ಬೆಂಗಳೂರು: ರಾಜ್ಯದಲ್ಲಿ ಖಾಲಿಯಾಗಿರುವ ವಿಧಾನ ಪರಿಷತ್‌ನ (MLC Election) ಮೂರು ಸ್ಥಾನಗಳಿಗೆ ಜೂನ್ 30ರಂದು ಚುನಾವಣೆ ನಡೆಯಲಿದೆ. ಇದಕ್ಕೆ ಪೂರಕವಾಗಿ ಕಾಂಗ್ರೆಸ್ ಮೂವರು ಅಭ್ಯರ್ಥಿಗಳ (Congress Candidates) ಪಟ್ಟಿಯನ್ನು ಪ್ರಕಟಿಸಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar), ಹಾಲಿ ಸಚಿವರಾಗಿರುವ ಎನ್.ಎನ್. ಬೋಸ್ ರಾಜು (NS Boseraju) ಮತ್ತು ತಿಪ್ಪಣ್ಣ ಕಮಕನೂರು (Thippanna Kamakanuru) ಅವರಿಗೆ ಕಾಂಗ್ರೆಸ್ ಅವಕಾಶ ನೀಡಿದೆ. ಇದಕ್ಕೆ ಪ್ರತಿಯಾಗಿ ಬಿಜೆಪಿಯೇನಾದರೂ ಅಭ್ಯರ್ಥಿಗಳನ್ನು ಪ್ರಕಟಿಸಿದರೆ ಮತದಾನ ನಡೆಯಲಿದೆ. ಯಾರೂ ಕಣಕ್ಕೆ ಇಳಿಯದಿದ್ದರೆ ಸರ್ವಾನುಮತದ ಆಯ್ಕೆ ನಡೆಯಲಿದೆ.
ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆ ಇದಾಗಿದ್ದು 135 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಎಲ್ಲ ಮೂರು ಸ್ಥಾನಗಳನ್ನು ಗೆಲ್ಲುವಷ್ಟು ಬಲವನ್ನು ಹೊಂದಿದೆ. ಹೀಗಾಗಿ ಬಿಜೆಪಿ ಯಾರನ್ನಾದರೂ ಕಣಕ್ಕಿಳಿಸಿದರು ಯಾವುದೇ ವ್ಯತ್ಯಾಸ ಆಗುವುದಿಲ್ಲ. ಶೆಟ್ಟರ್ ಮತ್ತು ಬೋಸ್‌ರಾಜು ಅವರ ಆಯ್ಕೆ ನಿರೀಕ್ಷಿತವಾಗಿತ್ತು. ಆದರೆ, ಮೂರನೇ ಸ್ಥಾನಕ್ಕೆ ಬಾಬುರಾವ್ ಚಿಂಚನಸೂರು ಅವರ ಹೆಸರು ಕೇಳಿಬರುತ್ತಿತ್ತು. ಆದರೆ, ಈಗ ಅದು ಮಲ್ಲಿಕಾರ್ಜುನ ಖರ್ಗೆ ಅವರ ಮತ್ತೊಬ್ಬ ಬೆಂಬಲಿಗರಾದ ತಿಪ್ಪಣ್ಣ ಕಮಕನೂರು ಅವರ ಪಾಲಾಗಿದೆ.
ಜಗದೀಶ್ ಶೆಟ್ಟರ್ ಅವರಿಗೆ ಐದು ವರ್ಷದ ಅವಕಾಶ
ಕಳೆದ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿಯಲ್ಲಿ ಟಿಕೆಟ್ ನಿರಾಕರಿಸಲ್ಪಟ್ಟು ಕಾಂಗ್ರೆಸ್ ಸೇರಿದ್ದ ಜಗದೀಶ್ ಶೆಟ್ಟರ್ ಅವರು ಚುನಾವಣೆಯಲ್ಲಿ ಸೋಲು ಕಂಡರೂ ಅವರಿಗೆ ಪಕ್ಷ ದೊಡ್ಡ ಗೌರವವನ್ನೇ ನೀಡಿದೆ. ಅಳೆದು ತೂಗಿ ಮಣೆ ಹಾಕಿದ ಕಾಂಗ್ರೆಸ್ ಹೈಕಮಾಂಡ್ ಜಗದೀಶ್ ಶೆಟ್ಟರ್‌ಗೆ ಐದು ವರ್ಷಗಳ ಅವಕಾಶ ಇರೋ ಎಂಎಲ್ಸಿ ಸ್ಥಾನವನ್ನು ನೀಡಿದೆ.
ಬಾಬು ರಾವ್ ಚಿಂಚನಸೂರು ಅವರಿಂದ ತೆರವಾಗಿರುವ ಸ್ಥಾನಕ್ಕೆ ಜಗದೀಶ್ ಶೆಟ್ಟರ್ ಅವರು ಮೇಲ್ಮನೆ ಸದಸ್ಯರಾಗಲಿದ್ದಾರೆ. ಇದು ಐದು ವರ್ಷ ಅವಧಿಯನ್ನು ಹೊಂದಿದೆ.
ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಆಗಿದ್ದರಿಂದ ಈ ಬಾರಿ ಕಾಂಗ್ರೆಸ್ ಗೆ ಲಾಭವಾಗಿತ್ತು. 39 ಲಿಂಗಾಯತ ಸಮುದಾಯದ ಶಾಸಕರು ಗೆಲ್ಲುವುದರಲ್ಲಿ ಶೆಟ್ಟರ್ ಅವರ ವರ್ಚಸ್ಸಿನ ಪ್ರಭಾವವೂ ಇದೆ ಎಂದು ಕಾಂಗ್ರೆಸ್ ಕಂಡುಕೊಂಡಿದೆ. ಇದರ ಲಾಭವನ್ನು ಲೋಕಸಭಾ ಚುನಾವಣೆಯಲ್ಲಿಯೂ ಪಡೆಯಲು ಶೆಟ್ಟರ್ ಗೆ ಮಣೆ ಹಾಕಲಾಗಿದೆ ಎಂದು ಹೇಳಲಾಗಿದೆ.
ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯಿಂದ ಶೆಟ್ಟರ್ ಗೆ ಐದು ವರ್ಷಗಳ ಅವಧಿ ಇರೋ ಎಂಎಲ್ಸಿ ಸ್ಥಾನವನ್ನು ಕಾಂಗ್ರೆಸ್ ಕೊಟ್ಟಿದೆ ಎನ್ನಲಾಗಿದೆ.
ಎನ್.ಎಸ್. ಬೋಸರಾಜು ಅವರಿಗೆ ಒಂದು ವರ್ಷ ಅವಕಾಶವಿರುವ ಪರಿಷತ್ ಸದಸ್ಯತ್ವವನ್ನು ನೀಡಲಾಗುತ್ತಿದೆ. ಬೋಸ್ ರಾಜು ಅವರನ್ನು ಈಗಾಗಲೇ ಸಚಿವರನ್ನಾಗಿ ನೇಮಕ ಮಾಡಲಾಗಿದ್ದು ಅವರನ್ನು ಮುಂದಿನ ಸುತ್ತಿನಲ್ಲಿ ಮತ್ತೊಮ್ಮೆ ಆಯ್ಕೆ ಮಾಡಲು ಅವಕಾಶವಿದೆ. ಇದು ಆರ್.ಶಂಕರ್ ಅವರಿಂದ ತೆರವಾಗಿರುವ ಸ್ಥಾನವಾಗಿದೆ.
ಇತ್ತ ತಿಪ್ಪಣ್ಣ ಕಮಕನೂರು ಅವರಿಗೆ ಲಕ್ಷ್ಮಣ ಸವದಿ ಅವರಿಂದ ತೆರವಾದ ಮೂರು ವರ್ಷಗಳ ಅವಧಿಯ ಮೇಲ್ಮನೆ ಸ್ಥಾನವನ್ನು ನೀಡಲಾಗಿದೆ.
ತಿಪ್ಪಣ್ಣ ಕಮಕನೂರು ಅವರಿಗೆ ಸ್ಥಾನ ಒಲಿದಿದ್ದು ಹೇಗೆ?
ನಿಜವೆಂದರೆ, ಬಾಬುರಾವ್ ಚಿಂಚನಸೂರು ಅವರಿಗೆ ಈ ಮೇಲ್ಮನೆ ಸ್ಥಾನ ಸಿಗುವ ಸಾಧ್ಯತೆ ಇತ್ತು. ಆದರೆ, ಚುನಾವಣೆಗೆ ಮುನ್ನ ಅವರು ಅಪಘಾತಕ್ಕೀಡಾಗಿ ಅನಾರೋಗ್ಯದಲ್ಲಿರುವುದರಿಂದ ಮಲ್ಲಿಕಾರ್ಜುನ ಖರ್ಗೆ ಅವರ ಮತ್ತೊಬ್ಬ ಆಪ್ತರಾದ ತಿಪ್ಪಣ್ಣ ಕಮಕನೂರು ಅವರಿಗೆ ಅವಕಾಶ ಸಿಕ್ಕಿದೆ.
ಕಾಂಗ್ರೆಸ್‌ನಿಂದ ಗೌರವ ಸಿಗುತ್ತಿದೆ ಎಂದ ಶೆಟ್ಟರ್
ಮೇಲ್ಮನೆ ಚುನಾವಣೆಗೆ ತಮ್ಮ ಹೆಸರನ್ನು ಆಯ್ಕೆ ಮಾಡಿದ ಕಾಂಗ್ರೆಸ್ ಹೈಕಮಾಂಡ್‌ಗೆ ಜಗದೀಶ್ ಶೆಟ್ಟರ್ ಧನ್ಯವಾದ ಹೇಳಿದ್ದಾರೆ.
ʻʻಮೂರು ಎಂಎಲ್ಸಿ ಸ್ಥಾನಗಳಲ್ಲಿ ಒಂದು ಸ್ಥಾನ ನಾಮಪತ್ರ ಸಲ್ಲಿಕೆ ಅವಕಾಶ ನನಗೆ ಕೊಟ್ಟಿದ್ದಾರೆ. ಇದರಿಂದ ನನಗೆ ಖುಷಿಯಾಗಿದೆ. ಕಾಂಗ್ರೆಸ್ ಹಿರಿಯರನ್ನು ಕಡೆಗಣಿಸಿಲ್ಲ. ಬೇರೆ ಪಕ್ಷದಿಂದ ಬಂದಾಗಲೂ ಸಹಿತ ಒಳ್ಳೆಯ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂಬುದಕ್ಕೆ ಉದಾಹರಣೆ ಇದು. ಕಾಂಗ್ರೆಸ್ ನಾಯಕರಿಗೆ, ವರಿಷ್ಠರಿಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರ ಕೊಡುಗೆ ಇದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಧನ್ಯವಾದಗಳುʼʼ ಎಂದಿದ್ದಾರೆ ಶೆಟ್ಟರ್.
ʻʻಕಾಂಗ್ರೆಸ್ ಸೇರಿದ ಮೇಲೆ ಒಂದು ಮಾತು ಹೇಳಿದ್ದೆ. ಬಿಜೆಪಿಯಲ್ಲಿ ಗೌರವದಿಂದ ನಡೆಸಿಕೊಂಡಿಲ್ಲ. ಹಾಗಾಗಿ ನಾನು ಷರತ್ತು ಇಲ್ಲದೆ ಕಾಂಗ್ರೆಸ್ ಸೇರುತ್ತಿದ್ದೇನೆ ಎಂದು ಹೇಳಿದ್ದೆ. ಕಾಂಗ್ರೆಸ್ ಪಕ್ಷದವರು ಗೌರವದಿಂದ ನಡೆಸಿಕೊಳ್ಳುತ್ತಿದ್ದಾರೆ. ಪಕ್ಷದಲ್ಲಿ ಅಳಿಲು ಸೇವೆ ಮಾಡಿದ್ದೇನೆ. ಸೋಲು ಕಂಡಾಗಲೂ ಗೌರವದಿಂದ ನಡೆಸಿಕೊಂಡಿದ್ದಾರೆʼʼ ಎನ್ನುವುದು ಅವರ ಅಭಿಮತ.
ಇದನ್ನೂ ಓದಿ: District incharge secretary : ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ನೇಮಕ; ಯಾವ ಜಿಲ್ಲೆಗೆ ಯಾರು? ಏನು ಹೊಣೆ?