Site icon Vistara News

Missing Case | ರೇಣುಕಾಚಾರ್ಯ ತಮ್ಮನ ಪುತ್ರ ಚಂದ್ರಶೇಖರ್‌ ಕೊಠಡಿ ಶೋಧ; ಸಾಂತ್ವನ ಹೇಳಿದ ಬಿಎಸ್‌ವೈ

renukacharya_son_3

ದಾವಣಗೆರೆ: ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸಹೋದರ ಎಂ.ಪಿ.ರಮೇಶ್ ಪುತ್ರ ಚಂದ್ರಶೇಖರ್ ನಾಪತ್ತೆಯಾಗಿ (Missing Case) ೪ ದಿನ (ಅ.೩೦ರಂದು ನಾಪತ್ತೆ) ಕಳೆದಿದ್ದು, ಇನ್ನೂ ಪತ್ತೆಯಾಗದ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಂಡಿದೆ. ಎಂ.ಪಿ.ರಮೇಶ್ ಮನೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಿಷ್ಯಂತ್ ಭೇಟಿ ನೀಡಿದ್ದು, ಕೆಲವೊಂದು ಮಹತ್ವದ ಅಂಶಗಳ ಬಗ್ಗೆ ಚರ್ಚಿಸಿದ್ದಾರೆನ್ನಲಾಗಿದೆ.

ಇದೇ ವೇಳೆ ಪೊಲೀಸರು ಚಂದ್ರಶೇಖರ್ ಅವರ ಕೊಠಡಿಯನ್ನು ಸಹ ಪರಿಶೀಲನೆ ನಡೆಸಿದ್ದು, ಅಲ್ಲಿ ಯಾವುದಾದರೂ ಸುಳಿವು ಸಿಗಬಹುದೇ ಎಂದು ನೋಡಿದ್ದಾರೆನ್ನಲಾಗಿದೆ. ಆದರೆ, ಅಲ್ಲಿ ಯಾವುದಾದರೂ ಮಹತ್ವದ ಅಂಶಗಳು ಸಿಕ್ಕಿವೆಯೇ? ಇಲ್ಲವೇ ಎಂಬ ಬಗ್ಗೆ ಮಾಹಿತಿಯನ್ನು ನೀಡಲಾಗಿಲ್ಲ.

ಕುಟುಂಬದವರ ಜತೆ ೨ ಗಂಟೆ ರಿಷ್ಯಂತ್‌ ಮಾತುಕತೆ
ಎಂ.ಪಿ. ರಮೇಶ್‌ ಮನೆಯಲ್ಲಿ ವಿಚಾರಣೆ ಕೈಗೊಂಡಿರುವ ಎಸ್‌ಪಿ ರಿಷ್ಯಂತ್, ಸತತ ಎರಡು ಗಂಟೆಗಳ ಕಾಲ ಕುಟುಂಬದವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಚಂದ್ರಶೇಖರ ತಂದೆ, ಶಾಸಕ ರೇಣುಕಾಚಾರ್ಯ, ಉಳಿದ ಕುಟುಂಬ ಸದಸ್ಯರ ಜತೆ ಮುಖಾಮುಖಿ ಮಾತುಕತೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ | ರೇಣುಕಾಚಾರ್ಯ ಸಹೋದರನ ಪುತ್ರ ನಾಪತ್ತೆ ಪ್ರಕರಣ; ಅನುಮಾನಕ್ಕೆ ಎಡೆ ಮಾಡಿಕೊಟ್ಟ ಸಿಸಿ ಟಿವಿ ದೃಶ್ಯ

ಹಳೇ ದ್ವೇಷ, ವ್ಯವಹಾರ, ಬೆದರಿಕೆ, ಜಗಳ ಸೇರಿದಂತೆ ಇನ್ನಿತರ ಸಮಸ್ಯೆಗಳೇನಾದರೂ ಇವೆಯೇ ಎಂಬ ಬಗ್ಗೆ ವಿಚಾರಿಸಿದ್ದಾರೆನ್ನಲಾಗಿದೆ. ಬಳಿಕ ಮಾತನಾಡಿದ ರಿಷ್ಯಂತ್‌, ಚಂದ್ರಶೇಖರ್ ನಾಪತ್ತೆ ಬಗ್ಗೆ ತನಿಖೆ ನಡೆಯುತ್ತಿದೆ. ಶಿವಮೊಗ್ಗದಿಂದ ನ್ಯಾಮತಿ ಕಡೆ ಬಂದಿರುವ ಬಗ್ಗೆ ಮಾಹಿತಿ ಇದೆ. ಏನಾಗಿದೆ ಎಂಬುದರ ಬಗ್ಗೆ ಸದ್ಯಕ್ಕೆ ಏನನ್ನೂ ಹೇಳಲು ಸಾಧ್ಯವಿಲ್ಲ. ಈ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಆಗಮನ
ಶಾಸಕ ರೇಣುಕಾಚಾರ್ಯ ಅವರ ಹೊನ್ನಾಳಿಯಲ್ಲಿರುವ ಮನೆಗೆ ಜಿಲ್ಲಾಧಿಕಾರಿ ಶಿವಾನಂದ ಕಾಪಾಶಿ ಭೇಟಿ ನೀಡಿದ್ದು, ಶಾಸಕರಿಗೆ ಸಾಂತ್ವನ ಹೇಳಿದ್ದಾರೆ. ಜಿಲ್ಲಾ ಪಂಚಾಯಿತಿ ಸಿಇಒ, ತಹಸೀಲ್ದಾರ್ ಅವರು ಜತೆಗಿದ್ದರು.

ಯಡಿಯೂರಪ್ಪ ಸೇರಿ ಹಲವು ಮುಖಂಡರ ಕರೆ
ತಮ್ಮನ ಮಗ ನಾಪತ್ತೆಯಾಗಿರುವುದರಿಂದ ತೀವ್ರ ದುಃಖದಲ್ಲಿರುವ ರೇಣುಕಾಚಾರ್ಯ ಅವರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ‌, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಚಿವ ವಿ. ಸೋಮಣ್ಣ, ಮಾಜಿ ಸಚಿವ ಕೆ.ಎಸ್.‌ ಈಶ್ವರಪ್ಪ ಸೇರಿದಂತೆ ಹಲವು ನಾಯಕರು ಕರೆ ಮಾಡಿ ಸಾಂತ್ವನ ಹೇಳಿದ್ದಾರೆ. ಯಡಿಯೂರಪ್ಪ ಅವರು ಕರೆ ಮಾಡುತ್ತಿದ್ದಂತೆ ಗಳಗಳನೆ ಕಣ್ಣೀರು ಹಾಕಿದ ರೇಣುಕಾಚಾರ್ಯ ಅವರು, ನೋವನ್ನು ತೋಡಿಕೊಂಡರು.

ಇದನ್ನೂ ಓದಿ | Missing Case | ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಸಹೋದರನ ಪುತ್ರ ಕಾಣೆ!

ಸುರಹೊನ್ನೆಯಿಂದ ಮುಂದಿನ ಸುಳಿವಿಲ್ಲ
ಚಂದ್ರಶೇಖರ್ ಕಾರು ಶಿವಮೊಗ್ಗ-ನ್ಯಾಮತಿ ಮಧ್ಯೆ ಹೋಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶಿವಮೊಗ್ಗದಿಂದ ಬಂದ ಕಾರು ಸುರಹೊನ್ನೆ ಬಳಿ ಹಾದು ಹೋಗಿರುವುದು ಕಂಡುಬಂದಿದೆ. ಆದರೆ, ಸುರಹೊನ್ನೆಯಿಂದ ಹೊನ್ನಾಳಿಗೆ ಹೋಗಿರುವ ಬಗ್ಗೆ ಸುಳಿವು ಸಿಕ್ಕಿಲ್ಲ.

ಚಂದ್ರಶೇಖರ್ ತೆಗೆದುಕೊಂಡು ಹೋಗಿದ್ದ ವೈಟ್‌ ಕ್ರೆಟಾ ಕಾರು ಭಾನುವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಸುರಹೊನ್ನೆ ಬಳಿ ಹಾದು ಹೋಗಿರುವ ವಿಡಿಯೊ ಮಾತ್ರ ಲಭ್ಯವಾಗಿದೆ. ಸುರಹೊನ್ನೆ ಬಳಿ ಎರಡು ಕಾರು ಜತೆಯಲ್ಲಿ ಹಾದು ಹೋಗಿವೆ. ಒಂದು ಕಾರು ಚಂದ್ರಶೇಖರ್ ಅವರದ್ದು ಎನ್ನಲಾಗಿದ್ದು, ಇನ್ನೊಂದು ಕಾರು ಯಾರದ್ದು ಎಂಬುವುದರ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಸುರಹೊನ್ನೆಯಿಂದ ಹೊನ್ನಾಳಿಗೆ ಕಾರು ಬಂದ ಬಗ್ಗೆ ಯಾವುದೇ ಮಾಹಿತಿ ದೊರೆಯದ ಹಿನ್ನೆಲೆಯಲ್ಲಿ ಹಲವು ಅನುಮಾನ ಮೂಡಿದೆ.

ನಾಪತ್ತೆಗೂ ಮುನ್ನ ವಿನಯ್‌ ಗುರೂಜಿ ಆಶೀರ್ವಾದ ಪಡೆದಿದ್ದ ಚಂದ್ರು
ಕಳೆದ ಭಾನುವಾರ ಚಂದ್ರಶೇಖರ್‌ ಶಿವಮೊಗ್ಗದ ಗೌರಿಗದ್ದೆಗೆ ಹೋಗಿ ವಿನಯ್ ಗುರೂಜಿ ಆಶೀರ್ವಾದ ಪಡೆದಿದ್ದರು. ಜತೆಗೆ ಶಿವಮೊಗ್ಗದಲ್ಲಿ ಸ್ನೇಹಿತರನ್ನು ಮಾತನಾಡಿಸಿ ಹೊನ್ನಾಳಿಗೆ ಬಂದಿದ್ದರು ಎಂದು ತಿಳಿದು ಬಂದಿದೆ. ಆ ಬಳಿಕ ಭಾನುವಾರ ಸಂಜೆ ನಾಪತ್ತೆಯಾದವರು ಇನ್ನೂ ಸಿಕ್ಕಿಲ್ಲ. ಹೊನ್ನಾಳಿಯಲ್ಲಿ ಸೋಮವಾರ (ಅ.31) ಫೋನ್‌ ಸ್ವಿಚ್ಡ್‌ ಆಫ್‌ ಆಗಿದೆ. ನಂತರ ಇದುವರೆಗೂ ಫೋನ್‌ ಆನ್‌ ಆಗಿಲ್ಲ.

ಹೊನ್ನಾಳಿ ಪೊಲೀಸರಿಂದ ತೀವ್ರ ಹುಡುಕಾಟ ನಡೆಸಿದ್ದು, ಮನೆಯಲ್ಲಿ ರೇಣುಕಾಚಾರ್ಯ ಅವರ ಕುಟುಂಬ ಆತಂಕಗೊಂಡಿದ್ದಾರೆ. ಎಲ್ಲಿಗಾದರೂ ಹೋಗಬೇಕಾದರೆ ಯಾವಾಗಲು ಸ್ನೇಹಿತರೊಂದಿಗೆ ಹೋಗುತ್ತಿದ್ದವನು ಈ ಬಾರಿ ಒಬ್ಬನೇ ಹೋಗಿದ್ದಾನೆ ಎಂದು ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಚಂದ್ರು ಪೋಷಕರು ದೂರು ನೀಡಿದ್ದಾರೆ.

ಇದನ್ನೂ ಓದಿ | ಅಪಘಾತದಲ್ಲಿ ಯುವಕನಿಗೆ ಗಾಯ; ಆಸ್ಪತ್ರೆಗೆ ತೆರಳಲು ಶಾಸಕ ರೇಣುಕಾಚಾರ್ಯ ಸಹಾಯ

Exit mobile version