Site icon Vistara News

ವಿಧಾನ ಪರಿಷತ್‌ ಸೋಲು ಬಿಜೆಪಿಗೆ ಎಚ್ಚರಿಕೆಯ ಡೋಸ್!

MLC Elections messages to all parties

ಮಾರುತಿ ಪಾವಗಡ, ಬೆಂಗಳೂರು
ಎರಡು ಪದವೀಧರ ಮತ್ತು ಎರಡು ಶಿಕ್ಷಕರ ಕ್ಷೇತ್ರಗಳಿಗೆ ನಡೆದ ಪರಿಷತ್‌ ಚುನಾವಣೆಯ ಫಲಿತಾಂಶ ಆಡಳಿತರೂಢ ಬಿಜೆಪಿಗೆ ಎಚ್ಚರಿಕೆಯ ಡೋಸ್‌ ನೀಡಿದಂತಾಗಿದೆ. ಏಕೆಂದರೆ ಈಗಿನ ನಾಲ್ಕು ಪರಿಷತ್‌ ಕ್ಷೇತ್ರಗಳಲ್ಲೂ ಈ ಹಿಂದೆ ಕಾಂಗ್ರೆಸ್‌ ಗೆದ್ದಿರಲಿಲ್ಲ. ಆದರೆ ಈ ಬಾರಿ ಅದು ಬಿಜೆಪಿ ಮತ್ತು ಜೆಡಿಎಸ್‌ನಿಂದ ತಲಾ ಒಂದು ಕ್ಷೇತ್ರಗಳನ್ನು ಸೆಳೆದುಕೊಂಡು ವಿಜಯೋತ್ಸವ ಆಚರಿಸಿದೆ. ಎಲ್ಲದಕ್ಕಿಂತ ಮುಖ್ಯವಾಗಿ, ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಎದುರು ಹೀನಾಯವಾಗಿ ಸೋಲುವ ಮೂಲಕ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದೆ.

ಈ ಬಾರಿ ವಾಯವ್ಯ ಶಿಕ್ಷಕರ ಕ್ಷೇತ್ರ ಮತ್ತು ದಕ್ಷಿಣ ಪದವೀಧರ ಕ್ಷೇತ್ರಗಳಲ್ಲಿ ಭಾರೀ ಅಂತರದಿಂದ ಗೆಲ್ಲುವ ಮೂಲಕ ಶಿಕ್ಷಕ ವರ್ಗ ಕಾಂಗ್ರೆಸ್‌ಗೆ ಹತ್ತಿರವಾಗುತ್ತಿರುವ ಬಗ್ಗೆ ಸ್ಪಷ್ಟ ಚಿತ್ರಣ ಸಿಕ್ಕಿದೆ. ರಾಜ್ಯಸಭೆಯಲ್ಲಿ ತನ್ನ ಮೂರನೇ ಅಭ್ಯರ್ಥಿಯನ್ನು ಗೆಲ್ಲಿಸಿ ಸಿಹಿ ಉಂಡಿದ್ದ ಒಂದೇ ವಾರದಲ್ಲಿ ಬಿಜೆಪಿ ಹಿನ್ನಡೆಯ ಕಹಿ ಉಂಡಿದೆ. ಈ ಫಲಿತಾಂಶ 2023ರ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಅಲ್ಲದೇ ಹೋದರೂ, ಈ ಚುನಾವಣಾ ವರ್ಷದಲ್ಲಿ ಬಿಜೆಪಿಗೆ ಬಿಸಿ ಮುಟ್ಟಿಸಿರುವುದಂತೂ ಸತ್ಯ.

ಇದೇ ತಿಂಗಳ ಜೂನ್‌ ೨೦, ೨೧ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಆಗಮಿಸಲಿದ್ದಾರೆ. ಮೋದಿಗೆ ಅಭೂತಪೂರ್ವ ಸ್ವಾಗತ ನೀಡಲು ರಾಜ್ಯ ಬಿಜೆಪಿ ಅತ್ಯುತ್ಸಾಹದಿಂದ ಸಿದ್ಧತೆ ನಡೆಸುತ್ತಿದೆ. ಈ ಸಂದರ್ಭದಲ್ಲೇ ವಿಧಾನ ಪರಿಷತ್‌ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆ ಆಗಿರುವುದು ರಾಜ್ಯ ಬಿಜೆಪಿ ನಾಯಕರಿಗೆ ಹರಳೆಣ್ಣೆ ಕುಡಿಸಿದಂತಾಗಿದೆ!

ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ ಖದರ್‌

ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಐತಿಹಾಸಿಕ ಗೆಲುವು ಬಿಜೆಪಿಯನ್ನು ಕಂಗೆಡಿಸಿದೆ. ಹಲವು ಚುನಾವಣೆಗಳಲ್ಲಿ ಸೋತು ಸುಣ್ಣವಾಗಿದ್ದ ಕಾಂಗ್ರೆಸ್‌ ಪಕ್ಷಕ್ಕೆ ಈ ಗೆಲುವು ಬೂಸ್ಟ್‌ ಸಿಕ್ಕಂತಾಗಿದೆ. ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ೧೨ ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್‌ ಗೆದ್ದಿರುವುದು ಮಹತ್ವದ ಬೆಳವಣಿಗೆಯಾಗಿದೆ. ಈ ಕ್ಷೇತ್ರ ಸೃಷ್ಟಿಯಾದ ೫೦ ವರ್ಷಗಳ ಬಳಿಕ ಇಲ್ಲಿ ಗೆಲುವಿನ ಖಾತೆ ತೆರೆದಿರುವುದು ಕಾಂಗ್ರೆಸ್‌ ಪಕ್ಷದ ಪಾಲಿಗೆ ಮುಂದಿನ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ನಿರ್ಣಾಯಕವಾಗಿದೆ.

ಬಿಜೆಪಿಗೆ ಎಚ್ಚರಿಕೆಯ ಮೆಸೆಜ್ ರವಾನಿಸಿದ ಫಲಿತಾಂಶ

ದೇಶದಲ್ಲಿ ಎಂಟು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಆಡಳಿತ ಇತರೆ ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಪಾಲಿಗೆ ದೊಡ್ಡ ಪ್ಲಾಸ್‌ ಪಾಯಿಂಟ್‌. ಅದೇ ರೀತಿ ಕರ್ನಾಟಕದಲ್ಲು ರಾಜ್ಯ ಸರ್ಕಾರದ ಆಡಳಿತದಲ್ಲಿ ಏನೇ ಏರುಪೇರು ಆದರೂ ಬಿಜೆಪಿ ಕಾರ್ಯಕರ್ತರಿಗೆ ಕೇಂದ್ರದ ಮೋದಿ ಸರ್ಕಾರದ ಬಲವೇ ಮುಖ್ಯ. ಇತ್ತೀಚೆಗೆ ರಾಜ್ಯ ಸರ್ಕಾರದ ವಿರುದ್ಧ ಹಲವು ಗಂಭೀರ ಆರೋಪಗಳು ಬಂದಾಗಲೂ ರಾಜ್ಯದ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ನಡೆ ಮತ್ತು ಕಾರ್ಯಗಳನ್ನ ಪ್ರಸ್ತಾಪ ಮಾಡಿ ವಿಪಕ್ಷಗಳ ಬಾಯಿ ಮುಚ್ಚಿಸುವ ಕೆಲಸ ಮಾಡಿದ್ದರು. ಆದರೆ ಈ ತಂತ್ರ ತುಂಬಾ ದಿನ ನಡೆಯಲಾರದು ಎಂಬ ನೇರ ಮತ್ತು ಸ್ಪಷ್ಟ ಸಂದೇಶ ವಿಧಾನ ಪರಿಷತ್‌ ಚುನಾವಣೆಯ ಫಲಿತಾಂಶ ಮೂಲಕ ರಾಜ್ಯ ಬಿಜೆಪಿಗೆ ಸಿಕ್ಕಂತಾಗಿದೆ.

ಚುನಾವಣಾ ವರ್ಷದಲ್ಲಿ ಆಡಳಿತ ಪಕ್ಷದ ಇಮೇಜ್‌ಗೆ ಧಕ್ಕೆ

ಹಾಗೆ ನೋಡಿದರೆ ಬಿಜೆಪಿಗೆ ಇದು ಮೊದಲ ಏಟೇನೂ ಅಲ್ಲ. ಬೆಳಗಾವಿ ಲೋಕಸಭೆಗೆ ನಡೆದ ಉಪ ಚುನಾವಣೆಯಿಂದಲೇ ಬಿಜೆಪಿಗೆ ಸೋಲಿನ ಅನುಭವವಾಗಿದೆ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೂ ಕೇವಲ ೨೦೦೦ ಮತಗಳ ಅಂತರದಿಂದ ದಿ. ಸುರೇಶ್‌ ಅಂಗಡಿ ಅವರ ಪತ್ನಿ ಮಂಗಳಾ ಅಂಗಡಿ ಅವರು ಭಾರಿ ಪ್ರಯಾಸದಿಂದ ಗೆದ್ದಾಗಲೇ ಒಳಪೆಟ್ಟುಗಳ ಆಟ ಬಹಿರಂಗವಾಗಿತ್ತು. ಬಿಜೆಪಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾಯಕರಿಗೂ ಈ ಮಾಹಿತಿ ರವಾನೆ ಆಗಿತ್ತು. ಜತೆಗೆ ಬರೀ ಮೋದಿ ವರ್ಚಸ್ಸೊಂದೇ ಚುನಾವಣೆಯಲ್ಲಿ ಗೆಲುವು ಕೊಡಿಸಲು ಸಾಧ್ಯವಿಲ್ಲ, ರಾಜ್ಯದ ಆಡಳಿತ ನಡೆಸುತ್ತಿರುವವರು ಜನಪರ ಕೆಲಸ ಮಾಡಬೇಕು ಎಂಬ ವಾಸ್ತವ ಸಂಗತಿ ಅನಾವರಣಗೊಂಡಿತ್ತು.

ಈಗ ಪರಿಷತ್‌ ಫಲಿತಾಂಶ ನೋಡಿದ ಬಳಿಕ, ಎರಡು ವರ್ಷಗಳ ಹಿಂದೆ ಆದ ತಪ್ಪನ್ನು ಬಿಜೆಪಿ ರಾಜ್ಯ ಘಟಕ ತಿದ್ದಿಕೊಂಡಿಲ್ಲ ಎಂಬ ಅಂಶ ಎದ್ದು ಕಂಡಿದೆ. ಕಾಂಗ್ರೆಸ್‌ ನಾಯಕರು ಚುನಾವಣೆಗೂ ಮುನ್ನ ಏನೇ ಕಿತ್ತಾಡಿಕೊಂಡಿದ್ದರೂ, ಚುನಾವಣೆ ಸಂದರ್ಭದಲ್ಲಿ ಒಂದಾಗಿ ಕೆಲಸ ಮಾಡಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಮುಂದಿನ ವಿಧಾನಸಭಾ ಚುನಾವಣೆಗೆ ಬೇಕಾದ ದಾರಿ ಸುಲಭ ಮಾಡಿಕೊಂಡಿದ್ದಾರೆ. ಕಾಂಗ್ರೆಸ್‌ ಇದೇ ಹುಮ್ಮಸ್ಸಿನಲ್ಲಿ ಮುಂದುವರಿದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷಿತ ಫಲಿತಾಂಶ ಪಡೆಯುವುದು ಡೌಟ್‌. ರಾಜ್ಯ ಬಿಜೆಪಿಯ ಕೆಲವು ಮುಖಂಡರೇ ಈ ಅನಿಸಿಕೆಯನ್ನು ಮುಕ್ತವಾಗಿ ಹೇಳಿಕೊಂಡಿದ್ದಾರೆ.

ಹೊರಟ್ಟಿ ಗೆಲುವಿನ ಕ್ರೆಡಿಟ್ ಬಿಜೆಪಿಗಲ್ಲ!

ಶಿಕ್ಷಕರ ಕ್ಷೇತ್ರದಿಂದ ಗೆದ್ದಿರುವ ಬಸವರಾಜ ಹೊರಟ್ಟಿ ಈ ಬಾರಿ ಬಿಜೆಪಿಯಿಂದ ಗೆದ್ದರೂ ಕೂಡ, ಈ ಗೆಲುವಿನಿಂದ ಬಿಜೆಪಿ ಬೀಗಬೇಕಿಲ್ಲ. ಏಕೆಂದರೆ ಕಳೆದ ಎಂಟು ಚುನಾವಣೆಗಳಲ್ಲು ಹೊರಟ್ಟಿ ಅವರು ತಮ್ಮ ಸ್ವಂತ ಬಲದಿಂದ ಗೆಲ್ಲುತ್ತ ಬಂದಿದ್ದಾರೆ. ೪೨ ವರ್ಷಗಳ ಹೊರಟ್ಟಿ ಅವರ ರಾಜಕೀಯ ಜೀವನದಲ್ಲಿ ಶಿಕ್ಷಕ ವರ್ಗ ಎಂದೂ ಅವರ ಕೈಬಿಟ್ಟಿಲ್ಲ ಎನ್ನುವುದು ಓಪನ್‌ ಸಿಕ್ರೇಟ್‌. ಹಾಗಾಗಿ ಸಂಖ್ಯೆಯ ದೃಷ್ಟಿಯಿಂದ ಹೊರಟ್ಟಿ ಗೆಲುವು ಬಿಜೆಪಿಗೆ ಬಲ ತಂದಿದ್ದರೂ, ಇದು ಅವರ ವೈಯಕ್ತಿಕ ಗೆಲುವು ಎಂದೇ ಹೇಳಬಹುದಾಗಿದೆ.

ಬೆಳಗಾವಿ ಬಿಜೆಪಿ ಜಿಲ್ಲಾ ನಾಯಕರ ಒಳಪೆಟ್ಟು

ಎರಡು ಬಾರಿ ಸತತವಾಗಿ ಅದೇ ಕ್ಷೇತ್ರದಿಂದ ಗೆದ್ದಿದ್ದ ಅರುಣ್‌ ಶಹಾಪುರ ಗೆಲುವು ಈ ಬಾರಿ ಅಷ್ಟೊಂದು ಕಷ್ಟವಾಗಿರಲಿಲ್ಲ. ಆದರೆ ಎರಡು ಬಾರಿ ಗೆದ್ದಿದ್ದೇನೆ, ಮೂರನೇ ಬಾರಿ ನಿರಾಯಾಸವಾಗಿ ಗೆಲ್ಲುತ್ತೇನೆ ಎನ್ನುವ ಓವರ್‌ ಕಾನ್ಫಿಡೆನ್ಸ್‌ ಅವರಿಗೆ ಮುಳುವಾಗಿದೆ. ಶಿಕ್ಷಕರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸದೆ ಅವರು ಉದಾಸೀನ ಮಾಡಿದರು ಎಂಬ ಆರೋಪವಿದೆ.

ಇನ್ನು ಪ್ರಭಾಕರ ಕೋರೆ ಅವರಿಗೆ ಬೆಳಗಾವಿ ಭಾಗದಲ್ಲಿ ಅವರದೇ ಆದ ವರ್ಚಸ್ಸು ಇದೆ. ಆದರೆ ರಾಜ್ಯಸಭಾ ಅವಧಿ ಮುಗಿದ ಮೇಲೆ ಮತ್ತೆ ಅವರಿಗೆ ಅವಕಾಶ ಕೊಡಲಿಲ್ಲ. ಬಳಿಕ ಪರಿಷತ್‌ಗೂ ಪರಿಗಣಿಸಲಿಲ್ಲ ಎನ್ನುವ ಅಸಮಾಧಾನ ಮೊದಲಿಂದಲೂ ಇತ್ತು. ಇದನ್ನು ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಗಂಭೀರವಾಗಿ ಪರಿಗಣಿಸಲಿಲ್ಲ. ಕೊನೆಯ ಕ್ಷಣದಲ್ಲಿ ಅವರನ್ನು ಸಂಪರ್ಕಿಸಿ ಸಮಾಧಾನ ಹೇಳಿದರೂ ಕಾಲ ಮಿಂಚಿ ಹೋಗಿತ್ತು. ಶಹಾಪುರ ಸೋಲಿಗೆ ಇದೂ ಕೂಡ ಒಂದು ಕಾರಣ ಎಂಬ ಅಭಿಪ್ರಾಯವಿದೆ.

ಯಾವುದೇ ಸರ್ಕಾರ ಇದ್ದರೂ ಜಾರಕಿಹೊಳಿ ಕುಟುಂಬಕ್ಕೆ ಎಲ್ಲೆಡೆ ಪ್ರಾತಿನಿಧ್ಯ ಇರುತ್ತಿತ್ತು. ಆದರೆ ಈ ಬಾರಿ ಹೀಗಾಗಲಿಲ್ಲ. ಜಾರಕಿಹೊಳಿ ವಿರುದ್ಧ ಕೇಳಿ ಬಂದ ಗಂಭೀರ ಆರೋಪದಲ್ಲಿ ಬಿ ರಿಪೋರ್ಟ್‌ ಹಾಕಿದ ಬಳಿಕವೂ ಮತ್ತೆ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಿಲ್ಲ. ಈ ಕಾರಣಕ್ಕಾಗಿ ರಮೇಶ್‌ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಸಹ ಅರುಣ್‌ ಶಹಾಪುರ ಪರ ಕೆಲಸ ಮಾಡಲಿಲ್ಲ. ಈ ಎಲ್ಲ ಬೆಳಗಾವಿ ಎಫೆಕ್ಟ್‌ನಿಂದಾಗಿ ಅರುಣ್‌ ಶಹಾಪುರ ಅವರು ಪ್ರಕಾಶ್‌ ಹುಕ್ಕೇರಿ ವಿರುದ್ಧ ಭಾರಿ ಅಂತರದಲ್ಲಿ ಸೋಲಬೇಕಾಯಿತು. ವಾಯವ್ಯ ಪದವೀಧರ ಕ್ಷೇತ್ರದಲ್ಲಿ ಹನುಮಂತ ನಿರಾಣಿ ಭಾರಿ ಅಂತರದಿಂದ ಕಾಂಗ್ರೆಸ್‌ ಅಭ್ಯರ್ಥಿ ವಿರುದ್ಧ ಗೆದ್ದರೂ, ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಭಾರಿ ಅಂತರದಿಂದ ಸೋತಿರುವುದು ಮುಂದಿನ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಅಲ್ಲ.

ಫರಿಷತ್‌ ಫಲಿತಾಂಶದಿಂದ ಯಾವ ಪಕ್ಷಕ್ಕೆ ಏನು ಸಂದೇಶ?

ಚುನಾವಣಾ ವರ್ಷದಲ್ಲಿ ಪಂಚಾಯಿತಿಯಿಂದ ಹಿಡಿದು ಪಾರ್ಲಿಮೆಂಟ್‌ತನಕ ನಡೆಯುವ ಪ್ರತಿಯೊಂದು ಚುನಾವಣೆಯೂ ಮುಖ್ಯ. ಹೀಗಾಗಿ ಸದ್ಯದ ಫಲಿತಾಂಶ ಬಿಜೆಪಿಗೆ ಅಪಾಯಕಾರಿ ದಿಕ್ಸೂಚಿಯಾಗಿದೆ. ಹಲವು ದಶಕಗಳಿಂದ ತಮ್ಮ ಜತೆಗಿದ್ದ ಶಿಕ್ಷಿತರೇ ದೂರ ಆಗಿರುವುದು ಬಿಜೆಪಿ ನಾಯಕರು ದಂಗಾಗುವಂತೆ ಮಾಡಿದೆ. ಈ ಹಿನ್ನಡೆಗೆ ಕಾರಣ ಏನು? ಆಂತರಿಕ ಕಚ್ಚಾಟವೇ ಅಥವಾ ಹಳಿ ತಪ್ಪಿದ ಆಡಳಿತವೇ ಎಂಬ ಪ್ರಶ್ನೆಯನ್ನು ಬಿಜೆಪಿ ನಾಯಕರು ತಮಗೆ ತಾವೇ ಕೇಳಿಕೊಳ್ಳಬೇಕಾಗಿದೆ.

ಇನ್ನು ಎರಡು ಕ್ಷೇತ್ರಗಳಲ್ಲಿನ ಗೆಲುವು ಕಾಂಗ್ರೆಸ್‌ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಇದೇ ರೀತಿ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಒಗ್ಗಟ್ಟಿನಿಂದ ಹೋದರೆ ಮುಂದಿನ ವಿಧಾನಸಭೆ ಚುನಾವಣೆ ಗೆಲ್ಲುವುದು ಕಷ್ಟವೇನಲ್ಲ ಎಂಬ ವಿಶ್ವಾಸ ಕಾಂಗ್ರೆಸ್‌ ನಾಯಕರಲ್ಲಿ ಮೂಡಿದೆ. ಜೆಡಿಎಸ್‌‌ ನಾಲ್ಕೂ ಕ್ಷೇತ್ರಗಳಲ್ಲಿ ಪರಾಭವ ಅನುಭವಿಸಿದೆ. ಸಾಂಪ್ರದಾಯಿಕ ಮತಗಳನ್ನು ಕೂತರೆ, ಎಡರನೇ ತಲೆಮಾರಿನ ನಾಯಕರನ್ನು ಬೆಳೆಸದೇ ಹೋದರೆ ಪಕ್ಷಕ್ಕೆ ಉಳಿಗಾಲವಿಲ್ಲ ಎಂಬ ಸಂದೇಶ ಜೆಡಿಎಸ್‌ ವರಿಷ್ಠರಿಗೆ ತಲುಪಿದೆ.

Exit mobile version