Site icon Vistara News

Modi Birthday | ಸೇವಾ ಪಾಕ್ಷಿಕಕ್ಕೆ ಚಾಲನೆ; ನೆಚ್ಚಿನ ನಾಯಕನ ಹುಟ್ಟುಹಬ್ಬಕ್ಕೆ ರಾಜ್ಯ ನಾಯಕರ ರಕ್ತದಾನ

modi

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬವನ್ನು (Modi Birthday) ರಾಜ್ಯ ನಾಯಕರು ಹಬ್ಬವನ್ನಾಗಿ ಆಚರಿಸಿದ್ದಾರೆ. ರಕ್ತದಾನ, ಸ್ವಚ್ಛತಾ ಕೆಲಸಗಳ ಮೂಲಕ ನೆಚ್ಚಿನ ನಾಯಕನಿಗೆ ವಿಶೇಷ ರೀತಿಯಲ್ಲಿ ಶುಭಕೋರಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಸಂಸದ ಪ್ರತಾಪ್‌ ಸಿಂಹ ರಕ್ತದಾನ ಮಾಡಿದರೆ, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಕೆ.ಎಸ್.ಈಶ್ವರಪ್ಪ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು.

ಹುಬ್ಬಳ್ಳಿಯಲ್ಲಿ ರಕ್ತದಾನ ಮಾಡಿದ ಬಳಿಕ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ನರೇಂದ್ರ ಮೋದಿ ದೇಶ‌ ಕಂಡ ಅಪ್ರತಿಮ ರಾಜಕಾರಣಿ. ದೇಶದ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತಂದು, ಸ್ವಚ್ಛ, ಸುಸ್ಥಿರ, ಸಮರ್ಥ ಆಡಳಿತ ಕೊಟ್ಟವರು. ರಾಜಕೀಯವಾಗಿ ನಮ್ಮ ಹಿತಕ್ಕಲ್ಲದಿದ್ದರೂ ದೇಶದ ಗಮನವನ್ನು ಇಟ್ಟುಕೊಂಡು ಕಠೋರ ನಿರ್ಣಯ ತೆಗೆದುಕೊಂಡವರು ಎಂದು ತಿಳಿಸಿದರು.

ತಾಯಿಯಂತೆ ಮೋದಿಯು ಶತಾಯುಷಿ ಆಗಲಿ- ಮಾಜಿ ಸಿಎಂ ಎಸ್‌ಎಂ ಕೃಷ್ಣ

ಪ್ರಧಾನಿ ನರೇಂದ್ರ ಮೋದಿಯವರು 8 ವರ್ಷಗಳಿಂದ ದೇಶ ಮುನ್ನಡೆಸುತ್ತಿರುವುದು ನಮ್ಮ ದೇಶದ ಸೌಭಾಗ್ಯ ಎಂದು ಮದ್ದೂರಿನಲ್ಲಿ ಮಾಜಿ ಸಿಎಂ ಎಸ್‌ಎಂ ಕೃಷ್ಣ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಮೋದಿಯವರಿಗೆ ಆಯಸ್ಸು, ಶಕ್ತಿ ಬರಲಿ ಎಂದು ಪ್ರಾರ್ಥಿಸುತ್ತೇನೆ. ದೇಶವನ್ನು ಇನ್ನೂ ಉತ್ತುಂಗಕ್ಕೆ ಕೊಂಡೊಯ್ಯುವ ಶಕ್ತಿ ದೊರೆಯಲಿ. ನರೇಂದ್ರ ಮೋದಿಯವರು ಅವರ ತಾಯಿಯಂತೆ ಶತಾಯುಷಿಗಳಾಗುತ್ತಾರೆ ಎಂಬ ನಂಬಿಕೆ ನನಗಿದೆ ಎಂದರು.

ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬ ಆಚರಣೆ ಹಿನ್ನೆಲೆ ವಿವಿಧೆಡೆಗಳಲ್ಲಿ ಜನಪರ ಕಾರ್ಯಕ್ರಮಗಳ‌ ಆಯೋಜನೆ ಮಾಡಲಾಗಿತ್ತು. ಅಖಿಲ ಭಾರತೀಯ ತೇರಾಪಂತ್ ಯುವಕ ಪರಿಷತ್ತು ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ರಕ್ತದಾನ ಶಿಬಿರಕ್ಕೆ ಸಚಿವ ಎಸ್‌.ಟಿ.ಸೋಮಶೇಖರ್ ಚಾಲನೆ ನೀಡಿದರೆ, ಸಂಸದ ಪ್ರತಾಪ್ ಸಿಂಹ ನೆಚ್ಚಿನ ನಾಯಕನಿಗಾಗಿ ರಕ್ತದಾನ ಮಾಡಿದರು. ಶಾಸಕ ರಾಮದಾಸ್‌ ಸಹ ಪ್ರತ್ಯೇಕವಾಗಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಶಿವಮೊಗ್ಗದಲ್ಲಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಕೆ.ಎಸ್.ಈಶ್ವರಪ್ಪ ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿದರು.

ಸೇವಾ ಪಾಕ್ಷಿಕ ಕಾರ್ಯಕ್ರಮಕ್ಕೆ ಚಾಲನೆ

ಗಡಿನಾಡು ಬೆಳಗಾವಿಯಲ್ಲಿ ‌ಮೋದಿಯವರ 72ನೇ ಜನ್ಮದಿನ ಹಿನ್ನೆಲೆ ಜಿಲ್ಲೆಯಾದ್ಯಂತ ಬಿಜೆಪಿ ಪಕ್ಷದಿಂದ ಸೇವಾ ಪಾಕ್ಷಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇಂದಿನಿಂದ ಅಕ್ಟೋಬರ್ 2ರವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಮೊದಲ ದಿನ ರಕ್ತದಾನ ಶಿಬಿರ ನಡೆಸಲಾಯಿತು. ಉಸ್ತುವಾರಿ ಸಚಿವ ‌ಗೋವಿಂದ ಕಾರಜೋಳ ಶಿಬಿರ ಚಾಲನೆ ನೀಡಿದರು. ಬಳಿಕ ಜಿಲ್ಲಾಸ್ಪತ್ರೆಯ ಬಡ ರೋಗಿಗಳಿಗೆ ಹಣ್ಣು-ಹಂಪಲ ವಿತರಿಸಿದರು.

ಶೌಚಾಲಯ ಸ್ವಚ್ಚಗೊಳಿಸಿದ ಕಾರ್ಯಕರ್ತರು

ಸಾರ್ವಜನಿಕ ಶೌಚಾಲಯ ಸ್ವಚ್ಚಗೊಳಿಸಿದ ಮಂಡ್ಯ ಕಾರ್ಯಕರ್ತರು

ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಅಂಗವಾಗಿ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಸಾರ್ವಜನಿಕ ಶೌಚಾಲಯ ಸ್ವಚ್ಚಗೊಳಿಸಿದರು. ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಶೌಚಾಲಯ ಸ್ವಚ್ಚಗೊಳಿಸಿ ಆ ಮೂಲಕ ಪ್ರಧಾನಿಗೆ ಶುಭ ಹಾರೈಸಿದರು.

ವಿಜಯಪುರದ ಬೌವಡಿಯಲ್ಲಿರುವ ಯಂತ್ರೋದ್ಧಾರ ಹನುಮಾನ್ ಮಂದಿರದಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ನಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಚಂದ್ರಶೇಖರ ಕವಟಗಿ ಚಾಲನೆ ನೀಡಿದರು. ಧಾರವಾಡದಲ್ಲಿ ಪರಿಸರ ಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ವಿಭಿನ್ನ ರೀತಿಯಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಧಾರವಾಡದ ಕರ್ನಾಟಕ ಹೈಸ್ಕೂಲ್‌ನಲ್ಲಿ 8 ಕೆಜಿ ರಂಗೋಲಿಯಲ್ಲಿ ಮೋದಿ ಅವರ ಭಾವಚಿತ್ರ ಬಿಡಿಸಿದರು. ಒಟ್ಟು 7.2 ಅಡಿ ಚಿತ್ರವು ಎಲ್ಲರ ಗಮನ ಸೆಳೆಯಿತು.

ವೃದ್ಧಾಶ್ರಮದಲ್ಲಿ ಮೋದಿ ಹುಟ್ಟುಹಬ್ಬದ ಸಂಭ್ರಮ

ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬವನ್ನು ಮಡಿಕೇರಿಯ ಎಸ್ಸಿ ಮೋರ್ಚಾದಿಂದ ನಗರದ ಶಕ್ತಿ ವೃದ್ಧಾಶ್ರಮದಲ್ಲಿ ಮೋದಿ ಫೋಟೋ ಇರಿಸಿ ವೃದ್ಧರಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನ ಆಚರಿಸಲಾಯಿತು. ಬಳಿಕ ವೃದ್ಧರಿಗೆ ಕೇಕ್, ಬೆಳಗಿನ ಉಪಾಹಾರ ಸೇರಿದಂತೆ ಸ್ವೆಟರ್ ಅನ್ನು ಸಹ ವಿತರಣೆ ಮಾಡಲಾಯಿತು. ಭಾರತೀಯ ರೆಡ್ ಕ್ರಾಸ್ ಸಭಾಂಗಣದಲ್ಲಿ ಉಚಿತ ರಕ್ತದಾನ ಶಿಬಿರವನ್ನು ಆಯೋಜಿಸಿಲಾಗಿತ್ತು‌. ಇದೂ ಸೇರಿದಂತೆ ರಾಜ್ಯಾದ್ಯಂತ ಸೇವಾ ಪಾಕ್ಷಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆತಿದೆ.

ಇದನ್ನೂ ಓದಿ | Narendra Modi : ಭಾರತಕ್ಕೆ ಚೀತಾಗಳು ಎಂಟ್ರಿ : ಪ್ರಧಾನಿ ಮೋದಿ ಹೇಳಿದ್ದೇನು?

Exit mobile version