಗವಹಿಸಿರುವ ಅವರು ವಿಡಿಯೊ ವೈರಲ್ ವಿಚಾರಕ್ಕೆ ಸಂಬಂಧಿಸಿ ಹೇಳಿಕೆಯನ್ನು ನೀಡಿದ್ದಾರೆ.
ಎಂ.ಟಿ.ಬಿ. ಹೇಳಿದ್ದೇನು?
ʻʻನಂದೀಶ್ ಅವರ ಸಾವಿಗೆ ಸಂಬಂಧಿಸಿದಂತೆ ಪತ್ನಿ, ಮಕ್ಕಳಿಗೆ ಸಾಂತ್ವನ ಹೇಳಬೇಕಿತ್ತು. ಆದರೆ, ನಾನು ಪಂಚಾಯಿತಿ ಚುನಾವಣೆ ಕಾರ್ಯಕ್ರಮದಲ್ಲಿದ್ದೆ. ಆಗ ಮೂವರು ಕಾರ್ಯಕರ್ತರು ಬಂದರು. ಅವರು ಇನ್ಸ್‌ಪೆಕ್ಟರ್ ನಂದೀಶ್ ಬಗ್ಗೆ ಹೇಳಿದರು. 70-80 ಲಕ್ಷ ಖರ್ಚು ಮಾಡಿದ್ದಿನಿ, ಅಂತ ಬೇಜಾರಾಗಿದ್ದೀನಿ ಅಂತ ಹೇಳುತ್ತಿದ್ದರಂತೆ ಎಂದು ಕೆಲವರು ಹೇಳಿದರು. ಟೆನ್ಷನ್ ತಗೊಂಡಿದ್ರು ಅಂದ್ರು, ಯಾಕೆ ಟೆನ್ಷನ್ ತಗೊಬೇಕು ಅಂತ ನಾನು ಹೇಳಿದ್ದೆ. 70-80 ಲಕ್ಷ ಕೊಟ್ಟು ಏನು ಬಾರ್ಲು ಹಾಕಲಾಗುತ್ತೆ..? ಅಂತ ನಾನು ಕೇಳಿದೆʼʼ ಎಂದು ಎಂಟಿಬಿ ಹೇಳಿದ್ದಾರೆ.
ಇದನ್ನೂ ಓದಿ | ಇನ್ಸ್‌ಪೆಕ್ಟರ್ ನಂದೀಶ್ ಸಾವು | ಸಚಿವ ಎಂಟಿಬಿ ಸ್ಪಷ್ಟೀಕರಣ ಕೊಡಬೇಕಾಗುತ್ತದೆ ಎಂದ ಗೃಹ ಸಚಿವ ಆರಗ ಜ್ಞಾನೇಂದ್ರ