ಮೈಸೂರು: ನೈರುತ್ಯ ಪದವೀಧರ (Graduate constituency) ವಿದಾನ ಪರಿಷತ್ (MLC Election) ಕ್ಷೇತ್ರದಲ್ಲಿ ಬಿಜೆಪಿಯಿಂದ (BJP) ಟಿಕೆಟ್ ಸಿಗದೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರಘುಪತಿ ಭಟ್ (Raghupathi Bhat) ಅವರ ಪರ ಮೈಸೂರು ಸಂಸದ, ಬಿಜೆಪಿ ಮುಖಂಡ ಪ್ರತಾಪ್ ಸಿಂಹ (Mysore MP Pratap Simha) ಪೋಸ್ಟ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ನಂತರ ಅದನ್ನು ಡಿಲೀಟ್ ಮಾಡಿದ್ದಾರೆ.
“ಉಡುಪಿಯ ಶಿಕ್ಷಣ ಸಂಸ್ಥೆಯೊಂದರಲ್ಲಿ ಸಮವಸ್ತ್ರ ಸಂಹಿತೆಯನ್ನು ಮುರಿದು ಬುರ್ಖಾ ಧರಿಸಿ ಕ್ಲಾಸಿಗೆ ಬಂದ ಜಿಹಾದಿ ಮನಸ್ಥಿತಿಯ ವಿರುದ್ಧ ಹೋರಾಡಿದ ರಘುಪತಿ ಭಟ್ಟರಿಗೆ MLA ಟಿಕೆಟ್ಟೂ ಸಿಗಲಿಲ್ಲ, MLC ಟಿಕೆಟ್ಟನ್ನೂ ಕೊಡಲಿಲ್ಲ. ಸಾಲದೆಂಬಂತೆ ಪಕ್ಷದಿಂದಲೂ ಉಚ್ಛಾಟನೆಗೆ ಒಳಗಾಗಿ ಬುರ್ಖಾ ಸ್ಟೂಡೆಂಟ್ ಆಲಿಯಾ ಅಸ್ಸಾದಿಯಿಂದ ಗೇಲಿಗೆ ಒಳಗಾಗುವ ಪರಿಸ್ಥಿತಿ ಹಿಂದುತ್ವವಾದಿಗಳಿಗೆ ಬಂದಿದ್ದು ದುರದೃಷ್ಟಕರ” ಎಂದು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪ್ರತಾಪ್ ಸಿಂಹ ಪೋಸ್ಟ್ ಮಾಡಿದ್ದಾರೆ.
ಸ್ವಲ್ಪ ಹೊತ್ತಿನ ಬಳಿಕ ಅದನ್ನು ಡಿಲೀಟ್ ಮಾಡಿದ ಪ್ರತಾಪ್, ವಿಧಾನ ಪರಿಷತ್ತಿಗೆ ಸ್ಪರ್ಧಿಸಿರುವ ಆರು ಬಿಜೆಪಿ ಅಭ್ಯರ್ಥಿಗಳ ಫೋಟೋಗಳನ್ನು ಪೋಸ್ಟ್ ಮಾಡಿ, ಇವರಿಗೆ ಮತ ಹಾಕಿ ಗೆಲ್ಲಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಅದರಲ್ಲಿ ರಘುಪತಿ ಭಟ್ ಎದುರು ನಿಂತಿರುವ ಧನಂಜಯ ಸರ್ಜಿ ಅವರೂ ಇದ್ದಾರೆ. ನಂತರ ಅದನ್ನೂ ಡಿಲೀಟ್ ಮಾಡಿದ್ದಾರೆ!
ರಘುಪತಿ ಭಟ್ ಪರವಾಗಿ ಪೋಸ್ಟ್ ಮಾಡುವ ಮೂಲಕ ಪಕ್ಷದ ವಿರುದ್ಧ ಪರೋಕ್ಷ ಅಸಮಾಧಾನವನ್ನು ಪ್ರತಾಪ್ ಹೊರಹಾಕಿದರೇ ಎಂದು ಚರ್ಚೆಯಾಗುತ್ತಿದೆ. ಪ್ರತಾಪ್‌ಗೂ ಈ ಬಾರಿ ಮೈಸೂರಿನಿಂದ ಬಿಜೆಪಿಯಿಂದ ಸ್ಪರ್ಧಿಸಲು ಟಿಕೆಟ್ ದೊರೆತಿಲ್ಲ. ಪ್ರತಾಪ್ ಬದಲು ಬಿಜೆಪಿ ಟಿಕೆಟ್ ಮೈಸೂರಿನ ರಾಜವಂಶಸ್ಥ ಯದುವೀರ್ ಪಾಲಾಗಿತ್ತು. ಟಿಕೆಟ್ ಪ್ರಕಟವಾಗುವ ಮುನ್ನ ತುಸು ಅಸಮಾಧಾನವನ್ನು ಪ್ರಕಟಿಸಿದ್ದ ಪ್ರತಾಪ್, ನಂತರ ಯದುವೀರ್ ಜೊತೆಗೆ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. “ಮೋದಿಯವರನ್ನು ಮತ್ತೆ ಅಧಿಕಾರಕ್ಕೆ ತರುವುದೇ ನಮ್ಮೆಲ್ಲರ ಗುರಿ” ಎಂದು ಘೋಷಿಸಿಕೊಂಡಿದ್ದರು.
ಉಡುಪಿಯಲ್ಲಿ ನಡೆದ ಹಿಜಾಬ್ ಪ್ರಕರಣದಲ್ಲಿ ರಘುಪತಿ ಭಟ್ ಪ್ರಧಾನ ಪಾತ್ರ ವಹಿಸಿದ್ದರು. ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬರುವುದನ್ನು ಆಕ್ಷೇಪಿಸಿ ದೊಡ್ಡ ಪ್ರತಿಭಟನೆಯನ್ನೇ ಸಂಘಟಿಸಿದ್ದರು. ಇದು ತಿಂಗಳುಗಳ ಕಾಲ ರಾಜ್ಯ, ರಾಷ್ಟ್ರೀಯ ಸುದ್ದಿಯಾಗಿತ್ತು. ಆದರೆ ರಘುಪತಿ ಭಟ್ ಅವರಿಗೆ ಬಿಜೆಪಿಯಿಂದ ವಿಧಾನಸಭೆ ಟಿಕೆಟ್ ದೊರೆತಿರಲಿಲ್ಲ. ವಿಧಾನ ಪರಿಷತ್ ಟಿಕೆಟ್ ನಿರೀಕ್ಷೆಯಲ್ಲಿದ್ದ ಅವರಿಗೆ ಅದೂ ದೊರೆತಿರಲಿಲ್ಲ.
ಇದನ್ನೂ ಓದಿ: MLC Election: ಮೇಲ್ಮನೆ ಚುನಾವಣೆ ಮತದಾನ ಆರಂಭ, 6 ಕ್ಷೇತ್ರಗಳಲ್ಲಿ 78 ಸ್ಪರ್ಧಿಗಳ ಹಣಾಹಣಿ