Site icon Vistara News

Modi in Bengaluru | ಎಂಟೇ ವರ್ಷದಲ್ಲಿ ದೇಶದ ವಿಮಾನ ನಿಲ್ದಾಣಗಳ ಸಂಖ್ಯೆ ಡಬಲ್‌: ನರೇಂದ್ರ ಮೋದಿ

Narendra modi

ಬೆಂಗಳೂರು: ‌ಕೇವಲ ಎಂಟು ವರ್ಷದ ಅವಧಿಯಲ್ಲಿ ಭಾರತದಲ್ಲಿರುವ ವಿಮಾನ ನಿಲ್ದಾಣಗಳ ಸಂಖ್ಯೆ ದ್ವಿಗುಣಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೆಮ್ಮೆಯಿಂದ ಹೇಳಿದರು. ೨೦೧೪ರ ಹೊತ್ತಿಗೆ ದೇಶದಲ್ಲಿ ೭೦ ವಿಮಾನ ನಿಲ್ದಾಣಗಳಿದ್ದರೆ, ಈಗ ಅದರ ಸಂಖ್ಯೆ ೧೪೦ಕ್ಕೇರಿದೆ ಎಂದರು.

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್‌ ಮತ್ತು ಬೆಂಗಳೂರು ನಗರ ನಿರ್ಮಾತೃ, ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಭವ್ಯ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದ ಬಳಿಕ ನಡೆದ ಬೃಹತ್‌ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.

ನಾವು ಕೇವಲ ವಿಮಾನ ಸಂಖ್ಯೆಗಳನ್ನು ಹೆಚ್ಚಿಸುತ್ತಿಲ್ಲ. ಬದಲಾಗಿ ವಿಮಾನ ನಿಲ್ದಾಣಗಳ ಸಂಖ್ಯೆಯನ್ನೇ ಹೆಚ್ಚಿಸುತ್ತಿದ್ದೇವೆ. ಈ ಮೂಲಕ ದೇಶದ ಎಲ್ಲ ಭಾಗಗಳಲಿಗೆ ಸಂಪರ್ಕವನ್ನು ಸಾಧ್ಯವಾಗಿಸುತ್ತಿದ್ದೇವೆ ಎಂದು ಹೇಳಿದ ಮೋದಿ, ಹೊಸ ಟರ್ಮಿನಲ್‌ ಸ್ಥಾಪನೆಯಿಂದ ಬೆಂಗಳೂರಿಗೆ ಮಾತ್ರವಲ್ಲ, ಇಡೀ ದೇಶಕ್ಕೆ ಅನುಕೂಲವಾಗಲಿದೆ ಎಂದರು.

ಉದ್ಯಮ ಸಾಮರ್ಥ್ಯ ಹೆಚ್ಚಳ, ಉದ್ಯೋಗ ಹೆಚ್ಚಳ
ದೇಶದಲ್ಲಿ ವಿಮಾನ ಪ್ರಯಾಣಿಕರ ಸಂಖ್ಯೆ ಒಂದೇ ಸಮನೆ ಹೆಚ್ಚುತ್ತಿದೆ. ಏರ್‌ ಟ್ರಾವೆಲ್‌ಗೆ ಅತಿ ಹೆಚ್ಚು ಬೇಡಿಕೆ ಇರುವ ದೇಶಗಳ ಪೈಕಿ ಭಾರತ ಅಗ್ರ ಸ್ಥಾನದಲ್ಲಿದೆ. ಈ ಕಾರಣಕ್ಕಾಗಿ ನಾವು ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸುತ್ತಿದ್ದೇವೆ. ಇದರಿಂದ ನಮ್ಮ ನಗರಗಳ ಉದ್ಯಮ ಸಾಮರ್ಥ್ಯ ಹೆಚ್ಚುವುದು ಮಾತ್ರವಲ್ಲ ಯುವಕರಿಗೆ ದೊಡ್ಡ ಮಟ್ಟದ ಅವಕಾಶಗಳು ದೊರೆಯಲಿವೆ ಎಂದು ಹೇಳಿದರು ಮೋದಿ.

ಎಲ್ಲದರಲ್ಲೂ ಅಗ್ರಸ್ಥಾನಿ ಕರ್ನಾಟಕ
ಕರ್ನಾಟಕದ ಸಾಧನೆಗಳನ್ನು ಹಾಡಿಹೊಗಳಿದ ಪ್ರಧಾನಿ ನರೇಂದ್ರ ಮೋದಿ ಅವರು, ಕಳೆದ ಮೂರು ವರ್ಷಗಳಲ್ಲಿ ಕೋವಿಡ್‌ ಕಾರಣಕ್ಕಾಗಿ ಜಗತ್ತು ಹಿನ್ನಡೆಯನ್ನು ಅನುಭವಿಸಿತು. ಆದರೆ, ಕರ್ನಾಟಕಕ್ಕೆ ೪ ಲಕ್ಷ ಕೋಟಿ ರೂ. ಹೂಡಿಕೆ ಹರಿದು ಬಂದಿದೆ. ಇದು ರಾಜ್ಯದ ಮೇಲೆ ಇರುವ ನಂಬಿಕೆ ಎಂದರು ಪ್ರಧಾನಿ.

ವಿದೇಶಿ ಹೂಡಿಕೆ ವಿಚಾರದಲ್ಲಿ ಕರ್ನಾಟಕ ಇಡೀ ದೇಶದಲ್ಲೇ ಅಗ್ರ ಸ್ಥಾನಿ. ಈ ಹೂಡಿಕೆ ಕೇವಲ ಐಟಿ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಬಯೋಟೆಕ್ನಾಲಜಿಯಿಂದ ಹಿಡಿದು ರಕ್ಷಣಾ ವಲಯದವರೆಗೆ ವಿಸ್ತಾರವಾಗಿ ಹರಡಿಕೊಂಡಿದೆ ಎಂದು ಕೊಂಡಾಡಿದರು.

ವಿಮಾನ ಮತ್ತು ಹೆಲಿಕಾಪ್ಟರ್‌ ನಿರ್ಮಾಣ ಕ್ಷೇತ್ರದಲ್ಲಿ ೨೫% ಕರ್ನಾಟಕದ್ದು, ಸೇನೆಯ ವಿಮಾನ, ಹೆಲಿಕಾಪ್ಟರ್‌ಗಳಲ್ಲಿ ೭೦% ತಯಾರಾಗುವುದು ಇಲ್ಲೇ, ಎಲೆಕ್ಟ್ರಿಕ್‌ ವೆಹಿಕಲ್‌ ತಯಾರಿಯಲ್ಲಿಯೂ ಕರ್ನಾಟಕ ಮುಂದಿದೆ ಎಂದರು.
ಫೋರ್ಚುನ್‌ ಇಂಡಿಯಾ ಪಟ್ಟಿ ಮಾಡಿದ ಕಂಪನಿಗಳಲ್ಲಿ ೪೦೦ರಷ್ಟು ಕರ್ನಾಟಕದಲ್ಲಿವೆ. ಈ ಪಟ್ಟಿ ದೊಡ್ಡದಾಗುತ್ತಲೇ ಇದೆ ಎಂದ ಅವರು, ಇದಕ್ಕೆಲ್ಲ ಕರ್ನಾಟಕದಲ್ಲಿ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷದ ಸರಕಾರ. ಡಬಲ್‌ ಎಂಜಿನ್‌ ಸರಕಾರ ಇರುವುದು ಕಾರಣ ಎಂದರು.

ಕಲ್ಪನಾತೀತ ವೇಗದಲ್ಲಿ ಓಟ
ಇವತ್ತು ನಾವು ಫಿಜಿಕಲ್‌, ಡಿಜಿಟಲ್‌ ಎಲ್ಲ ಸ್ತರದಲ್ಲೂ ವಿಭಿನ್ನವಾಗಿ ಕೆಲಸ ಮಾಡುತ್ತಿದ್ದೇವೆ. ಡಿಜಿಟಲ್‌ ಪೇಮೆಂಟ್‌ ಕಳೆದ ಏಳು ವರ್ಷಗಳ ಹಿಂದೆ ಹೇಗಿತ್ತು, ಈಗ ಹೇಗಿದೆ ಎನ್ನುವುದು ಎಲ್ಲರಿಗೂ ಗೊತ್ತು. ೫ಜಿ ಟೆಕ್ನಾಲಜಿ ಕಲ್ಪಿಸಿಕೊಳ್ಳಲೂ ಸಾಧ್ಯವಿರಲಿಲ್ಲ. ಇದೆಲ್ಲದರ ಹಿಂದೆ ಬೆಂಗಳೂರಿನ ಯುವಕರ, ವೃತ್ತಿಪರರ ಸಂಕಲ್ಪ ಶಕ್ತಿ ದೊಡ್ಡದಿದೆ ಎಂದರು.

೮ ವರ್ಷದ ಹಿಂದೆ ಯಾಕೆ ಆಗಲಿಲ್ಲ?
ಇಷ್ಟೆಲ್ಲ ಸಾಧನೆಗಳು ೨೦೧೪ರ ಹಿಂದಿನ ಸರಕಾರದಲ್ಲಿ ಯಾಕೆ ಸಾಧ್ಯ ಆಗಲಿಲ್ಲ ಎಂದು ಪ್ರಶ್ನಿಸಿದ ಅವರು, ತಾವೇ ಉತ್ತರ ನೀಡಿದರು. ಹಿಂದಿನ ಸರಕಾರಗಳು ವೇಗವನ್ನು ಲಕ್ಸುರಿ ಎಂದು ಬಗೆದವು. ನಮ್ಮ ಜನ ಶಕ್ತಿಯನ್ನು ಬಡತನ ಎಂದು ಬಗೆದವು. ಆದರೆ, ನಾವು ವೇಗವನ್ನು ನಮ್ಮ ಆಕಾಂಕ್ಷೆಗಳಿಗೆ ಹೋಲಿಸಿದೆವು. ಜನಸಂಖ್ಯೆ ನಮ್ಮ ತಾಕತ್ತು ಎಂದು ತಿಳಿದುಕೊಂಡೆವು ಎಮದರು.

ಮೂಲ ಸೌಕರ್ಯಕ್ಕೆ ಏಕ ಕಿಂಡಿ
ಹಿಂದೆ ಮೂಲ ಸೌಕರ್ಯ ವಲಯದಲ್ಲಿ ಕೆಲಸ ಮಾಡಲು ಹಲವು ಇಲಾಖೆಗಳ ಅನುಮತಿ ಪಡೆಯುವುದೇ ದೊಡ್ಡ ಸಂಗತಿಯಾಗಿತ್ತು. ಈಗ ಎಲ್ಲವನ್ನೂ ಒಂದೇ ವೇದಿಕೆಗೆ ತರುವ ಮೂಲಕ ಎಲ್ಲ ಸಮಸ್ಯೆಗಳನ್ನು ಪರಿಹರಿಸಿದ್ದೇವೆ. ಹೀಗಾಗಿ ಒಂದರ ಬೆಂಬಲ ಪಡೆದು ಇನ್ನೊಂದು ಬೆಳೆಯುತ್ತಿದೆ. ಒಂದು ದೇಶದಲ್ಲಿ ಎಲ್ಲ ಮೂಲ ಸೌಕರ್ಯ ವ್ಯವಸ್ಥೆಗಳು ಪರಸ್ಪರ ಪೂರಕವಾಗಿರಬೇಕು ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ | Modi in Bengaluru | ನಾಡಪ್ರಭು ಕೆಂಪೇಗೌಡ ಪ್ರತಿಮೆ, ರಾಜ್ಯ, ದೇಶದ ಅಭಿವೃದ್ಧಿಗೆ ಸ್ಪೂರ್ತಿದಾಯಕ: ಪ್ರಧಾನಿ ನರೇಂದ್ರ ಮೋದಿ

Exit mobile version