ಮಂಡ್ಯ: ಸಂಸದೆ ಸುಮಲತಾ ಮತ್ತು ಶ್ರೀರಂಗಪಟ್ಟಣ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರ ನಡುವಿನ ಕದನ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಏಟ್ರಿಯಾ ಹೋಟೆಲ್‌ನಲ್ಲಿ ನಡೆದ ಘಟನೆಯೊಂದರ ವಿಡಿಯೊ ಈಗ ವಿವಾದದ ಕೇಂದ್ರ ಬಿಂದುವಾಗಿದೆ. ʻʻನಾನು ಅದನ್ನು ಈಗ ಬಿಡುಗಡೆ ಮಾಡಲ್ಲ. ಚುನಾವಣೆ ಟೈಮಲ್ಲಿ ಬಿಡುಗಡೆ ಮಾಡುತ್ತೇನೆʼʼ ಎಂದು ಶಾಸಕ ರವೀಂದ್ರ ಹೇಳಿರುವುದು ಕುತೂಹಲ ಮೂಡಿಸಿದೆ.
ಕಳೆದ ಕೆಲವು ದಿನಗಳಿಂದ ವಿಡಿಯೊ ವಿಚಾರ ಚರ್ಚೆಯಲ್ಲಿದೆ. ರವೀಂದ್ರ ಅವರು ಆಗಾಗ ವಿಡಿಯೊ ಬಗ್ಗೆ ಮಾತನಾಡುತ್ತಿರುವುದನ್ನು ನೋಡಿದ ಸುಮಲತಾ ʻಏಟ್ರಿಯಾ ಹೋಟೆಲ್ ವಿಡಿಯೊ ನಾನೇ ಕಳುಹಿಸಿಕೊಡುತ್ತೇನೆ. ಯಾವ ವಿಡಿಯೊ ಬೇಕು ಹೇಳಿʼʼ ಎಂದು ಸವಾಲು ಹಾಕಿದ್ದರು. ಈಗ ರವೀಂದ್ರ ಅವರು ಈ ಸವಾಲಿಗೆ ಪ್ರತ್ಯುತ್ತರ ನೀಡಿದ್ದಾರೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಬಸ್ತೀಪುರ ಗ್ರಾಮದಲ್ಲಿ ಮಾತನಾಡಿರುವ ಅವರು, ನಾನು ಅವರ ವೈಯಕ್ತಿಕ ಬದುಕಿನ ವಿಡಿಯೊವನ್ನು ನಾನು ಕೇಳಿಲ್ಲ ಎಂದಿದ್ದಾರೆ.
ʻʻಕಾರಿನಲ್ಲಿ ಕೂತು ಬಹಳ ಉತ್ಸಾಹದಿಂದ ಮಾತನಾಡಿದ್ದಾರೆ. ಹೊಟೇಲ್ ನಲ್ಲಿ ದಿಲೀಪ್ ಬಿಲ್ಡ್ ಕಾನ್‌ನ ಅಧಿಕಾರಿಯನ್ನು ಕರೆಸಿ ಇವರ ಸ್ವಂತದವರು ಮಾತನಾಡಿರೊ ವಿಡಿಯೊ ಕಳುಹಿಸಿಕೊಡಲಿ. ಪೆನ್ ಡ್ರೈವ್ ಗೆ ಹಾಕಿ ಕಳುಹಿಸಿ ಕೊಡಲಿ. ನಾನು ಆ ವಿಡಿಯೊವನ್ನು ಹಳ್ಳಿಗಳ ಜನರಿಗೆ ತೋರಿಸುತ್ತೇನೆ. ಅವರಿಗೂ ಈ ವಿಷಯಗಳೆಲ್ಲ ಗೊತ್ತಾಗಲಿʼʼ ಎಂದಿದ್ದಾರೆ.
ʻʻರವೀಂದ್ರ ಏನು ಎಂದು ತೀರ್ಮಾನ ಮಾಡೋರು ಜನ. ಸುಮಲತಾ ಅವರಲ್ಲ. ನನ್ನ ಕ್ಷೇತ್ರದಲ್ಲಿ ಕೆಲಸ ಆಗ್ತಿದಿಯಾ? ಇಲ್ಲವಾ ಎಂದು ಸರ್ಟಿಫಿಕೆಟ್ ಕೊಡೋರು ಜನ. ಇವರು ನನಗೆ ಸರ್ಟಿಫಿಕೆಟ್ ಕೊಡುವ ಅಗತ್ಯವಿಲ್ಲ. ನಿಜ ಹೇಳಬೇಕು ಅಂದರೆ ಇವರಿಗೆ ಸರ್ಟಿಫಿಕೆಟ್ ಕೊಡಲು ಜನ ಕಾಯುತ್ತಿದ್ದಾರೆʼʼ ಎಂದಿರುವ ರವೀಂದ್ರ, ʻʻನಿಮ್ಮ ದುರಹಂಕಾರದ ನಡವಳಿಕೆ ಬಗ್ಗೆ ಸ್ವಲ್ಪ ಆತ್ಮವಲೋಕನ ಮಾಡ್ಕೊಳ್ಳಿʼʼ ಎಂದು ಕಿವಿಮಾತು ಹೇಳಿದ್ದಾರೆ.
ʻʻಸಂಸದರಾದ ಸುಮಲತಾ ಅವರಿಗೆ ನನ್ನ ಇತಿಹಾಸ ಗೊತ್ತಿಲ್ಲ. ಕಳೆದ 52 ವರ್ಷಗಳಿಂದ ನನ್ನ ಕುಟುಂಬ ರಾಜಕಾರಣದಲ್ಲಿದೆ. ನಾನಿರುವ ವರೆಗೂ ಕ್ಷೇತ್ರದಲ್ಲಿ ರಾಜಕಾರಣ ಮಾಡ್ಕೊಂಡಿರ್ತೇನೆ. ಚುನಾವಣೆಯಲ್ಲಿ ಜನರು ನನಗೆ ಟಾಟಾ ಬೈಬೈ ಹೇಳ್ತಾರೋ ಇವರಿಗೆ ಟಾ ಟಾ ಹೇಳ್ತಾರೋ ನೋಡೋಣ. ಅವರು ಸಂಸದೆ ಆಗಿ ಮೂರುವರೆ ವರ್ಷಗಳಾಗಿವೆ. ಕೇಂದ್ರ ಸರ್ಕಾರದಿಂದ ಅವರು ತಂದಿರುವ ಯೋಜನೆಗಳ ಪಟ್ಟಿ ಬಿಡುಗಡೆ ಮಾಡಲಿ. ಕಡೇ ಪಕ್ಷ ಶ್ರೀರಂಗಪಟ್ಟಣದಲ್ಲಿ ಒಂದು ರೈಲು ನಿಲ್ಲಿಸುವ ಯೋಗ್ಯತೆ ಇಲ್ಲ. ಹೀಗಿರುವ ಅವರಿಗೆ ನನ್ನ ಕಾರ್ಯ ವ್ಯಾಪ್ತಿ ಬಗೆಗೆ ಮಾತನಾಡೋ ಅರ್ಹತೆ ಇಲ್ಲʼʼ ಎಂದು ರವೀಂದ್ರ ಶ್ರೀಕಂಠಯ್ಯ ಹೇಳಿದ್ದಾರೆ.
ನಾನೇ ಬಿಡುಗಡೆ ಮಾಡ್ತೀನಿ
ʻʻಇವರು ಏಟ್ರಿಯಾ ಹೊಟೇಲ್‌ನಲ್ಲಿ ಕುಳಿತು ಪಾರ್ಟಿ ಮಾಡಿದ್ದು, ಸ್ವಂತ ಕೆಲಸಕ್ಕೆ ಹೋಗೊ ವಿಡಿಯೊವನ್ನು ನಾನು ಕೇಳಿಲ್ಲ. ಇವರು ಅಧಿಕಾರಿಯನ್ನು ಕೂರಿಸಿಕೊಂಡು ಮಾತಾಡ್ತಿರೊ ವಿಡಿಯೊ ನಮ್ಮ ಬಳಿ ಇದೆ. ಅಧಿಕಾರಿನ ಕೂರಿಸಿಕೊಂಡು ಒತ್ತಡ ಹಾಕಿದ್ದು, ಏನೇನು ಮಾತಾಡಿದ್ದಾರೆ ಎಂಬ ಬಗೆಗೆ ರೆಕಾರ್ಡ್ ಇದೆ. ಇದೆಲ್ಲವನ್ನ ನಾವು ಚುನಾವಣೆ ಸಂದರ್ಭದಲ್ಲಿ ಬಿಡುಗಡೆ ಮಾಡ್ತೇವೆʼʼ ಎಂದರು.
ʻʻಈಗ ವಿಡಿಯೊ ಬಿಡುಗಡೆ ಮಾಡಿದ್ರೆ ನ್ಯಾಯ ಸಿಕ್ಕಲ್ಲ. ಈಗಿನ ಸರ್ಕಾರದಲ್ಲಿ ನ್ಯಾಯ ಸಿಗಲ್ಲ. ಹಾಗಾಗಿ ಜನರೇ ತೀರ್ಮಾನಿಸಲಿ ಎಂದು ಚುನಾವಣೆ ಟೈಂ ಗೆ ವಿಡಿಯೊ ಬಿಡುಗಡೆ ಮಾಡುತ್ತೇನೆ. ನಾವು ಜೆಡಿಎಸ್‌ನವರು ಸುಳ್ಳು ಹೇಳಲ್ಲ. ನಾವೆಲ್ಲಾ ದೇವರನ್ನು ಪೂಜಿಸುವ ಜನ. ರೈತರ ಪರವಾಗಿರುವ ಜನ. ಚುನಾವಣೆ ಸಂದರ್ಭದಲ್ಲಿ ಮುಲಾಜಿಲ್ಲದೆ ಪಬ್ಲಿಕ್ ಕೋರ್ಟ್ ಗೆ ನಾವು ಅಪೀಲ್ ಮಾಡ್ತೀವಿʼʼ ಎಂದರು ಶಾಸಕ.