ದಾವಣಗೆರೆ: ನಿನ್ನ ಸಾವಿಗೆ ನಾನೇ ಕಾರಣ ಚಂದ್ರೂ, ಬೇರೆ ಯಾರೂ ಕಾರಣ ಅಲ್ಲ. ತುಂಗಾ ಮೇಲ್ದಂಡೆ ಕಾಲುವೆ ಬಳಿ ಕಾರಿನ ಸ್ಪೇರ್ ಪಾರ್ಟ್ಸ್ ಬಿದ್ದಿದೆ ಎಂದು ಹೇಳಿದ ಕೂಡಲೇ ನಾನಿಲ್ಲಿಗೆ ಓಡೋಡಿ ಬಂದೆ. ನೀರು ಸುರಕ್ಷಿತವಾಗಿ ಬರಲಿ ಎಂದು ದೇವರಿಗೆ ದೀಪ ಹಚ್ಚಿಟ್ಟು ಬಂದಿದ್ದೆ. ಈಗ ನೀನೇ ಹೋಗಿಬಿಟ್ಟೆ..” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ತಮ್ಮನ ಮಗ ಚಂದ್ರಶೇಖರ್ (Missing Case) ಮೃತಪಟ್ಟ ಕಾರಿನ ಬಾನೆಟ್ ತಲೆಗುದ್ದಿ ರೋದಿಸಿದ್ದಾರೆ.
ರೇಣುಕಾಚಾರ್ಯ ಸಹೋದರನ ಮಗ ಚಂದ್ರಶೇಖರ್ ಶವವು ಹೊನ್ನಾಳಿ ಹೊರ ವಲಯದ ಕಡದಕಟ್ಟೆ ಗ್ರಾಮ ಸಮೀಪ ಇರುವ ತುಂಗಾ ಮೇಲ್ದಂಡೆ ನಾಲೆಯಲ್ಲಿ ಪತ್ತೆಯಾಗಿತ್ತು. ನಾಲೆಗೆ ಬಿದ್ದಿದ ಕಾರಿನಲ್ಲಿ ಅವರು ಶವವಾಗಿ ಪತ್ತೆಯಾಗಿದ್ದರು. ಸ್ಥಳಕ್ಕೆ ಆಗಮಿಸಿದ ರೇಣುಕಾಚಾರ್ಯ ಅವರು ತೀವ್ರವಾಗಿ ಆಘಾತಗೊಂಡಿದ್ದರು. ನಾಲೆಯಿಂದ ಕಾರನ್ನು ಮೇಲಕ್ಕೆತ್ತುತ್ತಿದ್ದಂತೆ ಚಂದ್ರಶೇಖರ್ ಅವರು ಕಾರಿನಲ್ಲಿಯೇ ಕೊಳೆತ ಸ್ಥಿತಿಯಲ್ಲಿರುವುದು ಗೊತ್ತಾಗಿದೆ. ಆಗ ರೇಣುಕಾಚಾರ್ಯ ಅವರ ದುಃಖದ ಕಟ್ಟೆ ಮತ್ತಷ್ಟು ಒಡೆದಿದ್ದು, ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. “ನಿನ್ನ ಸಾವಿಗೆ ನಾನೇ ಕಾರಣ ಚಂದ್ರೂ…” ಎಂದು ಗೋಳಿಟ್ಟಿದ್ದಾರೆ.
ನೀನು ನನ್ನ ಮಗ ಕಣೋ.. ಚಂದ್ರೂ ನನ್ನನ್ನೂ ಕರೆದುಕೊಂಡು ಬಿಡೋ…” ಎಂದೆಲ್ಲ ಹೇಳಿಕೊಂಡ ರೇಣುಕಾಚಾರ್ಯ, ಕಾರಿನ ಬಳಿ ಹೋಗಿ ಚಂದ್ರಶೇಖರ್ ಅವರ ಮುಖ ನೋಡಬೇಕೆಂದು ಹೇಳಿದ್ದಾರೆ. ಆಗ ಅಲ್ಲಿದ್ದವರು ಬಾಡಿ ಕೊಳೆತು ಹೋಗಿದೆ ಎಂದು ಹೇಳಿದ್ದಾರೆ. ಆಗ ಬೇಸರಗೊಂಡ ರೇಣುಕಾಚಾರ್ಯ, “ದಯವಿಟ್ಟು ಯಾರೂ ಬಾಡಿ ಎನ್ನಬೇಡಿ, ಶವ ಎಂದು ಹೇಳಬೇಡಿ..” ಎಂದು ಕೈಮುಗಿದು ಬೇಡಿಕೊಂಡಿದ್ದಾರೆ.
ಇದನ್ನೂ ಓದಿ | Missing Case | ರೇಣುಕಾಚಾರ್ಯ ತಮ್ಮನ ಮಗ ಶವವಾಗಿ ಪತ್ತೆ, ಕಾರಿನ ಸಹಿತ ತುಂಗಾ ಮೇಲ್ದಂಡೆ ನಾಲೆಗೆ ಬಿದ್ದು ಸಾವು
ಅಲ್ಲಿ ಬಂದವರು ಎಷ್ಟೇ ಸಂತೈಸಲು ನೋಡಿದರೂ ಸಮಾಧಾನಗೊಳ್ಳದ ರೇಣುಕಾಚಾರ್ಯ, “ತಲೆ ಚಚ್ಚಿಕೊಳ್ಳುತ್ತಾ, “ನಿನ್ನ ಸಾವಿಗೆ ನಾನೇ ಕಾರಣವಾದೆ ಚಂದ್ರೂ.. ನಾನೂ ಬರುತ್ತೇನೆ ನನ್ನನ್ನು ಕರೆಸಿಕೋ… ನನಗೆ ನೀನು ಬೆಂಕಿ ಹಚ್ಚಪ್ಪ ಚಂದ್ರು..” ಎಂದು ಮತ್ತೆ ಮತ್ತೆ ಗೋಳಾಡಿದ್ದಾರೆ. ಈ ನಡುವೆ ಕುಟುಂಬದವರ ಆಕ್ರಂದನವೂ ಮುಗಿಲು ಮುಟ್ಟಿದೆ.
ಊಟ ಬಿಟ್ಟಿದ್ದ ರೇಣುಕಾಚಾರ್ಯ
ರೇಣುಕಾಚಾರ್ಯ ಅವರ ಉತ್ತರಾಧಿಕಾರಿಯಂತಿದ್ದ ಚಂದ್ರಶೇಖರ್ ಅವರು, ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಬಹುತೇಕ ಎಲ್ಲ ರಾಜಕೀಯ ಚಟುವಟಿಕೆಯನ್ನು ನೋಡಿಕೊಳ್ಳುತ್ತಿದ್ದರು. ಈ ಹಿನ್ನೆಲೆಯಲ್ಲಿ ರೇಣುಕಾಚಾರ್ಯ ಅವರು ನಿರಾಳರಾಗಿದ್ದರು. ಇದ್ದಕ್ಕಿದ್ದಂತೆ ತಮ್ಮ ಮಗ ಕಾಣದೆ ಇದ್ದಾಗ ಆತಂಕಗೊಂಡಿದ್ದ ರೇಣುಕಾಚಾರ್ಯ ಊಟ ಬಿಟ್ಟು ಕುಳಿತಿದ್ದರು. ಆದರೆ, ಈ ವೇಳೆ ಮಗಳು ಸಮಾಧಾನ ಪಡಿಸಿ ಊಟ ಮಾಡಿಸಿದ್ದಳು.
ಏನಿದು ಪ್ರಕರಣ?
ಕಳೆದ ಭಾನುವಾರ (ಅ. ೩೦) ರಾತ್ರಿ ಗೌರಿಗದ್ದೆಗೆ ಹೋಗಿ ಬಂದಿದ್ದ ಚಂದ್ರಶೇಖರ್ ನಾಪತ್ತೆಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರು. ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿ, ತನಿಖೆಯನ್ನು ಚುರುಕುಗೊಳಿಸಿದ್ದರು. ಆದರೆ, ಗುರುವಾರ (ನ.೩) ಮಧ್ಯಾಹ್ನ ತುಂಗಾ ಮೇಲ್ದಂಡೆ ಕಾಲುವೆ ಬಳಿ ಕಾರಿನ ಬಿಡಿಭಾಗಗಳು ಬಿದ್ದಿರುವ ಬಗ್ಗೆ ಸುದ್ದಿ ಬಂದಿತ್ತು. ಪರಿಶೀಲನೆ ನಡೆಸಿದಾಗ ಕಾರು ನಾಲೆಯಲ್ಲಿ ಬಿದ್ದಿರುವುದು ಗೊತ್ತಾಗಿದೆ. ಕಾರನ್ನು ಮೇಲೆತ್ತಿದಾಗ ಚಂದ್ರಶೇಖರ್ ಮೃತಪಟ್ಟಿರುವುದು ತಿಳಿದುಬಂದಿದೆ.
ಇದನ್ನೂ ಓದಿ | Missing case | ಅಧ್ಯಾತ್ಮದ ಕಡೆ ಹೆಚ್ಚು ಒಲವು ಹೊಂದಿದ್ದ ಚಂದ್ರಶೇಖರ್