ಪರಶುರಾಮ್ ತಹಶೀಲ್ದಾರ್, ಹುಬ್ಬಳ್ಳಿ
ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣಾ ಕಣ ರಂಗೇರಿದೆ. ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಗೆಲುವಿಗೆ ಬ್ರೇಕ್ ಹಾಕಲು ಎದುರಾಳಿಗಳು ತಂತ್ರ ರೂಪಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಯಾರೇ ಗೆದ್ದರೂ ಹೊಸ ದಾಖಲೆ ನಿರ್ಮಾಣವಾಗಲಿದೆ. ಬಿಜೆಪಿಯ ಬಸವರಾಜ ಹೊರಟ್ಟಿ, ಕಾಂಗ್ರೆಸ್‌ನ ಬಸವರಾಜ ಗುರಿಕಾರ, ಜೆಡಿಎಸ್‌ನ ಶ್ರೀಶೈಲ ಗಡದಿನ್ನಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಎಂಟನೇ ಬಾರಿ ಗೆಲುವು ಸಾಧಿಸಿ ಹೊಸ ದಾಖಲೆ ಬರೆಯುವ ಹುಮ್ಮಸ್ಸು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ. ಹೊರಟ್ಟಿ ಮೂಲಕ ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ಖಾತೆ ತೆರೆಯುವ ತವಕ ಬಿಜೆಪಿಗೆ. ಚುನಾವಣೆ ಘೋಷಣೆಗೂ ಆರು ತಿಂಗಳ ಮುನ್ನವೇ ಅಭ್ಯರ್ಥಿ ಘೋಷಿಸಿರುವ ಕಾಂಗ್ರೆಸ್‌ಗೆ ಎಲ್ಲ ದಾಖಲೆ ಅಳಿಸಿ ಹಾಕಬೇಕೆನ್ನುವ ಛಲ. ಶಿಷ್ಯನಿಂದಲೇ ಹೊರಟ್ಟಿಗೆ ತಿರುಗೇಟು ಕೊಡಿಸಬೇಕೆನ್ನುವ ತಂತ್ರಗಾರಿಕೆ ಜೆಡಿಎಸ್‌ನದ್ದು. ಇವು ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಮತ ಕ್ಷೇತ್ರದಲ್ಲಿ ನಡೆದಿರುವ ರಾಜಕೀಯ ಮೇಲಾಟಗಳು.
ಇದನ್ನೂ ಓದಿ | ವಿಧಾನ ಪರಿಷತ್ ಚುನಾವಣೆ ಪ್ರಯುಕ್ತ ಹಾವೇರಿಯಲ್ಲಿ ಜೂನ್ 17 ರವರೆಗೆ ನೀತಿ ಸಂಹಿತೆ ಜಾರಿ
ಪಶ್ಚಿಮ ಶಿಕ್ಷಕರ ಕ್ಷೇತ್ರ ಹೆಚ್ಚು ಗಮನ ಸೆಳೆದಿರುವುದು ಸೋಲಿಲ್ಲದ ಸರದಾರ ಬಸವರಾಜ ಹೊರಟ್ಟಿಯವರ ಕಾರಣದಿಂದಾಗಿ. 1980ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಇವರು ಪ್ರಭಾವಿ ಅಭ್ಯರ್ಥಿಯಾಗಿದ್ದ ಎಸ್.ಐ. ಶೆಟ್ಟರ್ ಅವರನ್ನು ಸೋಲಿಸಿ ಗೆಲುವಿನ ಕುದುರೆಯನ್ನೇರಿದ್ದರು. ಆ ಬಳಿಕ ಹಿಂದಿರುಗಿ ನೋಡಿದ್ದೇ ಇಲ್ಲ. ಸತತ ಏಳನೇ ಬಾರಿಗೆ ಗೆಲವು ಸಾಧಿಸಿ ದಾಖಲೆ ಸೃಷ್ಟಿಸಿದ್ದಾರೆ. ಹೊರಟ್ಟಿ ಯಾವತ್ತೂ ಪಕ್ಷ ನೆಚ್ಚಿಕೊಂಡು ಗೆದ್ದವರಲ್ಲ. ಇವರು ಪ್ರತಿನಿಧಿಸುವ ಕ್ಷೇತ್ರದಲ್ಲಿ ಜೆಡಿಎಸ್‌ಗೆ ನೆಲೆಯೇ ಇರಲಿಲ್ಲ ಎನ್ನುವುದು ಗಮನಾರ್ಹ. ಶಿಕ್ಷಕರೊಂದಿಗೆ ಹೊಂದಿದ್ದ ನಿಕಟ ಸಂಪರ್ಕದಿಂದಾಗಿಯೇ ಇವರು ಗೆಲುವಿನ ದಡ ಸೇರುತ್ತಿದ್ದರು. ಪ್ರಸ್ತುತ ಚುನಾವಣೆಯ ಸಂದರ್ಭದಲ್ಲೇ ಪಕ್ಷಾಂತರ ಮಾಡಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಈ ಚುನಾವಣೆಯಲ್ಲಿ ಇವರು ಗೆಲುವು ಸಾಧಿಸಿದರೆ ಎಂಟು ಬಾರಿ ಗೆದ್ದ ಹೊಸ ದಾಖಲೆ ಸೃಷ್ಟಿಯಾಗಲಿದೆ. ಇದರೊಟ್ಟಿಗೆ ಕ್ಷೇತ್ರದಲ್ಲಿ ಬಿಜೆಪಿಯೂ ಖಾತೆ ತೆರೆದಂತಾಗಲಿದೆ. ಕ್ಷೇತ್ರದಲ್ಲಿ ಹೊರಟ್ಟಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷರು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಸಿಎಂ ಜಗದೀಶ ಶೆಟ್ಟರ್ ಕ್ಷೇತ್ರದಲ್ಲಿ ಹೊರಟ್ಟಿ ಪರ ಭರ್ಜರಿ ಪ್ರಚಾರ ಮಾಡಿದ್ದಾರೆ. ಬಿಜೆಪಿ ಹವಾ ಜೋರಾಗಿಯೇ ಬೀಸುತ್ತಿದೆ.
ಇದನ್ನು ಓದಿ: ಇಡೀ ರಾಜ್ಯದ ಜನರಿಗಾಗಿ ಸೇವೆ ಸಲ್ಲಿಸಿದ್ದೇನೆ : ಬಸವರಾಜ ಹೊರಟ್ಟಿ
ಪಕ್ಷಗಳ ಬಲಾಬಲ
ಹಿಂದಿನ ಚುನಾವಣೆಗಳಲ್ಲಿ ಗೆಲುವಿನ ಚಿತ್ರಣ ಮುಂಚೆಯೇ ಸ್ಪಷ್ಟವಾಗುತ್ತಿತ್ತು. ಆದರೆ, ಈ ಬಾರಿ ಅಷ್ಟು ಹಗುರವಾಗಿ ಪರಿಗಣಿಸುವಂತಿಲ್ಲ. ಕೊನೇ ಕ್ಷಣದಲ್ಲಿ ಅಭ್ಯರ್ಥಿ ಹೆಸರು ಘೋಷಿಸುತ್ತಿದ್ದ ಕಾಂಗ್ರೆಸ್ ಆರು ತಿಂಗಳಿಗೂ ಮುನ್ನವೇ ಬಸವರಾಜ ಗುರಿಕಾರ ಹೆಸರನ್ನು ಅಖೈರುಗೊಳಿಸಿದೆ. ಕ್ಷೇತ್ರದಲ್ಲಿ ಓಡಾಡಿಕೊಂಡು ಪ್ರಚಾರ ಮಾಡಲು ಗುರಿಕಾರ ಅವರಿಗೆ ಸಾಕಷ್ಟು ಸಮಯಾವಕಾಶ ಸಿಕ್ಕಿದೆ. ಗುರಿಕಾರ ಕೂಡ ಕಳೆದ ಮೂರು ದಶಕಗಳಿಂದ ಶಿಕ್ಷಕರ ಸಂಘಟನೆಯಲ್ಲಿ ಗುರುತಿಸಿಕೊಂಡವರು. ಹೊರಟ್ಟಿ ಅವರಿಗೆ ಸಮಬಲದ ಪೈಪೋಟಿ ನೀಡುವಷ್ಟು ಸಮರ್ಥರೂ ಆಗಿದ್ದಾರೆ. ಈ ಕಾರಣಕ್ಕಾಗಿಯೇ ಹೊರಟ್ಟಿ ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಓಡಾಡುತ್ತಿದ್ದಾರೆ. ಈ ಮಧ್ಯೆ ಗುರಿಕಾರ ಮೂರು ಸುತ್ತಿನ ಪ್ರಚಾರ ನಡೆಸಿದ್ದಾರೆ. ಈ ಬಾರಿ ಎಲ್ಲ ದಾಖಲೆ ಅಳಿಸಿ ಹಾಕುತ್ತೇವೆ ಎನ್ನುತ್ತಿದ್ದಾರೆ. ಇನ್ನೊಂದು ಕಡೆ ಬಸವರಾಜ ಹೊರಟ್ಟಿ ಪಕ್ಷ ತ್ಯಜಿಸಿದ್ದರಿಂದ ಜೆಡಿಎಸ್ ಅನಾಥವಾಗಿತ್ತು. ಹಾಗಂತ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸುಮ್ಮನೇ ಕುಳಿತುಕೊಳ್ಳಲಿಲ್ಲ. ಪಕ್ಷದ ಅಭ್ಯರ್ಥಿ ಗೆಲ್ಲದೇ ಹೋದರೂ ಪರವಾಗಿಲ್ಲ ಆಡಿ ಕೆಡಿಸೋಣ ಎನ್ನುವ ತಂತ್ರ ಹೆಣೆದಿದ್ದಾರೆ. ಒಂದು ಕಾಲದಲ್ಲಿ ಹೊರಟ್ಟಿ ಅವರ ಆಪ್ತ ಬಣದಲ್ಲಿದ್ದ ಹಾಗೂ ಅವರ ಗೆಲುವಿಗೆ ಶ್ರಮಿಸುತ್ತಿದ್ದ ಶ್ರೀಶೈಲ ಗಡದಿನ್ನಿ ಅವರನ್ನು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾರೆ. ಇದರಿಂದಾಗಿ ಹೊರಟ್ಟಿಯವರ ಪಾಲಾಗುತ್ತಿದ್ದ ಒಂದಿಷ್ಟು ಮತಗಳು ಶ್ರೀಶೈಲ ಗಡದಿನ್ನಿ ಅವರಿಗೆ ಲಭಿಸಲಿವೆ. ನೆಕ್ ಟು ನೆಕ್ ಸ್ಪರ್ಧೆಯಾದರೆ ಇದು ನಿರ್ಣಾಯಕವಾಗಲಿದೆ ಎನ್ನುವ ಲೆಕ್ಕಾಚಾರವೂ ಇದೆ. ಬಸವರಾಜ ಹೊರಟ್ಟಿ ನಾಗಾಲೋಟಕ್ಕೆ ಬ್ರೇಕ್ ಹಾಕುವ ರಾಜಕೀಯ ತಂತ್ರವನ್ನು ಕುಮಾರಸ್ವಾಮಿ ರೂಪಿಸಿದ್ದಾರೆ. ಆದರೆ, ಇದು ಎಷ್ಟರಮಟ್ಟಿಗೆ ಫಲಪ್ರದವಾಗುತ್ತದೆ ಎನ್ನುವುದನ್ನು ಕಾದು ನೋಡಬೇಕು.
ಆಮ್ ಆದ್ಮಿ ಪಕ್ಷ ಕೂಡ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೆ. ಯಂಗ್ ಇಂಡಿಯಾ ಪರಿವಾರದ ಸಂಸ್ಥಾಪಕ ವೆಂಕನಗೌಡ ಗೋವಿಂದಗೌಡ್ರ ಆಪ್ ಅಭ್ಯರ್ಥಿಯಾಗಿ ಕಣದಲ್ಲಿದ್ದು, ಶಿಕ್ಷಕರ ಮನವೊಲಿಸಲು ಭರ್ಜರಿ ಪ್ರಚಾರ ನಡೆಸಿದ್ದಾರೆ.
ಕ್ಷೇತ್ರದ ಇತಿಹಾಸ
1958ರಿಂದ 64 ವರ್ಷಗಳ ಇತಿಹಾಸವನ್ನು ಹೊಂದಿರುವ ಶಿಕ್ಷಕರ ಕ್ಷೇತ್ರದಲ್ಲಿ ಕಾಲಕಾಲಕ್ಕೆ ಅಲ್ಪಸ್ವಲ್ಪ ಬದಲಾವಣೆಗಳು ಆಗಿವೆ. ಈವರೆಗೆ ಆರು ಜನಪ್ರತಿನಿಧಿಗಳನ್ನು ಈ ಕ್ಷೇತ್ರ ಕಂಡಿದೆ. ಅದರಲ್ಲಿ 42 ವರ್ಷ ಆಧಿಪತ್ಯ ಸಾಧಿಸಿದ್ದು ಒನ್ ಆ್ಯಂಡ್ ಓನ್ಲಿ ಬಸವರಾಜ ಹೊರಟ್ಟಿ. ಇದು ರಾಷ್ಟ್ರಮಟ್ಟದ ದಾಖಲೆಯಾಗಿ ಉಳಿದಿದೆ.
1958ರಲ್ಲಿ ಈ ಕ್ಷೇತ್ರದ ಹೆಸರು ಮೈಸೂರು ಉತ್ತರ ಶಿಕ್ಷಕರ ಕ್ಷೇತ್ರವಾಗಿತ್ತು. 1962ರಲ್ಲಿ ಮೈಸೂರು ಪಶ್ಚಿಮ ಶಿಕ್ಷಕರ ಕ್ಷೇತ್ರ ಎಂದು ನಾಮಕರಣ ಮಾಡಲಾಗಿತ್ತು. 1980ರ ಚುನಾವಣೆ ವೇಳೆಗೆ ಉತ್ತರ ಕೇಂದ್ರ ಶಿಕ್ಷಕರ ಕ್ಷೇತ್ರವಾಗಿತ್ತು. ಅಂದಿನ ಅವಿಭಜಿತ ಧಾರವಾಡ, ರಾಯಚೂರು, ಶಿವಮೊಗ್ಗ, ಬಳ್ಳಾರಿ ಜಿಲ್ಲೆಗಳು ಈ ಕ್ಷೇತ್ರದ ವ್ಯಾಪ್ತಿಗೆ ಬರುತ್ತಿದ್ದವು. ನಂತರ ಧಾರವಾಡ, ಹಾವೇರಿ, ಉತ್ತರ ಕನ್ನಡ ಹಾಗೂ ಗದಗ ಜಿಲ್ಲೆಗೆ ಸೀಮಿತಗೊಳಿಸಿ ಕರ್ನಾಟಕ ಪಶ್ಚಿಮ ಶಿಕ್ಷಕರ ಕ್ಷೇತ್ರವೆಂದು ಮಾಡಲಾಗಿದೆ.
ಹೊರಟ್ಟಿ ದಾಖಲೆ
1958ರಿಂದ 1980ರವರೆಗೆ ಆರು ಬಾರಿ ಈ ಕ್ಷೇತ್ರದಲ್ಲಿ ಚುನಾವಣೆ ನಡೆದಿದೆ. ಆಗ ಬಿ.ಬಿ. ಮಮದಾಪುರ, ಬಿ.ಜಿ. ದೇಶಪಾಂಡೆ, ಕೇಶವರಾವ್ ತಾತ್ಯಾರಾವ್ ನಿಟ್ಟೂರಕರ್, ಜಿ.ಕೆ. ಕುಲಕರ್ಣಿ, ಎಸ್.ಐ. ಶೆಟ್ಟರ್ ಆಯ್ಕೆಯಾಗಿದ್ದರು.
1980ರಲ್ಲಿ ಬಸವರಾಜ ಹೊರಟ್ಟಿ ಪ್ರಥಮ ಬಾರಿಗೆ ಪಕ್ಷೇತರರಾಗಿ ಕಣಕ್ಕೆ ಇಳಿದಿದ್ದರು. ಆಗ ರಾಜಕೀಯದಲ್ಲಿ ತಮ್ಮದೇ ಆದ ಪ್ರಭಾವ ಬೆಳೆಸಿದ್ದ ಎಸ್.ಐ. ಶೆಟ್ಟರ್, ಕೆ.ಮಲ್ಲಪ್ಪ, ಕೋಣಂದೂರು ಲಿಂಗಪ್ಪ, ಆರ್.ಟಿ. ಮಜ್ಜಗಿ, ಚೆನ್ನಬಸಪ್ಪ ಅವರಂಥ ಘಟಾನುಘಟಿಗಳು ಚುನಾವಣಾ ಕಣದಲ್ಲಿ ಸ್ಪರ್ಧಿಸಿದ್ದರು. ಇವರೆಲ್ಲರ ಎದುರಿಗೆ ಪಕ್ಷೇತರರಾಗಿ ಸ್ಪರ್ಧಿಸಿದ್ದ ಬಸವರಾಜ ಹೊರಟ್ಟಿ ಅತ್ಯಂತ ಕಿರಿಯ ವಯಸ್ಸಿನ ಅಭ್ಯರ್ಥಿಯಾಗಿದ್ದರು. ತೀವ್ರ ಪೈಪೋಟಿಯ ನಡುವೆ ಅಚ್ಚರಿಯೆಂಬಂತೆ ಹೊರಟ್ಟಿಯವರು ಗೆದ್ದು ಮೊದಲ ಪ್ರಯತ್ನದಲ್ಲೇ ವಿಧಾನ ಪರಿಷತ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದರು. ಅಂದು ಗೆದ್ದ ಹೊರಟ್ಟಿ 1986, 1992, 1998, 2004, 2010, 2016ರಲ್ಲಿ ನಡೆದ ಚುನಾವಣೆಗಳಲ್ಲಿ ನಿರಂತರವಾಗಿ ಗೆಲುವು ಸಾಧಿಸಿದ್ದಾರೆ. ಸತತವಾಗಿ ಏಳು ಬಾರಿ ಪರಿಷತ್‌ಗೆ ಆಯ್ಕೆಯಾಗಿ ರಾಷ್ಟ್ರದಾಖಲೆ ನಿರ್ಮಿಸಿದ್ದಾರೆ. ಹೀಗೆ 64 ವರ್ಷಗಳ ಇತಿಹಾಸ ಹೊಂದಿರುವ ಪರಿಷತ್ ಕ್ಷೇತ್ರವನ್ನು ಬರೋಬ್ಬರಿ 42 ವರ್ಷಗಳಿಂದ ಪ್ರತಿನಿಧಿಸುತ್ತಿದ್ದಾರೆ. ಮೊದಲ ಬಾರಿಗೆ ಮಾತ್ರ ಪಕ್ಷೇತರರಾಗಿ ಸ್ಪರ್ಧಿಸಿದ್ದ ಹೊರಟ್ಟಿ ಆಮೇಲೆ ಜನತಾ ಪರಿವಾರದಿಂದಲೇ ಸ್ಪರ್ಧಿಸಿದ್ದಾರೆ. ಇದೇ ಮೊದಲ ಬಾರಿಗೆ ಬಿಜೆಪಿಯಿಂದ ಕಣಕ್ಕೆ ಇಳಿದಿದ್ದಾರೆ.
ಇದನ್ನು ಓದಿ: ಅವನ್ಯಾವನೋ ಅರುಣ್ ಶಹಾಪುರ ಅಂತಿದ್ದಾನಲ್ಲಾ ಮುಖ ತೋರ್ಸಿದ್ದಾನಾ?: ಸಿದ್ದರಾಮಯ್ಯ
ಪ್ರಥಮ ಗೆಲುವಿನ ನಿರೀಕ್ಷೆಯಲ್ಲಿ ಬಿಜೆಪಿ
ಬಿಜೆಪಿ ಈ ಕ್ಷೇತ್ರದಲ್ಲಿ ಒಂದು ಬಾರಿಯೂ ಗೆದ್ದಿಲ್ಲ. ಪ್ರತಿ ಚುನಾವಣೆಯಲ್ಲೂ ಹೊರಟ್ಟಿ ಅವರಿಗೆ ತೀವ್ರ ಪೈಪೋಟಿ ನೀಡಿದ್ದಷ್ಟೆ ಬಿಜೆಪಿ ಸಾಧನೆ. ಆದರೆ ಗೆಲುವು ಮಾತ್ರ ಕಂಡಿಲ್ಲ. ಈಗ ರಾಜಕೀಯ ಚಿತ್ರಣ ಸಂಪೂರ್ಣ ಬದಲಾಗಿದ್ದು ಹೊರಟ್ಟಿ ಬಿಜೆಪಿ ಸೇರಿ ಕಣದಲ್ಲಿದ್ದಾರೆ. ಹೀಗಾಗಿ ಈ ಸಲ ಹೊರಟ್ಟಿ ಅವರ ಪರವಾಗಿ ಬಿಜೆಪಿ ನಾಯಕರು ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ. ಹೊರಟ್ಟಿ ಗೆದ್ದರೂ ಅವರ ವೈಯಕ್ತಿಕ ದಾಖಲೆ ಮತ್ತೊಂದು ಹಂತ ಮೇಲೇರಲಿದೆ. ಜತೆಗೆ ಬಿಜೆಪಿ ಮೊದಲ ಬಾರಿಗೆ ಗೆಲ್ಲುವ ಮೂಲಕ ಖಾತೆ ತೆರೆದಂತಾಗುತ್ತೆ. ಒಂದು ವೇಳೆ ಬೇರೆ ಯಾರಾದರೂ ಗೆದ್ದರೆ ರಾಷ್ಟ್ರ ದಾಖಲೆ ಮಾಡಿದವರನ್ನು ಸೋಲಿಸಿದ ದಾಖಲೆ ಅವರದ್ದಾಗಲಿದೆ. ಹೀಗಾಗಿ ಕ್ಷೇತ್ರ ಗಮನ ಸೆಳೆದಿದೆ.
ಕ್ಷೇತ್ರದ ಮತದಾರರ ವಿವರ
ಜಿಲ್ಲೆ | ಮತದಾರರು |
ಧಾರವಾಡ | 6,445 |
ಹಾವೇರಿ | 4,623 |
ಗದಗ | 3,300 |
ಉತ್ತರ ಕನ್ನಡ | 3,605 |
ಒಟ್ಟು | 17,973 |