Site icon Vistara News

ʼಮೋದಿ ಭಾಷಣದಲ್ಲಿ SCST ಸಮುದಾಯದ ವಾಲ್ಮೀಕಿಯ ಹೆಸರು ಹೇಳಿಲ್ಲʼ: ಜಾತಿ ರಾಜಕಾರಣಕ್ಕೆ ಎಳೆದು ತಂದ ಉಗ್ರಪ್ಪ

ugrappa

ಬೆಂಗಳೂರು: ಅಯೋಧ್ಯೆಯ ದೀಪೋತ್ಸವದಲ್ಲಿ ಮಾತನಾಡುವ ವೇಳೆ ಪ್ರಧಾನಿ ಮೋದಿಯವರು ʼಎಸ್‌ಸಿಎಸ್‌ಟಿ ಸಮುದಾಯಕ್ಕೆ ಸೇರಿದ ವಾಲ್ಮೀಕಿ ಮಹರ್ಷಿಗಳʼ ಹೆಸರನ್ನು ಹೇಳಲೇ ಇಲ್ಲ ಎಂದು ಕಾಂಗ್ರೆಸ್‌ ಮುಖಂಡ ಹಾಗೂ ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಉಗ್ರಪ್ಪ, ರಾಷ್ಟ್ರ ರಾಜಕಾರಣದಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ. ಹಿರಿಯ ಅನುಭವಿ ರಾಜಕಾರಣಿ, ಅತ್ಯಂತ ಪ್ರಮುಖ ಸಂಸದೀಯ ಪಟು ಹಾಗೂ ಪಕ್ಷ ನಿಷ್ಠೆಯಲ್ಲಿ ಹೆಸರು ಮಾಡಿರುವಂತಹ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ ಎಂದರು.

ಮಲ್ಲಿಕಾರ್ಜುನ ಖರ್ಗೆಯವರು ಬಸವ, ಬುದ್ಧ ಹಾಗೂ ಮಹಾತ್ಮ ಗಾಂಧಿ ಅವರ ವಿಚಾರಧಾರೆ ಮೇಲೆ ನಂಬಿಕೆ ಇಟ್ಟಿರುವಂತಹ ರಾಜಕಾರಣಿ. ಭಾರತ ಸಂವಿಧಾನದಲ್ಲಿ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟು ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದಲ್ಲಿ ಜನಸೇವೆ ಮಾಡಿಕೊಂಡು ಬಂದಿರುವ ಅತ್ಯಂತ ಹಿರಿಯ ಪ್ರಾಮಾಣಿಕ ರಾಜಕಾರಣಿಯಾಗಿದ್ದಾರೆ.

ಮತ್ತೊಂದೆಡೆ ಸರ್ವಾಧಿಕಾರಿ ಪ್ರವೃತ್ತಿ, ನಾಥುರಾಮ್ ಗೋಡ್ಸೆ ಅವರ ವಿಚಾರಧಾರೆಯಲ್ಲಿ ನಂಬಿಕೆ ಇಟ್ಟಿರುವಂತಹ ಮೋದಿಯವರು. ಆರ್ಥಿಕತೆ ನಿರುದ್ಯೋಗ ಸಮಸ್ಯೆ ಬಡತನ ನಿರ್ಮೂಲನೆ ಸೇರಿದಂತೆ ಎಲ್ಲಾ ವಿಚಾರದಲ್ಲಿ ನರೇಂದ್ರ ಮೋದಿಯವರು ವೈಫಲ್ಯ ಅನುಭವಿಸಿದ್ದಾರೆ.

ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಬಗ್ಗೆ ಸಾಕಷ್ಟು ಮಾತನಾಡುತ್ತಿದ್ದಾರೆ. ಇತ್ತೀಚೆಗೆ ಮೋದಿ ಅವರು ಅಯೋಧ್ಯೆಯಲ್ಲಿ ಮಾಡಿದ ಭಾಷಣದಲ್ಲಿ ಪ್ರಪಂಚಕ್ಕೆ ರಾಮಾಯಣವನ್ನು ಪರಿಚಯಿಸಿದ ಮಹರ್ಷಿ ವಾಲ್ಮೀಕಿ ಅವರ ಹೆಸರನ್ನು ಪ್ರಸ್ತಾಪಿಸಲಿಲ್ಲ. ಆ ಭಾಗದಲ್ಲಿ ಭಾಗದಲ್ಲಿ ಎಸ್‌ಸಿ ಹಾಗೂ ರಾಜ್ಯದಲ್ಲಿ ವಾಲ್ಮೀಕಿ ಸಮಾಜವು ಎಸ್‌ಟಿ ಸೇರಿದ್ದು. ಇವರ ಬಗ್ಗೆ ಬಿಜೆಪಿ ಯಾಕೆ ಮಾತನಾಡುತ್ತಿಲ್ಲ? ಅಯೋಧ್ಯೆಯಲ್ಲಿ ಮಹರ್ಷಿ ವಾಲ್ಮೀಕಿ ಅವರ ಸ್ಮಾರಕ ನಿರ್ಮಾಣ ಏಕೆ ಮಾಡುತ್ತಿಲ್ಲ? ಎಂದು ಪ್ರಶ್ನಿಸಿದರು.

ಕೇವಲ ಮತದಾನಕ್ಕಾಗಿ ರಾಮನ ಜಪ ಮಾಡುವುದನ್ನು ಬಿಟ್ಟು, ರಾಮನ ಆದರ್ಶವನ್ನು ಯಥಾವತ್ತಾಗಿ ಜೀವನದಲ್ಲಿ ಅಳವಡಿಸಿಕೊಂಡರೆ, ಮಹಾತ್ಮ ಗಾಂಧಿ ಹಾಗೂ ನಮ್ಮ ಸಂವಿಧಾನ ಬಯಸಿದಂತಹ ಜಾತಿ ರಹಿತ ವರ್ಗ ರಹಿತ ಹಾಗೂ ಶೋಷಣೆ ರಹಿತ ಸಮಾಜ ಕಟ್ಟಲು ಸಾಧ್ಯ. ಆದರೆ ಬಿಜೆಪಿಯವರು ಈ ನಿಟ್ಟಿನಲ್ಲಿ ಆಡಳಿತ ನಡೆಸುತ್ತಿಲ್ಲ. ಈ ಬಗ್ಗೆ ದೇಶದ ಜನ ಅರ್ಥ ಮಾಡಿಕೊಳ್ಳುತ್ತಾರೆ ಎಂದು ನಾನು ಭಾವಿಸಿದ್ದೇನೆ ಎಂದರು.

ಇದನ್ನೂ ಓದಿ | Modi In Ayodhya | ರಾಮನ ಆದರ್ಶ, ಸಂವಿಧಾನದ ಆಶಯ ಪಾಲನೆಯೇ ಗುರಿ, ಅಯೋಧ್ಯೆಯಲ್ಲಿ ಮೋದಿ ಮೋಡಿ

ಶಿವಮೊಗ್ಗದಲ್ಲಿ ಸರ್ಕಾರದ ನಿರ್ಲಕ್ಷ್ಯ

ಶಿವಮೊಗ್ಗದಲ್ಲಿ ಮತ್ತೆ ಕೋಮು ಸಂಘರ್ಷ ಆರಂಭವಾಗಿದೆ ಎಂದ ಉಗ್ರಪ್ಪ, ಈ ರಾಜ್ಯದಲ್ಲಿ ಸರ್ಕಾರ ಆಡಳಿತ ನಡೆಸುತ್ತಿದೆಯೇ ಅಥವಾ ಇಲ್ಲವೇ? ರಾಜ್ಯದಲ್ಲಿ ಗುಪ್ತಚರ ಇಲಾಖೆ ಬದುಕಿದೆಯೋ ಅಥವಾ ಸತ್ತಿದಿಯೋ ಎಂದು ಕೇಳಲು ಬಯಸುತ್ತೇನೆ. ಗುಪ್ತಚರ ಇಲಾಖೆ ಈ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ ಈ ಬಗ್ಗೆ ಕ್ರಮ ಜರುಗಿಸಲು ಸರ್ಕಾರ ವಿಫಲವಾಗಿರುವುದು ಏಕೆ? ಗಲಾಟೆಗಳಾಗಲಿ ಎಂಬ ಉದ್ದೇಶದಿಂದಲೇ ಈ ರೀತಿ ನಿರ್ಲಕ್ಷ ಸರ್ಕಾರ ವಹಿಸುತ್ತಿದೆಯೇ?

ಕುವೆಂಪು ಅವರಿಗೆ, ಶಾಂತವೇರಿ ಗೋಪಾಲಗೌಡರಿಗೆ ಜನ್ಮ ನೀಡಿದ ಜಿಲ್ಲೆ ಇಂದು ಮತೀಯವಾದಿಗಳ ಕೇಂದ್ರ ಸ್ಥಾನ ಆಗಿರುವುದು ನೋವಿನ ಸಂಗತಿಯಾಗಿದೆ. ಇದನ್ನು ನಿಯಂತ್ರಿಸುವುದು ಹಾಗೂ ಇದರಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ಜರಗಿಸಿ, ಈ ಬೆಳವಣಿಗೆ ಬಗ್ಗೆ ತನಿಖೆ ನಡೆಸಿ ಇದರ ಹಿಂದಿರುವ ಶಕ್ತಿಗಳು ಯಾರೆಂದು ಪತ್ತೆ ಹಚ್ಚುವ ಕೆಲಸ ಮಾಡಬೇಕು ಎಂದು ಹೇಳಲು ಬಯಸುತ್ತೇನೆ.

ಆನಂದ್‌ಸಿಂಗ್‌ ಮೇಲೇಕೆ ಇಡಿ ದಾಳಿ ಇಲ್ಲ?: ರೇವಣ್ಣ ಪ್ರಶ್ನೆ

ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಆನಂದ್ ಸಿಂಗ್ ಅವರು ದೀಪಾವಳಿ ಉಡುಗೊರೆ ನೀಡುತ್ತಿರುವುದರ ಕುರಿತು ಪ್ರಸ್ತಾಪಿಸಿದ ಮಾಜಿ ಸಚಿವ ಎಚ್‌.ಎಂ. ರೇವಣ್ಣ, ಬಿಜೆಪಿ ಅಧಿಕಾರಕ್ಕೆ ಬರಲು ಕೋಟ್ಯಂತರ ರೂಪಾಯಿ ಹಣ ಪಡೆದು ಪಕ್ಷಾಂತರ ಮಾಡಿ ಇಂದು ಸಚಿವರಾಗಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಮತ್ತೆ ತಮಗೆ ಜನಾದೇಶ ಸಿಗುವುದಿಲ್ಲ ಎಂಬ ಕಾರಣಕ್ಕೆ ಹೊಸ ಪ್ರಯೋಗ ಮಾಡುತ್ತಿದ್ದಾರೆ.

ತಮ್ಮ ವ್ಯಾಪ್ತಿಯಲ್ಲಿ ಬರುವ ಹೊಸಪೇಟೆ ನಗರಸಭೆ, ಕಮಲಾಪುರ ಪಟ್ಟಣ, ಹೊಸಪೇಟೆ ತಾಲೂಕು ಗ್ರಾಮ ಹಾಗೂ ಜಿಲ್ಲಾ ಪಂಚಾಯಿತಿಯ ಒಟ್ಟು 40 ಸದಸ್ಯರುಗಳಿಗೆ ದೀಪಾವಳಿ ಉಡುಗೊರೆ ಹೆಸರಿನಲ್ಲಿ 2,65,99,000 ನಗದು, ಪುರುಷರಿಗೆ ರೇಷ್ಮೆ ಪಂಚೆ, ಮಹಿಳೆಯರಿಗೆ ರೇಷ್ಮೆ ಸೀರೆ, ಬೆಳ್ಳಿ ನಾಣ್ಯ, ಒಂದು ಕೆಜಿ ಹಾಗೂ ಅರ್ಧ ಕೆಜಿ ಬೆಳ್ಳಿ ನೀಡಲಾಗಿದೆ.

ಹೊಸಪೇಟೆ ನಗರಸಭೆ ಸದಸ್ಯರಿಗೆ ತಲಾ 1 ಕೆಜಿ ಬೆಳ್ಳಿ, 1.44 ಲಕ್ಷ ರೂ. ನಗದು, ರೇಷ್ಮೆ ಪಂಚೆ ಹಾಗೂ ರೇಷ್ಮೆ ಸೀರೆ ನೀಡಲಾಗಿದ್ದು ಇದಕ್ಕಾಗಿ 79.60 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ. ಕಮಲಾಪುರ ಪಟ್ಟಣ ಪಂಚಾಯಿತಿ ಸದಸ್ಯರಿಗೆ ತಲಾ 1/2 ಕೆಜಿ ಬೆಳ್ಳಿ, 1 ಲಕ್ಷ ರೂ. ನಗದು, ರೇಷ್ಮೆ ಸೀರೆ, ಪಂಚೆ, ಟವಲ್ ನೀಡಲಾಗಿದೆ. ಇದಕ್ಕಾಗಿ 35.65 ಲಕ್ಷ ವೆಚ್ಚ ಮಾಡಲಾಗಿದೆ.

ಹೊಸಪೇಟೆ ತಾಲೂಕಿನ ಗ್ರಾಮ ಪಂಚಾಯತಿ ಸದಸ್ಯರಿಗೆ ತಲಾ 1/2 ಕೆಜಿ ಬೆಳ್ಳಿ, 22,000 ರೂ. ನಗದು, ರೇಷ್ಮೆ ಸೀರೆ, ಪಂಚೆ, ಟವಲ್ ನೀಡಲಾಗಿದೆ. ಇದಕ್ಕಾಗಿ 1.40 ಕೋಟಿ ಖರ್ಚು ಮಾಡಲಾಗಿದೆ. ಒಟ್ಟಾರೆ ಈ ಮೂರು ಪಂಚಾಯತಿಗಳ ಸದಸ್ಯರಿಗೆ 2.65 ಕೋಟಿ ರೂ. ವೆಚ್ಚ ಮಾಡಲಾಗಿದೆ. ಬಿಜೆಪಿ ನಾಯಕರಿಗೆ ಯಾವುದೇ ತನಿಖೆ ಇಲ್ಲವಾಗಿದೆ. ಇದು ಕೇವಲ ಒಂದು ಉದಾಹರಣೆಯಾಗಿದ್ದು ಸರ್ಕಾರದಲ್ಲಿರುವ ಅನೇಕ ಸಚಿವರು ಈ ರೀತಿ ಅಕ್ರಮಗಳನ್ನು ಎಸಗಿದ್ದಾರೆ ಎಂದರು.

ವೆಂಕಟರಾವ್ ಗೋರ್ಪಡೆ ಮಾತನಾಡಿ, ಆನಂದ್ ಸಿಂಗ್ ಅವರಿಂದ ಈ ಉಡುಗೊರೆಯನ್ನು ಕೆಲವರು ಪಡೆದಿದ್ದರೆ ಮತ್ತೆ ಕೆಲವರು ಪಡೆದಿಲ್ಲ. ಆನಂದ್ ಸಿಂಗ್ ಅವರು ಕಳೆದ 15 ವರ್ಷಗಳಿಂದ ಹೊಸಪೇಟೆಯಿಂದ ಪ್ರತಿನಿಧಿಸಿದ್ದರು ಅಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ರಸ್ತೆಗಳು ಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದೆ. ತುಂಗಭದ್ರಾ ಅಣೆಕಟ್ಟು ಇದ್ದರೂ ಅಲ್ಲಿನ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಸಾಧ್ಯವಾಗಿಲ್ಲ. ಈ ವೈಫಲ್ಯಗಳನ್ನು ಮುಚ್ಚಿ ಹಾಕಲು ಆನಂದ್ ಸಿಂಗ್ ಅವರು ಇಂತಹ ಆಮಿಷಗಳನ್ನು ನೀಡುತ್ತಿದ್ದಾರೆ. ಇದನ್ನು ನಾವು ಖಂಡಿಸುತ್ತಾ ಈ ಪ್ರಕರಣವನ್ನು ಲೋಕಾಯುಕ್ತ ಅಥವಾ ಬೇರೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ಈ ಉಡುಗೊರೆಯ ಹಣದ ಮೂಲ ಎಲ್ಲಿಂದ ಬಂದಿದೆ ಎಂಬುದು ಬಹಿರಂಗವಾಗಬೇಕು ಎಂದು ನಾವು ಆಗ್ರಹಿಸುತ್ತೇವೆ ಎಂದರು.

ಇದನ್ನೂ ಓದಿ | Modi In Ayodhya | ಅಯೋಧ್ಯೆಯಲ್ಲಿ 15 ಲಕ್ಷ ದೀಪಗಳ ಚಿತ್ತಾರ, ಗಿನ್ನೆಸ್‌ ದಾಖಲೆಗೆ ದೀಪೋತ್ಸವ ಭಾಜನ

Exit mobile version