ಗದಗ: ಹಿಂದುಸ್ತಾನಕ್ಕೆ ಕ್ರೂರ ಸಿಂಹ ಬೇಕಾಗಿದೆಯೇ ಹೊರತು ಅಳುವ ಸಿಂಹ ಬೇಕಿಲ್ಲ. ಗಣೇಶನನ್ನು ಕೂರಿಸಲು ಯಾರಪ್ಪನ ಅನುಮತಿ ಬೇಕಿಲ್ಲ, ಇನ್ನು 5 ವರ್ಷದಲ್ಲಿ ಪಾಕಿಸ್ತಾನದಲ್ಲೂ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ನಗರದಲ್ಲಿ ಹಿಂದು ಮಹಾಗಣಪತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದ ಅವರು, ಹಿಂದುಗಳು ಭಾರತದಲ್ಲಿ ಸುರಕ್ಷಿತವಾಗಿದ್ದಾರೆ. ಆದರೆ, ಹಿಂದುಗಳು ಸಂಭಾವಿತರೆಂದು ಹಲ್ಲೆ ಮಾಡುವುದು ಸಲ್ಲದು. ಸಾವರ್ಕರ್ ಕುಟುಂಬ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದೆ. ಸಾವರ್ಕರ್ ಕಾಲಿನ ಧೂಳಿನ ಸಮ ಇಲ್ಲದವರು ಅವರ ಬಗ್ಗೆ ಮಾತನಾಡುತ್ತಾರೆ ಎಂದರು.
ಗಾಂಧೀಜಿ ಅವರಿಂದ ಮಾತ್ರ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿಲ್ಲ. ಹಲವರ ಪರಿಶ್ರಮದಿಂದ ಸ್ವಾತಂತ್ರ್ಯ ಸಿಕ್ಕಿದೆ. ಕೆಲವರು ಜೈಲುವಾಸ ಅನುಭವಿಸಿದ್ದರೆ ಮತ್ತೆ ಕೆಲವರು ಐಷಾರಾಮಿ ಜೀವನ ಅನುಭವಿಸಿದ್ದಾರೆ. ಅಷ್ಟಕ್ಕೂ, ನೆಹರು ಅವರಿಂದ ದೇಶ ಉದ್ಧಾರ ಆಗಿಲ್ಲ ಎಂದರು.
ನಾನು ಸಿಎಂ ಆಗಿದ್ದರೆ ರಾಜ್ಯದಲ್ಲಿ ಎನ್‌ಕೌಂಟರ್ ಸ್ಪೆಷಲಿಸ್ಟ್ ಇಡುತ್ತಿದ್ದೆ. ಒಬ್ಬರನ್ನು ಜೈಲಿಗೆ ಕಳುಹಿಸಿ, ಮತ್ತೊಬ್ಬರನ್ನು ಕಾಡಿಗೆ ಕಳುಹಿಸುತ್ತಿದ್ದೆ. ಭಾರತದಲ್ಲಿ ಎಲ್ಲವೂ ಬದಲಾಗುತ್ತಿದೆ. ಒಂದು ಕಾಲದಲ್ಲಿ ಪ್ರಧಾನಿಗೆ ಅಮೆರಿಕ ವೀಸಾ ಕೊಟ್ಟಿರಲಿಲ್ಲ. ಈಗ ಭಾರತದ ಆರ್ಥಿಕತೆ ವೇಗವಾಗಿ ಮುನ್ನುಗುತ್ತಿದೆ. ಅಂದು ವೀಸಾ ನೀಡದವರು ಇಂದು ಬೆನ್ನು ಭಾಗಿ ಮೋದಿಗೆ ನಮಸ್ಕರಿಸುತ್ತಾರೆ ಎಂದರು.
ಕಠಿಣ ಕ್ರಮ ಕೈಗೊಳ್ಳಲಾಗವುದು ಎಂಬ ಸಿಎಂ ಬೊಮ್ಮಾಯಿ ಮಾತಿಗೆ ಪ್ರತಿಕ್ರಿಯಿಸಿ, ಒಮ್ಮೆ ಕಠಿಣ ಕ್ರಮ ಕೈಗೊಳ್ಳಲಾಗುವುದು, ಮತ್ತೊಮ್ಮೆ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಾಗುವುದು, ಇನ್ನೊಮ್ಮೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂಬಂತಹ ಮಾತುಗಳನ್ನು ಸಿಎಂ ಆಡುತ್ತಿದ್ದಾರೆ. ಆದರೆ ಏನೂ ಮಾಡುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ | ಧಾರವಾಡ | ಗಣೇಶ ಮೆರವಣಿಗೆಯಲ್ಲಿ ಯುವಕನ ಮೇಲೆ ಹಲ್ಲೆ, ಹುಬ್ಬಿನೊಳಗೆ ಹೊಕ್ಕ ಚಾಕು