ದಾವಣಗೆರೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ತಮ್ಮನ ಮಗ ಚಂದ್ರಶೇಖರ್ (Missing Case death mystery) ಅವರ ಪಾರ್ಥಿವ ಶರೀರದ ಮೆರವಣಿಗೆಯು ಹೊನ್ನಾಳಿಯ ಹಲವು ಬೀದಿಗಳಲ್ಲಿ ನಡೆದಿದ್ದು, ಸಾರ್ವಜನಿಕರು ಅಂತಿಮ ದರ್ಶನ ಪಡೆದುಕೊಂಡರು.
ಶುಕ್ರವಾರ (ನ.೪) ಬೆಳಗ್ಗೆಯಿಂದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಸೇರಿದಂತೆ ಹಲವು ಮುಖಂಡರು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದ್ದರು. ಅದಾದ ಬಳಿಕ ಮಧ್ಯಾಹ್ನದ ವೇಳೆಗೆ ಪಾರ್ಥಿವ ಶರೀರದ ಅಂತಿಮ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಕುಂದೂರಿನಿಂದ ಮೆರವಣಿಗೆ ಮೂಲಕ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗಲಾಗಿದ್ದು, ಸಾರ್ವಜನಿಕರು ನಮನ ಸಲ್ಲಿಸಿದರು. ಈ ವೇಳೆ ಕೆಲವು ಕಾರ್ಯಕರ್ತರಾದಿಯಾಗಿ ನಾಗರಿಕರು ಕಂಬನಿ ಮಿಡಿದರು.
ಹೊನ್ನಾಳಿ ಮಠದ ಸರ್ಕಲ್‌ನಿಂದ ಮೆರವಣಿಗೆ ಆರಂಭವಾಗಿ ಹೊನ್ನಾಳಿ ಪಟ್ಟಣದ ರಾಯಣ್ಣ ವೃತ್ತ, ಟಿಬಿ ಸರ್ಕಲ್‌ವರೆಗೂ ಸಾಗಿದೆ. ಬಳಿಕ ನೇರವಾಗಿ ಕುಂದೂರು ಗ್ರಾಮಕ್ಕೆ ಕರೆತರಲಾಗುತ್ತಿದೆ. ಕುಂದೂರು ಗ್ರಾಮದ ತೋಟದ ಮನೆಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
೨೦ ಕಿ.ಮೀ. ಅಂತಿಮ ಯಾತ್ರೆ
ಹೊನ್ನಾಳಿ ಪಟ್ಟಣದ ೨೦ ಕಿ.ಮೀ ವರೆಗೆ ಅಂತಿಮ ಯಾತ್ರೆ ಮೆರವಣಿಗೆಯನ್ನು ನಡೆಸಲಾಗುತ್ತಿದ್ದು, ಸಾವಿರಾರು ಜನ ಪಾಲ್ಗೊಂಡು ಚಂದ್ರಶೇಖರ್‌ಗೆ ಜೈಕಾರ ಕೂಗಿದರು. ಶಾಸಕ ಎಂ.ಪಿ. ರೇಣುಕಾಚಾರ್ಯ ಸಹ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು, ಚಂದ್ರಶೇಖರ್ ಅವರ ಕೊನೇ ಯಾತ್ರೆಯಲ್ಲಿ ಹತ್ತಿರವೇ ಇದ್ದು ನೋಡಿಕೊಳ್ಳುತ್ತಿದ್ದಾರೆ.
ಪೂರ್ಣಗೊಂಡ ಅಂತ್ಯಕ್ರಿಯೆ ಸಿದ್ಧತೆ
ರೇಣುಕಾಚಾರ್ಯ ಸ್ವಗ್ರಾಮ ಕುಂದೂರಿನಲ್ಲಿರುವ ತೋಟದಲ್ಲಿ ಅಂತ್ಯಕ್ರಿಯೆಯನ್ನು ನೆರವೇರಿಸಲಾಗುವುದು. ಮೃತ ಚಂದ್ರಶೇಖರ್ ಅಂತ್ಯಸಂಸ್ಕಾರಕ್ಕೆ ಈಗಾಗಲೇ ಗ್ರಾಮಸ್ಥರು ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದಾರೆ. ಜಂಗಮ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಲಿದೆ. ಧಾರ್ಮಿಕ ವಿಧಿವಿಧಾನಕ್ಕೆ ತಯಾರಿ ಮಾಡಿಕೊಳ್ಳಲಾಗಿದೆ. ಈಗಾಗಲೇ ಜಂಗಮ ಗುರುಗಳು ಮುಂದಾಳತ್ವದಲ್ಲಿ ಪಾಯ ತೆಗೆಯಲಾಗಿದೆ.
ಅಜ್ಜಿ-ತಾತನ ಸಮಾಧಿ ಪಕ್ಕದಲ್ಲೇ ಅಂತ್ಯ ಸಂಸ್ಕಾರ
ಚಂದ್ರಶೇಖರ್ ಅವರ ಅಜ್ಜಿ-ತಾತನ (ಎಂ.ಪಿ. ರೇಣುಕಾಚಾರ್ಯ ಅಪ್ಪ-ಅಮ್ಮ) ಸಮಾಧಿ ಪಕ್ಕದಲ್ಲಿಯೇ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ | Missing Case | ವಾರ ಬಿಟ್ಟು ಬರುತ್ತೇನಮ್ಮಾ ಎಂದವನು ಬಾರದ ಲೋಕಕ್ಕೆ ಹೋದ, ಇನ್ನು ಗಂಡನ ಜತೆಯೇ ಇರುವೆ: ಅನಿತಾ