ದಾವಣಗೆರೆ: “ಶಿವಮೊಗ್ಗದಲ್ಲಿ ನಾನು ಒಬ್ಬಳೇ ಇರೋದು. ನನ್ನ ಮಗ ಬಂದು ನೋಡಿಕೊಂಡು ಹೋಗುತ್ತಿದ್ದ. ಇನ್ನೊಂದು ವಾರ ಬಿಟ್ಟು ಬರುತ್ತೇನೆ ಅಮ್ಮಾ ಎಂದು ಹೇಳಿದ್ದ. ಈಗ ಬಾರದ ಲೋಕಕ್ಕೆ ಹೋಗಿದ್ದಾನೆ” ಎಂದು ಹೇಳುವಾಗ ಚಂದ್ರಶೇಖರ್ ತಾಯಿ ಬಿಕ್ಕಿ ಬಿಕ್ಕಿ ಅತ್ತರು. ಮಗನ (Missing Case death mystery) ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಅವರ ತಾಯಿ ಅನಿತಾ ಗದ್ಗದಿತರಾಗಿದ್ದು, ದುಃಖದಲ್ಲಿ ಮುಳುಗಿಹೋಗಿದ್ದಾರೆ.
ತನ್ನ ಮಗ ಇಲ್ಲ ಎಂಬ ಸುದ್ದಿಯನ್ನು ಅವರಿಗೆ ಇನ್ನೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ಈವರೆಗೆ ಒಬ್ಬಂಟಿಯಾಗಿದ್ದ ತನಗೆ ಇದ್ದ ಏಕೈಕ ಆಸರೆಯೂ ಈಗ ಕಮರಿಹೋಯಿತಲ್ಲ ಎಂಬ ಭಯ, ಆತಂಕ ಆ ತಾಯಿಯ ಕಣ್ಣುಗಳಲ್ಲಿ ಕಾಣುತ್ತಿತ್ತು. “ನನಗೆ ಆರೋಗ್ಯ ಸಮಸ್ಯೆ ಇರುವುದರಿಂದ ಚಿಕಿತ್ಸೆ ಪಡೆಯುತ್ತಿದ್ದೇನೆ. ಚಂದ್ರಶೇಖರ್ ತಿಂಗಳಿಗೊಮ್ಮೆ ಬಂದು ನೋಡಿಕೊಂಡು ಹೋಗುತ್ತಿದ್ದ. ಕಳೆದ ತಿಂಗಳಷ್ಟೇ ಚಂದ್ರು ಶಿವಮೊಗ್ಗಕ್ಕೆ ಬಂದು ಮಾತನಾಡಿಸಿಕೊಂಡು ಹೋಗಿದ್ದ. ಇನ್ನೊಂದು ವಾರ ಬಿಟ್ಟು ಬರುತ್ತೇನಮ್ಮ ಎಂದು ಈಚೆಗೆ ಹೇಳಿದ್ದ. ಆದರೆ, ಈಗ ಅವನು ಬಾರದ ಲೋಕಕ್ಕೆ ಹೋಗಿದ್ದಾನೆ” ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ನನ್ನ ಕಷ್ಟ, ಸುಖ ಎಲ್ಲವನ್ನೂ ಮಗನೇ ನೋಡಿಕೊಳ್ಳುತ್ತಿದ್ದ. ಶಿವಮೊಗ್ಗದಲ್ಲಿನ ನನ್ನ ಮನೆಗೆ ದಿನಸಿಯನ್ನು ಸಹ ಅವನೇ ತಂದುಕೊಡುತ್ತಿದ್ದ. ಯಾವುದಕ್ಕೂ ಕೊರತೆ ಇಲ್ಲದಂತೆ ನೋಡಿಕೊಳ್ಳುತ್ತಿದ್ದ. ಆಸ್ಪತ್ರೆಗೆ ಕರೆದೊಯ್ಯುವುದು, ಔಷಧ ಕೊಡಿಸುವುದು ಸೇರಿದಂತೆ ಎಲ್ಲವನ್ನೂ ಅವನೇ ನಿಭಾಯಿಸುತ್ತಿದ್ದ. ನನಗೆ ಈಗ ಯಾರು ಗತಿ? ನನಗೀಗ ಯಾರೂ ಇಲ್ಲದಂತಾಗಿದೆ. ಗಂಡನ ಜತೆಯಲ್ಲೇ ಇರುತ್ತೇನೆ ಎಂದು ಹೇಳಿ ಎಂದು ಅನಿತಾ ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ | Missing Case | ಚಂದ್ರಶೇಖರ್ ಸಾವಿನ ತನಿಖೆಗೆ ಡಯಾಟಮ್ ಟೆಸ್ಟ್ ಮೊರೆ ಹೋದ ಎಫ್‌ಎಸ್‌ಎಲ್ ಟೀಂ!
ಚಂದ್ರಶೇಖರ್ ಮೊದಲ ಪತ್ನಿ ಮಗ
ಅನಿತಾ ಅವರು ಚಂದ್ರಶೇಖರ್ ತಂದೆ ಎಂ.ಪಿ.ರಮೇಶ್ ಅವರ ಮೊದಲ ಪತ್ನಿಯಾಗಿದ್ದಾರೆ. ಅನಿತಾ ಅವರಿಗೆ ಆರೋಗ್ಯ ಸಮಸ್ಯೆ ಇದೆ ಎಂಬ ಕಾರಣಕ್ಕೆ ರಮೇಶ್ ಇನ್ನೊಂದು ವಿವಾಹವಾಗಿದ್ದರು. ಈ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ವಾಸವಿದ್ದ ಅನಿತಾ ಅಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಚಂದ್ರಶೇಖರ್ ಮಾತ್ರ ತಂದೆ ರಮೇಶ್ ಹಾಗೂ ಚಿಕ್ಕಮ್ಮನ ಜತೆಯಲ್ಲಿ ದಾವಣಗೆರೆಯ ಹೊನ್ನಾಳಿಯ ಕುಂದೂರಿನಲ್ಲಿ ವಾಸವಾಗಿದ್ದರು. ದೊಡ್ಡಪ್ಪನ ಜತೆ ರಾಜಕೀಯದಲ್ಲಿ ಸಕ್ರಿಯರಾಗಿದ್ದರು.
ಏನಿದು ಪ್ರಕರಣ?
ಕಳೆದ ಭಾನುವಾರ (ಅ. ೩೦) ರಾತ್ರಿ ಗೌರಿಗದ್ದೆಗೆ ಹೋಗಿ ಬಂದಿದ್ದ ಚಂದ್ರಶೇಖರ್ ನಾಪತ್ತೆಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರು. ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿ, ತನಿಖೆಯನ್ನು ಚುರುಕುಗೊಳಿಸಿದ್ದರು. ಆದರೆ, ಗುರುವಾರ (ನ.೩) ಮಧ್ಯಾಹ್ನ ಹೊನ್ನಾಳಿ ಹೊರ ವಲಯದ ಕಡದಕಟ್ಟೆ ಗ್ರಾಮ ಸಮೀಪ ಇರುವ ತುಂಗಾ ಮೇಲ್ದಂಡೆ ಕಾಲುವೆ ಬಳಿ ಕಾರಿನ ಬಿಡಿಭಾಗಗಳು ಬಿದ್ದಿರುವ ಬಗ್ಗೆ ಸುದ್ದಿ ಬಂದಿತ್ತು. ಪರಿಶೀಲನೆ ನಡೆಸಿದಾಗ ಕಾರು ನಾಲೆಯಲ್ಲಿ ಬಿದ್ದಿರುವುದು ಗೊತ್ತಾಗಿದೆ. ಕಾರನ್ನು ಮೇಲೆತ್ತಿದಾಗ ಚಂದ್ರಶೇಖರ್ ಮೃತಪಟ್ಟಿರುವುದು ತಿಳಿದುಬಂದಿದೆ.
ಇದನ್ನೂ ಓದಿ | Missing Case | ಪ್ರಕರಣದ ಗಂಭೀರ ತನಿಖೆಯಾಗಲಿ ಎಂದ ಈಶ್ವರಪ್ಪ; ತನಿಖೆ ಬಳಿಕವೇ ಹೇಳುವೆ: ಅಲೋಕ್ ಕುಮಾರ್