Site icon Vistara News

ಶಾಸಕರಿಂದ ಆಯ್ಕೆಯಾಗುವ ಕರ್ನಾಟಕದ 7 MLC ಸ್ಥಾನಗಳಿಗೆ ಜೂನ್‌ 3ರಂದು ಚುನಾವಣೆ

ಬೆಂಗಳೂರು: ಶಾಸಕರ ಮೂಲಕ ವಿಧಾನ ಪರಿಷತ್‌ಗೆ ಚುನಾವಣೆ ಮೂಲಕ ಆಯ್ಕೆ ಮಾಡಲಾಗುವ ಚುನಾವಣೆಯನ್ನು ಜೂನ್‌ 3ರಂದು ನಡೆಸಲಾಗುತ್ತದೆ. ಕೇಂದ್ರ ಚುನಾವಣಾ ಆಯೋಗ ಮಂಗಳವಾರ ಈ ಘೋಷಣೆ ಹೊರಡಿಸಿದ್ದು, ಒಟ್ಟು ಏಳು ಸ್ಥಾನಗಳಿಗೆ ಸದಸ್ಯರ ಆಯ್ಕೆ ನಡೆಯಲಿದೆ.

ಬಿಜೆಪಿಯ ಲಕ್ಷ್ಮಣ ಸಂಗಪ್ಪ ಸವದಿ, ಲೆಹರ್‌ ಸಿಂಗ್‌ ಸಿರೋಯಾ, ಕಾಂಗ್ರೆಸ್‌ನ ಆರ್‌.ಬಿ. ತಿಮ್ಮಾಪೂರ, ಅಲ್ಲಂ ವೀರಭದ್ರಪ್ಪ, ವೀಣಾ ಅಚ್ಚಯ್ಯ, ಕೆ.ವಿ. ನಾರಾಯಣಸ್ವಾಮಿ, ಜೆಡಿಎಸ್‌ನ ಎಚ್‌.ಎಂ. ರಮೇಶ್‌ ಗೌಡ ಅವರ ಅಧಿಕಾರಾವಧಿ ಜೂನ್‌ 14ಕ್ಕೆ ಮುಕ್ತಾಯವಾಗಲಿದೆ. ಈ ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದೆ.

ಕೇಂದ್ರ ಚುನಾವಣಾ ಆಯೋಗ ಮಂಗಳವಾರ ಈ ಕುರಿತು ಪ್ರಕಟಣೆ ಹೊರಡಿಸಿದೆ. ಮೇ 17ರಂದು ಚುನಾವಣೆಯ ಅಧಿಸೂಚನೆ ಹೊರಡಿಸಲಿದೆ. ನಾಮಪತ್ರ ಸಲ್ಲಿಕೆಗೆ ಮೇ 24 ಅಂತಿಮ ದಿನಾಂಕ, ನಾಮಪತ್ರ ಪರಿಶೀಲನೆ ಮೇ 25, ನಾಮಪತ್ರ ಹಿಂಪಡೆಯಲು ಮೇ 25 ಅಂತಿಮ ದಿನಾಂಕವಾಗಿರುತ್ತದೆ. ಜೂನ್‌ 3ರ ಶುಕ್ರವಾರ ಬೆಳಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ಚುನಾವಣೆ ನಡೆಯಲಿದೆ. ಅಂದೇ ಸಂಜೆ 5 ಗಂಟೆಗೆ ಫಲಿತಾಂಶ ಘೋಷಣೆ ಆಗಲಿದೆ.

ಈ ಬಾರಿಯ ಚುನಾವಣೆಯ ಒಟ್ಟು ಏಳು ಸ್ಥಾನದಲ್ಲಿ ಬಿಜೆಪಿಗೆ 3-4 ಸ್ಥಾನಗಳು ಲಭಿಸುವ ಅಂದಾಜಿದೆ. ಕಾಂಗ್ರೆಸ್‌ಗೆ ಎರಡು ಹಾಗೂ ಜೆಡಿಎಸ್‌ ಒಂದು ಸ್ಥಾನ ಪಡೆಯಬಹುದು ಎಂಬ ಲೆಕ್ಕಾಚಾರವಿದೆ.

ಇದನ್ನೂ ಓದಿ | ತೆರವಾಗಿರುವ ಗ್ರಾ.ಪಂ. ಸ್ಥಾನಗಳಿಗೆ ಮೇ 20ರಂದು ಉಪಚುನಾವಣೆ

Exit mobile version