ಮೈಸೂರು: ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಪುತ್ರ ಸಾ.ರಾ.ಧನುಷ್ ಕಾರಿಗೆ ಕಲ್ಲು ತೂರಾಟ ನಡೆಸಿರುವ ಘಟನೆ ಕೆ.ಆರ್.ನಗರ ಕ್ಷೇತ್ರದ ಬೀಚನಹಳ್ಳಿ ಕೊಪ್ಪಲು ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ. ಮತಯಾಚನೆ (Karnataka Election) ವೇಳೆ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಕೈ ಕಾರ್ಯಕರ್ತರು, ಸಾ.ರಾ.ಧನುಷ್ ಕಾರಿಗೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಕಲ್ಲು ತೂರಾಟ ವಿರೋಧಿಸಿ ಜೆಡಿಎಸ್ ಕಾರ್ಯಕರ್ತರು ಬೀಚನಹಳ್ಳಿ ಗೇಟ್ ಬಳಿ ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ | Karnataka Election 2023: ಆರ್‌ಎಸ್‌ಎಸ್ ಹಿನ್ನೆಲೆಯ ಶೆಟ್ಟರ್ ಪರ ಪ್ರಚಾರ : ಸೋನಿಯಾ ವಿರುದ್ಧ ಓವೈಸಿ ಕಿಡಿ
ವರುಣ ಕ್ಷೇತ್ರದಲ್ಲಿ ಬಿಜೆಪಿ ಬೂತ್ ಅಧ್ಯಕ್ಷನ ಮೇಲೆ ಹಲ್ಲೆ
ಮೈಸೂರು: ವರುಣದಲ್ಲಿ ರಾಜಕೀಯ ಗಲಾಟೆ ಮುಂದುವರಿದಿದೆ. ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಬೂತ್ ಅಧ್ಯಕ್ಷನ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ವರುಣ ಕ್ಷೇತ್ರದ ಬೂತ್ ನಂಬರ್ 109ರ ಬಿಜೆಪಿ ಬೂತ್ ಅಧ್ಯಕ್ಷ ದಿಲೀಪ್ ಕುಮಾರ್ ಗಾಯಾಳು. ಬಿಜೆಪಿಗೆ ನೀವು ಬೆಂಬಲ ನೀಡುತ್ತಿದ್ದೀರಿ, ಬೆಂಬಲ ನಿಲ್ಲಿಸಿ ಕಾಂಗ್ರೆಸ್ ಬೆಂಬಲಿಸಬೇಕು ಎಂದು ಕೈ ಕಾರ್ಯಕರ್ತರು ಹಲ್ಲೆ ಮಾಡಿದ್ದು, ದಿಲೀಪ್ ಕುಮಾರ್ ತಲೆಗೆ ಗಾಯವಾಗಿದೆ. ಅವರನ್ನು ತಿ.ನರಸೀಪುರ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಕ್ಷುಲ್ಲಕ ಕಾರಣಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಗಲಾಟೆ ಮಾಡಿ ಹಲ್ಲೆ ಮಾಡಿದ್ದಾರೆ ಎಂದು ಗಾಯಾಳು ದಿಲೀಪ್ ಕುಮಾರ್, ತಿ.ನರಸೀಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಜೆಡಿಎಸ್-ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ
ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದ ಬಾಣಾವರ ಗೇಟ್ ಬಳಿ ಜೆಡಿಎಸ್ ರೋಡ್ ಶೋ ವೇಳೆ ಜೆಡಿಎಸ್- ಬಿಜೆಪಿ ಕಾರ್ಯಕರ್ತರ ನಡುವೆ ತೀವ್ರ ವಾಗ್ವಾದ ನಡೆದಿದೆ. ಬಿಜೆಪಿ ಕಚೇರಿ ಮೂಲಕ ರೋಡ್ ಶೋ ಹಾದು ಹೋಗುತ್ತಿದ್ದಾಗ, ಉಭಯ ಪಕ್ಷದ ಕಾರ್ಯಕರ್ತರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಹಬಂದಿಗೆ ತಂದಿದ್ದಾರೆ.