ದಾವಣಗೆರೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ತಮ್ಮನ ಮಗ ಚಂದ್ರಶೇಖರ್ (Chandru Death) ಅವರ ಅಂತ್ಯಸಂಸ್ಕಾರಕ್ಕೂ ಮುನ್ನ ಅವರ ಮೃತದೇಹಕ್ಕೆ ವಿವಾಹ ಶಾಸ್ತ್ರ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ.
ವೀರಶೈವ ಲಿಂಗಾಯತ ಧರ್ಮದಲ್ಲಿ ಅವಿವಾಹಿತರು ಮೃತಪಟ್ಟರೆ ಅವರಿಗೆ ಎಕ್ಕೆ ಗಿಡದ ಜತೆ ವಿವಾಹ ಮಾಡಲಾಗುತ್ತದೆ. ಮೃತರಾದ ಅವಿವಾಹಿತರಿಗೆ ವಿವಾಹ ಮಾಡದೇ ಅಂತ್ಯಕ್ರಿಯೆ ನೆರವೇರಿಸಿದರೆ ಅವರಿಗೆ ಸ್ವರ್ಗ ಪ್ರಾಪ್ತಿ ಆಗುವುದಿಲ್ಲ ಎನ್ನುವ ನಂಬಿಕೆ ಇದೆ.
ಈ ಹಿನ್ನೆಲೆಯಲ್ಲಿ ಅವಿವಾಹಿತ ಮೃತ ವ್ಯಕ್ತಿಗೆ ಕಂಕಣವನ್ನು ಮುಟ್ಟಿಸಲಾಗುತ್ತದೆ. ಬಳಿಕ ಅದನ್ನು ಎಕ್ಕೆ ಗೀಡಕ್ಕೆ ಧಾರಣೆ ಮಾಡುವ ಮೂಲಕ ವಿವಾಹ ಪ್ರಕ್ರಿಯೆಯನ್ನು ನೆರವೇರಿಸಲಾಗುತ್ತದೆ. ಹೀಗೆ ವಿವಾಹ ಮಾಡಿದರೆ, ಮೃತರ ಆತ್ಮಕ್ಕೆ ಶಾಂತಿ ಸಿಗಲಿದೆ ಅವರಿಗೆ ಸ್ವರ್ಗ ಪ್ರಾಪ್ತಿಯಾಗಲಿದೆ ಎನ್ನುವ ನಂಬಿಕೆಯು ವೀರಶೈವ ಲಿಂಗಾಯತ ಧರ್ಮದಲ್ಲಿದೆ. ಹೀಗಾಗಿ ಮೃತ ಚಂದ್ರಶೇಖರ್ ಅವರಿಗೆ ಕಂಕಣ ವಿವಾಹ ಮಾಡಿಸಿ ಅಂತ್ಯಕ್ರಿಯೆ ನಡೆಸಲಾಗುವುದು.
ಇದನ್ನೂ ಓದಿ | Missing Case | ವಾರ ಬಿಟ್ಟು ಬರುತ್ತೇನಮ್ಮಾ ಎಂದವನು ಬಾರದ ಲೋಕಕ್ಕೆ ಹೋದ, ಇನ್ನು ಗಂಡನ ಜತೆಯೇ ಇರುವೆ: ಅನಿತಾ
ಶಾಸಕ ರೇಣುಕಾಚಾರ್ಯ ಅವರ ಹುಟ್ಟೂರು ಕುಂದೂರಿನಲ್ಲಿರುವ ತೋಟದಲ್ಲಿ ಅಂತ್ಯಕ್ರಿಯೆ ನಡೆಯಲಿದ್ದು, ಜಂಗಮ ಸಂಪ್ರದಾಯದಂತೆ ನೆರವೇರಿಸಲಾಗುತ್ತಿದೆ. ಈಗಾಗಲೇ ಜಂಗಮ ಗುರುಗಳು ಮುಂದಾಳತ್ವದಲ್ಲಿ ಪಾಯ ತೆಗೆಯಲಾಗಿದೆ. ಅಂತಿಮ ವಿಧಿವಿಧಾನ ಪ್ರಕ್ರಿಯೆಯೂ ಪ್ರಾರಂಭವಾಗಿದೆ.
ಅನ್ನದಾನಿ ಶಾಸ್ತ್ರಿಗಳ ನೇತೃತ್ವದಲ್ಲಿ ಅಂತ್ಯ ಸಂಸ್ಕಾರ ಪ್ರಕ್ರಿಯೆ ನಡೆಯುತ್ತಿದ್ದು, ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯ ಸಂಸ್ಕಾರವನ್ನು ನಡೆಸಲಾಗುತ್ತಿದೆ. ಬಿಲ್ವಪತ್ರೆ, ವಿಭೂತಿ, ಉಪ್ಪು, ಅರಿಶಿನ, ಕುಂಕುಮ ಬಳಸಿ ಅಂತ್ಯ ಸಂಸ್ಕಾರ ಮಾಡಲಿದ್ದು, ಜಂಗಮ ಸಮುದಾಯದಲ್ಲಿ ಕ್ರಿಯಾಸಮಾಧಿಯಲ್ಲಿ ಕೂರಿಸಿ ಅಂತ್ಯಕ್ರಿಯೆ ಮಾಡಲಾಗುತ್ತದೆಯಾದರೂ ಚಂದ್ರಶೇಖರ್ ಮೃತದೇಹ ಕೊಳೆತಿರುವ ಕಾರಣ ವಿಭೂತಿ ಮೇಲೆ ಮಲಗಿಸಲಾಗಿದೆ. ರೇಣುಕಾಚಾರ್ಯ ಕುಟುಂಬವು ಕ್ರಿಯಾಸಮಾಧಿ ಮಾಡಲಿದೆ. ಕೆಲವೇ ಹೊತ್ತಿನಲ್ಲಿ ಚಂದ್ರು ಮಣ್ಣಾಗಲಿದ್ದಾರೆ. ಅಂತ್ಯ ಸಂಸ್ಕಾರ ವೇಳೆ “ಚಂದ್ರು ಅಮರ್ ರಹೆ..” ಘೋಷಣೆ ಮೊಳಗಿದೆ. ಇದೇ ವೇಳೆ ಗೃಹ ಸಚಿವ ಆರಗ ಜ್ಞಾನೇಂದ್ರ ಸಹ ಭಾಗಿಯಾಗಿದ್ದಾರೆ.
ಇದನ್ನೂ ಓದಿ | Missing Case | ಕುಂದೂರಿನಿಂದ ಹೊನ್ನಾಳಿ ಪಟ್ಟಣದವರೆಗೆ 20 ಕಿ.ಮೀ. ನಡೆದ ಅಂತಿಮ ಯಾತ್ರೆ