Site icon Vistara News

Mysore dasara | ಮೈಸೂರಿನಲ್ಲಿ ಐಎಸ್‍ಎಂಸಿಯಿಂದ ₹23 ಸಾವಿರ ಕೋಟಿ ಬಂಡವಾಳ ಹೂಡಿಕೆ: ಸಚಿವ ನಿರಾಣಿ

Mysore dasara

ಮೈಸೂರು: ಕೈಗಾರಿಕೆ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಸಾಕಷ್ಟು ಮುನ್ನಡೆ ಸಾಧಿಸುತ್ತಿರುವ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಹುರಾಷ್ಟ್ರೀಯ ಕಂಪನಿಯಾದ ಐಎಸ್‍ಎಂಸಿ 23 ಸಾವಿರ ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.

ದಸರಾ ಉತ್ಸವದ ಪ್ರಯುಕ್ತ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಮೈಸೂರು ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿಯಾಗಿ ಸೋಮವಾರ ಏರ್ಪಡಿಸಿದ್ದ ಕೈಗಾರಿಕಾ ದಸರಾ ಉದ್ಘಾಟಿಸಿ ಮಾತನಾಡಿ, ಐಎಸ್‍ಎಂಸಿ ಕಂಪನಿಯು ಸುಮಾರು 23 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದ್ದು, ಸೆಮಿಕಂಡಕ್ಟರ್ ಉತ್ಪಾದನಾ ಘಟಕ (ಫ್ಯಾಬ್) ಸ್ಥಾಪಿಸಲು ರಾಜ್ಯ ಸರ್ಕಾರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಇದರಿಂದ ಈ ಭಾಗದಲ್ಲಿ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜಧಾನಿ ಬೆಂಗಳೂರಿನಲ್ಲಿ ಈಗಾಗಲೇ ಸಾಕಷ್ಟು ಕೈಗಾರಿಕೆಗಳು ಸ್ಥಾಪನೆಯಾಗಿರುವುದರಿಂದ ನಮ್ಮ ಸರ್ಕಾರ 2 ಮತ್ತು 3ನೇ ಹಂತದ ನಗರಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚು ಒತ್ತು ಕೊಡುತ್ತಿದೆ. ಮೈಸೂರು ಕೂಡ ನಮ್ಮ ಆದ್ಯತೆಯ ನಗರಗಳಲ್ಲಿ ಒಂದಾಗಿದೆ. ೨ ಹಾಗೂ ೩ನೇ ಹಂತದ ನಗರಗಳಲ್ಲಿ ಬಂಡವಾಳ ಹೂಡಿಕೆ ಮಾಡಲು ಉದ್ಯಮಿಗಳು ಮುಂದಾಗಬೇಕು ಎಂದು ಮನವಿ ಮಾಡಿದರು.

ನವೆಂಬರ್ 2ರಿಂದ 4ರವರೆಗೆ ಬೆಂಗಳೂರಿನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಯಲಿದ್ದು, ಇದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಇತ್ತೀಚೆಗೆ ದಾವೋಸ್, ಅಮೇರಿಕ ಹಾಗೂ ಜಪಾನ್‍ಗೆ ಭೇಟಿ ನೀಡಿದ ವೇಳೆ ವಿಶ್ವದ ಮುಂಚೂಣಿ ಉದ್ಯಮಿಗಳನ್ನು ಭೇಟಿಯಾಗಿ ರಾಜ್ಯದಲ್ಲಿ ಬಂಡವಾಳ ಹೂಡಲು ಆಹ್ವಾನ ನೀಡಿದ್ದು, ಅನೇಕರು ಆಸಕ್ತಿ ತೋರಿದ್ದಾರೆ ಎಂದು ತಿಳಿಸಿದರು.

ಈ ಬಾರಿಯ ಹೂಡಿಕೆದಾರರ ಸಮಾವೇಶದಲ್ಲಿ ನಮಗೆ ಅಂದಾಜು 5 ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿಕೆಯಾಗಿ 10 ಲಕ್ಷ ಹುದ್ದೆಗಳು ಸೃಷ್ಟಿಯಾಗಲಿವೆ. ವಿಶ್ವದಲ್ಲೇ ಕೈಗಾರಿಕೆಗೆ ಹೊಸ ಮಾನ್ಯತೆ ತಂದುಕೊಟ್ಟ ನಾಲ್ವಡಿ ಕೃಷ್ಣರಾಜ ಒಡೆಯರ್ ನನಗೆ ಎಂದೆಂದಿಗೂ ಆದರ್ಶಪ್ರಾಯರು. ಈ ಸಂಸ್ಥಾನದಲ್ಲಿ ದಿವಾನರಾಗಿದ್ದ ಸರ್ ಎಂ.ವಿಶ್ವೇಶ್ವರಯ್ಯ ಅವರು ಕೂಡ ಪ್ರಾರ್ಥಸ್ಮರಣೀಯರು ಎಂದು ಸ್ಮರಿಸಿದರು.

ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವ ಸೋಮಶೇಖರ್, ಶಾಸಕರಾದ ಹರ್ಷವರ್ಧನ, ಎಲ್.ನಾಗೇಂದ್ರ, ಮೈಸೂರು ಮಹಾನಗರ ಪಾಲಿಕೆ ಮೇಯರ್ ಶಿವಕುಮಾರ್, ಜಿಲ್ಲಾಧಿಕಾರಿ ಬಗಾದಿ ಗೌತಮ್ ಮತ್ತಿತರರು ಉಪಸ್ಥಿತರಿದ್ದರು.

ದಸರಾ ಆಹಾರ ಮೇಳಕ್ಕೆ ಚಾಲನೆ
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ದಸರಾ ಆಹಾರ ಮೇಳಕ್ಕೆ ಸೋಮವಾರ ಚಾಲನೆ ನೀಡಲಾಗಿದ್ದು, 10 ದಿನಗಳವರೆಗೆ ಆಹಾರ ಮೇಳ ನಡೆಯಲಿದೆ. ಮೈಸೂರು ಮಸಾಲ ದೋಸೆ, ಉತ್ತರ ಕರ್ನಾಟಕ ಜೋಳದ ರೊಟ್ಟಿ, ಮಂಡ್ಯ ಸ್ಟೈಲ್ ನಾಟಿ ಕೋಳಿ ಸಾರು ಇನ್ನಿತರ ಸೇರಿ ಬಾಯಲ್ಲಿ ನೀರೂರಿಸುವ ವಿವಿಧ ಬಗೆಯ ಸಸ್ಯಾಹಾರ, ಮಾಂಸಾಹಾರ ಖಾದ್ಯಗಳು ಮೇಳದಲ್ಲಿ ಕಂಡುಬಂದವು.

ಇದನ್ನೂ ಓದಿ | Mysuru Dasara | ಮೈಸೂರಿನಲ್ಲೇ ತಯಾರಾದ ರೇಷ್ಮೆ ಸೀರೆಯುಟ್ಟು ಆಗಮಿಸಿದ ಮುರ್ಮು: ಇದರ ಬೆಲೆ ₹81,568

Exit mobile version