Site icon Vistara News

MLC Election: ಇಂದು ವಿಧಾನ ಪರಿಷತ್ ಚುನಾವಣೆಗೆ ಅಧಿಸೂಚನೆ, ಯಾರ ಲಾಬಿ ಜೋರು?

karnataka mlc election aspirants

ಬೆಂಗಳೂರು: ಇಂದು ರಾಜ್ಯ ವಿಧಾನ ಪರಿಷತ್‌ ಚುನಾವಣೆಗೆ (MLC Election) ಅಧಿಸೂಚನೆ ಪ್ರಕಟವಾಗಲಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೇವಾಲ ಆಗಮಿಸಿದ್ದಾರೆ.

ಉಸ್ತುವಾರಿ ರಾಜ್ಯಕ್ಕೆ ಆಗಮಿಸುತ್ತಿದಂತೆ ಆಕಾಂಕ್ಷಿಗಳಿಂದ ಲಾಬಿ ಆರಂಭವಾಗಿದೆ. ಮೂರು ಸ್ಥಾನಗಳಿಗೆ 20ಕ್ಕೂ ಅಧಿಕ ಆಕಾಂಕ್ಷಿಗಳಿಂದ ಲಾಬಿ ಆರಂಭವಾಗಿದೆ. ಆರ್. ಶಂಕರ್, ಲಕ್ಷ್ಮಣ ಸವದಿ, ಬಾಬುರಾವ್ ಚಿಂಚನಸೂರ್ ಅವರಿಂದ ತೆರವಾದ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.

ಮೂರು ಸ್ಥಾನಗಳಿಗೆ ಪ್ರತ್ಯೇಕವಾಗಿ ಅವಧಿ ಮುಕ್ತಾಯದ ಹಿನ್ನೆಲೆಯಲ್ಲಿ ಮೂರು ಸ್ಥಾನ ಕಾಂಗ್ರೆಸ್ ಪಾಲಿಗೆ ಲಭ್ಯವಾಗಲಿದ್ದು, ಮೂರು ಸ್ಥಾನಗಳಿಗೂ ಉಪ ಚುನಾವಣೆ ನಡೆಯಲಿದೆ. ಉಪ ಚುನಾವಣೆ ಆದ ಕಾರಣ ಮೂರು ಪರಿಷತ್ ಸ್ಥಾನಗಳೂ ಕಾಂಗ್ರೆಸ್ ಪಾಲಾಗಲಿವೆ. ಹೀಗಾಗಿ ಮೂರು ಸ್ಥಾನಗಳಿಗೆ ಹಲವಾರು ಆಕಾಂಕ್ಷಿಗಳು ಲಾಬಿ ಮಾಡುತ್ತಿದ್ದಾರೆ.

ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಚಿವ ಎನ್.ಎಸ್ ಬೋಸರಾಜು, ಬಾಬುರಾವ್ ಚಿಂಚನಸೂರು, ಉಮಾಶ್ರೀ ಹೆಸರು ಮುನ್ನೆಲೆಗೆ ಬಂದಿವೆ. ಈಗಾಗಲೇ ಸಚಿವರಾಗಿರುವ ಬೋಸರಾಜುಗೆ ಒಂದು ಸ್ಥಾನ ಫಿಕ್ಸ್ ಆಗಿದೆ. ಇನ್ನೊಂದು ಸ್ಥಾನಕ್ಕೆ ಜಗದೀಶ್ ಶೆಟ್ಟರ್ ಹೆಸರು ಅಂತಿಮವಾಗುವ ಸಾಧ್ಯತೆ ಇದೆ. ಲೋಕಸಭಾ ಚುನಾವಣೆ ದೃಷ್ಟಿಯಿಂದ ಶೆಟ್ಟರ್‌ಗೆ ಕಾಂಗ್ರೆಸ್ ಒಂದು ಸ್ಥಾನಮಾನ ಕೊಡಬೇಕಾಗಿದೆ.

ಮತ್ತೊಂದು ಸ್ಥಾನ ಚಿಂಚನಸೂರ್ ಪಾಲಾಗುವ ಸಾಧ್ಯತೆ ಇದೆ. ಕಲಬುರಗಿ ಲೋಕಸಭಾ ಚುನಾವಣೆ ದೃಷ್ಟಿಯಿಂದ ಚಿಂಚನಸೂರ್‌ಗೆ ಮಣೆ ಹಾಕಲಾಗುತ್ತಿದೆ. ಕೋಲಿ ಮತಗಳು ಕಾಂಗ್ರೆಸ್ಸಿಗೆ ಸಿಗಲಿ ಎಂದು ಚಿಂಚನಸೂರ್‌ಗೆ ಆದ್ಯತೆ ಇದೆ. ಇದರ ಹೊರತಾಗಿಯೂ ಹಲವರು ಲಾಬಿ ಮಾಡುತ್ತಿದ್ದಾರೆ.

ಬಾಬುರಾವ್ ಚಿಂಚನಸೂರು ಅವಧಿ 2024 ಜೂನ್ 17ಕ್ಕೆ ಮುಕ್ತಾಯವಾಗುತ್ತಿದೆ. ಅಂದರೆ ಒಂದು ವರ್ಷ ಅಧಿಕಾರದ ಅವಧಿ. ಈ ಸ್ಥಾನಕ್ಕೆ ಜಗದೀಶ್ ಶೆಟ್ಟರ್ ಆಯ್ಕೆ ಮಾಡುವ ಚಿಂತನೆ ಇದೆ. ಆರ್.ಶಂಕರ್ ಅವಧಿ 2026 ಜೂ 30ಕ್ಕೆ ಮುಕ್ತಾಯವಾಗಲಿದೆ. ಅಂದರೆ ಮೂರು ವರ್ಷ ಅವಧಿ ಇರಲಿದ್ದು, ಈ ಸ್ಥಾನಕ್ಕೆ ಬಾಬುರಾವ್ ಚಿಂಚನಸೂರು ಆಯ್ಕೆ ಸಾಧ್ಯತೆ ಇದೆ. ಲಕ್ಷ್ಮಣ ಸವದಿ ಅವಧಿ 2028 ಜೂನ್ 14ಕ್ಕೆ ಮುಗಿಯಲಿದ್ದು, ಐದು ವರ್ಷ ಅಧಿಕಾರ ಅವಧಿ ಇರಲಿದೆ‌. ಈ ಸ್ಥಾನಕ್ಕೆ ಸಚಿವ ಎನ್‌.ಎಸ್ ಬೋಸರಾಜು ಆಯ್ಕೆ ಮಾಡುವ ಚಿಂತನೆ ಇದೆ.

ಇದನ್ನೂ ಓದಿ: Karnataka By Election: ವಿಧಾನ ಪರಿಷತ್‌ನ 3 ಸ್ಥಾನಗಳಿಗೆ ಜೂ.30ಕ್ಕೆ ಉಪ ಚುನಾವಣೆ

Exit mobile version