ದಾವಣಗೆರೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ಸಹೋದರ ಎಂ.ಪಿ. ರಮೇಶ್ ಪುತ್ರ ಚಂದ್ರಶೇಖರ್ (Missing Case) ಕಾರು ಸಮೇತ ಹೊನ್ನಾಳಿ ಹೊರ ವಲಯದ ಕಡದಕಟ್ಟೆ ಗ್ರಾಮ ಸಮೀಪ ಇರುವ ತುಂಗಾ ಮೇಲ್ದಂಡೆ ನಾಲೆಗೆ ಬಿದ್ದು ಮೃತಪಟ್ಟಿದ್ದಾರೆ.
ಭಾನುವಾರ (ಅ. ೩೦) ರಾತ್ರಿ ನಾಪತ್ತೆಯಾಗಿದ್ದ ಚಂದ್ರಶೇಖರ್ ಬಗ್ಗೆ ತೀವ್ರ ಹುಡುಕಾಟ ನಡೆದಿತ್ತು. ಆದರೆ, ಗುರುವಾರ (ನ. ೩) ತುಂಗಾ ಮೇಲ್ದಂಡೆ ನಾಲೆಯಲ್ಲಿ ಕಾರು ಬಿದ್ದಿರುವ ಮಾಹಿತಿ ದೊರೆತಿತ್ತು. ಈ ಹಿನ್ನೆಲೆಯಲ್ಲಿ ತೀವ್ರ ಹುಡುಕಾಟ ನಡೆಸಿ ಕಾರನ್ನು ಮೇಲೆ ಎತ್ತಲಾಗಿದ್ದು, ಕಾರಿನೊಳಗೆ ಶವ ಪತ್ತೆಯಾಗಿದೆ. ಸ್ಥಳದಲ್ಲಿ ಶಾಸಕ ಎಂ.ಪಿ. ರೇಣುಕಾಚಾರ್ಯ ಸಹಿತ ಕುಟುಂಬಸ್ಥರ ರೋದನ ಮುಗಿಲುಮುಟ್ಟಿದೆ.
ನಾಲೆ ಸುತ್ತ ನೂರಾರು ಜನರು ಸೇರಿದ್ದರು. ತುಂಗಾ ಮೇಲ್ದಂಡೆ ನಾಲೆ ಬಳಿ ಕಾರಿನ ಬಿಡಿ ಭಾಗಗಳು ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ತುಂಗಾ ನಾಲೆಗೆ ಭೇಟಿ ನೀಡಿದ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಸ್ಥಳಕ್ಕೆ ಕ್ರೇನ್ ತರಿಸಿಕೊಳ್ಳಲಾಗಿದ್ದು, ಬಿಳಿ ಬಣ್ಣದ ಕಾರನ್ನು ಮೇಲಕ್ಕೆತ್ತಲಾಗಿದೆ. ಕಾರಿನಲ್ಲಿ ಏರ್ ಬ್ಯಾಗ್ ಓಪನ್ ಆಗಿತ್ತು. ಅಲ್ಲದೆ, ಮುಂಭಾಗದ ಗಾಜು ಒಡೆದು ಹೋಗಿತ್ತು. ಜತೆಗೆ ಕಾರು ತೀವ್ರವಾಗಿ ನಜ್ಜುಗುಜ್ಜಾಗಿತ್ತು.
ಆದರೆ, ಕಾರು ತುಂಗಾ ಮೇಲ್ದಂಡೆ ಸೇತುವೆಯ ಕೆಳಭಾಗದಲ್ಲಿ ಪತ್ತೆಯಾಗಿದ್ದು, ಸೇತುವೆಯ ಯಾವ ಭಾಗಕ್ಕೂ ಹಾನಿಯಾಗಿರಲಿಲ್ಲ. ಹೀಗಾಗಿ ಕಾರು ಅಲ್ಲಿ ಹೇಗೆ ಬಿದ್ದಿದೆ ಎಂಬ ಬಗ್ಗೆ ತನಿಖೆ ಆಗಬೇಕು ಎಂಬ ಆಗ್ರಹ ಕೇಳಿಬಂದಿದೆ. ಜತೆಗೆ ಬೇರೆ ಕಡೆ ಬಿದ್ದು, ಅಲ್ಲಿಯವರೆಗೆ ಬಂದಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ | Missing Case | ರೇಣುಕಾಚಾರ್ಯ ತಮ್ಮನ ಪುತ್ರ ಕಾಣೆ ಪ್ರಕರಣ; 4 ಆಯಾಮದಲ್ಲಿ ತನಿಖೆ, ಸ್ವಿಫ್ಟ್ ಕಾರಿಗಾಗಿ ಶೋಧ
ಕೊಳೆತ ಸ್ಥಿತಿಯಲ್ಲಿದ್ದ ಶವ
ಕಾರಿನ ಹಿಂಬದಿ ಸೀಟಿನಲ್ಲಿ ಚಂದ್ರಶೇಖರ್ ಶವ ಪತ್ತೆಯಾಗಿದ್ದು, ಅವರ ಕಾಲುಗಳು ಡೋರ್ ಗ್ಲಾಸ್‌ಗೆ ತಾಗಿಕೊಂಡಿತ್ತು. ಅಲ್ಲದೆ, ಶವವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸುರಹೊನ್ನೆಯಿಂದ ಮುಂದಿನ ಸುಳಿವಿರಲಿಲ್ಲ
ಭಾನುವಾರ (ಅ.೩೦) ರಾತ್ರಿ ಚಂದ್ರಶೇಖರ್ ಕಾರು ಶಿವಮೊಗ್ಗ-ನ್ಯಾಮತಿ ಮಧ್ಯೆ ಹೋಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶಿವಮೊಗ್ಗದಿಂದ ಬಂದ ಕಾರು ಸುರಹೊನ್ನೆ ಬಳಿ ಹಾದು ಹೋಗಿರುವುದು ಕಂಡುಬಂದಿದೆ. ಆದರೆ, ಸುರಹೊನ್ನೆಯಿಂದ ಹೊನ್ನಾಳಿಗೆ ಹೋಗಿರುವ ಬಗ್ಗೆ ಸುಳಿವು ಸಿಕ್ಕಿರಲಿಲ್ಲ.
ಚಂದ್ರಶೇಖರ್ ತೆಗೆದುಕೊಂಡು ಹೋಗಿದ್ದ ವೈಟ್ ಕ್ರೆಟಾ ಕಾರು ಭಾನುವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಸುರಹೊನ್ನೆ ಬಳಿ ಹಾದು ಹೋಗಿರುವ ವಿಡಿಯೊ ಮಾತ್ರ ಲಭ್ಯವಾಗಿತ್ತು. ಸುರಹೊನ್ನೆ ಬಳಿ ಎರಡು ಕಾರು ಜತೆಯಲ್ಲಿ ಹಾದು ಹೋಗಿವೆ. ಒಂದು ಕಾರು ಚಂದ್ರಶೇಖರ್ ಅವರದ್ದು ಎನ್ನಲಾಗಿದ್ದು, ಇನ್ನೊಂದು ಕಾರು ಯಾರದ್ದು ಎಂಬುವುದರ ಬಗ್ಗೆಯೂ ತನಿಖೆ ನಡೆದಿತ್ತು. ಸುರಹೊನ್ನೆಯಿಂದ ಹೊನ್ನಾಳಿಗೆ ಕಾರು ಬಂದ ಬಗ್ಗೆ ಯಾವುದೇ ಮಾಹಿತಿ ದೊರೆಯದ ಹಿನ್ನೆಲೆಯಲ್ಲಿ ಹಲವು ಅನುಮಾನ ಮೂಡಿತ್ತು.
ನಾಪತ್ತೆಗೂ ಮುನ್ನ ವಿನಯ್ ಗುರೂಜಿ ಆಶೀರ್ವಾದ ಪಡೆದಿದ್ದ ಚಂದ್ರು
ಕಳೆದ ಭಾನುವಾರ ಚಂದ್ರಶೇಖರ್ ಶಿವಮೊಗ್ಗದ ಗೌರಿಗದ್ದೆಗೆ ಹೋಗಿ ವಿನಯ್ ಗುರೂಜಿ ಆಶೀರ್ವಾದ ಪಡೆದಿದ್ದರು. ಜತೆಗೆ ಶಿವಮೊಗ್ಗದಲ್ಲಿ ಸ್ನೇಹಿತರನ್ನು ಮಾತನಾಡಿಸಿ ಹೊನ್ನಾಳಿಗೆ ಬಂದಿದ್ದರು ಎಂದು ತಿಳಿದು ಬಂದಿತ್ತು. ಆ ಬಳಿಕ ಭಾನುವಾರ ಸಂಜೆ ನಾಪತ್ತೆಯಾದವರು ಇನ್ನೂ ಸಿಕ್ಕಿಲ್ಲ. ಹೊನ್ನಾಳಿಯಲ್ಲಿ ಸೋಮವಾರ (ಅ.31) ಫೋನ್ ಸ್ವಿಚ್ಡ್ ಆಫ್ ಆಗಿತ್ತು. ನಂತರ ಇದುವರೆಗೂ ಫೋನ್ ಆನ್ ಆಗಿಲ್ಲ. ಆದರೆ, ಅಧ್ಯಾತ್ಮದ ಬಗ್ಗೆ ಚಂದ್ರಶೇಖರ್ ಅವರಿಗೆ ಒಲವಿದ್ದು, ಅವರು ಮೈಸೂರು ಇಲ್ಲವೇ ಚಾಮರಾಜನಗರ ಅರಣ್ಯ ಭಾಗದಲ್ಲಿ ಇದ್ದಾರೆಂಬ ಶಂಕೆ ಮೇರೆಗೂ ತನಿಖೆ ನಡೆದಿತ್ತು.
ಸಿಪಿಐ ದೇವರಾಜ್ ನೇತೃತ್ವದ ತಂಡ
ಮಣಿಪಾಲ ಠಾಣೆಯ ಸಿಪಿಐ ದೇವರಾಜ್ ಅವರನ್ನು ಈ ಪ್ರಕರಣ ಸಂಬಂಧ ಜಿಲ್ಲಾ ಪೊಲೀಸರು ಕರೆಸಿಕೊಂಡಿದ್ದರು. ಈ ಮೊದಲು ಹೊನ್ನಾಳಿಯಲ್ಲಿ ಇವರು ಸಿಪಿಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ತಿಂಗಳ ಹಿಂದಷ್ಟೇ ವರ್ಗಾವಣೆಯಾಗಿ ಮಣಿಪಾಲ್ ಠಾಣೆಗೆ ಹೋಗಿದ್ದರು. ದಾವಣಗೆರೆಯಲ್ಲಿ ಡಿಸಿಐಬಿ ಬ್ರಾಂಚ್‌ನಲ್ಲಿ ವಿವಿಧ ಪ್ರಕರಣಗಳನ್ನು ನಿರ್ವಹಿಸಿದ್ದ ದೇವರಾಜ್ ಅವರನ್ನು ಪುನಃ ಕರೆಸಿಕೊಳ್ಳಲಾಗಿದ್ದು, ಅವರ ನೇತೃತ್ವದಲ್ಲಿ ತಂಡವೊಂದನ್ನು ರಚನೆ ಮಾಡಲಾಗಿತ್ತು. ಈಗ ತುಂಗಾ ಮೇಲ್ದಂಡೆ ನಾಲೆ ಬಳಿ ಕಾರಿನ ಬಿಡಿಭಾಗಗಳು ಪತ್ತೆಯಾಗಿದ್ದು, ನಾಲೆಗೆ ಬಿದ್ದಿರುವ ಶಂಕೆ ಮೇರೆಗೆ ಹುಡುಕಾಟ ನಡೆದಿತ್ತು.
ಇದನ್ನೂ ಓದಿ | Missing case | ಅಧ್ಯಾತ್ಮದ ಕಡೆ ಹೆಚ್ಚು ಒಲವು ಹೊಂದಿದ್ದ ಚಂದ್ರಶೇಖರ್; ಮೈಸೂರು ಭಾಗದಲ್ಲಿರುವ ಶಂಕೆ