ಮೈಸೂರು: ನರಸಿಂಹರಾಜ ಕ್ಷೇತ್ರದ ಶಾಸಕ, ಮಾಜಿ ಸಚಿವ ತನ್ವೀರ್ ಸೇಠ್ (Tanveer Sait) ರಾಜಕೀಯ ನಿವೃತ್ತಿಯನ್ನು ಘೋಷಣೆ ಮಾಡಿದ್ದಾರೆ. ಚುನಾವಣೆ ಹೊಸ್ತಿಲಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಡಿಸೆಂಬರ್‌ನಲ್ಲಿಯೇ ಎಐಸಿಸಿ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ನಿವೃತ್ತಿ ಘೋಷಿತ ಪತ್ರವನ್ನು ತನ್ವೀರ್ ಸೇಠ್ ನೀಡಿದ್ದರು. ಆದರೆ, ಅವರು ನಿರಾಕರಿಸಿದ್ದರೆಂದು ತಿಳಿದುಬಂದಿದೆ.
ಅಧಿವೇಶನದ ಸಂದರ್ಭದಲ್ಲಿ ಅಂದರೆ ಡಿಸೆಂಬರ್‌ನಲ್ಲಿಯೇ ಎಐಸಿಸಿ, ಕೆಪಿಸಿಸಿಗೆ ಪತ್ರ ಬರೆದು ತಮ್ಮ ರಾಜಕೀಯ ಜೀವನವನ್ನು ಕೊನೆಗೊಳಿಸುತ್ತಿರುವುದಾಗಿ ಹೇಳಿದ್ದರು ಎನ್ನಲಾಗಿದೆ. ಇದಕ್ಕೆ ಅನಾರೋಗ್ಯದ ಕಾರಣವನ್ನೂ ನೀಡಿದ್ದರು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ರಾಜಕೀಯ ನಿವೃತ್ತಿ ಬಗ್ಗೆ ತಿಳಿಸಿದ್ದರು. ಆಗ ಈ ಇಬ್ಬರು ನಾಯಕರೂ ಸಾರಾಸಗಟಾಗಿ ತಿರಸ್ಕರಿಸಿದ್ದು ನೀವೇ ಸ್ಪರ್ಧೆ ಮಾಡಿ ಎಂದು ಹೇಳಿದ್ದರು ಎಂದು ತಿಳಿದುಬಂದಿದೆ. ಅಲ್ಲದೆ, ತನ್ವೀರ್ ಈ ವಿಷಯವನ್ನು ಸಿದ್ದರಾಮಯ್ಯ ಅವರ ಗಮನಕ್ಕೂ ತಂದಿದ್ದರು ಎನ್ನಲಾಗಿದ್ದು, ಅವರೂ ಸಹ ನಿರಾಕರಿಸಿದ್ದರು ಎಂದು ಹೇಳಲಾಗುತ್ತಿದೆ.
ತನ್ವೀರ್ ಸೇಠ್ ಮನೆ ಮುಂದೆ ಬೆಂಬಲಿಗರು
ರಾಜಕೀಯ ನಿವೃತ್ತಿ ವಿಷಯ ಈಗ ಬಹಿರಂಗಗೊಂಡಿದ್ದು, ಗೊತ್ತಾಗುತ್ತಿದ್ದಂತೆ ತನ್ವೀರ್ ಸೇಠ್ ಮನೆ ಮುಂದೆ ಬೆಂಬಲಿಗರು ದೌಡಾಯಿಸಿದ್ದಾರೆ. ನಿವೃತ್ತಿ ಘೋಷಣೆ ನಿರ್ಧಾರದಿಂದ ಹಿಂದೆ ಸರಿಯುವಂತೆ ಒತ್ತಡ ಹೇರುತ್ತಿದ್ದಾರೆ. ನೂರಾರು ಕಾರ್ಯಕರ್ತರು ಮನೆ ಮುಂದೆ ಹಾಜರಿದ್ದು, ಎಲ್ಲರೂ ಈ ನಿರ್ಧಾರಕ್ಕೆ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಮುಂದೆಯೂ ನೀವೇ ಶಾಸಕರಾಗಬೇಕು. ಯಾವುದೇ ಕಾರಣಕ್ಕೂ ಸ್ಪರ್ಧೆ ಮಾಡುವುದಿಲ್ಲ ಎಂದರೆ ಹೇಗೆ? ನೀವೇ ನಮ್ಮ ನಾಯಕರು, ಈ ಬಾರಿಯೂ ನೀವೇ ಸ್ಪರ್ಧೆ ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ.