Site icon Vistara News

BJP Rathayatre: ಆದಿವಾಸಿ, ಶೋಷಿತರ ಪರ ಮೋದಿ ಸರ್ಕಾರ ಕೆಲಸ; ಇಲ್ಲಿಯ ಚಿತ್ರಣವನ್ನೇ ಬದಲಿಸಲು ಬಂದಿದ್ದೇನೆ: ಜೆ.ಪಿ. ನಡ್ಡಾ

JP Nadda inagurate BJP Vijaya sankalpa rathayatre

ಚಾಮರಾಜನಗರ: ಆದಿವಾಸಿ, ದಲಿತ, ಶೋಷಿತ, ಹಿಂದುಳಿದ ವರ್ಗಗಳ ಪ್ರಗತಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪಣತೊಟ್ಟಿದೆ. ದಲಿತ, ಶೋಷಿತ ಸಮುದಾಯದವರನ್ನು ಮಂತ್ರಿ ಮಾಡಿದ್ದೇವೆ. ಆದಿವಾಸಿ ಸಮುದಾಯದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಮಾಡಿದ್ದೇ ಇದಕ್ಕೆ ಸಾಕ್ಷಿ. ನಾನು ಸಂವಾದ ಮಾಡಿ ಹೋಗಲು ಇಲ್ಲಿಗೆ ಬಂದಿಲ್ಲ. ಈ ಪ್ರದೇಶದ ಚಿತ್ರಣವನ್ನೇ ಬದಲು ಮಾಡುವ ಸಂಕಲ್ಪ ಮಾಡಲು ಬಂದಿದ್ದೇನೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಮಲೆ ಮಹದೇಶ್ವರ ಬೆಟ್ಟದಲ್ಲಿ “ವಿಜಯ ಸಂಕಲ್ಪ ರಥಯಾತ್ರೆ”ಗೆ (BJP Rathayatre) ಚಾಲನೆ ನೀಡಿ ತಿಳಿಸಿದರು.

ಆದಿವಾಸಿ ಮಹಿಳೆಯೊಬ್ಬರು ತಮ್ಮ ಸಮಸ್ಯೆಯನ್ನು ಹೇಳಿಕೊಂಡರು. ಅದನ್ನು ಹಿಂದಿಗೆ ಸಚಿವೆ ಶೋಭಾ ಕರಂದ್ಲಾಜೆ ಅವರು ಅನುವಾದ ಮಾಡಿ ತಿಳಿಸಿದ ಮೇಲೆ ನನಗೆ ಅರ್ಥವಾಯಿತು. ನಾನು ಇಲ್ಲಿ ಕೇವಲ ಸಂವಾದ ಮಾಡಲಷ್ಟೇ ಬಂದಿದ್ದಲ್ಲ. ಇಲ್ಲಿನವರ ಜೀವನವನ್ನು ಅಭಿವೃದ್ಧಿಯೊಂದಿಗೆ ಬದಲಾವಣೆ ಮಾಡುವ ಸಂಕಲ್ಪದೊಂದಗಿಗೆ ಬಂದಿದ್ದೇನೆ. ಇಂದು ಇಂದು ಬುಡಕಟ್ಟು ಸಮುದಾಯದ ಮಹಿಳೆಯಾದ ದ್ರೌಪದಿ ಮುರ್ಮು ಅವರನ್ನು ಭಾರತದ ರಾಷ್ಟ್ರಪತಿಯನ್ನಾಗಿ ಮಾಡಿದ್ದು ನಾವು. ಅವರನ್ನು ರಾಷ್ಟ್ರದ ಅತ್ಯುನ್ನತ ಸ್ಥಾನದಲ್ಲಿ ಕೂರಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಾಗಿದ್ದಾರೆ.

ಮಲೆ ಮಹದೇಶ್ವರ, ನಿಮ್ಮ ದರ್ಶನ ಪಡೆಯುವ ಸೌಭಾಗ್ಯ ಸಿಕ್ಕಿದೆ. ಈ ಪುಣ್ಯ ಕ್ಷೇತ್ರದಲ್ಲಿ ಯಾತ್ರೆ ಪ್ರಾರಂಭ ಆಗುತ್ತಿದೆ. ಇದರಿಂದಾಗಿ ಬಿಜೆಪಿಗೆ ನಿಶ್ಚಿತವಾಗಿ ಜಯ ಸಿಗಲಿದೆ. ಇನ್ನು ವನವಾಸಿ ಮಹಿಳೆಯರ ಬದುಕಿಗೆ ಬೆಳಕಾಗುವ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಆದಿವಾಸಿಗಳ ಅಭಿವೃದ್ಧಿ ನಮ್ಮಿಂದಲೇ ಸಾಧ್ಯ ಎಂದು ಹೇಳಿದರು.

ಇದನ್ನೂ ಓದಿ: 2021-22ರ ಸಾಲಿನಲ್ಲಿ ಬಿಜೆಪಿಗೆ 1917.12 ಕೋಟಿ ರೂ. ಆದಾಯ! ಕಾಂಗ್ರೆಸ್‌ಗೆ ಎಷ್ಟು?

ಈ ಯಾತ್ರೆಯು ಒಟ್ಟು ನಾಲ್ಕು ತಂಡಗಳಾಗಿ ಸಂಚರಿಸಲಿದ್ದು, ರಾಜ್ಯಾದ್ಯಂತ 224 ವಿಧಾನಸಭಾ ಕ್ಷೇತ್ರಗಳಲ್ಲಿ 20 ದಿನಗಳ ವರೆಗೆ ಸಂಚರಿಸಲಿದೆ. ಉಳಿದ ಮೂರು ರಥಯಾತ್ರೆಗಳಿಗೆ ರಕ್ಷಣಾ ಸಚಿವ ರಾಜನಾಥ ಸಿಂಗ್‌, ಗೃಹ ಸಚಿವ ಅಮಿತ್‌ ಶಾ ಅವರು ಚಾಲನೆ ನೀಡಲಿದ್ದಾರೆ. ಈ ಯಾತ್ರೆಗಳ ಮೂಲಕ ನಾವು ಎಂಟು ಸಾವಿರ ಕಿ.ಮೀ.ಗೂ ಹೆಚ್ಚು ದೂರ ಕ್ರಮಿಸಲಿದ್ದೇವೆ. ಯಾತ್ರೆಯ ಉದ್ದಕ್ಕೂ ಒಟ್ಟು 80ಕ್ಕೂ ಹೆಚ್ಚು ರ‍್ಯಾಲಿ ಮತ್ತು 75 ಸಾರ್ವಜನಿಕ ಸಭೆಗಳು ನಡೆಯಲಿವೆ. 150ಕ್ಕೂ ಹೆಚ್ಚು ರೋಡ್ ಶೋಗಳು ನಡೆಯಲಿವೆ. ಈ ಎಲ್ಲ ಕಡೆ ಜನರನ್ನು ಒಟ್ಟುಗೂಡಿಸಿ ವಿಜಯ ಸಂಕಲ್ಪ ಯಾತ್ರೆಯ ಮೂಲಕ ಬಿಜೆಪಿ ಜಯ ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಮ್ಮ ದೇಶ ಅತ್ಯಂತ ಪ್ರಗತಿಯನ್ನು ಸಾಧಿಸುತ್ತಿದೆ. ಪ್ರತಿಯೊಂದು ಕ್ಷೇತ್ರದಲ್ಲಿಯೂ ಭಾರತ ದಾಪುಗಾಲು ಇಡುತ್ತಿದೆ. ಒಂದು ಕಾಲದಲ್ಲಿ ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್‌, ಜಾತಿವಾದ, ಕುಟುಂಬವಾದಗಳ ಮೂಲಕ ರಾಜಕೀಯ ಮಾಡಿ, ಜನರನ್ನು ಒಡೆದು ಆಳುತ್ತಿತ್ತು. ಆದರೆ, ಈಗ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲರನ್ನೂ ಒಗ್ಗೂಡಿಸಿ, ಎಲ್ಲರ ವಿಕಾಸಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಭಾರತ ಜಗತ್ತಿನಲ್ಲಿ ಅಗ್ರಮಾನ್ಯ ರಾಷ್ಟ್ರವಾಗಿ ಮೂಡಿಬರುವತ್ತ ಹೆಜ್ಜೆಹಾಕಿದೆ. ಅಲ್ಲದೆ, ಮೋದಿ ಅವರು ಅಧಿಕಾರ ವಹಿಸಿಕೊಂಡಾಗ ದೇಶದ ಆರ್ಥಿಕ ಪ್ರಗತಿ ಹತ್ತನೇ ಸ್ಥಾನದಲ್ಲಿತ್ತು,. ಆದರೆ, ಈಗ ಜಗತ್ತಿನ ಐದನೇ ಆರ್ಥಿಕ ಶಕ್ತಿಯಾಗಿ ಮೂಡಿಬಂದಿದೆ. ಫಾರ್ಮಸಿಟಿಕಲ್, ಮೊಬೈಲ್, ಆಟೋ ಮೊಬೈಲ್ ಹೀಗೆ ಅನೇಕ ವಲಯಗಳಲ್ಲಿ ಇಂದು ಭಾರತ ಮುಂಚೂಣಿಯತ್ತ ಹೆಜ್ಜೆ ಇಟ್ಟಿದೆ ಎಂದು ಹೇಳಿದರು.

ಆದಿವಾಸಿ ಸಮುದಾಯಕ್ಕೆ ವಿಶೇಷ ಕೊಡುಗೆ ಬಗ್ಗೆ ಮಾತನಾಡಿದ ನಡ್ಡಾ- ವಿಡಿಯೊ ಇಲ್ಲಿದೆ

ಕಾಂಗ್ರೆಸ್‌ ಮುಳುಗುವ ಹಡಗು- ಬಿ.ಎಸ್‌. ಯಡಿಯೂರಪ್ಪ

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಜೆ.ಪಿ.ನಡ್ಡಾ ಅವರು ಬಂದಿರುವುದು ಪಕ್ಷದವರಿಗೆ ಸಂತಸ, ಸಂಭ್ರಮದ ವಿಚಾರವಾಗಿದೆ. 224 ಕ್ಷೇತ್ರಗಳಲ್ಲಿ ಸುಮಾರು 8 ಸಾವಿರ ಕಿ.ಮೀ. ಉದ್ದಕ್ಕೆ 4 ರಥಗಳು ಸಂಚರಿಸಲಿವೆ. ಭಾಗ್ಯಲಕ್ಷ್ಮಿ ಯೋಜನೆ, ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ, ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೇಂದ್ರ-ರಾಜ್ಯ ಸರ್ಕಾರಗಳು ಜಾರಿಗೊಳಿಸಿವೆ.‌ ಕೇಂದ್ರ-ರಾಜ್ಯ ಸರ್ಕಾರಗಳ ಜನಪರ ಯೋಜನೆಗಳನ್ನು ಗಮನಿಸಿ ಜನರು ಬಿಜೆಪಿಯನ್ನು ಗೆಲ್ಲಿಸುವುದು ಶತಸ್ಸಿದ್ಧ ಎಂದು ತಿಳಿಸಿದರು.‌

ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಅಲ್ಲಿ ನಾಯಕರೇ ಇಲ್ಲ. ನಮ್ಮಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ಸೇರಿದಂತೆ ಸಮರ್ಥ ನಾಯಕರಿದ್ದಾರೆ. ಮತ್ತೊಮ್ಮೆ ಬಿಜೆಪಿ ಗೆಲುವು ಖಚಿತ ಎಂದು ತಿಳಿಸಿದರು.

ಇದನ್ನೂ ಓದಿ: Twitter Down: ಭಾರತ ಸೇರಿ ಜಗತ್ತಿನ ಹಲವೆಡೆ ಟ್ವಿಟರ್‌ ಡೌನ್‌, ನಿಮ್ಮ ಖಾತೆ ಸರಿಯಾಗಿದೆಯೇ?

ಮಲೆ ಮಹದೇಶ್ವರ ಬೆಟ್ಟದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ- ಸಿಎಂ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಸೋಲಿಗರ ಸಮುದಾಯಕ್ಕೆ ವಿಶೇಷ ಗಮನ ನೀಡಲಿದ್ದೇವೆ. ಕಾಡಿನಲ್ಲಿ ವಾಸಿಸುವವರಿಗೆ ಸೌಲಭ್ಯ ಕೊಡಲು ಅರಣ್ಯ ಕಾಯ್ದೆಗೆ ಕೆಲವು ತಿದ್ದುಪಡಿ ತರಲಾಗುವುದು. ಶೀಘ್ರವೇ ಮಲೆ ಮಹದೇಶ್ವರ ಬೆಟ್ಟದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುತ್ತೇವೆ. ಸ್ತ್ರೀ ಸಾಮರ್ಥ್ಯ ಯೋಜನೆಯಡಿ ಅನುದಾನವನ್ನು ಇಲ್ಲಿನ ಮಹಿಳಾ ಸಂಘಕ್ಕೆ ಕೊಡಲಾಗುವುದು. ಸಣ್ಣ, ಅತಿ ಸಣ್ಣ ಕೈಗಾರಿಕೆ ಮಾಡಲು ಗರಿಷ್ಠ ಅನುದಾನ ನೀಡಲಿದ್ದೇವೆ. ಕಾಡಿನ ಅಂಚಿನಲ್ಲಿರುವ ಜನರಿಗೆ ಪುನರ್ವಸತಿ ಕಲ್ಪಿಸುತ್ತೇವೆ. ಸಾಮಾಜಿಕ ನ್ಯಾಯ ಒದಗಿಸಲು ಬದ್ಧ ಎಂದರು.

ವಿಜಯ ಸಂಕಲ್ಪ ರಥ ಯಾತ್ರೆಗೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಚಾಲನೆ ನೀಡಿದ್ದೇವೆ. ಬಿಜೆಪಿ ಗೆಲುವಿನ ಸಂಕಲ್ಪ ಸಿದ್ಧಿ ಆಗಲಿದೆ. ಜನಸಂಕಲ್ಪ ಯಾತ್ರೆ ಮೂಲಕ ನಮ್ಮ ಆತ್ಮವಿಶ್ವಾಸ ಹೆಚ್ಚಾಗಿದೆ. ಪಕ್ಷ ಗೆಲುವನ್ನು ಪಡೆದು ಮತ್ತೆ ಅಧಿಕಾರ ಮಾಡಲಿದೆ. ಕೇಂದ್ರ- ರಾಜ್ಯ ಸರ್ಕಾರಗಳ ಜನಕಲ್ಯಾಣ ಯೋಜನೆಗಳನ್ನು ಗಮನಿಸಿ ಜನರು ಬಿಜೆಪಿಗೆ ಮತ ಕೊಡಲಿದ್ದಾರೆ. ಮೀಸಲಾತಿ ಹೆಚ್ಚಳ ಸೇರಿದಂತೆ ವಿವಿಧ ಯೋಜನೆಗಳ ಕುರಿತು ಅವರು ತಿಳಿಸಿದರು. ಜನರ ಆಶೀರ್ವಾದ ಬಿಜೆಪಿಯ ಶಕ್ತಿಯಾಗಲಿದೆ ಎಂದು ಹೇಳಿದರು.‌

ಮಲೆಮಾದಪ್ಪನ ಸನ್ನಿಧಿ ಬಗ್ಗೆ ನಡ್ಡಾ ಹೇಳಿದ್ದೇನು

ಸಮಾಜದ ಧ್ವನಿಯಾಗಲಿ ನಡ್ಡಾ ಬಂದಿದ್ದಾರೆ- ಶೋಭಾ ಕರಂದ್ಲಾಜೆ

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಪ್ರಪಂಚದ ಅತ್ಯಂತ ದೊಡ್ಡ ರಾಜಕೀಯ ಪಕ್ಷ ಬಿಜೆಪಿ. ಬೇಡರ ಕಣ್ಣಪ್ಪನ ಜಾತಿಗೆ ಸೇರಿದವರು ಸೋಲಿಗರು. ಅವರು ಕಷ್ಟಕರ ಜೀವನ ಮಾಡುತ್ತಿದ್ದಾರೆ. ಅವರಿಗೆ ಹೆಚ್ಚು ಶೈಕ್ಷಣಿಕ- ಔದ್ಯೋಗಿಕ ಅನುಕೂಲ ಮಾಡಿಕೊಡಲು ಬದ್ಧತೆಯನ್ನು ಪ್ರದರ್ಶಿಸಲಿದ್ದೇವೆ. ಈ ಸಮಾಜದ ಧ್ವನಿಯಾಗಲು ನಡ್ಡಾ ಅವರು ಇಲ್ಲಿಗೆ ಬಂದಿದ್ದಾರೆ ಎಂದು ತಿಳಿಸಿದರು.

ಸೋಲಿಗರ ಸಮುದಾಯದ ಜಯಮ್ಮ ಅವರು ಮಾತನಾಡಿ, ಮಹಿಳಾ ಸ್ವಸಹಾಯ ಸಂಸ್ಥೆಯಿಂದ ಹಣಕಾಸಿನ ಸೌಕರ್ಯ ಲಭಿಸಿದೆ. ಗುಡಿ ಕೈಗಾರಿಕೆ ತರಬೇತಿಯನ್ನೂ ಕೊಡಬೇಕು. ಆರೋಗ್ಯ ಸೌಕರ್ಯ ನೀಡಬೇಕು ಎಂದು ಮನವಿ ಮಾಡಿದರು. ಹೆರಿಗೆ ಸಂಬಂಧಿತ ಸೌಲಭ್ಯ ನೀಡಬೇಕು; ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿ ಎಂದು ವಿನಂತಿಸಿದರು.

ಇದನ್ನೂ ಓದಿ: BJP Rathayatre: ಮಿಷನ್‌ 150 ಗುರಿಯ ವಿಜಯ ಸಂಕಲ್ಪ ರಥಯಾತ್ರೆಗೆ ಜೆ.ಪಿ. ನಡ್ಡಾ ಚಾಲನೆ; ವಿ. ಸೋಮಣ್ಣ ಗೈರು

ಪಕ್ಷದ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ರಾಜ್ಯ ಪದಾಧಿಕಾರಿಗಳು, ಸಚಿವರು, ಸಂಸದರು, ಶಾಸಕರು, ಪಕ್ಷದ ಪ್ರಮುಖರು ಈ ಸಂದರ್ಭದಲ್ಲಿ ಇದ್ದರು.

Exit mobile version