Site icon Vistara News

Missing Case | ರೇಣುಕಾಚಾರ್ಯ ತಮ್ಮನ ಪುತ್ರ ಕಾಣೆ ಪ್ರಕರಣ; 4 ಆಯಾಮದಲ್ಲಿ ತನಿಖೆ, ಸ್ವಿಫ್ಟ್‌ ಕಾರಿಗಾಗಿ ಶೋಧ

missing Case

ದಾವಣಗೆರೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರ ತಮ್ಮನ ಮಗ ನಾಪತ್ತೆಯಾಗಿ (Missing Case) ಗುರುವಾರಕ್ಕೆ (ನ. ೩) 5 ದಿನಗಳು ಕಳೆದಿದ್ದು, ಕಾಣೆಯಾದ ಚಂದ್ರಶೇಖರ್‌ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಈ ಸಂಬಂಧ ಹೊನ್ನಾಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳ್ಳಿಸಿದ್ದಾರೆ.

ಎಸ್‌ಪಿ ರಿಷ್ಯಂತ್ ನೇತೃತ್ವದಲ್ಲಿ ತಂಡ ರಚನೆಯಾಗಿದ್ದು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಚುರುಕುಗೊಳಿಸಲಾಗಿದೆ. ಮುಖ್ಯವಾಗಿ ದ್ವೇಷ ಅಥವಾ ಹಣಕಾಸು ವಿಚಾರದಲ್ಲಿ ಅಪಹರಣ ಮಾಡಲಾಗಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದ್ದು, ಈ ಶಂಕೆ ಮೇರೆಗೆ ವಿಚಾರಣೆಯನ್ನು ಪೊಲೀಸ್‌ ತಂಡಗಳು ಕೈಗೊಂಡಿವೆ. ಏಕೆಂದರೆ ಚಂದ್ರಶೇಖರ್ ತಂದೆ ಎಂ.ಪಿ.ರಮೇಶ್ ಅವರು ಕ್ಲಾಸ್ 1 ಗುತ್ತಿಗೆದಾರರಾಗಿದ್ದು, ಗುತ್ತಿಗೆ ವಿಚಾರದಲ್ಲಿ ಏನಾದರೂ ಆಗಿರಬಹುದಾ ಎಂದೂ ತನಿಖೆ ನಡೆದಿದೆ.

ಚಂದ್ರಶೇಖರ್ ನಾಪತ್ತೆಯಾಗಿ ಗುರುವಾರಕ್ಕೆ 5ನೇ ದಿನ ಆಗಿದ್ದು, ಕಳೆದ ಭಾನುವಾರ ಸಂಜೆ ಗೌರಿಗದ್ದೆಗೆ ಹೋಗಿದ್ದವರು ವಿನಯ್‌ ಗುರೂಜಿ ಅವರನ್ನು ಭೇಟಿಯಾಗಿ ವಾಪಸ್‌ ಶಿವಮೊಗ್ಗಕ್ಕೆ ಬಂದಿದ್ದರು. ಆದರೆ, ಶಿವಮೊಗ್ಗದಿಂದ ಹೊನ್ನಾಳಿಗೆ ಬಂದಿಲ್ಲ ಎಂದು ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಇದನ್ನೂ ಓದಿ | Missing case | ಅಧ್ಯಾತ್ಮದ ಕಡೆ ಹೆಚ್ಚು ಒಲವು ಹೊಂದಿದ್ದ ಚಂದ್ರಶೇಖರ್; ಮೈಸೂರು ಭಾಗದಲ್ಲಿರುವ ಶಂಕೆ

ಒಂದು ವರ್ಷದ ಕಾಲ್‌ ಹಿಸ್ಟರಿ ಪಡೆದಿರುವ ಖಾಕಿ
ಗುತ್ತಿಗೆ ವಿಚಾರ ಮೊದಲ ಆಯಾಮವಾದರೆ, ಎರಡನೇ ಆಯಾಮದಲ್ಲಿ ಚಂದ್ರಶೇಖರ್ ಅವರ ಒಂದು ವರ್ಷದ ಕಾಲ್ ಹಿಸ್ಟರಿ ಪಡೆದುಕೊಳ್ಳುತ್ತಿದ್ದಾರೆ. ಒಂದು ವರ್ಷದ ಕಾಲ್ ಹಿಸ್ಟರಿಯಲ್ಲಿ ಅತಿ ಹೆಚ್ಚು ಯಾರ ಜತೆ ಮಾತಾಡಿದ್ದಾನೆಂದು ಪರಿಶೀಲನೆ ನಡೆಸಿದ್ದಾರೆ. ಅದರಲ್ಲಿ ಚಂದ್ರಶೇಖರ್ 6 ತಿಂಗಳ ಹಿಂದೆ ಇಬ್ಬರ ಜತೆಗೆ ಅತಿ ಹೆಚ್ಚು ಮಾತಾಡಿರುವುದು ಕಂಡು ಬಂದಿದೆ. ಆದರೆ, ಇತ್ತೀಚೆಗೆ ಕಾಲ್ ಲಿಸ್ಟ್‌ನಲ್ಲಿ ಅವರ ಸಂಪರ್ಕದಲ್ಲಿಲ್ಲ ಎಂದು ತಿಳಿದು ಬಂದಿದೆ. ಈ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದು, ಆ ಇಬ್ಬರು ಯಾರು, ಅವರ ಹಿನ್ನೆಲೆ ಏನು ಎಂಬ ಬಗ್ಗೆ ಪರಿಶೀಲನೆ ನಡೆಯುತ್ತಿದೆ.

ಆತ್ಮೀಯ ಸ್ನೇಹಿತ ಕಿರಣ್ ವಶಕ್ಕೆ ಪಡೆದ ಪೊಲೀಸರು
ಮೂರನೇ ಆಯಾಮದಲ್ಲಿ ತನಿಖೆಗೆ ಇಳಿದಿರುವ ಪೊಲೀಸರು, ಚಂದ್ರಶೇಖರ್‌ ಅವರ ಆತ್ಮೀಯ ಸ್ನೇಹಿತರನ್ನು ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ. ಶಿವಮೊಗ್ಗದ ಆತ್ಮೀಯ ಸ್ನೇಹಿತ ಕಿರಣ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಚಂದ್ರಶೇಖರ್‌ ಗೌರಿಗದ್ದೆಗೆ ಹೋಗಿದ್ದ ವೇಳೆ ಕಿರಣ್ ಸಹ ಜತೆಗಿದ್ದ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಮೂರು ದಿನಗಳಿಂದ ಕಿರಣ್‌ನನ್ನು ವಿಚಾರಣೆ ನಡೆಸಲಾಗುತ್ತಿದೆ.

ಚಂದ್ರಶೇಖರ್‌ ಫಾಲೋ ಮಾಡುತ್ತಿದ್ದ ಸ್ವಿಫ್ಟ್‌ ಡಿಸೈರ್‌ ಕಾರು
ಚಂದ್ರಶೇಖರ್‌ ಅವರನ್ನು ಹಲವು ದಿನಗಳಿಂದ ಸ್ವಿಫ್ಟ್‌ ಡಿಸೈರ್ ಕಾರು ಫಾಲೋ ಮಾಡುತ್ತಿರುವುದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಹೊನ್ನಾಳಿಯಲ್ಲಿ ಚಂದ್ರು ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಆ ಕಾರು ಫಾಲೋ ಮಾಡುತ್ತಿತ್ತು ಎನ್ನಲಾಗಿದೆ. ಕಾರು ಫಾಲೋ ಮಾಡುತ್ತಿರುವ ಬಗ್ಗೆ ಆಪ್ತರು ಚಂದ್ರಶೇಖರ್‌ ಅವರಿಗೆ ಮಾಹಿತಿ ನೀಡಿದ್ದು, ಇದನ್ನು ಅವರು ನಿರ್ಲಕ್ಷ್ಯವಹಿಸಿದ್ದಾರೆನ್ನಲಾಗಿದೆ. ಈ ವಿಚಾರವನ್ನು ಖುದ್ದು ಆಪ್ತರೇ ರೇಣುಕಾಚಾರ್ಯರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಸ್ವಿಫ್ಟ್‌ ಡಿಸೈರ್ ಕಾರಿನ ಬಗ್ಗೆ ಶಿವಮೊಗ್ಗ ಹಾಗೂ ದಾವಣಗೆರೆ ಪೊಲೀಸರು ತನಿಖೆ ಕೈಗೊಂಡಿದ್ದು, ಅದು ಹೋದ ಮಾರ್ಗಗಳ ಸಿಸಿಟಿವಿ ದೃಶ್ಯಗಳು ಹಾಗೂ ನಂಬರ್‌ ಮೂಲಕ ಪತ್ತೆಹಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಹಳೆಯ ಸಿಸಿ ಕ್ಯಾಮರಾ ಫೂಟೇಜ್‌ಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಸ್ವಿಫ್ಟ್‌ ಕಾರಿನಲ್ಲಿ ಬಂದವರೇ ಚಂದ್ರಶೇಖರ್‌ ಅವರರನ್ನು ಕಿಡ್ನ್ಯಾಪ್‌ ಮಾಡಿರಬಹುದು ಎಂಬ ಶಂಕೆ ಕೂಡ ಇದೆ.

ಸಿಪಿಐ ದೇವರಾಜ್ ನೇತೃತ್ವದ ತಂಡ
ಮಣಿಪಾಲ ಠಾಣೆಯ ಸಿಪಿಐ ದೇವರಾಜ್ ಅವರನ್ನು ಈ ಪ್ರಕರಣ ಸಂಬಂಧ ಜಿಲ್ಲಾ ಪೊಲೀಸರು ಕರೆಸಿಕೊಂಡಿದ್ದಾರೆ. ಈ ಮೊದಲು ಹೊನ್ನಾಳಿಯಲ್ಲಿ‌ ಇವರು ಸಿಪಿಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ತಿಂಗಳ ಹಿಂದಷ್ಟೇ ವರ್ಗಾವಣೆಯಾಗಿ ಮಣಿಪಾಲ್ ಠಾಣೆಗೆ ಹೋಗಿದ್ದರು. ದಾವಣಗೆರೆಯಲ್ಲಿ ಡಿಸಿಐಬಿ ಬ್ರಾಂಚ್‌ನಲ್ಲಿ ವಿವಿಧ ಪ್ರಕರಣಗಳನ್ನು ನಿರ್ವಹಿಸಿದ್ದ ದೇವರಾಜ್ ಅವರನ್ನು ಪುನಃ ಕರೆಸಿಕೊಳ್ಳಲಾಗಿದ್ದು, ಅವರ ನೇತೃತ್ವದಲ್ಲಿ ತಂಡವೊಂದನ್ನು ರಚನೆ ಮಾಡಲಾಗಿದೆ.

ಇದನ್ನೂ ಓದಿ | Crocodile attack | ಈಶ್ವರ ದೇವಸ್ಥಾನದ ಬಳಿ ಕಾಳಿ ನದಿಗೆ ಈಜಲು ಇಳಿದ ವ್ಯಕ್ತಿಯನ್ನು ಎಳೆದೊಯ್ದ ಮೊಸಳೆ

Exit mobile version