ಮೈಸೂರು: ರಾಜ್ಯದಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ದಂತ (Traffic Fine) ಪಾವತಿ ಮೊತ್ತ ಭಾರಿ ಪ್ರಮಾಣದಲ್ಲಿ ಇರುವುದರಿಂದ ರಾಜ್ಯ ಸರ್ಕಾರ ಶೇಕಡಾ ೫೦ರಷ್ಟು ದಂಡದಲ್ಲಿ ರಿಯಾಯಿತಿ ಘೋಷಿಸಿದ್ದೇ ಭಾರಿ ಪ್ರಮಾಣದಲ್ಲಿ ವಸೂಲಿಯಾಗುತ್ತಿದೆ. ಸಾರ್ವಜನಿಕರು ಸ್ವಯಂಪ್ರೇರಿತರಾಗಿ ದಂಡವನ್ನು ಕಟ್ಟುತ್ತಿದ್ದಾರೆ. ಈಗ ಮೈಸೂರಿನ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಅವರು ತಮ್ಮ ದಂಡದ ಹಣ ಕಟ್ಟಿದ್ದಾರೆ. ಅದೂ ಶೇಕಡಾ ೫೦ ರಿಯಾಯಿತಿಯಲ್ಲಿ ಎಂಬುದು ವಿಶೇಷ.
ಚಾಮರಾಜ ಕ್ಷೇತ್ರ ಶಾಸಕ ಎಲ್.ನಾಗೇಂದ್ರ ಅವರ ಕೆ.ಎ.09 Z 7999 ಕಾರಿನ ಮೇಲೆ ಅತಿ ವೇಗದ ಚಾಲನೆಗೆ ಸಂಬಂಧಪಟ್ಟಂತೆ ಸುಮಾರು 7 ಸಾವಿರ ರೂಪಾಯಿ ದಂಡ ಇತ್ತು. ಅವರು ಈವರೆಗೂ ಕಟ್ಟಿರಲಿಲ್ಲ ಎನ್ನಲಾಗಿದೆ. ಈಗ ರಾಜ್ಯ ಸರ್ಕಾರ ಘೋಷಿಸಿರುವ 50:50 ಅನುಪಾತದ ಲಾಭ ಪಡೆದುಕೊಂಡಿರುವ ಅವರು 3,500 ರೂ. ಹಣ ನೀಡಿ ರಶೀದಿ ಪಡೆದಿದ್ದಾರೆ.
ಇದನ್ನೂ ಓದಿ: Kantara Movie : ಸಮಸ್ಯೆ ಹೇಳಿಕೊಂಡು ಬಂದ ವಿವಾಹಿತೆಯನ್ನು ತಾನೇ ವರಿಸುವುದಾಗಿ ಹೇಳಿದ ದೈವ ಪಾತ್ರಿ!
ಮೈಸೂರಿನ ಮೆಟ್ರೋ ಪೋಲ್ ವೃತ್ತದಲ್ಲಿ ಸ್ವತಃ ಕಾರು ನಿಲ್ಲಿಸಿದ ಶಾಸಕ ನಾಗೇಂದ್ರ ಫೈನ್ ಕಟ್ಟುವ ಮೂಲಕ ಇತರರಿಗೂ ಮಾದರಿಯಾದರು. ಅಲ್ಲದೆ, ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಒಂದೇ ದಿನಕ್ಕೆ 5.61 ಕೋಟಿ ರೂ. ದಂಡ ಸಂಗ್ರಹ
ರಾಜ್ಯ ಸರ್ಕಾರ ಈ ರಿಯಾಯಿತಿ ಘೋಷಣೆ ಮಾಡಿ ಒಂದೇ ದಿನದೊಳಗೆ ಅಂದರೆ ಶುಕ್ರವಾರ (ಜ. ೩) ೫.೬೧ ಕೋಟಿ ರೂ. ದಂಡ ಸಂಗ್ರಹವಾಗಿದೆ. ಒಂದೇ ದಿನದಲ್ಲಿ ೨,೦೧,೮೨೮ ಪ್ರಕರಣಗಳು ಬಗೆಹರಿದಿದ್ದು, ೫,೫೧,೪೫,೦೦೦ ರೂಪಾಯಿ ದಂಡವು ಸಂಗ್ರಹವಾಗಿದೆ.
ಇದನ್ನೂ ಓದಿ: Drown in lake: ಎಚ್ಎಂಟಿ ಫ್ಯಾಕ್ಟರಿ ಹಿಂಭಾಗದ ಕೆರೆಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು; ಮೂವರು ಬಚಾವ್
ಶುಕ್ರವಾರ ಬೆಳಗ್ಗೆಯಿಂದಲೇ ಎಎಸ್‌ಎಐ, ಪಿಎಸ್‌ಐ ಮತ್ತು ಪಿಐ ಬಳಿ ಬರುತ್ತಿದ್ದ ಸಾರ್ವಜನಿಕರು ರಸ್ತೆ ಬದಿ ವಾಹನ ನಿಲ್ಲಿಸಿ ವಾಹನ ಸಂಖ್ಯೆ ಹೇಳಿ ದಂಡ ಪಾವತಿ ಮಾಡುತ್ತಿದ್ದರು. ಸಂಚಾರ ನಿರ್ವಹಣೆ ಕೇಂದ್ರ, ಬೆಂಗಳೂರು ಒನ್ ಹಾಗೂ ಪೇಟಿಎಂ ಆ್ಯಪ್ ಮೂಲಕವೂ ದಂಡವನ್ನು ಕಟ್ಟಿದ್ದಾರೆ.