ಬೆಂಗಳೂರು: ತಮ್ಮ ವಿರುದ್ಧ ಚಾಮರಾಜನಗರದಲ್ಲಿ ಕೇಳಿಬಂದಿರುವ ನೀರಾವರಿ ಉಪಕರಣ ಖರೀದಿ ಕಿಕ್‌ಬ್ಯಾಕ್ ಆರೋಪದಲ್ಲಿ ಸಮಗ್ರ ತನಿಖೆ ನಡೆಸುವಂತೆ ತೋಟಗಾರಿಕಾ ಸಚಿವ ಮುನಿರತ್ನ ಅವರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.
ತಮ್ಮ ಹಾಗೂ ಸರ್ಕಾರದ ವಿರುದ್ಧ ಕೆಟ್ಟ ಹೆಸರು ಇದರಿಂದ ಬರುತ್ತಿದ್ದು, ಕೂಡಲೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಚಾಮರಾಜನಗರ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.
ರಾಜ್ಯ ಸರ್ಕಾರದ ಮೇಲೆ ಈಗಾಗಲೆ 40% ಲಂಚ ಆರೋಪ ಹಾಗೂ ಇದರ ಹಿನ್ನೆಲೆಯಲ್ಲೆ ಹಿರಿಯ ಸಚಿವ ಕೆ.ಎಸ್. ಈಶ್ವರಪ್ಪ ರಾಜೀನಾಮೆ ಅಧ್ಯಾಯ ಮುಗಿಯುವ ಮುನ್ನವೇ ತೋಟಗಾರಿಕೆ ಸಚಿವ ಮುನಿರತ್ನ ವಿರುದ್ಧ 8.5% ಲಂಚ ಆರೋಪ ಜುಲೈ ಎರಡನೇ ವಾರದಲ್ಲಿ ಕೇಳಿಬಂದಿತ್ತು. ಈ ಕುರಿತು ಚಾಮರಾಜನಗರ ಹನಿ ನೀರಾವರಿ ವಿತರಕರ ಸಂಘದಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗಿತ್ತು.
8.5% Blr min’ ಎಂದರೆ ಸಚಿವ ಮುನಿರತ್ನಗೆ ಲಂಚ: ಹನಿ ನೀರಾವರಿ ವಿತರಕರ ಆರೋಪ
ರೈತರ ಜಮೀನಿನಲ್ಲಿ ಹನಿ ನೀರಾವರಿ ಅಳವಡಿಸಿಕೊಳ್ಳಲು ಪ್ರತಿ ವರ್ಷ ಕೇಂದ್ರ ಸರ್ಕಾರದಿಂದ ಹಾಗೂ ರಾಜ್ಯ ಸರ್ಕಾರದಿಂದ ಸಬ್ಸಿಡಿ ಹಣವನ್ನು ನೀಡಲಾಗುತ್ತಿದೆ. ಆದರೆ ಇತ್ತೀಚೆಗೆ ಕರ್ನಾಟಕದ ತೋಟಗಾರಿಕಾ ಸಚಿವರಾಗಿ ಅಧಿಕಾರ ವಹಿಸಿಕೊಂಡ ಮುನಿರತ್ನ ಅವರು ಎಲ್ಲ ಮಾರ್ಗದಿಂದಲೂ ಅಕ್ರಮವಾಗಿ ಹಣ ಮಾಡಲು ಶುರು ಮಾಡಿದ್ದಾರೆ. ಈ ಸಂಬಂಧ ರೈತರಿಗೆ ನೀಡಬೇಕಾದ ಸಬ್ಸಿಡಿ ಹಣದಲ್ಲಿ ಪರ್ಸೆಂಟೇಜ್ ಪಡೆಯುವ ಉದ್ದೇಶದಿಂದ ಹನಿ ನೀರಾವರಿ ನಿಯಮಗಳಲ್ಲಿ ಅನೇಕ ಬದಲಾವಣೆಗಳನ್ನು ಮಾಡಿ ಅದನ್ನು ಸರಿಪಡಿಸಲು ಇಷ್ಟು ಪರ್ಸೆಂಟೇಜ್ ಕೊಡಬೇಕು ಎಂದು ಕಂಪನಿಗಳಿಗೆ ತಾಕೀತು ಮಾಡಿದ್ದಾರೆ. ಕಂಪನಿಯ ಅಪ್ರುವಲ್ ಮಾಡಲು ಪ್ರತಿ ಕಂಪನಿಯಿಂದ 15 ಲಕ್ಷ ರೂ. ಬೇಡಿಕೆ ಇಟ್ಟಿರುವುದು ತಿಳಿದುಬಂದಿದೆ. ಈ ಸಂಬಂಧ ಹನಿ ನೀರಾವರಿ ಕಂಪನಿಗಳು ಡೀಲರ್‌ಗಳ ಬಿಲ್‌ನಲ್ಲಿ ಎಂಟೂವರೆ ಪರ್ಸೆಂಟ್ ಹಣವನ್ನು ಮಿನಿಸ್ಟರ್‌ಗೆ ನೀಡುವ ಪರ್ಸೆಂಟೇಜ್ ಎಂದು ನಮೂದಿಸಿ ಸ್ಟೇಟ್‌ಮೆಂಟ್‌ಗಳನ್ನು ಡೀಲರ್‌ಗಳಿಗೆ ಕೊಟ್ಟಿರುವುದು ಇದೀಗ ಎಲ್ಲೆಡೆ ಹರಿದಾಡಿತ್ತು.
ಈ ಸಂಬಂಧ ಮುಖ್ಯಮಂತ್ರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಜನರಲ್ಲಿ ಈ ಕುರಿತು ಜಾಗೃತಿ ಮೂಡಿಸಿ ಚಳವಳಿ ಮಾಡಲು ಮುಂದಾದಾಗ ಸಂಘವನ್ನು ಇಬ್ಭಾಗ ಮಾಡಿ ಕೆಲ ಡೀಲರ್‌ಗಳಿಗೆ ಆಮಿಷಗಳನ್ನು ಒಡ್ಡಿ ತಮ್ಮ ಮೇಲೆ ಬಂದಿರುವ ಆರೋಪದಿಂದ ಕಳಚಿಕೊಳ್ಳಲು ಪ್ರಯತ್ನಿಸಿದ್ದಾರೆ.
ಅವರು ಸಬ್ಸಿಡಿ ಹಣದಲ್ಲಿ ಎಂಟೂವರೆ ಪರ್ಸೆಂಟ್ ಬಡ ರೈತರಿಂದ ಬಂದಿರುವ ಹಣವನ್ನು ತೆಗೆದುಕೊಂಡು, ಇದಲ್ಲದೆ ತೋಟಗಾರಿಕೆ ಇಲಾಖೆಯಲ್ಲಿ ಕಮಿಷನರ್ ಆಗಿರುವ ಕಟಾರಿಯಾ ಅವರು ಎರಡೂವರೆ ಪರ್ಸೆಂಟ್ ಪಡೆದಿರುವುದು ಕೂಡ ಗುಟ್ಟಾಗಿ ಉಳಿದಿಲ್ಲ ಎಂದಿದ್ದರು.
1. ಹನಿ ನೀರಾವರಿ ದರ ಪಟ್ಟಿ ಪರಿಷ್ಕರಣೆ ಆಗಬೇಕು 2. ಎಲ್ಲ ರಾಜ್ಯಗಳಂತೆ ಕರ್ನಾಟಕದಲ್ಲೂ ಹನಿ ನೀರಾವರಿ ಕಾರ್ಯಾದೇಶವನ್ನು ವರ್ಷಪೂರ್ತಿ ನೀಡಬೇಕು ಹಾಗೂ 3. 2019ರ ಹಿಂದೆ ಇದ್ದಂತೆ ಡೀಲರ್ ಬಿಲ್‌ಗಳಿಗೆ ಅವಕಾಶ ನೀಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿತ್ತು.
ಜಿಲ್ಲಾಧಿಕಾರಿಗೆ ಮುನಿರತ್ನ ಪತ್ರ
ಹಗರಣದ ಆರೋಪ ತಮ್ಮನ್ನು ಸುತ್ತಿಕೊಳ್ಳುತ್ತಿರುವುದನ್ನು ಗಮನಿಸಿದ ಸಚಿವ ಮುನಿರತ್ನ ಇದೀಗ ಚಾಮರಾಜನಗರ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ರೈತರಿಗೆ ಸಬ್ಸಿಡಿ ನೀಡುವ ಹೆಸರಿನಲ್ಲಿ ಉತ್ಪಾದಕ ಕಂಪನಿಗಳು 8.5% ಕಮಿಷನ್ ಹಣ ಪಡೆಯಲಾಗುತ್ತಿದೆ ಎಂದು ನಮೂದಿಸಿರುವುದಾಗಿ ಆರೋಪಿಸಲಾಗಿದ್ದು, ಈ ಕುರಿತು ವರದಿಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.
ಇದರಿಂದಾಗಿ ನನ್ನ ಮತ್ತು ತೋಟಗಾರಿಕೆ ಇಲಾಖೆಗೆ ಹಾಗೂ ಸರ್ಕಾರಕ್ಕೆ ಕೆಟ್ಟ ಹೆಸರು ತರುವಂತಹ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಕೂಡಲೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿ ಕೂಡಲೆ ಮೊಕದ್ದಮೆ ದಾಖಲಿಸಿ, ರೈತರಿಗೆ ಮೋಸ ಮಾಡುವಂತಹ ತಪ್ಪಿತಸ್ಥರು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಅಂತಹವರ ವಿರುದ್ಧ ಕೂಡಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | ಕೈದಿ ನೋಡಲು ₹1,600 ಲಂಚ: ಪರಪ್ಪನ ಅಗ್ರಹಾರ ಜೈಲು ಸಿಬ್ಬಂದಿಗೆ ಗೃಹಸಚಿವರ ತರಾಟೆ