Site icon Vistara News

ಚಾಮರಾಜಪೇಟೆ ಮೈದಾನದಲ್ಲಿ ತ್ರಿವರ್ಣ ಧ್ವಜಾರೋಹಣ: ಶಾಸಕ ಜಮೀರ್‌ ಅಹ್ಮದ್‌

Zameer ahmad Khan about Speaker post

ಬೆಂಗಳೂರು: ಅನೇಕ ದಿನಗಳಿಂದ ವಿವಾದಕ್ಕೆ ಕಾರಣವಾಗಿರುವ ಚಾಮರಾಜಪೇಟೆ ಆಟದ ಮೈದಾನದಲ್ಲಿ ಇದೇ ವರ್ಷದಿಂದ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ವಕ್ಕೆ ತ್ರಿವರ್ಣ ಧ್ವಜಾರೋಹಣ ನೆರವೇರಿಸಲಾಗುತ್ತದೆ ಎಂದು ಚಾಮರಾಜಪೇಟೆ ಶಾಸಕ ಬಿ.ಜಡ್‌. ಜಮೀರ್‌ ಅಹ್ಮದ್‌ ಖಾನ್‌ ಶುಕ್ರವಾರ ತಿಳಿಸಿದ್ದಾರೆ.

ವಿವಾದದ ಕುರಿತಂತೆ ಚರ್ಚಿಸಲು ತಮ್ಮ ನೇತೃತ್ವದಲ್ಲಿ ಚಾಮರಾಜಪೇಟೆಯ ವೆಂಕಟರಾಮ್ ಕಲಾ ಭವನದಲ್ಲಿ ಆಯೋಜನೆಯಾಗಿದ್ದ ಎಲ್ಲ ವಾರ್ಡ್‌ಗಳ ಸಭೆಯಲ್ಲಿ ಜಮೀರ್‌ ಮಾತನಾಡಿದ್ದಾರೆ.

ಆಟದ ಮೈದಾನ ಉಳಿಸಿ ಎಂದು ಅನೇಕರು ಬೇಡಿಕೆ ಇಟ್ಟಿದ್ದಾರೆ. ಆಟದ ಮೈದಾನ ಎಲ್ಲಿ ಹೋಗಿದೆ ಎಂಬುದು ಪ್ರಶ್ನೆ. ಆಟದ ಮೈದಾನವನ್ನು ತೆಗೆದುಕೊಂಡು ಹೋಗೋಕೆ ಸಾಧ್ಯವೇ? ನೂರಾರು ವರ್ಷಗಳಿಂದ ಆಟದ ಮೈದಾನವಾಗಿದೆ, ಜಮೀರ್ ಜೀವಂತವಾಗಿರುವ ತನಕ ಆಟದ ಮೈದಾನವಾಗಿಯೇ ಇರುತ್ತದೆ. ಚಾಮರಾಜಪೇಟೆಯವರು ಯಾರೂ ನನ್ನ ವಿರುದ್ಧ ಮಾತನಾಡುವುದಿಲ್ಲ. ನನ್ನ‌ ವಿರುದ್ಧ ಮಾತನಾಡುವವರು ಚಾಮರಾಜಪೇಟೆಯವರೇ ಅಲ್ಲ. ಇಷ್ಟೆಲ್ಲಾ ಮಾತನಾಡುವವರು ಕೋವಿಡ್ ಸಮಯದಲ್ಲಿ ಎಲ್ಲಿ ಇದ್ದರು? ಕೋವಿಡ್ ಸಮಯದಲ್ಲಿ 580 ಶವಗಳನ್ನು ಎತ್ತಿದ್ದೇವೆ ಎಂದು ಮೈದಾನದ ಕುರಿತು ಪ್ರತಿಭಟನೆ ನಡೆಸುತ್ತಿರುವವರನ್ನು ಜಮೀರ್‌ ಟೀಕಿಸಿದರು.

ನನಗೆ ಹಿಂದು ಮುಸ್ಲಿಂ ಎಂಭ ಭೇದ ಇಲ್ಲ. ನನಗೆ ಗೊತ್ತಿರುವುದು ಹೆಣ್ಣು ಗಂಡು ಮಾತ್ರ. ರಾಜಕೀಯ ವಿವಾದ ಸೃಷ್ಟಿ ಮಾಡಲು ಹೀಗೆಲ್ಲ ಮಾಡುತ್ತಿದ್ದಾರೆ. ಇದೆಲ್ಲದರ ಹಿಂದೆ ಯಾರಿದ್ದಾರೆ ಎನ್ನುವುದು ಗೊತ್ತಿದೆ. ಇದಕ್ಕೆಲ್ಲ ಚಾಮರಾಜಪೇಟೆ ಮತದಾರರೇ ಉತ್ತರ ನೀಡುತ್ತಾರೆ ಎಂದರು.

ನನ್ನ ಕೊರಳ ಪಟ್ಟಿ ಹಿಡಿದು ಕೇಳುವ ಹಕ್ಕು ಚಾಮರಾಜಪೇಟೆಯ ಜನತೆಗೆ ಇದೆ. ಎಂಎಲ್‌ಎ ಎಂದ ಕೂಡಲೆ ದೊಡ್ಡವನಲ್ಲ, ನೀವು ಆಯ್ಕೆ ಮಾಡಿ ಕಳಿಸಿದ್ದೀರಿ. ಏನೇ ಇದ್ದರೂ ಕೇಳಿ, ನಾನೊಬ್ಬ ಗುಲಾಮ. ನಾನು ಕ್ಷೇತ್ರದ ಜನರ ಸೇವಕ. ಹೇ ಜಮೀರ್ ಈ ಕೆಲಸ ಮಾಡು ಎಂದರೆ ನಾನು ಮಾಡುತ್ತೇನೆ. ಈ ವರ್ಷದಿಂದಲೇ ಆಗಸ್ಟ್‌ 15ರಂದು ತ್ರಿವರ್ಣ ಧ್ವಜಾರೋಹಣವನ್ನು ನನ್ನ ನೇತೃತ್ವದಲ್ಲೆ ಮಾಡಲಾಗುತ್ತದೆ. ಗಣರಾಜ್ಯೋತ್ಸವಕ್ಕೂ ಧ್ವಜಾರೋಹಣ ನೆರವೇರಿಸಲಾಗುತ್ತದೆ. ತಲೆಯ ಮೇಲೆ ಹೊತ್ತುಕೊಂಡು ಧ್ವಜಾರೋಹಣಕ್ಕೆ ಸಿದ್ಧನಾಗಿದ್ದೇನೆ ಎಂದರು.

ಜುಲೈ 12ರ ಬಂದ್‌ ಕುರಿತು ಪ್ರತಿಕ್ರಿಯಿಸಿ, ಯಾವ ಹಿನ್ನೆಲೆಯಲ್ಲಿ ಚಾಮರಾಜಪೇಟೆ ಬಂದ್‌ಗೆ ಕರೆ ಕೊಟ್ಟಿದ್ದಾರೆ ಗೊತ್ತಿಲ್ಲ. ಬಂದ್‌ಗೆ ಪೊಲೀಸರು ಇನ್ನೂ ಅನುಮತಿ ಕೊಟ್ಟಿಲ್ಲ. ಪೊಲೀಸರು ಅನುಮತಿ ನೀಡಬಾರದು ಎಂದು ಮನವಿ ಮಾಡಿದರು.

ಇದನ್ನೂ ಓದಿ | ಚಾಮರಾಜಪೇಟೆ ಮೈದಾನ: ದಾಖಲೆ ಇದ್ದರೂ ಒಪ್ಪದ ಬಿಬಿಎಂಪಿ, ದ್ವಂದ್ವ ಮುಂದುವರಿಕೆ

ಪ್ರಕರಣದ ವಿವರ ನೀಡಿದ ಜಮೀರ್‌

ಈ ವಿಚಾರದಲ್ಲಿ ಮೊದಲಿಗೆ 1945ರಲ್ಲಿ ರಲ್ಲಿ ಕೋರ್ಟ್ ನಲ್ಲಿ ದಾವೆ ಹೂಡಲಾಗಿತ್ತು. ಒಂದು ವರ್ಷ ವಾದ ನಡೆದರೂ ಅಂದಿನ ಮುನ್ಸಿಪಲ್ ಸಂಸ್ಥೆ ದಾಖಲೆ ನೀಡಲು ವಿಫಲವಾಗಿತ್ತು. 1958ರಲ್ಲಿ ಕಾರ್ಪೋರೇಷನ್ ವತಿಯಿಂದ ಮೈಸೂರು ನ್ಯಾಯಾಲಯಕ್ಕೆ ಅಪೀಲು ಹೋಗಲಾಯಿತು. ಅಲ್ಲಿಯೂ ದಾಖಲೆ ನೀಡಲು ಕಾರ್ಪೋರೇಷನ್ ವಿಫಲವಾಗಿತ್ತು.
ಸುಪ್ರೀಂಕೋರ್ಟ್‌ನಲ್ಲೂ ದಾಖಲೆ ಸಲ್ಲಿಸುವಲ್ಲಿ ಕಾರ್ಪೋರೇಷನ್ ವಿಫಲವಾಗಿದೆ. 1964ರಲ್ಲಿ ಸುಪ್ರೀಂಕೋರ್ಟ್‌ ಪ್ರರಕಣವನ್ನು ಇತ್ಯರ್ಥ ಮಾಡಿ, 1965ರಲ್ಲಿ ವಕ್ಫ್‌ ಪರವಾಗಿ ಗೆಜೆಟ್ ನೊಟಿಫಿಕೇಷನ್ ಆಗಿದೆ.
ಗೆಜೆಟ್ ನೊಟಿಫಿಕೇಷನ್ ಆದಾಗ ಅಂದಿನ ಕಾರ್ಪೋರೇಷನ್ ವಿರೋಧಿಸದೆ ಸುಮ್ಮನಿತ್ತು. ಆದರೆ 1972ರಲ್ಲಿ ಕಾರ್ಪೋರೇಷನ್ ವತಿಯಿಂದ ಮತ್ತೆ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಯಿತು ಎಂದು ಪ್ರರಕಣದ ಇತಿಹಾಸವನ್ನು ಜಮೀರ್‌ ತಿಳಿಸಿದರು.

ಸಂಸದರು ಬಂದಿಲ್ಲ

ಇದಕ್ಕೂ ಮುನ್ನ ಮಾತನಾಡಿದ ಮಾಜಿ ಕಾರ್ಪೊರೇಟರ್‌ ಚಂದ್ರಶೇಖರ್‌ ಮಾತನಾಡಿ, ಸಭೆಗೆ ಸಂಸದ ಪಿ.ಸಿ. ಮೋಹನ್‌, ಮಾಜಿ ಶಾಸಕಿ ಪ್ರಮೀಳಾ ನೇಸರ್ಗಿ ಅವರನ್ನೂ ಆಹ್ವಾನಿಸಿದ್ದೆವು, ಆದರೆ ಯಾವ ಕಾರಣಕ್ಕೆ ಬಂದಿಲ್ಲ ಗೊತ್ತಾಗುತ್ತಿಲ್ಲ. ಸ್ಥಳೀಯ ಶಾಸಕರು ಆಟದ ಮೈದಾನವನ್ನು ಉಳಿಸಿಕೊಂಡು ಹೋಗಬೇಕು ಎನ್ನುವುದು ನಮ್ಮ ಆಸೆ. ನಾವು ಇರುವವರೆಗೂ ಆಟದ ಮೈದಾನ ಉಳಿಸಿಕೊಂಡು ಹೋಗುತ್ತೇವೆ ಎಂದು ಶಾಸಕರು ಭರವಸೆ ನೀಡಲಿ. 45 ವರ್ಷಗಳಿಂದ ಹೀಗೆಯೇ ಇದೆ. ಅವರು ನಮಾಜ್ ಮಾಡಿಕೊಂಡು ಹೋಗುತ್ತಾ ಇದ್ದಾರೆ, ನಾವು ಆಟ ಆಡಿಕೊಂಡು ಹೋಗುತ್ತಾ ಇದ್ದೇವೆ. ಹಾಗೆ ಹೇಳಿದರೆ ಮಾತ್ರವೇ ನಾವು ಪ್ರತಿಭಟನೆಯನ್ನು ಕೈಬಿಡುತ್ತೇವೆ. ಬಿಬಿಎಂಪಿ ಆಯುಕ್ತರ ಹೇಳಿಕೆಯಿಂದ ಈ ಗೊಂದಲ ಸೃಷ್ಟಿಯಾಗಿದೆ. ಅದನ್ನು ಸರಿ ಪಡಿಸಲು ಈ ಸಭೆಯಲ್ಲಿ ಪ್ರಯತ್ನ ಪಡಲಾಗುವುದು ಎಂದರು.

ಇದನ್ನೂ ಓದಿ | ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ: ಜುಲೈ 12ರಂದು ಚಾಮರಾಜಪೇಟೆ ಬಂದ್‌ ಕರೆ

Exit mobile version