Site icon Vistara News

Missing Case | ಚಂದ್ರಶೇಖರ್‌ ನಾಪತ್ತೆ ಕೇಸ್‌ಗೆ ಟ್ವಿಸ್ಟ್‌; ತುಂಗಾ ಮೇಲ್ದಂಡೆ ನಾಲೆಗೆ ಬಿದ್ದ ಕಾರು?

honnali chandru missing case 3

ದಾವಣಗೆರೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ಸಹೋದರ ಎಂ.ಪಿ. ರಮೇಶ್ ಪುತ್ರ‌ ಚಂದ್ರಶೇಖರ್‌ ನಾಪತ್ತೆ ಪ್ರಕರಣಕ್ಕೆ (Missing Case) ಟ್ವಿಸ್ಟ್‌ ಸಿಕ್ಕಿದ್ದು, ಹೊನ್ನಾಳಿ ಹೊರ ವಲಯದ ತುಂಗಾ ಮೇಲ್ದಂಡೆ ನಾಲೆ ಬಳಿ ಕಾರಿನ ಬಿಡಿ ಭಾಗಗಳು ಪತ್ತೆಯಾಗಿವೆ. ಈ ಹಿನ್ನೆಲೆ ಸ್ಥಳಕ್ಕೆ ಬಂದಿರುವ ರೇಣುಕಾಚಾರ್ಯ ಗೋಳಾಡಿದ್ದಾರೆ.

ತುಂಗಾ ಮೇಲ್ದಂಡೆ ನಾಲೆ ಬಳಿ ಸೇರಿರುವ ಜನಸ್ತೋಮ

ತುಂಗಾ ಮೇಲ್ದಂಡೆ ನಾಲೆ ಬಳಿ ಕಾರಿನ ಬಿಡಿ ಭಾಗಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ತುಂಗಾ ನಾಲೆಗೆ ಕಾರು ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೆ, ಮುಳುಗು ತಜ್ಞರನ್ನೂ ಕರೆಸಿಕೊಳ್ಳಲಾಗುತ್ತಿದೆ. ಕೆಲವು ಸ್ಥಳೀಯರು ನೀರಿಗೆ ಧುಮುಕಿ ಹುಡುಕಾಡುತ್ತಿದ್ದಾರೆನ್ನಲಾಗಿದೆ. ಅಲ್ಲದೆ, ಸ್ಥಳಕ್ಕೆ ಕ್ರೇನ್‌ ತರಿಸಿಕೊಳ್ಳಲಾಗಿದ್ದು, ಬಿಳಿ ಬಣ್ಣದ ಕಾರನ್ನು ಮೇಲಕ್ಕೆತ್ತುವ ಕೆಲಸವನ್ನು ಮಾಡಲಾಗುತ್ತಿದೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ರೋಧಿಸುತ್ತಿರುವ ಶಾಸಕ ರೇಣುಕಾಚಾರ್ಯ
ತುಂಗಾ ಮೇಲ್ದಂಡೆ ನಾಲೆ ಬಳಿ ಕಾರಿನ ಬಿಡಿ ಭಾಗಗಳು ಪತ್ತೆಯಾಗಿದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಶಾಸಕ ರೇಣುಕಾಚಾರ್ಯ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅಲ್ಲಿ ಸೇರಿದ್ದ ಆಪ್ತರು, ಕಾರಿನ ಬಿಡಿಭಾಗಗಳು ಪತ್ತೆಯಾಗಿದ್ದು, ನಾಲೆಗೆ ಕಾರು ಬಿದ್ದಿರಬಹುದು ಎಂಬ ಶಂಕೆ ಇದೆ. ಹುಡುಕಾಟ ನಡೆಯುತ್ತಿದೆ ಎಂದು ಹೇಳಿದ್ದಾರೆ. ಇದನ್ನು ಕೇಳುತ್ತಿದ್ದಂತೆ ತೀವ್ರ ಆಘಾತಗೊಂಡ ರೇಣುಕಾಚಾರ್ಯ ತಲೆ ಚಚ್ಚಿಕೊಳ್ಳುತ್ತಾ, “ಅಯ್ಯೋ…ಚಂದ್ರು.. ಮಗನೇ ನಿನಗೇನಾಯ್ತು..? ನನಗೆ ನನ್ನ ಮಗ ಬೇಕು.. ಬದುಕಿಸಿ ಕೊಡಿ.. ಅವನಿಗೆ ಏನೂ ಆಗದಿರಲಿ..” ಎಂದು ಅಲ್ಲಿಯೇ ಗೋಳಿಟ್ಟಿದ್ದಾರೆ.

ತುಂಗಾ ಮೇಲ್ದಂಡೆ ನಾಲೆ

ಇದನ್ನೂ ಓದಿ | Missing Case | ರೇಣುಕಾಚಾರ್ಯ ತಮ್ಮನ ಪುತ್ರ ಕಾಣೆ ಪ್ರಕರಣ; 4 ಆಯಾಮದಲ್ಲಿ ತನಿಖೆ, ಸ್ವಿಫ್ಟ್‌ ಕಾರಿಗಾಗಿ ಶೋಧ

ಸುರಹೊನ್ನೆಯಿಂದ ಮುಂದಿನ ಸುಳಿವಿರಲಿಲ್ಲ
ಭಾನುವಾರ (ಅ.೩೦) ರಾತ್ರಿ ಚಂದ್ರಶೇಖರ್ ಕಾರು ಶಿವಮೊಗ್ಗ-ನ್ಯಾಮತಿ ಮಧ್ಯೆ ಹೋಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶಿವಮೊಗ್ಗದಿಂದ ಬಂದ ಕಾರು ಸುರಹೊನ್ನೆ ಬಳಿ ಹಾದು ಹೋಗಿರುವುದು ಕಂಡುಬಂದಿದೆ. ಆದರೆ, ಸುರಹೊನ್ನೆಯಿಂದ ಹೊನ್ನಾಳಿಗೆ ಹೋಗಿರುವ ಬಗ್ಗೆ ಸುಳಿವು ಸಿಕ್ಕಿರಲಿಲ್ಲ.

ಚಂದ್ರಶೇಖರ್ ತೆಗೆದುಕೊಂಡು ಹೋಗಿದ್ದ ವೈಟ್‌ ಕ್ರೆಟಾ ಕಾರು ಭಾನುವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಸುರಹೊನ್ನೆ ಬಳಿ ಹಾದು ಹೋಗಿರುವ ವಿಡಿಯೊ ಮಾತ್ರ ಲಭ್ಯವಾಗಿತ್ತು. ಸುರಹೊನ್ನೆ ಬಳಿ ಎರಡು ಕಾರು ಜತೆಯಲ್ಲಿ ಹಾದು ಹೋಗಿವೆ. ಒಂದು ಕಾರು ಚಂದ್ರಶೇಖರ್ ಅವರದ್ದು ಎನ್ನಲಾಗಿದ್ದು, ಇನ್ನೊಂದು ಕಾರು ಯಾರದ್ದು ಎಂಬುವುದರ ಬಗ್ಗೆಯೂ ತನಿಖೆ ನಡೆದಿತ್ತು. ಸುರಹೊನ್ನೆಯಿಂದ ಹೊನ್ನಾಳಿಗೆ ಕಾರು ಬಂದ ಬಗ್ಗೆ ಯಾವುದೇ ಮಾಹಿತಿ ದೊರೆಯದ ಹಿನ್ನೆಲೆಯಲ್ಲಿ ಹಲವು ಅನುಮಾನ ಮೂಡಿತ್ತು.

ನಾಪತ್ತೆಗೂ ಮುನ್ನ ವಿನಯ್‌ ಗುರೂಜಿ ಆಶೀರ್ವಾದ ಪಡೆದಿದ್ದ ಚಂದ್ರು
ಕಳೆದ ಭಾನುವಾರ ಚಂದ್ರಶೇಖರ್‌ ಶಿವಮೊಗ್ಗದ ಗೌರಿಗದ್ದೆಗೆ ಹೋಗಿ ವಿನಯ್ ಗುರೂಜಿ ಆಶೀರ್ವಾದ ಪಡೆದಿದ್ದರು. ಜತೆಗೆ ಶಿವಮೊಗ್ಗದಲ್ಲಿ ಸ್ನೇಹಿತರನ್ನು ಮಾತನಾಡಿಸಿ ಹೊನ್ನಾಳಿಗೆ ಬಂದಿದ್ದರು ಎಂದು ತಿಳಿದು ಬಂದಿದೆ. ಆ ಬಳಿಕ ಭಾನುವಾರ ಸಂಜೆ ನಾಪತ್ತೆಯಾದವರು ಇನ್ನೂ ಸಿಕ್ಕಿಲ್ಲ. ಹೊನ್ನಾಳಿಯಲ್ಲಿ ಸೋಮವಾರ (ಅ.31) ಫೋನ್‌ ಸ್ವಿಚ್ಡ್‌ ಆಫ್‌ ಆಗಿದೆ. ನಂತರ ಇದುವರೆಗೂ ಫೋನ್‌ ಆನ್‌ ಆಗಿಲ್ಲ. ಆದರೆ, ಅಧ್ಯಾತ್ಮದ ಬಗ್ಗೆ ಚಂದ್ರಶೇಖರ್‌ ಅವರಿಗೆ ಒಲವಿದ್ದು, ಅವರು ಮೈಸೂರು ಇಲ್ಲವೇ ಚಾಮರಾಜನಗರ ಅರಣ್ಯ ಭಾಗದಲ್ಲಿ ಇದ್ದಾರೆಂಬ ಶಂಕೆ ಮೇರೆಗೂ ತನಿಖೆ ನಡೆದಿದೆ.

ಹೊನ್ನಾಳಿ ಪೊಲೀಸರಿಂದ ತೀವ್ರ ಹುಡುಕಾಟ ನಡೆಸಿದ್ದು, ಮನೆಯಲ್ಲಿ ರೇಣುಕಾಚಾರ್ಯ ಅವರ ಕುಟುಂಬ ಆತಂಕಗೊಂಡಿದ್ದಾರೆ. ಹೊರಗೆ ಹೋಗಬೇಕಾದರೆ ಯಾವಾಗಲೂ ಸ್ನೇಹಿತರೊಂದಿಗೆ ಹೋಗುತ್ತಿದ್ದವನು ಈ ಬಾರಿ ಒಬ್ಬನೇ ಹೋಗಿದ್ದಾನೆ ಎಂದು ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಚಂದ್ರು ಪೋಷಕರು ದೂರು ನೀಡಿದ್ದರು.

ಸಿಪಿಐ ದೇವರಾಜ್ ನೇತೃತ್ವದ ತಂಡ
ಮಣಿಪಾಲ ಠಾಣೆಯ ಸಿಪಿಐ ದೇವರಾಜ್ ಅವರನ್ನು ಈ ಪ್ರಕರಣ ಸಂಬಂಧ ಜಿಲ್ಲಾ ಪೊಲೀಸರು ಕರೆಸಿಕೊಂಡಿದ್ದರು. ಈ ಮೊದಲು ಹೊನ್ನಾಳಿಯಲ್ಲಿ‌ ಇವರು ಸಿಪಿಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ತಿಂಗಳ ಹಿಂದಷ್ಟೇ ವರ್ಗಾವಣೆಯಾಗಿ ಮಣಿಪಾಲ್ ಠಾಣೆಗೆ ಹೋಗಿದ್ದರು. ದಾವಣಗೆರೆಯಲ್ಲಿ ಡಿಸಿಐಬಿ ಬ್ರಾಂಚ್‌ನಲ್ಲಿ ವಿವಿಧ ಪ್ರಕರಣಗಳನ್ನು ನಿರ್ವಹಿಸಿದ್ದ ದೇವರಾಜ್ ಅವರನ್ನು ಪುನಃ ಕರೆಸಿಕೊಳ್ಳಲಾಗಿದ್ದು, ಅವರ ನೇತೃತ್ವದಲ್ಲಿ ತಂಡವೊಂದನ್ನು ರಚನೆ ಮಾಡಲಾಗಿತ್ತು. ಈಗ ತುಂಗಾ ಮೇಲ್ದಂಡೆ ನಾಲೆ ಬಳಿ ಕಾರಿನ ಬಿಡಿಭಾಗಗಳು ಪತ್ತೆಯಾಗಿದ್ದು, ನಾಲೆಗೆ ಬಿದ್ದಿರುವ ಶಂಕೆ ಮೇರೆಗೆ ಹುಡುಕಾಟ ನಡೆಯುತ್ತಿದೆ.

ಇದನ್ನೂ ಓದಿ | Missing case | ಅಧ್ಯಾತ್ಮದ ಕಡೆ ಹೆಚ್ಚು ಒಲವು ಹೊಂದಿದ್ದ ಚಂದ್ರಶೇಖರ್; ಮೈಸೂರು ಭಾಗದಲ್ಲಿರುವ ಶಂಕೆ

Exit mobile version