Site icon Vistara News

Missing Case | ಚಂದ್ರು ಸಾವು ಸಹಜ ಅಲ್ಲ, ಕಿಡ್ನ್ಯಾಪ್‌ ಆಗಿದೆ, ಸೂಕ್ತ ತನಿಖೆ ನಡೆಸಿ ನ್ಯಾಯ ಕೊಡಿ ಎಂದ ರೇಣುಕಾಚಾರ್ಯ

Renu mane

ಹೊನ್ನಾಳಿ: ʻʻನನ್ನ ಮಗನ ಸಾವು ಸಹಜ ಅಲ್ಲ. ಅವನನ್ನು ಅಪಹರಿಸಲಾಗಿದೆ ಎಂದು ನಾನು ಮೊದಲೇ ಹೇಳಿದ್ದೆ. ಈಗ ಅವನ ಮೃತದೇಹ ಸಿಕ್ಕಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿ ನ್ಯಾಯ ಒದಗಿಸಬೇಕುʼʼ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಆಗ್ರಹಿಸಿದ್ದಾರೆ.

ಕೆಲವು ದಿನಗಳಿಂದ ನಾಪತ್ತೆಯಾಗಿದ್ದ, ರೇಣುಕಾಚಾರ್ಯ ಅವರ ಸಹೋದರ ಎಂ.ಪಿ. ರಮೇಶ್‌ ಅವರ ಪುತ್ರ ಚಂದ್ರಶೇಖರ್‌ ಅವರ ಮೃತದೇಹ ಹೊನ್ನಾಳಿ ಸಮೀಪದ ತುಂಗಾ ನಾಲೆಯಲ್ಲಿ ಸಿಕ್ಕಿದೆ. ಬಹು ಹುಡುಕಾಟದ ನಂತರ ಚಂದ್ರಶೇಖರ್‌ ಅವರು ಪ್ರಯಾಣಿಸುತ್ತಿದ್ದ ಕಾರು ತುಂಗಾ ನಾಲೆಯಲ್ಲಿ ಇರುವುದು ಪತ್ತೆಯಾಗಿತ್ತು. ಅದನ್ನು ಮೇಲೆತ್ತಿದಾಗ ಶವವೂ ಪತ್ತೆಯಾಗಿದೆ. ಈ ಸಾವು ಹಲವು ಅನುಮಾನಗಳನ್ನು ಸೃಷ್ಟಿಸಿದೆ.

ʻʻನಮಗೆ ದೇವರೇ ನ್ಯಾಯ ಕೊಡಿಸಬೇಕು. ನನ್ನ ಮಗ ಬೆಂಗಳೂರಿಗೆ ಹೋಗುತ್ತೇನೆ ಎಂದು ಹೇಳಿದ್ದ. ಚಂದ್ರು ಇವತ್ತು ಬರ್ತಾನೆ ಇರು ಅಂತ ಹೇಳಿದೆ. ಅವನ ಮೃತದೇಹ ಬಂದಿದೆʼʼ ಎಂದು ಮನೆಯ ಮುಂದೆ ಮೃತದೇಹ ತಂದಾಗ ರೇಣುಕಾಚಾರ್ಯ ಗೋಳಾಡಿದರು.

ʻʻಅವನು ನನ್ನ ಜೊತೆ ಕ್ಷೇತ್ರದಲ್ಲಿ ಬೆಂಬಲವಾಗಿದ್ದ, ಜನರ ಪ್ರೀತಿ ಗಳಿಸಿದ್ದ. ಈಗ ಅವನನ್ನು ಕಳೆದುಕೊಂಡಿದ್ದೇನೆ.ʼʼ ಎಂದು ಬೇಸರಿಸಿದರು.

ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ
ಚಂದ್ರಶೇಖರ್‌ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ನಡೆಯಿತು.

ಮನೆ ಮುಂದೆ ಜನಸ್ತೋಮ
ತುಂಗಾ ನಾಲೆಯಲ್ಲಿ ಸಿಕ್ಕಿದ ಚಂದ್ರಶೇಖರ್‌ ಅವರ ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ಒಯ್ಯುವ ನಡುವೆ ಮಾರ್ಗ ಮಧ್ಯೆ ರೇಣುಕಾಚಾರ್ಯ‌ ಮನೆ ಎದುರು ಕುಟುಂಬಸ್ಥರಿಗೆ ಅಂತಿಮ‌ ದರ್ಶನಕ್ಕೆ ಅವಕಾಶ ನೀಡಲಾಯಿತು. ಆಗ ಅಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು.

ರಸ್ತೆಯಿಂದ ಕಾರು ತೆರವು
ನಾಲೆಯಿಂದ ಮೇಲೆತ್ತಿದ ಕಾರನ್ನು ಸೇತುವೆ ಮೇಲೆ ಇಟ್ಟಿದ್ದರಿಂದ ಹೊನ್ನಾಳಿ ನ್ಯಾಮತಿ ರಸ್ತೆಯಲ್ಲಿ ಸಂಚಾರ ಬಂದ್‌ ಆಗಿತ್ತು. ಮೂರು ಗಂಟೆಯಿಂದ ರಸ್ತೆ ಸಂಚಾರ ಬಂದ್‌ ಆಗಿದ್ದು, ಬಳಿಕ ಕಾರನ್ನು ತೆರವು ಮಾಡಲಾಯಿತು. ಅಪಘಾತಕ್ಕೀಡಾದ ಕಾರನ್ನು ಲಾರಿಯಲ್ಲಿ ಕಳುಹಿಸಲಾಯಿತು.

ಇದನ್ನೂ ಓದಿ | Missing Case | ನಿನ್ನ ಸಾವಿಗೆ ನಾನೇ ಕಾರಣ ಚಂದ್ರೂ, ಬೇರೆ ಯಾರೂ ಕಾರಣ ಅಲ್ಲ; ಕಾರಿನ ಮುಂದೆ ಗೋಳಿಟ್ಟ ರೇಣುಕಾಚಾರ್ಯ

Exit mobile version