Site icon Vistara News

23 ಗಣ್ಯರ ಕಣ್ಣಲ್ಲಿ 20 ವರ್ಷದ ಮೋದಿ ಆಡಳಿತ: ಮೋದಿ@20 ಕೃತಿ ಬಿಡುಗಡೆ

ಬಸವರಾಜ ಬೊಮ್ಮಾಯಿ

ಬೆಂಗಳೂರು: ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ 8 ವರ್ಷ ಪೂರೈಸಿದ್ದಾರೆ. ಆದರೆ ಅದಕ್ಕೂ ಮುಂಚೆಯೇ 12 ವರ್ಷ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಮೋದಿ ಒಟ್ಟು ಆಡಳಿತದಲ್ಲಿ 20 ವರ್ಷ ಪೂರ್ಣಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ದೇಶದ 23 ಗಣ್ಯ ವ್ಯಕ್ತಿಗಳು ತಮ್ಮ ಮನದಾಳವನ್ನು “ಮೋದಿ@20 ಡ್ರೀಮ್ಸ್ ಮೀಟ್ ಡೆಲಿವರಿ” ಕೃತಿಯಲ್ಲಿ ತೆರೆದಿಟ್ಟಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರನ್ನು ದೇಶದ ಅತ್ಯುತ್ತಮ ಆಡಳಿತಗಾರರಲ್ಲೊಬ್ಬರು ಎಂದು ಖಾತ್ರಿಪಡಿಸುವ ನಿಟ್ಟಿನಲ್ಲಿ ಗಣ್ಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ಕೃತಿಯನ್ನು ಕರ್ನಾಟಕದಲ್ಲಿ ಸೋಮವಾರ ಬಿಡುಗಡೆ ಮಾಡಲಾಯಿತು. ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೊಟ್‌, ಸಿಎಂ ಬಸವರಾಜ ಬೊಮ್ಮಾಯಿ ಸೇರಿ ಅನೇಕ ಗಣ್ಯರು ಭಾಗವಹಿಸಿದ್ದರು.

ಕೃತಿಯನ್ನು ಪ್ರಮುಖವಾಗಿ ಐದು ಭಾಗಗಳಾಗಿ ವಿಂಗಡಿಸಲಾಗಿದೆ. ಜನ ಕೇಂದ್ರಿತ, ಏಕತೆ ಮತ್ತು ಅಭಿವೃದ್ಧಿಯ ರಾಜಕಾರಣ, ಜನಧನ, ಆಡಳಿತದಲ್ಲಿ ಹೊಸ ಸ್ಥಿತ್ಯಂತರ ಹಾಗೂ ವಸುಧೈವ ಕುಟುಂಬಕಂ ಎಂಬ ಭಾಗಗಳಿವೆ. ಲತಾ ಮಂಗೇಷ್ಕರ್‌ ಮುನ್ನುಡಿ ಬರೆದಿದ್ದರೆ, ಸುಧಾ ಮೂರ್ತಿ, ಪಿ.ವಿ. ಸಿಂಧು, ಸದ್ಗುರು, ನಂದನ್‌ ನಿಲೇಕಣಿ, ಅಮೀಶ್‌ ತ್ರಿಪಾಠಿ, ಅರವಿಂದ ಪನಗಾರಿಯಾ, ಎಸ್‌. ಜೈಶಂಕರ್‌, ಅಜಿತ್‌ ದೋವಲ್‌, ಶೋಭನಾ ಕಾಮಿನೇನಿ, ಸುರ್ಜಿತ್‌ ಎಸ್‌. ಭಲ್ಲಾ, ಪ್ರದೀಪ್‌ ಗುಪ್ತ, ಅನಂತ ನಾಗೇಶ್ವರನ್‌, ಶಮಿಕಾ ರವಿ, ಉದಯ್‌ ಎಸ್‌. ಕೊಟಕ್‌, ಅಜಯ್‌ ಮಾಥೂರ್‌, ಅನುಪಮ್‌ ಖೇರ್‌, ಅಶೋಕ್‌ ಗುಲಾಟಿ, ಡಾ. ದೇವಿ ಶೆಟ್ಟಿ, ನೃಪೇಂದ್ರ ಮಿಶ್ರ, ಮನೋಜ್‌ ಲಾದ್ವಾ ಹಾಗೂ ಭಾರತ್‌ ಬರಾಯಿ ತಮ್ಮ ಕ್ಷೇತ್ರಗಳಲ್ಲಿ ಪ್ರಧಾನಿ ಮೋದಿಯವರ ಆಡಳಿತದ ಪರಿಣಾಮವನ್ನು ತೆರೆದಿಟ್ಟಿದ್ದಾರೆ.

ಬೆಂಗಳೂರಿನಲ್ಲಿ ಕೃತಿ ಬಿಡುಗಡೆ

ಈಗಾಗಲೆ ಕೃತಿಯನ್ನು ದೇಶದ ವಿವಿಧೆಡೆ ಬಿಡುಗಡೆ ಮಾಡಲಾಗಿದೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೊಟ್‌, ನರೇಂದ್ರ ಮೋದಿ ಅವರ ಬಾಲ್ಯದಿಂದ ದೇಶದ ಪ್ರಧಾನಿಯಾಗುವವರೆಗಿನ ಪ್ರಯಾಣವು ಕಷ್ಟಗಳು ಮತ್ತು ಕಠಿಣ ಪರಿಶ್ರಮದಿಂದ ಕೂಡಿದೆ. ಪ್ರತಿಯೊಬ್ಬ ವ್ಯಕ್ತಿಯೂ ನರೇಂದ್ರ ಮೋದಿಯವರ ವ್ಯಕ್ತಿತ್ವ ಮತ್ತು ಜೀವನದಿಂದ ಸ್ಫೂರ್ತಿ ಪಡೆಯಬೇಕು. ಈ ಕೃತಿಯನ್ನು ಅಧ್ಯಯನ ಮಾಡುವ ಮೂಲಕ, ಮೋದಿ ಅವರು ರಾಷ್ಟ್ರದ ಏಕತೆ-ಸಮಗ್ರತೆ, ಸಾಮಾಜಿಕ ಸಾಮರಸ್ಯ ಮತ್ತು ರಾಷ್ಟ್ರೀಯವಾದಿ ಚಿಂತನೆಯೊಂದಿಗೆ ಮಾಡಿದ ಕಾರ್ಯಗಳ ಬಗ್ಗೆ ಮಾಹಿತಿ ಪಡೆಯಬಹುದು.

ಧಾರ್ಮಿಕ, ಆಧ್ಯಾತ್ಮಿಕ ಮತ್ತು ರಾಷ್ಟ್ರೀಯ ಚಿಂತನೆಯ ವ್ಯಕ್ತಿ, ಆತ್ಮಸಾಕ್ಷಿಯ, ಪ್ರಾಮಾಣಿಕ, ಅಸಾಧಾರಣ ವಾಕ್ಚಾತುರ್ಯ ಹೊಂದಿರುವ, ಸಾಮರಸ್ಯ ವ್ಯಕ್ತಿತ್ವ, ಶಿಸ್ತಿನ ಜೀವನ, ತ್ವರಿತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ, ದೂರದೃಷ್ಟಿ, ಸಮರ್ಥ ನಾಯಕತ್ವ, ನಮ್ರತೆ ಮತ್ತು ಹೋರಾಟ, ಸಕಾರಾತ್ಮಕತೆ ಮತ್ತು ಧೈರ್ಯದ ಸಂಕೇತವಾಗಿರುವ ನರೇಂದ್ರ ಮೋದಿ ಅವರು ಜಾಗತಿಕ ವೇದಿಕೆಯಲ್ಲಿ ಭಾರತದ ಗುರುತನ್ನು ಶಕ್ತಿಯುತ ದೇಶವಾಗಿ ಮಾಡಿದವರು ಎಂದು ಗುಣಗಾನ ಮಾಡಿದರು.

ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಸದಾಕಾಲ ಜನರ ಹೃದಯದಲ್ಲಿ ಸ್ಥಾನ ಗಳಿಸಲು ಜನನಾಯಕನಿಂದ ಮಾತ್ರ ಸಾಧ್ಯ. 130 ಕೋಟಿ ಜನಸಂಖ್ಯೆ, ಸಾವಿರಾರು ಜಾತಿಗಳು, ಹಲವಾರು ಸಂಸ್ಕತಿ, ನೂರಾರು ಭಾಷೆಗಳಿರುವ ಭಾರತದಲ್ಲಿ ಎಲ್ಲರ ಮಧ್ಯೆ ಭರವಸೆ ಹುಟ್ಟಿಸಿ, ಅದಕ್ಕೆ ತಕ್ಕಂತೆ ಕೆಲಸ ಮಾಡಿರುವುದು ಸುಲಭದ ಕೆಲಸವಲ್ಲ. ಮೋದಿಜಿ ಅವರು ಭಾರತವನ್ನು ಕಠಿಣ ನಿರ್ಣಯ, ಕರಾರುವಾಕ್ಕು ಕಾರ್ಯಕ್ರಮಗಳು, ದಿಟ್ಟತನದ ನಾಯಕತ್ವ, ಬಡವರಿಗಾಗಿ ವಿಶೇಷ ಕಾರ್ಯಕ್ರಮ, ಆರ್ಥಿಕ, ಸಾಮಾಜಿಕ ಬದಲಾವಣೆಯನ್ನು ತರುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ | G7 Summit: ಜರ್ಮನಿ ತಲುಪಿದ ಪ್ರಧಾನಿ ನರೇಂದ್ರ ಮೋದಿ; ಎಸಿ ಇಲ್ಲದ ಹೋಟೆಲ್‌ನಲ್ಲಿ ಶೃಂಗಸಭೆ !

ಎಲ್ಲರಿಗೂ ಮೋದಿ @ 20 ಕನ್ನಡಾನುವಾದದ ಪುಸ್ತಕ:
ಮೋದಿಯವರ ವಿಚಾರಗಳು ಮೋದಿ@20 ಪುಸ್ತಕದಲ್ಲಿ ನಮೂದಿಸಲಾಗಿದೆ. ಸುಧಾ ಮೂರ್ತಿ, ಡಾ.ದೇವಿ ಶೆಟ್ಟಿ, ಕ್ರೀಡಾಪಟು ಪಿ.ವಿ.ಸಿಂಧೂ ಸೇರಿ ಹಲವಾರು ಸಾಧಕರು ಈ ಪುಸ್ತಕಕ್ಕೆ ಬರೆದಿದ್ದಾರೆ. ಕರ್ನಾಟಕದ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಪ್ರಧಾನಿ ಮೋದಿಯವರು ಕನ್ನಡ ನೆಲ, ಜಲ, ಉದ್ಯಮ, ಹೊಸ ತಂತ್ರಜ್ಞಾನ ಬಗೆಗೆ ಅಭಿಮಾನ ಹೊಂದಿದ್ದಾರೆ. ಅವರ ವಿಚಾರಧಾರೆಗಳನ್ನು ಕರ್ನಾಟಕದಲ್ಲಿ ಜನರಿಗೆ ತಲುಪಿಸುವ ಕೆಲಸ ಮಾಡಲಾಗುವುದು. ಅವರ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿ ರಾಜ್ಯದ್ಯಂತ ಹಂಚುವ ಕೆಲಸವನ್ನು ಮಾಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಲೋಗನಾಥನ್ ಮುರುಗನ್, ಕರ್ನಾಟಕ ಸರ್ಕಾರದ ಸಚಿವರುಗಳಾದ ಡಾ. ಸಿ.ಎನ್‌. ಅಶ್ವತ್ಥನಾರಾಯಣ್‌, ವಿ ಸೋಮಣ್ಣ, ಬಿ. ಸಿ. ಪಾಟೀಲ್, ಎಸ್‌.ಟಿ. ಸೋಮಶೇಖರ್, ಕೆಎಫ್‌ಡಿಸಿಎಲ್ ಅಧ್ಯಕ್ಷೆ ತಾರಾ ಅನುರಾಧ, ಶಾಸಕ ಉದಯ್ ಬಿ ಗರುಡಾಚಾರ್, ಲೇಖಕರಾದ ಸುಧಾ ಮೂರ್ತಿ ಸೇರಿ ಮತ್ತಿತರರು ಭಾಗವಹಿಸಿದ್ದರು.

ಇದನ್ನೂ ಓದಿ | ಜಿ7 ಶೃಂಗದಲ್ಲಿ ಪ್ರಧಾನಿ ಮೋದಿ; ಬೈಡೆನ್‌, ಮ್ಯಾಕ್ರನ್, ಟ್ರುಡೊ ಜತೆ ದ್ವಿಪಕ್ಷೀಯ-ಸೌಹಾರ್ದಯುತ ಚರ್ಚೆ

Exit mobile version