Site icon Vistara News

MLC Election Results: ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಭೋಜೇಗೌಡ ಜಯಭೇರಿ

ಮೈಸೂರು: ವಿಧಾನ ಪರಿಷತ್ ಚುನಾವಣೆಯ ನೈರುತ್ಯ ಶಿಕ್ಷಕರ ಕ್ಷೇತ್ರದ (MLC Election Results) ಮತ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಭೋಜೇಗೌಡ ಅವರು ಮೊದಲ ಪ್ರಾಶಸ್ತ್ಯ ಮತದಲ್ಲೇ ಗೆಲುವು ಸಾಧಿಸಿದ್ದಾರೆ. ಇವರು ಮತ ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ. ಮಂಜುನಾಥ್ ವಿರುದ್ಧ 5,267 ಮತಗಳ ಭಾರಿ ಅಂತರದಿಂದ ಜಯಭೇರಿ ಮೊಳಗಿಸಿದ್ದಾರೆ.

ಕ್ಷೇತ್ರದಲ್ಲಿ 19,479 ಒಟ್ಟು ಚಲಾವಣೆ ಆಗಿದ್ದು, ಇದರಲ್ಲಿ 821 ಮತ ತಿರಸ್ಕೃತಗೊಂಡಿವೆ. ಇನ್ನುಳಿದ 18,658 ಮತಗಳಲ್ಲಿ 9,330 ಕೋಟಾ ನಿಗದಿಯಾಗಿತ್ತು. 9829 ಮೊದಲ ಪ್ರಾಶಸ್ತ್ಯ ಮತಗಳನ್ನು ಪಡೆದು ಭೋಜೇಗೌಡ ಗೆಲುವು ಸಾಧಿಸಿದ್ದು,
ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ. ಮಂಜುನಾಥ್ ಗೆ 4,562 ಮತಗಳುನ್ನು ಪಡೆದಿದ್ದಾರೆ.

ವಿಜೇತ ಮೈತ್ರಿ ಅಭ್ಯರ್ಥಿ ಎಸ್.ಎಲ್. ಭೋಜೇಗೌಡ ಮಾತನಾಡಿ, ಈ ಬಾರಿ ಮೊದಲ ಪ್ರಾಶಸ್ತ್ಯ ಮತಗಳಲ್ಲೇ ಬಹಳ ಅಭೂತಪೂರ್ವ ಗೆಲುವನ್ನು ಶಿಕ್ಷಕರು ತಂದು ಕೊಟ್ಟಿದ್ದಾರೆ. ಹಾಗಾಗಿ ಈ ಗೆಲುವನ್ನು ಶಿಕ್ಷಕ ಸಮುದಾಯಕ್ಕೆ ಸರ್ಮಪಿಸುತ್ತೇನೆ. ನಮ್ಮ ಶಿಕ್ಷಕರು ಬಹಳ ಶ್ರಮಪಟ್ಟು ಗೆಲುವನ್ನು ತಂದುಕೊಟ್ಟಿದ್ದಾರೆ. ಬಹಳ ವಿಶ್ವಾಸವಿಟ್ಟು ಮೊದಲ ಪ್ರಾಶಸ್ತ್ಯ ಮತಗಳನ್ನು ನೀಡಿ ಗೆಲ್ಲಿಸಿದ್ದಾರೆ. ಹಾಗಾಗಿ ನನ್ನ ಗೆಲುವನ್ನು ಅವರಿಗೆ ಅರ್ಪಿಸುತ್ತೇನೆ ಎಂದು ತಿಳಿಸಿದರು.

ಈ ಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ಗೆಲ್ಲುವ ವಿಶ್ವಾಸವಿತ್ತು, ಅದರಂತೆಯೇ ಆಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಒಂದಾಗಿದ್ದರಿಂದ ನಮ್ಮ ಬಲ ಹೆಚ್ಚಾಗಿದೆ. ಹೊಂದಾಣಿಕೆ ಕೆಲಸ ಮಾಡಿದೆ, ಕಳೆದ ಬಾರಿಯೇ ನಾನು ಜೆಡಿಎಸ್‌ನಿಂದ ಏಕಾಂಗಿಯಾಗಿ ನಿಂತು ಗೆದ್ದಿದ್ದೆ. ಈ ಬಾರಿ ಬಿಜೆಪಿ ಜತೆಗಿನ ಹೊಂದಾಣಿಕೆಯಿಂದ ಬಲ ಇನ್ನಷ್ಟು ಹೆಚ್ಚಿದೆ. ಬಿಜೆಪಿ ಜೆಡಿಎಸ್ ಮೈತ್ರಿ ಫಲಪ್ರದವಾಗಿದೆ. ಬಿಜೆಪಿ-ಜೆಡಿಎಸ್‌ನ ಎಲ್ಲಾ ಹಿರಿಯ ನಾಯಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.

ದಕ್ಷಿಣ ಶಿಕ್ಷಕರ ಕ್ಷೇತ್ರ; ಮೊದಲ ಪ್ರಾಶಸ್ತ್ಯ ಮತದಲ್ಲೇ ಮೈತ್ರಿ ಅಭ್ಯರ್ಥಿ ವಿವೇಕಾನಂದ ಭರ್ಜರಿ ಗೆಲುವು

ಮೈಸೂರು: ವಿಧಾನ ಪರಿಷತ್‌ನ ಪದವೀಧರರು ಮತ್ತು ಶಿಕ್ಷಕರ 6 ಕ್ಷೇತ್ರಗಳ ಚುನಾವಣೆಯ (MLC Election Results) ಮತ ಎಣಿಕೆ ಗುರುವಾರ ನಡೆದಿದ್ದು, ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಕೆ. ವಿವೇಕಾನಂದ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಚುನಾವಣಾ ಇತಿಹಾಸದಲ್ಲೇ ಮೊದಲ ಪ್ರಾಶಸ್ತ್ಯ ಮತದಲ್ಲಿ ಮೊದಲ ಗೆಲುವು ಇದಾಗಿದೆ.

ಜೆಡಿಎಸ್‌ ಅಭ್ಯರ್ಥಿ ವಿವೇಕಾನಂದಗೆ 10,823 ಮತ ಬಂದಿದ್ದು, ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡಗೆ 6,201 ಮತ ಬಂದಿವೆ, ವಾಟಾಳ್ ನಾಗರಾಜ್ 84 ಮತ ಗಳಿಸಿದ್ದಾರೆ. ಈ ಮೂಲಕ 4,622 ಮತಗಳ ಭಾರಿ ಅಂತರದಿಂದ ಮೊದಲ ಪ್ರಾಶಸ್ತ್ಯ ಮತಗಳಲ್ಲೇ ಜೆಡಿಎಸ್‌ ಅಭ್ಯರ್ಥಿ ವಿವೇಕಾನಂದ ಗೆಲುವು ದಾಖಲಿಸಿದ್ದಾರೆ. ಕ್ಷೇತ್ರದಲ್ಲಿ 1049 ಕುಲಗೆಟ್ಟ ಮತಗಳು (ತಿರಸ್ಕೃತ) ದಾಖಲಾಗಿವೆ.

ಇದನ್ನೂ ಓದಿ | MLC Election: ವಿಧಾನ ಪರಿಷತ್ ಚುನಾವಣೆ; ಯತೀಂದ್ರ, ಸಿ.ಟಿ.ರವಿ ಸೇರಿ 11 ಅಭ್ಯರ್ಥಿಗಳ ಅವಿರೋಧ ಆಯ್ಕೆ, ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ (south teachers constituency) ಮೈಸೂರು, ಮಂಡ್ಯ, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಗಳು ಬರುತ್ತವೆ. ಒಟ್ಟು 20,549 ಮತದಾರರ ಪೈಕಿ 18,979 ಮತಗಳು ಚಲಾವಣೆಯಾಗಿದ್ದವು. ಈ ಚುನಾವಣೆಯಲ್ಲಿ ವಿವೇಕಾನಂದ ಹಾಗೂ ಮರಿತಿಬ್ಬೇಗೌಡ ನಡುವೆ ನೇರ ಪೈಪೋಟಿ ಏರ್ಪಟ್ಟಿತ್ತು.

ನೈರುತ್ಯ ಪದವೀಧರರ ಕ್ಷೇತ್ರದಲ್ಲಿ 3ನೇ ಸ್ಥಾನಕ್ಕೆ ಕುಸಿದ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್‌

ಮೈಸೂರು: ನೈರುತ್ಯ ಪದವೀಧರರ ಕ್ಷೇತ್ರ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್‌ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಇದುವರೆಗೂ 14 ಸಾವಿರ ಮತಗಳ ಎಣಿಕೆ ಆಗಿದ್ದು, ಮೈತ್ರಿ ಅಭ್ಯರ್ಥಿ ಡಾ.ಧನಂಜಯ ಸರ್ಜಿಗೆ 6,693 ಮತ, ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್‌ಗೆ 3,054 ಮತ ಹಾಗೂ ಆಯನೂರು ಮಂಜುನಾಥ್‌ಗೆ 2397 ಮತ ಬಂದಿವೆ.

Exit mobile version