ಮಂಡ್ಯ: ಸಚಿವ ಕೆ.ಸಿ.ನಾರಾಯಣಗೌಡ ಕಾಂಗ್ರೆಸ್ ಸೇರ್ಪಡೆ ವದಂತಿ ಹಿನ್ನೆಲೆಯಲ್ಲಿ ಕೆ.ಆರ್.ಪೇಟೆಯಲ್ಲಿ ರಾಜಕೀಯ ಅಖಾಡ ರಂಗೇರಿದೆ. ಸಚಿವರ ಪಕ್ಷಾಂತರಕ್ಕೆ ಸ್ಥಳೀಯ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸುತ್ತಿರುವ ನಡುವೆ, ನಾರಾಯಣ ಗೌಡ, ಹೋಬಳಿವಾರು ಬೆಂಬಲಿಗರ ಸಭೆ ನಡೆಸಿ ಕ್ಷೇತ್ರದ ಜನರಿಗೆ ಬಾಡೂಟ ಆಯೋಜಿಸಿದ್ದಾರೆ. ಅಲ್ಲದೆ, ಈ ಬಾರಿಯ ಚುನಾವಣೆಯಲ್ಲಿ (Karnataka Election 2023) ಆಶೀರ್ವಾದ ಮಾಡುವಂತೆ ಕೋರುತ್ತಿದ್ದಾರೆ.
ಚುನಾವಣೆ ಘೋಷಣೆಗೂ ಮುನ್ನವೇ ಕ್ಷೇತ್ರದಲ್ಲಿ ಫುಲ್ ಅಲರ್ಟ್ ಆಗಿರುವ ನಾರಾಯಣ ಗೌಡ ಅವರು, ಕೆ.ಆರ್.ಪೇಟೆ ಕ್ಷೇತ್ರದ ಬೂಕನಕೆರೆ ಹೋಬಳಿಯಲ್ಲಿ ಬುಧವಾರ ಸಭೆ ನಡೆಸಿ, ಬಳಿಕ ಜನರಿಗೆ ಭರ್ಜರಿ ಬಾಡೂಟ ಹಾಕಿಸಿದ್ದಾರೆ. ಸಭೆಯಲ್ಲಿ ಮುಂದಿನ ಚುನಾವಣೆಯಲ್ಲಿ ತನಗೆ ಆಶೀರ್ವಾದ ಮಾಡುವಂತೆ ಜನರಲ್ಲಿ ಮನವಿ ಮಾಡಿರುವ ಸಚಿವರು, ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ಇನ್ನಷ್ಟು ಕೆಲಸಗಳು ಬಾಕಿ ಉಳಿದಿವೆ. ಇವೆಲ್ಲ ಪೂರ್ಣವಾಗಲು ಮತ್ತೊಮ್ಮೆ ತಮಗೆ ಬೆಂಬಲ ನೀಡಬೇಕು ಎಂದು ಕೋರಿದ್ದಾರೆ.
ಕೆ.ಆರ್.ಪೇಟೆಯನ್ನು ಮಾದರಿ ತಾಲೂಕಾಗಿ ಮಾಡಲು ಜನರು ಬೆಂಬಲಿಸಬೇಕು. ಕೋಳಿ ಕೂಗದೆ ಬೆಳಕು ಹರಿಯುವುದಿಲ್ಲ ಎಂಬುದು ಭ್ರಮೆ. ಕೆಲವರ ಕೂಗಾಟದಿಂದ ನಮಗೆ ಯಾವುದೇ ಭಯ ಇಲ್ಲ. ಯಾಕೆಂದರೆ ನಾನು ಹತ್ತಾರು ದೇಶ ನೋಡಿಕೊಂಡು ಬಂದಿದ್ದೇನೆ. ಇಂತಹ ಗೂಂಡಾಗಳನ್ನು ಸಾವಿರಾರು ಜನರನ್ನು ನೋಡಿದ್ದೇನೆ ಎಂದು ಪರೋಕ್ಷವಾಗಿ ಸ್ಥಳೀಯ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ಇದನ್ನೂ ಓದಿ | V. Somanna: ಪಕ್ಷ ಬಿಡಲು ಮುಂದಾಗಿರುವ ಸಚಿವ ವಿ. ಸೋಮಣ್ಣ ಜತೆ ಮಾತುಕತೆ: ಬಿ.ಎಸ್. ಯಡಿಯೂರಪ್ಪ ಹೇಳಿಕೆ
ಇತ್ತ ಕಾಂಗ್ರೆಸ್‌ನಲ್ಲಿಯೂ ತೀವ್ರ ವಿರೋಧ ಇದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ನಾರಾಯಣ ಗೌಡರು ತಮ್ಮ ಜತೆ ಈ ಬಗ್ಗೆ ಮಾತನಾಡಿಲ್ಲ ಎಂದು ಹೇಳಿದ್ದಾರೆ. ಅತ್ತ ಬಿಜೆಪಿಯವರು ಸಚಿವರು ಪಕ್ಷ ಬಿಡಲಾರರು ಎಂದು ಹೇಳುತ್ತಿದ್ದಾರೆ. ಆದರೆ, ಕಾಂಗ್ರೆಸ್ ಸೇರ್ಪಡೆ ಬಗ್ಗೆ ನಾರಾಯಣ ಗೌಡ ಅವರು ಯಾವುದೇ ಮಾಹಿತಿಯನ್ನೂ ಬಿಟ್ಟುಕೊಟ್ಟಿಲ್ಲ.