ಚಾಮರಾಜನಗರ: ಚಾಮರಾಜನಗರದ ಮಲೆ ಮಹದೇಶ್ವರ ದೇವಸ್ಥಾನದಲ್ಲಿ ಬುಧವಾರ (ಮಾ. 1) ಚಾಲನೆಗೊಂಡ “ವಿಜಯ ಸಂಕಲ್ಪ ರಥಯಾತ್ರೆ”ಗೆ (BJP Rathayatre) ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ಅನಾರೋಗ್ಯದ ಕಾರಣದಿಂದ ಗೈರು ಹಾಜರಾಗಿದ್ದರು. ಇದರ ಹೊರತಾಗಿ ಬೇರೆ ಏನೂ ಕಾರಣ ಇಲ್ಲ ಎಂದು ಮಾಜಿ ಸಚಿವ, ರಥಯಾತ್ರೆ ತಂಡದ ಉಸ್ತುವಾರಿ ಕೆ.ಎಸ್. ಈಶ್ವರಪ್ಪ ಸ್ಪಷ್ಟನೆ ನೀಡಿದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಮಿಷನ್ 150 ಗುರಿ ಹೊತ್ತಿರುವ ರಾಜ್ಯ ಬಿಜೆಪಿ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಸಂಚರಿಸುವ ಬೃಹತ್ ರಥ ಯಾತ್ರೆಯ ಭಾಗವಾದ “ವಿಜಯ ಸಂಕಲ್ಪ ರಥಯಾತ್ರೆ”ಗೆ (BJP Rathayatre) ಬುಧವಾರ (ಮಾ. 1) ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಚಾಮರಾಜನಗರದ ಮಲೆ ಮಹದೇಶ್ವರ ದೇವಸ್ಥಾನದಲ್ಲಿ ಚಾಲನೆ ಕೊಟ್ಟಿದ್ದರು. ಆದರೆ, ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಗೈರು ಹಾಜರಾಗಿದ್ದರು. ಈ ಬಗ್ಗೆ ಸಾಕಷ್ಟು ಚರ್ಚೆಗಳೂ ನಡೆದಿದ್ದವು. ಈ ಕಾರಣಕ್ಕೆ ಈಶ್ವರಪ್ಪ ಸ್ಪಷ್ಟೀಕರಣ ನೀಡಿದ್ದು, ಆರೋಗ್ಯ ಸರಿ ಇಲ್ಲದ ಕಾರಣ ಬಂದಿಲ್ಲ ಎಂದು ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಕೆ.ಎಸ್. ಈಶ್ವರಪ್ಪ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಸಚಿವ ವಿ. ಸೋಮಣ್ಣರಿಗೆ ಯಾವುದೇ ಮುಸುಕಿನ ಗುದ್ದಾಟ ಇಲ್ಲ. ರಾಜ್ಯ ಸುತ್ತುವುದಕ್ಕೂ ಆಯಾ ಕ್ಷೇತ್ರದಲ್ಲಿ ಓಡಾಡುವುದಕ್ಕೂ ವ್ಯತ್ಯಾಸ ಇದೆ. ನಾನು ಕೂಡ ಯಡಿಯೂರಪ್ಪ ಅವರ ಬಹಳಷ್ಟು ಕಾರ್ಯಕ್ರಮಕ್ಕೆ ಹೋಗಿಲ್ಲ. ಅದರಿಂದ ಇದನ್ನು ಮುಸುಕಿನ ಗುದ್ದಾಟ ಎಂದು ಹೇಳೋಕೆ ಆಗುತ್ತದೆಯೇ? ಆರೋಗ್ಯದ ಕಾರಣದಿಂದ ಮಾತ್ರ ಸೋಮಣ್ಣ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿದ್ದ ತಮಿಳುನಾಡು ಮೂಲದ ವ್ಯಕ್ತಿಯನ್ನು ಶೂಟ್ ಮಾಡಿ ಕೊಂದ ಪೊಲೀಸ್; ಕಳವಳಕಾರಿ ಎಂದ ರಾಯಭಾರಿ ಕಚೇರಿ
ಸೋಲುವ ಭಯದಿಂದ ಕೋಲಾರಕ್ಕೆ ಓಡಿರುವ ಸಿದ್ದರಾಮಯ್ಯ- ಈಶ್ವರಪ್ಪ
ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಕೋಲಾರದಲ್ಲಿ ಸ್ಪರ್ಧೆ ಮಾಡುವಂತೆ ಅವರ ಹೈಕಮಾಂಡ್ ಹೇಳಿದೆಯೇ? ಚುನಾವಣೆ ಸೋಲುವ ಭಯದಿಂದ ಅವರು ಕೋಲಾರಕ್ಕೆ ಹೋಗಿದ್ದಾರೆ. ಇದೀಗ ಇವರನ್ನು ಬಿಜೆಪಿಗಿಂತ ಕಾಂಗ್ರೆಸ್ ಪಾರ್ಟಿ ಒಳಗಿರುವವರೇ ಸೋಲಿಸುತ್ತಾರೆ. ನಿಮಗೆ ಸಿಎಂ ಸ್ಥಾನದ ಪ್ರತಿಸ್ಪರ್ಧಿ ಎಂಬ ಕಾರಣಕ್ಕೆ ಆಗ ಡಾ. ಜಿ. ಪರಮೇಶ್ವರ್ ಅವರನ್ನು ಸೋಲಿಸಿದಿರಿ. ಅಲ್ಲದೆ, ರಮೇಶ್ ಕುಮಾರ್ ಮೂಲಕ ಮುನಿಯಪ್ಪ ಅವರನ್ನೂ ಸೋಲಿಸಿದಿರಿ. ಒಂದು ಕಡೆ ಒಕ್ಕಲಿಗರು, ದಲಿತರು ಸಿದ್ದರಾಮಯ್ಯ ಅವರನ್ನು ಸೋಲಿಸಲು ಕಾಯುತ್ತಿದ್ದಾರೆ. ಈ ಎರಡು ಸಮುದಾಯದವರು ಕೈ ಬಿಟ್ಟಿರುವುದಕ್ಕೆ ಮುಸ್ಲಿಂ ಓಲೈಕೆಗೆ ಮುಂದಾಗಿದ್ದಾರೆ ಎಂದು ಕೆ.ಎಸ್. ಈಶ್ವರಪ್ಪ ಹೇಳಿದರು.
ಸಿದ್ದರಾಮಯ್ಯ ಒಬ್ಬ ಮಿಮಿಕ್ರಿ ಆರ್ಟಿಸ್ಟ್ ಆಗಬೇಕಿತ್ತು. ಅಲ್ಲದೆ, ಅವರು ಪ್ರಧಾನಿ ಮೋದಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ,, ಸಿಎಂ ಬಸವರಾಜ ಬೊಮ್ಮಾಯಿಗೆ ಏಕವಚನದಲ್ಲಿ ಬಯ್ಯುತ್ತಾರೆ. ಅದನ್ನು ನಾನು ಒಪ್ಪಲ್ಲ. 224 ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲೇ ಸ್ಪರ್ಧೆ ಮಾಡಿದರೂ ಗೆಲ್ಲುತ್ತೇನೆ ಎಂದು ಹೇಳಿಕೊಳ್ಳುತ್ತಾರೆ. ಹಾಗಿದ್ದವರು ಚಾಮುಂಡೇಶ್ವರಿ ಕ್ಷೇತ್ರವನ್ನು ಬಿಟ್ಟಿದ್ದು ಏಕೆ? ಕಾರ್ಯಕರ್ತರ ವಿಶ್ವಾಸ ಕಳೆದುಕೊಂಡವರನ್ನು ನಾಯಕ ಅಂತ ಹೇಗೆ ಕರೆಯುತ್ತಾರೆ? ಎಂದು ಈಶ್ವರಪ್ಪ ಹೇಳಿದರು.
ಈಶ್ವರಪ್ಪಗೆ ಯಾಕೆ ಸಚಿವ ಸ್ಥಾನ ಸಿಗಬೇಕು. ಆಶಾಭಾವನೆಯಲ್ಲಿ ಇರಬೇಕಾಗುತ್ತದೆ. ಸಿಗಲಿಲ್ಲ ಅಂದರೆ ನಿರಾಸೆ ಆಗಬಾರದು, ನಿರಾಸೆ ಮಾಡಿಕೊಂಡರೆ ರಾಜಕಾರಣಿ ಆಗೋಕೆ ಆಗಲ್ಲ ಎಂದು ತಮಗೆ ಸಚಿವ ಸ್ಥಾನ ಸಿಗದಿದ್ದರ ಬಗ್ಗೆ ಈಶ್ವರಪ್ಪ ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ: Operation hasta?: ಮಂಡ್ಯದಲ್ಲಿ ಕಾದಿದ್ಯಾ ಬಿಜೆಪಿಗೆ ಬಿಗ್ ಶಾಕ್, ಕಾಂಗ್ರೆಸ್ ಸೇರ್ತಾರಾ ಸಚಿವ ನಾರಾಯಣ ಗೌಡ?
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಕೈಯಲ್ಲೂ ಚಾಕು ಇದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು ಎಂದು ಅವರ ಮುಂದೆ ಇಬ್ಬರೂ ತಬ್ಬಿಕೊಂಡರು. ಆದರೆ, ಯಾವಾಗ ಇಬ್ಬರು ಪರಸ್ಪರ ಚಾಕುವನ್ನು ಚುಚ್ಚಿ ಕೊಳ್ಳುತ್ತಾರೋ ಗೊತ್ತಿಲ್ಲ ಎಂದು ಈಶ್ವರಪ್ಪ ಹೇಳಿದರು.