ಚಾಮರಾಜನಗರ: ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ (Lok Sabha Election 2024) ಭರಾಟೆ ಜೋರಾದ ಬೆನ್ನಲ್ಲೇ ಅಭ್ಯರ್ಥಿಗಳು, ಎದುರಾಳಿ ಪಕ್ಷದ ನಾಯಕರ ವಿರುದ್ಧ ಆರೋಪ, ಟೀಕೆಗಳು ಕೂಡ ಶುರುವಾಗಿದೆ. ಅಭ್ಯರ್ಥಿಗಳ ವಿರುದ್ಧ ಪ್ರಕರಣಗಳನ್ನೂ ದಾಖಲಿಸಲಾಗುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ, ಚಾಮರಾಜನಗರ (Chamarajanagar) ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ (Sunil Bose) ಅವರ ವಿರುದ್ಧ ಬಿಜೆಪಿಯು (BJP) ಜಿಲ್ಲಾ ಚುನಾವಣಾಧಿಕಾರಿಗೆ ದೂರು ನೀಡಿದೆ.
“ಸುನೀಲ್ ಬೋಸ್ ಅವರು ಚುನಾವಣಾ ಆಯೋಗಕ್ಕೆ ನಾಮಪತ್ರ ಸಲ್ಲಿಸುವ ವೇಳೆ ಅಫಿಡವಿಟ್‌ನಲ್ಲಿ ಮಾಹಿತಿ ಮರೆಮಾಚಿದ್ದಾರೆ. ವೈವಾಹಿಕ ಜೀವನದ ಬಗ್ಗೆ ಅವರು ಮಾಹಿತಿಯನ್ನು ಮರೆಮಾಚಿದ್ದಾರೆ. ಪ್ರಮಾಣಪತ್ರದಲ್ಲಿ ಹೆಂಡತಿ, ಮಕ್ಕಳು ಹಾಗೂ ಹಿಂದು ಅವಿಭಕ್ತ ಕುಟುಂಬದ ಕುರಿತು ಪ್ರಮುಖ ಮಾಹಿತಿ ಮುಚ್ಚಿಟ್ಟಿದ್ದಾರೆ. ಹಾಗಾಗಿ, ಅವರು ಸಲ್ಲಿಸಿರುವ ನಾಮಪತ್ರವನ್ನು ತಿರಸ್ಕರಿಸಬೇಕು” ಎಂಬುದಾಗಿ ಬಿಜೆಪಿಯ ನಾರಾಯಣ್ ಪ್ರಸಾದ್ ಎಂಬುವರು ಜಿಲ್ಲಾ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.
“ಸುನೀಲ್ ಬೋಸ್ ಅವರು ಸಲ್ಲಿಸಿದ ನಾಮಪತ್ರದಲ್ಲಿ ಹೆಂಡತಿ, ಮಕ್ಕಳು ಹಾಗೂ ತಂದೆ-ತಾಯಿಯ ಆಸ್ತಿ ವಿವರ ಘೋಷಣೆ ಮಾಡಿಲ್ಲ. ಹಾಗಾಗಿ ಅವರ ನಾಮಪತ್ರವನ್ನು ಅಸಿಂಧುಗೊಳಿಸಬೇಕು” ಎಂಬುದಾಗಿಯೂ ಬಿಜೆಪಿ ದೂರಿದೆ. ಅಷ್ಟೇ ಅಲ್ಲ, ಸುನೀಲ್ ಬೋಸ್ ಅವರು ಹೆಂಡತಿ, ಮಕ್ಕಳ ಜತೆಗಿರುವ ಫೋಟೊಗಳನ್ನು ಲಗತ್ತಿಸಿ ದೂರು ನೀಡಿದ್ದಾರೆ. ಹಾಗಾಗಿ, ಚುನಾವಣೆ ಆಯೋಗದ ಮುಂದಿನ ನಡೆ, ಪರಿಶೀಲನೆಗೆ ಬಗ್ಗೆ ಹೆಚ್ಚಿನ ಕುತೂಹಲ ಮೂಡಿದೆ.
ಸಚಿವ ಮಹದೇವಪ್ಪ ಅವರ ಪುತ್ರರಾಗಿರುವ ಸುನೀಲ್ ಬೋಸ್ ಅವರಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗುತ್ತಲೇ ಅವರ ವಿರುದ್ಧ ಆಕ್ರೋಶ ಕೇಳಿಬಂದಿತ್ತು. ಗೋ ಬ್ಯಾಕ್ ಸುನೀಲ್ ಬೋಸ್ ಎಂಬ ಅಭಿಯಾನವೇ ಆರಂಭವಾಗಿತ್ತು. ಪಕ್ಷದಲ್ಲಿಯೇ ಭಿನ್ನಾಭಿಪ್ರಾಯ ಉಂಟಾಗಿತ್ತು. ಇದರ ಬೆನ್ನಲ್ಲೇ, ಬಿಜೆಪಿ ದೂರು ನೀಡಿರುವುದು ಸುನೀಲ್ ಬೋಸ್ ಅವರಿಗೆ ಹಿನ್ನಡೆ ಎಂದೇ ಹೇಳಲಾಗುತ್ತಿದೆ.
ಇದನ್ನೂ ಓದಿ: HD Kumaraswamy: ಡಿಕೆಶಿ ನೋಟು, ಡಾಕ್ಟರ್‌ಗೆ ವೋಟು; ಬಾವನ ಗೆಲ್ಲಿಸಲು ಎಚ್‌ಡಿಕೆ ಪ್ಲಾನ್!